ಭಾಲ್ಕಿ ಸ್ವಾಮಿಗಳ ನಡೆಯು ಕರ್ಮಸಿದ್ಧಾಂತದ ಕಡೆ ಸಾಗುತ್ತಿದೆಯೇ?

ಸೇಡಂನಲ್ಲಿ ನಡೆದ ಸಂಘೋತ್ಸವಕ್ಕೆ ಬಸವಲಿಂಗ ಪಟ್ಟದ್ದೇವರು ಹೋಗಿದ್ದೇಕೆ? ಅವರಲ್ಲಿ ಹೋಗುವ, ಹೋಮ ಹವನದ ಕರ್ಮಸಿದ್ಧಾಂತದ ಉತ್ಸವಕ್ಕೆ ಸಾಕ್ಷಿಯಾಗುವ ಗರ್ಜೇನಿತ್ತು? ಅಲ್ಲಿ ಹೋಗಿ ವೈದಿಕತೆಯನ್ನು ಖಂಡಿಸಿದ್ದಾರೆಯೇ? ಬ್ಯಾಹ್ಮಣ್ಯದ ಶ್ರೇಷ್ಠತೆ ಮೆರೆವ ಸಕಲ ಪ್ರಕ್ರಿಯೆ ಅಲ್ಲಿತ್ತು. ಇವರು ಅದನ್ನು ಖಂಡಿಸಿದ್ದಾರೆಯೇ? ಆ ಉತ್ಸವಕ್ಕೆ ಬಂದವರಲ್ಲಿ ಬಹುಳಷ್ಟು ಜನರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬಾರದೆಂದು ಹೇಳಿದ ಪಕ್ಷದವರೇ ಇದ್ದರು. ಅಲ್ಲಿಗೆ ಹೋಗುವ ಮೂಲಕ ಸ್ವಾಮಿಗಳು ತಮ್ಮ ನಿಜ ಬಣ್ಣವನ್ನು ಖಂಡಿತ ಅನಾವರಣಗೊಳಿಸಿದ್ದಾರೆ. ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮಿಗಳಾದ ಚನ್ನಬಸವ ಪಟ್ಟದ್ದೇವರು ಅಪ್ಪಟ ಬಸವಪ್ರೇಮಿಗಳಾಗಿದ್ದರು. ಆದರೆ ಬಸವಲಿಂಗ ಪಟ್ಟದ್ದೇವರು ಮಾತ್ರ ಹೀಗೇಕೆ? ಭಾಲ್ಕಿ

-ಕೆ ನೀಲಾ

ಈಚೆಗೆ ಭಾಲ್ಕಿ ತಾಲ್ಲೂಕಿನ ಮೊರಂಬಿ ಎಂಬಲ್ಲಿ ನಂದಿ ಬಸವೇಶ್ವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಎಲ್ಲರೂ ಶರಣರ ಸತ್ಸಂಗದಲ್ಲಿ ಇರಬೇಕು ಎಂದು ಹೇಳಿದ್ದಾರೆ. ಸತ್ಸಂಗ ಪ್ರಾಣ ಪ್ರತಿಷ್ಠಾಪನೆ ಇವೆಲ್ಲವೂ ಈಚೆಗೆ ಅಯೋದ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಕೇಳಿ ಬಂದವುಗಳಾಗಿವೆ. ಪ್ರಾಣ ಪ್ರತಿಷ್ಠಾಪನೆಯಂತಹ ಉತ್ಸವಗಳು ನಡೆಯುತ್ತಿರುವುದಕ್ಕೆ ಅವರು ಪ್ರಶಂಸೆ ಮಾಡಿದ್ದಾರೆ. ಭಾಲ್ಕಿ

ಬಸವಣ್ಣನೆಂದರೆ ಕಲ್ಲಿನ ಎತ್ತನ್ನು (ನಂದಿಯನ್ನು) ತೋರುತ್ತಿದ್ದರು!!

ನಾವು ಚಿಕ್ಕವರಿದ್ದಾಗ ಬಸವಣ್ಣನೆಂದರೆ ಕಲ್ಲಿನ ಎತ್ತನ್ನು (ನಂದಿಯನ್ನು) ತೋರುತ್ತಿದ್ದರು. ಅನೇಕ ಭಕ್ತಾದಿಗಳು ಬಸವಣ್ಣನ ಗುಡಿಗೆ ಹೋಗಿ ತೆಂಗಿನಕಾಯಿ ಒಡೆದು ಬಿಲ್ವಪತ್ರಿ ಏರಿಸಿ ಬರುತ್ತಿದ್ದರು. ಮನೆಯಲ್ಲಿ ನನ್ನವ್ವ ವಚನ ತತ್ವಪದಗಳನ್ನು ಹಾಡುತ್ತಿದ್ದಳು. ನನ್ನ ತಂದೆಯು ಬಸವಣ್ಣನೆಂದರೆ ಕಲ್ಲು ದೇವರಲ್ಲ, ಮನುಷ್ಯ. ಅಪ್ಪಟ ಸಮಾನತೆಯ ಕನಸುಣಿ. ತಮ್ಮನ್ನು ಗಂಧದಂತೆ ತೇದುಕೊಂಡು ನಮ್ಮ ಬದುಕಿಗೆ ಪರಿಮಳ ಎರೆದವರು. ಶರಣರು ತಮ್ಮ ಮೈಯ ರಕ್ತವನ್ನು ಕಲ್ಯಾಣದ ಪಟ್ಟಣಕ್ಕೆ ಚಲ್ಲಿ, ವೈದಿಕರ ಕ್ರೌರ್ಯದ ಶಿಕ್ಷೆಗೆ ದೇಹ ದಂಡಿಸಿ, ಜೀವನ ಹಂಗು ಹರಿದು ನಮ್ಮ ಬದುಕಿನ ಹಾದಿಯ ಕಲ್ಲು ಮುಳ್ಳುಗಳನ್ನು ತೆಗೆದು ಹಸನಾಗಿಸಿದವರು.

ಇದನ್ನೂ ಓದಿ: ಅಮೆರಿಕದಿಂದ ಗಡಿಪಾರು: ಪನಾಮದಿಂದ ನವದೆಹಲಿಗೆ ಬಂದಿಳಿದ 12 ಭಾರತೀಯರು!

ಅವರು ಶರಣ ಸಂಗಾತಿಗಳು ಎಂದು ಹೇಳಿದರು. ನಂತರ ಲಿಂಗಾನಂದ ಸ್ವಾಮಿಯವರ ಪ್ರವಚನ ಕೇಳಿದ ಮೇಲೆ ಬಸವಣ್ಣನೆಂದರೆ ನಂದಿಯಲ್ಲ, ಕಲ್ಲಿನ ಎತ್ತಲ್ಲ, ಬದಲಿಗೆ ಮನುಷ್ಯರಾಗಿದ್ದರು. ನಮ್ಮ ನಿಮ್ಮಂತೆ ಅಂಗಾಂಗಗಳುಳ್ಳ ಉಸಿರುಳ್ಳ ಮನುಷ್ಯರಾಗಿದ್ದರು ಎಂಬುದು ಸಮಾಜದ ಎಲ್ಲರ ಅರಿವಿಗೆ ಬರತೊಡಗಿತು. ವಚನಗಳು ನಿಜ ಚರಿತ್ರೆಯನ್ನು ಬಿಚ್ಚಿಡತೊಡಗಿದವು. ಬಸವಣ್ಣ, ಮಾದಾರ ಚನ್ನಯ್ಯ, ಹಡಪದ ಅಪ್ಪಣ್ಣ, ಸತ್ಯಕ್ಕ, ಸಂಕವ್ವೆ ಹೀಗೆ ಶರಣಾದಿ ಪ್ರಮಥರು ಜನರ ಹೃದಯಕ್ಕಿಳಿಯತೊಡಗಿದರು. ಭಾಲ್ಕಿ

ಅಲ್ಲಿಗೆ ವೈದಿಕರು ನಮ್ಮ ಬಸವಣ್ಣ ಮತ್ತು ಶರಣರನ್ನು ಕಲ್ಲಾಗಿಸಿದ ಹುನ್ನಾರ ಬಯಲಾಗಿ ವಿಫಲವಾಗಿ, ಬಸವಣ್ಣ ಮತ್ತು ಶರಣರು 770 ಅಮರಗಣಂಗಳ ಭಾವ ಕೋಶದಲ್ಲಿ ಸೇರತೊಡಗಿದರು. ಮತ್ತೆ ಈಗ ಹೊಸ ಹುನ್ನಾರ ಹೊಸೆದು ವಚನ ಸಾಹಿತ್ಯ ತಿರುಚುವ ಷಡ್ಯಂತ್ರಕ್ಕೆ ಮುಂದಾಗಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ನಮ್ಮದೇ ಕಣ್ಣು ನಮ್ಮದೇ ಬೆರಳು ಮೂಲಕ ನಮ್ಮನ್ನು ಕುರುಡರನ್ನಾಗಿಸಲು ಮುಂದಾಗಿದ್ದಾರೆ. ನಮ್ಮವರನ್ನೇ ಬಲೆಯಲ್ಲಿ ಕೆಡವಿ ಬಲಿಗಟ್ಟುವ ಕುತಂತ್ರ ನಡೆಯುತ್ತಿದೆ.

ಬಸವಲಿಂಗ ಪಟ್ಟದ್ದೇವರು ಮಾತ್ರ ಹೀಗೇಕೆ?

ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮಿಗಳಾದ ಚನ್ನಬಸವ ಪಟ್ಟದ್ದೇವರು ಅಪ್ಪಟ ಬಸವಪ್ರೇಮಿಗಳಾಗಿದ್ದರು. ಆದರೆ ಬಸವಲಿಂಗ ಪಟ್ಟದ್ದೇವರು ಮಾತ್ರ ಹೀಗೇಕೆ? ಕೆಲವು ವರ್ಷಗಳ ಹಿಂದೆ ಮಠದಲ್ಲಿ ಕರ್ಮಸಿದ್ಧಾಂತಿಗಳಿಗೆ ಆಸ್ಪದ ಕೊಡುತ್ತಿರುವ ಸುದ್ದಿ ಹಬ್ಬಿದ್ದಾಗ ನಾವು ಅವರೊಂದಿಗೆ ಬಸವಾನುಯಾಯಿಗಳ ಮನೆಯಲ್ಲಿ ಬಹಳ ಹೊತ್ತು ಚರ್ಚಿಸಿದ್ದೆವು. ಈಚೆಗೆ ಒಂದು ಕಾರ್ಯಕ್ರಮಕ್ಕೆ ಬಂದಾಗ ಸ್ವಾಮಿಯವರು ನನ್ನ ಹೆಸರು ಹೇಳಿಯೇ ‘ತಾವು ತಪ್ಪು ಭಾವಿಸಿದ್ದೀರಿ, ನಮ್ಮ ಮಠವು ಎಂದೂ ಬಸವ ಚಿಂತನೆ ಬಿಟ್ಟು ಕೊಡುವುದಿಲ್ಲ. ಮಠದ ಆವರಣದಲ್ಲಿ ಯಾರೆಲ್ಲ ಕಾರ್ಯಕ್ರಮ ಮಾಡಿರುತ್ತಾರೆ. ಭಾಲ್ಕಿ

ನಾವು ಅವರಂತಲ್ಲ’ ಎಂದು ಹೇಳಿದ್ದರು. ಮಠದ ಆವರಣವೂ ಸಹ ಕರ್ಮಸಿದ್ಧಾಂತಿಗಳಿಗೆ ಯಾಕೆ ಬಿಟ್ಟುಕೊಡಬೇಕು ಎಂದು ಪ್ರಶ್ನಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಇರಬೇಕು, ವಿಶ್ವ ಹಿಂದೂ ಪರಿಷತ್ ನವರು ತಮ್ಮ ಒಂದು ಕಾರ್ಯಕ್ರಮಕ್ಕೆ ಬಸವಲಿಂಗ ಪಟ್ಟದ್ದೇವರು ಅವರ ಹೆಸರು ಮತ್ತು ಫೋಟೊ ಹಾಕಿದ್ದರು. ಅದನ್ನು ಪ್ರಶ್ನಿಸಿದಾಗ ತಮಗೆ ಕೇಳದೇ ಬಳಸಿದ್ದಾರೆ ಅದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದ್ದು ನನಗೆ ನೆನಪಿದೆ. ಅದು ಹೇಗೆ ಶರಣ ತತ್ವ ವಿರೋಧಿಗಳು ನಮ್ಮ ಹೆಸರು ಬಳಸುತ್ತಾರೆ? ಯಾಕೆ? ನಾವು ಅವರಿಗೆ ಸ್ಪೇಸ್ ಕೊಟ್ಟಿದ್ದೀವಾ? ಅಥವ ಅವರೇ ಆ ಸ್ಪೇಸ್ ಬಳಸಿಕೊಳ್ಳುತ್ತಿದ್ದಾರೆ? ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಸೇಡಂನಲ್ಲಿ ನಡೆದ ಸಂಘೋತ್ಸವಕ್ಕೆ ಸ್ವಾಮಿಯವರು ಹೋಗಿದ್ದು. ಆ ಕಾರ್ಯಕ್ರಮವು ನೇರಾನೇರವಾಗಿ ವಚನ ತತ್ವ ವಿರೋಧಿಯೇ ಆಗಿತ್ತು. ಭಾಲ್ಕಿ

ಬಸವರಾಜ ಪಾಟೀಲ ಸೇಡಂ ಅವರು ಶರಣರ ತತ್ವ ತಿರುಚುವ ‘ವಚನ ದರ್ಶನ’ ಪುಸ್ತಕ ವಿರೋಧ ಮಾಡಿದ್ದಾರೆಯೇ? ಮನುಸ್ಮೃತಿ ತಪ್ಪೆಂದು ಹೇಳುವರೆ? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ಸೂಚಿಸಿದ್ದಾರೆಯೇ? ಬಸವಾದಿ ಶರಣರ ಚಿಂತನೆಗಳನ್ನು ಒಪ್ಪಿ, ಅಪ್ಪಿ, ಅದರಲ್ಲಿ ಒಂದಾದರೂ ಜಾರಿ ಮಾಡಿತ್ತಿದ್ದಾರೆಯೇ? ಇಲ್ಲವೆಂಬುದು ಬೆಳಕಿನಷ್ಟೇ ಸತ್ಯವಾಗಿದೆ. ಹೀಗಿದ್ದಾಗ ಅವರಲ್ಲಿ ಹೋಗುವ, ಹೋಮ ಹವನದ ಕರ್ಮಸಿದ್ಧಾಂತದ ಉತ್ಸವಕ್ಕೆ ಸಾಕ್ಷಿಯಾಗುವ ಗರ್ಜೇನಿತ್ತು? ಅಲ್ಲಿ ಹೋಗಿ ವೈದಿಕತೆಯನ್ನು ಖಂಡಿಸಿದ್ದಾರೆಯೇ? ಬ್ಯಾಹ್ಮಣ್ಯದ ಶ್ರೇಷ್ಠತೆ ಮೆರೆವ ಸಕಲ ಪ್ರಕ್ರಿಯೆ ಅಲ್ಲಿತ್ತು. ಇವರು ಅದನ್ನು ಖಂಡಿಸಿದ್ದಾರೆಯೇ? ಆ ಉತ್ಸವಕ್ಕೆ ಬಂದವರಲ್ಲಿ ಬಹುಳಷ್ಟು ಜನರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬಾರದೆಂದು ಹೇಳಿದ ಪಕ್ಷದವರೇ ಇದ್ದರು. ಅಲ್ಲಿಗೆ ಹೋಗುವ ಮೂಲಕ ಸ್ವಾಮಿಗಳು ತಮ್ಮ ನಿಜ ಬಣ್ಣವನ್ನು ಖಂಡಿತ ಅನಾವರಣಗೊಳಿಸಿದ್ದಾರೆ.

ಆದರೆ ಮೊರಂಬಿಯ ಕಾರ್ಯಕ್ರಮ ಮತ್ತು ಅವರು ಬಳಸಿದ ಪರಿಭಾಷೆ, ಬಸವಣ್ಣನನ್ನು ಕಲ್ಲಿನ ಎತ್ತು ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆಯನ್ನು ಬೆಂಬಲಿಸಿದ್ದು, ಶ್ಲಾಘಿಸಿದ್ದು, ಎಲ್ಲವೂ ಅವರ ನಡೆ, ನುಡಿ, ನಿಲುವು ಸ್ಫುಟಗೊಳಿಸಿದೆ. ನಮ್ಮ ವಚನ ಸಾಹಿತ್ಯವೇ ಪರಾಮರ್ಶೆಗೆ ಒದಗಿ ಬರುವ ಮಾನದಂಡವಾಗಿದೆ. ಮೊರಂಬಿಯ ಕಾರ್ಯಕ್ರಮವು ವಚನ ಸಾಹಿತ್ಯದ ಸಂಪೂರ್ಣ ವಿರೋಧಿ ನೆಲೆಯಿಂದ ಕೂಡಿದೆ ಎಂಬುದು ಪ್ರತಿ ಹಂತವೂ ಋಜುಗೊಳಿಸುತ್ತದೆ.

ದೇಹವನ್ನೇ ದೇವಾಲಯದೆತ್ತರಕ್ಕೆ ಒಯ್ದಿದ್ದಾರೆ

ಕಲ್ಲಿನ ನಂದಿಗೆ ಬಸವೇಶ್ವರ ಮೂರ್ತಿ ಎಂದು ಹೆಸರಿಟ್ಟು ಪ್ರಾಣ ಪ್ರತಿಷ್ಠಾಪನೆ ಮಾಡುವುದು ಅಂದರೆ ಏನು? ಪ್ರಾಣ ಪ್ರತಿಷ್ಠಾಪನೆ, ಪುನರ್ಜನ್ಮ, ಪಾಪ-ಪುಣ್ಯ ಇವೆಲ್ಲವೂ ವೈದಿಕರು, ಶೂದ್ರ, ದಲಿತ, ದಮನಿತ ಮತ್ತು ಸಮಸ್ತ ಮಹಿಳೆಯರನ್ನು ತಮ್ಮ ಗುಲಾಮರನ್ನಾಗಿಸಿಕೊಳ್ಳಲು ಹುಟ್ಟಿಸಿದ ಸುಳ್ಳುಗಳೆಂಬುವುದು ನಮ್ಮ ಶರಣರು ನೇರವಾಗಿ ಹೇಳಿದ್ದಾರಲ್ಲವೆ? ಹಾಗೆ ನೋಡಿದರೆ ಶರಣರ ಚಿಂತನೆ ಮತ್ತು ಚಳುವಳಿ ಎರಡೂ ಈ ಕರ್ಮಸಿದ್ಧಾಂತದ ವಿರುದ್ಧವೇ ಆಗಿತ್ತಲ್ಲವೆ? ಬಸವಣ್ಣನನ್ನು ಮತ್ತೆ ಕಲ್ಲು ಮಾಡುವ ಪ್ರಾಣ ಪ್ರತಿಷ್ಠಾಪನೆಯ ಪ್ರಕ್ರಿಯೆಯೇ ಕರ್ಮಸಿದ್ಧಾಂತವಾಗಿದೆ. ಸತ್ಸಂಗದಲ್ಲಿ ನಿರತರಾಗುವುದು ಎಂದರೆ ಏನು? ಇದೂ ಸಹ ಕರ್ಮಸಿದ್ಧಾಂತದ ಪರಿಕಲ್ಪನೆ ಅಲ್ಲವೆ? ಕಾಯಕದಲ್ಲಿ ನಿರತರಾದಡೆ ಗುರು ಲಿಂಗ ಜಂಗಮದ ಹಂಗು ಹರಿಯಬೇಕು ಎಂದು ಶರಣರು ಹೇಳಿಲ್ಲವೆ? ಅರ್ಚನೆ ಪೂಜನೆ ನೇಮವಲ್ಲ, ಮಂತ್ರ ತಂತ್ರ ನೇಮವಲ್ಲ ಎಂಬ ವಚನ ಏನನ್ನು ಸೂಚಿಸುತ್ತದೆ? ಉಸುರಿನ ಪರಿಮಳವಿರಲು ಕುಸುಮದ ಹಂಗೇತಕಯ್ಯ ಎಂದು ಅಕ್ಕ ಹೇಳಿಲ್ಲವೆ? ಬಸವಣ್ಣನ ವಚನವಂತೂ ಬಹಳ ಸ್ಪಷ್ಟವಾಗಿ ದೇವಾಲಯವನ್ನು ತಿರಸ್ಕರಿಸಿ ದೇಹವನ್ನೇ ದೇವಾಲಯದೆತ್ತರಕ್ಕೆ ಒಯ್ದಿದ್ದಾರೆ.

‘ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ..’ ಎಂದರು. ಕಾಯಕ ಜೀವಿಗಳನ್ನು ಗುಡಿ ಸಂಪ್ರದಾಯದ ಮೌಢ್ಯಕ್ಕೆ ನೂಕಿ ಅವರನ್ನು ಅಜ್ಞಾನಿಗಳನ್ನಾಗಿ ಮಾಡುವ ಕುತಂತ್ರ ಶರಣರಿಗೆ ಗೊತ್ತಿತ್ತು. ಆದ್ದರಿಂದಲೇ ವೈಜ್ಞಾನಿಕ ಮತ್ತು ನಿಸರ್ಗ ಸತ್ಯದ ಸಂಬಂಧಗಳನ್ನು ಹೇಳಿದರು. ಉಳ್ಳವರು ತಮ್ಮ ಹಿತಾಸಕ್ತಿಗಾಗಿ ಶಿವಾಲಯ ಮಾಡುವರು. ಆದರೆ ಕಾಯಕ ಜೀವಿಗಳೇ ನಿಜವಾದ ದೇವರು. ಅವರ ಕಾಯದಿಂದಲೇ, ಕಾಯಕದಿಂದಲೇ ಈ ಲೋಕ ಬೆಳಗಿದೆ ಎಂಬ ಸ್ಪಷ್ಟತೆಯನ್ನು ಕೊಟ್ಟರು. ಕಾಯಕ ಜೀವಿಗಳ ಕಾಯದಿಂದ ಕಾಯಕ. ಕಾಯಕದಿಂದ ಲೋಕ ವಾದ ಕಾರಣ ಅವರ ದೇಹವೇ ದೇವಾಲಯಗೊಳಿಸಿದರು. ಅವರನ್ನು ಬಡವರನ್ನಾಗಿ ಮಾಡಿದ ಉಳ್ಳವರ ದೇವಾಲಯವನ್ನು ಧಿಕ್ಕರಿಸಿದರು, ತಿರಸ್ಕರಿಸಿದರು ಮತ್ತು ಜನತೆಯನ್ನು ಆ ಮೌಢ್ಯದಿಂದ ಬಿಡುಗಡೆಗೊಳಿಸಿದರು. ಅರ್ಥಾತ್ ಕರ್ಮಸಿದ್ಧಾಂತದ ಮೌಢ್ಯದಿಂದ ಬಿಡುಗಡೆಗೊಳಿಸಿದರು. ಇದು ಸ್ವಾಮಿಗಳಿಗೆ ಹೇಗೆ ಅರ್ಥವಾಗುವುದು? ಅವರಿಗೆ ಭೇದ ಭಾವದ ಗಾಳಿಯೇ ಸೋಕಿಲ್ಲವಲ್ಲ. ವಚನ ಸಾಹಿತ್ಯ ತಿರುಚುವಿಕೆಯ ಶಕ್ತಿಗಳೊಂದಿಗೆ ಅವರ ಸಿದ್ಧಾಂತದೊಂದಿಗೆ ಕೈ ಜೋಡಿಸುವುದೆಂದರೆ ಏನು ಎಂಬುದು ಅವರ ಅರಿವಿಗೆ ಬರಬೇಕು.

ನನ್ನೊಳಗಿನ ಹೆಣ್ತನವೆಂಬ ಸೂತಕ ಅಳಿಸಿ ಹಾಕಿದ್ದು ನಮ್ಮ ಶರಣರು

ಇಂದಿನ ಲಿಂಗಾಯರು ಅಂದಿನ ಅಸ್ಪೃಷ್ಯರೇ ಹೌದಲ್ಲವೆ? ಶೂದ್ರ, ದಲಿತ, ದಮನಿತ, ಹಿಂದುಳಿದ ಮತ್ತು ಸಮಸ್ತ ಮಹಿಳೆಯರು ಇಂದು ತಲೆಯೆತ್ತಿ ಘನತೆಯಿಂದ ನಡೆಯುತ್ತಿದ್ದೇವೆಂದರೆ ಅದಕ್ಕೆ ಶರಣರ ತ್ಯಾಗ ಬಲಿದಾನಗಳು ಕಾರಣವಾಗಿವೆ. ಮನುಸ್ಮೃತಿ ಹೆಣ್ಣೆಂದರೆ ನರಕವೆಂದಿದೆ. ಅದರ ಒಂಬತ್ತನೆಯ ಅಧ್ಯಾಯ ಓದಬಹುದು. ಸ್ತ್ರೀ ಎಂದರೆ ಜನ್ಮಜಾತೆ ಚಂಚಲೆ ಮತ್ತು ವ್ಯಭಿಚಾರಿ ಎನ್ನುತ್ತದೆ ಮನುಸ್ಮೃತಿ. ಅರ್ಥಾತ್ ಬಸವರಾಜ ಪಾಟೀಲ ಸೇಡಂ ಅವರು ನಂಬಿಕೊಂಡಿರುವ ಸಿದ್ಧಾಂತ. ನಾನಿದನ್ನು ಬರೆಯುವಾಗ ಬಹಳ ನೋವಿನಿಂದ ಅಕ್ಷರ ಪೋಣಿಸುತ್ತಿದ್ದೇನೆ. ಸಂಪೂರ್ಣ ಸಮಾನತೆಗಾಗಿ ವೈಜ್ಞಾನಿಕ ಚಿಂತನೆ ಮತ್ತು ಸೂತ್ರ ಹೆಣೆದುಕೊಟ್ಟ ಕಾರ್ಲ್ ಮಾರ್ಕ್ಸ್ ನೆಡೆಗೆ ಬೆಳಕು ಬೀರಿ ದಾರಿಗಾಣಿಸಿದ್ದು ನಮ್ಮ ಬಸವಣ್ಣ, ಅಲ್ಲಮ ಪ್ರಭುದೇವರು, ಅಕ್ಕ, ದಾಸಿಮಯ್ಯ, ಸಮಸ್ತ ಶರಣರು. ನನ್ನೊಳಗಿನ ಹೆಣ್ತನವೆಂಬ ಸೂತಕ ಅಳಿಸಿ ಹಾಕಿದ್ದು ನಮ್ಮ ಶರಣರು. ಭಾಲ್ಕಿ

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ, ಗಂಡು ಗಂಡಾದಡೆ ಹೆಣ್ಣಿನ ಸೂತಕ/ ಮನದ ಸೂಕತ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ? ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಯಾತು/ ಎನ್ನ ದೇವ ಚನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ/ ಎಂದು ಅಕ್ಕ ಜಗತ್ತಿನವರ ಮನಕ್ಕಂಟಿ ಮರುಳಾದ ಸೂತಕ ನೀಗಿಕೊಳ್ಳಬೇಕು ಎಂಬುದು ಕಲಿತಿದ್ದು ಶರಣರಿಂದ. ಇದು ಸ್ವಾಮಿಗಳಿಗೆ ಅರ್ಥವಾಗುವುದಿಲ್ಲ. ಹೆಣ್ಣನ್ನು ಮಾಯೆ ಎಂದು ಕರ್ಮಸಿದ್ಧಾಂತ ಹೇಳಿದರೆ, ಮನದ ಮುಂದಣ ಆಸೆಯೇ ಮಾಯೆ, ಹೆಣ್ಣು ಸಾಕ್ಷಾತ ಕಪಿಲ ಸಿದ್ದಮಲ್ಲಿಕಾರ್ಜುನ ಎಂದು ಹೇಳಿಲ್ಲವೆ? ಅರಿವಿಂಗೆ ಬೇರೊಂದೊಡಲಿಲ್ಲ ಎಂದರು. ಅಂದಿನ ಪಾಳೇಗಾರಿ ಊಳಿಗಮಾನ್ಯ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಪೌರೋಹಿತಶಾಹಿಯನ್ನು ಅತ್ಯಂತ ಧೈರ್ಯದಿಂದ ಎದುರು ಹಾಕಿಕೊಂಡ ಅವರ ಸುಳ್ಳು ಸೃಷ್ಟಿಯನ್ನೆಲ್ಲ ಒಂದೊಂದೇ ಅನಾವರಣಗೊಳಿಸಿ ಸತ್ಯ ತೋರಿದರವಲ್ಲವೆ. ಭಾಲ್ಕಿ

ವಚನ ಸಾಹಿತ್ಯ ವೇದಗಳ ಮುಂದುವರಿಕೆಯೇ!!

ವಚನ ಸಾಹಿತ್ಯ ವೇದಗಳ ಮುಂದುವರಿಕೆ ಎಂದು ಹೇಳಿದ್ದಾರಲ್ಲ ಇದೇ ಬಸವರಾಜ ಪಾಟೀಲ ಸೇಡಂ ಅವರ ಗೆಳೆಯರು. ಇದು ಸತ್ಯವೇ? ಹೌದೆ? ಖಂಡಿತ ಇಲ್ಲ. ವೇದ, ಆಗಮ, ಪುರಾಣ, ಶಾಸ್ತ್ರಗಳೆಲ್ಲವನ್ನು ಗುಡಿಸಿ ಬೀಸಾಕಿದರು. ಅವುಗಳೊಳಗಿನ ಟೊಳ್ಳುತನವನ್ನು ಬಯಲುಗೊಳಿಸಿದರು. ಅವು ಪೋಷಿಸುವ ಅಸ್ಪೃಶ್ಯಾಚರಣೆಯನ್ನು ಬಹಳ ಮಾರ್ಮಿಕವಾಗಿ ಅನಾವರಣ ಮಾಡುತ್ತಾರೆ ಬಸವಣ್ಣ. ವೇದ ನಡುನಡುಗಿತ್ತು/ ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯ/ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ/ ಆಗಮ ಹೆರತೊಲಗಿ ಅಗಲಿದ್ದಿತಯ್ಯ/ನಮ್ಮ ಕೂಡಲ ಸಂಗಯ್ಯನು/ ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ ಎನ್ನುತ್ತಾರೆ ಬಸವಣ್ಣ. ಈ ವೈದಿಕರ ವರ್ಣ ವ್ಯವಸ್ಥೆಯಲ್ಲಿ ಮಾದಾರ ಚನ್ನಯ್ಯನವರ ಸಮಾಜಕ್ಕೆ ಸ್ಥಾನವೇ ಇಲ್ಲ. ವರ್ಣ ವ್ಯವಸ್ಥೆಯು ಬ್ರಹ್ಮನೇ ಸೃಷ್ಟಿಸಿದ ಎಂದು ಸುಳ್ಳು ಹೇಳುತ್ತಾರೆ ವೈದಿಕರು. ಇದನ್ನು ನಮ್ಮ ಶರಣರು ಮೂಲದಲ್ಲಿಯೇ ತಿರಸ್ಕರಿಸುತ್ತಾರೆ. ಭಾಲ್ಕಿ

ಯಾರನ್ನೂ ಕರ್ಮಸಿದ್ಧಾಂತದ ಪ್ರಕಾರ ಕಟ್ಟಕಡೆಯಲ್ಲಿ ದೂಡಿ ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡಲಾಗಿತ್ತೋ, ಆ ಸಮುದಾಯದ ಮಾದಾರ ಚನ್ನಯ್ಯನ ಮನೆಯಲ್ಲಿ ಸ್ವತಃ ಕೂಡಲಸಂಗಯ್ಯನೇ ಉಣ್ಣುತ್ತಾನೆ. ಆಗ ಇವರ ವೇದ, ಆಗಮ, ತರ್ಕ, ಶಾಸ್ತ್ರಗಳ ಗತಿ ಏನಾಯಿತು ಎಂಬುದನ್ನು ವಚನ ಅರ್ಥಪೂರ್ಣವಾಗಿ ನಿರ್ವಚಿಸುತ್ತದೆ. ಮಾತ್ರವಲ್ಲ ಬಸವಣ್ಣ ತಾನು ಮಾದಾರ ಚನ್ನಯ್ಯನ ಮನೆಯ ದಾಸಿಯ ಮಗ, ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಗೆ ಹೋದಾಗ ಅವರ ಹುಟ್ಟಿದ ಮಗ ನಾನು, ಎನಗೆ ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ ಎನ್ನುತ್ತಾರೆ. ಎಲ್ಲ ರೀತಿಯ ಭೇದ ಭಾವ ಪೋಷಿಸುವ ಅಸಮಾನ ಬ್ರಾಹ್ಮಣ್ಯವನ್ನು ಬಸವಣ್ಣ ಖಂಡತುಂಡವಾಗಿ ಧಿಕ್ಕರಿಸಿ ‘ಏನಯ್ಯ ವಿಪ್ರ, ನುಡಿದಂತೆ ನಡೆಯರು, ತನಗೊಂದು ಬಟ್ಟೆ ಲೋಕಕ್ಕೊಂದು ಬಟ್ಟೆ’ ಎಂದು ಬಹಿರಂಗವಾಗಿ ಹೇಳುತ್ತಾರೆ. ಇದು ಸ್ವಾಮಿಗಳಿಗೆ ಪಚನವಾಗಿದ್ದರೆ ಒಳ್ಳೆಯದಿತ್ತು. ಭಾಲ್ಕಿ

ಸಿದ್ದಾಂತವನ್ನು ಮೂಲೆಗೊತ್ತಿ ಆಸ್ತಿಗಾಗಿಯೇ ಜಗಳ, ಕೋರ್ಟು, ಕಚೇರಿ

ಲಾಂಛನಗಳನ್ನು ಮಾತ್ರ ಧರಿಸಿ ಮುಂದೆ ಮಾಡಿ ಬಸವಣ್ಣ ಮತ್ತು ಶರಣರ ಹೆಸರಿನಲ್ಲಿ ಮಠ ಪೀಠಗಳಿಗೆ ದೊಡ್ಡವರಾಗಿ ಕುಳಿತಿರುವಿರಿ. ಮಠ ಪೀಠಗಳಿಗೆ ಆಸ್ತಿಯೂ ತಳುಕು ಹಾಕಿಕೊಂಡಿದೆ. ಮತ್ತು ಸಿದ್ದಾಂತವನ್ನು ಮೂಲೆಗೊತ್ತಿ ಆಸ್ತಿಗಾಗಿಯೇ ಜಗಳ, ಕೋರ್ಟು, ಕಚೇರಿ ಮಾಡಲಾಗುತ್ತಿದೆ. ಆರ್ಥಿಕ ಲಾಭಕ್ಕಾಗಿಯೇ ಎಲ್ಲ ಸಂಚಲನೆಯೆ? ಹಾಗೆ ನೋಡಿದರೆ ವಚನ ಸಾಹಿತ್ಯದಲ್ಲಿ ಅಥವ ಚಳುವಳಿಯಲ್ಲಿ ಮಠ ಪೀಠ ಸನ್ಯಾನಸತ್ವಕ್ಕೆ ಉಲ್ಲೇಖಗಳಿಲ್ಲ. ಮತ್ತು ಸಮರ್ಥನೆಯಿಲ್ಲ. ಆದಾಗ್ಯೂ ನಮ್ಮ ಮುಗ್ಧ ಭಕ್ತಾದಿಗಳು ಹೇಗಾದರೂ ಮಾಡಿ ಲಿಂಗಾಯತ್ ತತ್ವವು ಎಲ್ಲೆಡೆ ಬೆಳಕಾಗಲಿ ಎಂಬ ಕಾರಣಕ್ಕೆ ಮಠ ಪೀಠಗಳಿಗೆ ನಡೆದುಕೊಳ್ಳುತ್ತಿದ್ದಾರೆ. ಆದರೆ ತಾವು ಮಾತ್ರ ಲಾಂಛನ ಮಾತ್ರ ಇಟ್ಟುಕೊಂಡು ಬಸವ ತತ್ವಕ್ಕೆ ವಚನ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಹುದೆ? ಪ್ರಾಣ ಪ್ರತಿಷ್ಠಾಪನೆ, ಕಲ್ಲು ನಂದಿ, ಸತ್ಸಂಗ ಇತ್ಯಾದಿಗಳೆಲ್ಲವನ್ನು ಜನಮಾನಸದ ತಲೆಯಲ್ಲಿ ಸೇರಿಸಿ ವೈದಿಕತೆಯ ಗುಲಾಮಗಿರಿಯತ್ತ ಹೊರಳಿಸುವುದು ಎಂದರೆ ಏನು? ಲಾಂಛನಕ್ಕೆ ತಕ್ಕ ನಡೆ ಇಲ್ಲದಿದ್ದರೆ ಛೀ ಎಂಬೆ ಎಂದು ನಮ್ಮ ಶರಣರು ಹೇಳಿಲ್ಲವೆ? ಭಾಲ್ಕಿ

ಲಿಂಗಾಯತ ಎಂಬುದು ಜಾತಿಯಲ್ಲ, ಅದೊಂದು ತತ್ವ

ಒಂದು ಸತ್ಯ ಈ ಹೊತ್ತಿನಲ್ಲಿಯೇ ಹೇಳಬಯಸುತ್ತೇನೆ. ಲಿಂಗಾಯತ ಎಂಬುದು ಜಾತಿಯಲ್ಲ. ಅದೊಂದು ತತ್ವ. ಸಕಲ ಜೀವರಿಗೆ ಲೇಸು ಬಯಸುವ ತತ್ವ. ವರ್ಗ, ವರ್ಣ, ಲಿಂಗ, ಜಾತಿ ತಾರತಮ್ಯವನ್ನು ಕಿತ್ತು ಹಾಕುವ ತತ್ವ. ಸರ್ವ ಸಮಾನತೆಯ ಭೂಮಂಡಲ ಕಟ್ಟುವ, ಅರ್ಥಾತ್ ಮನುಷ್ಯರಿಂದ ಮನುಷ್ಯರ ಶೋಷಣೆಯಿಲ್ಲದ ಸಮಾಜ ಕಟ್ಟುವ ಸಿದ್ಧಾಂತವನ್ನು ಯಾರು ಆಯ್ಕೆ ಮಾಡಿಕೊಳ್ಳುವರೊ ಅವರು ಲಿಂಗಾಯತರು. ಇದನ್ನು ಆಗು ಮಾಡಲಿಕ್ಕಾಗಿ ಈ ಗುರಿ ಗಮ್ಯವನ್ನು ತಲುಪಲಿಕ್ಕಾಗಿ ಬಸವಣ್ಣ ಮತ್ತು ಶರಣರು ನೆಚ್ಚಿದ್ದು ಪ್ರಭುತ್ವವನ್ನಲ್ಲ, ರಾಜಶಾಹಿಯನ್ನಲ್ಲ, ಅಥವ ಉಳ್ಳವರನ್ನಲ್ಲ. ಇದನ್ನು ಆಗು ಮಾಡುವವರು ಕಾಯಕ ಜೀವಿಗಳು ಎಂಬ ಸ್ಪಷ್ಟತೆ ಶರಣರಿಗಿತ್ತು. ಆದ್ದರಿಂದಲೇ ಬಿಜ್ಜಳನ ಪಾದಕ್ಕೆ ಕಿರೀಟವಿಟ್ಟು ಬಸವಣ್ಣ ನಡೆದಿದ್ದು 770 ಅಮರಗಣಂಗಳೆಂಬ ಕಾಯಕ ಜೀವಿಗಳತ್ತ.

ಅವರಿಗಾಗಿ ಕಟ್ಟಿದ ತತ್ವವನ್ನು ಚಳುವಳಿಯನ್ನು ಮುನ್ನಡೆಸಬಲ್ಲವರು ಮಾದಾರ ಚನ್ನಯ್ಯ, ಹಡಪದ ಅಪ್ಪಣ್ಣ, ನನ್ನವ್ವ ಸೂಳೆ ಸಂಕವ್ವೆ, ಸತ್ಯಕ್ಕ… ಮುಂತಾದವರೆಲ್ಲ ಈ ಸಿದ್ಧಾಂತವನ್ನು ಎದೆಗಪ್ಪಿಕೊಂಡು ಪ್ರಾಣ ತೆತ್ತಾದರೂ ಇದನ್ನು ಉಳಿಸುವರು ಎಂಬ ಭರವಸೆ ಇತ್ತು. ಇದಕ್ಕೆ ಪುರಾವೆ ಎಂಬಂತೆ ಚರಿತ್ರೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಕಲ್ಯಾಣ ಪಟ್ಟಣದಲ್ಲಿ ವಿಪ್ಲವ ನಡೆಯಿತು. ವೈದಿಕರ ಕುತಂತ್ರ ಫಲಿಸಿತು. ಭಾಲ್ಕಿ

ಜಾತಿ ಬಿಟ್ಟು ಮನುಷ್ಯರಾಗಿ ಮಧುವರಸ ಹರಳಯ್ಯರ ಮಕ್ಕಳ ಮದುವೆಯಾಗುವುದು. ಜಾತಿ ವ್ಯವಸ್ಥೆಯ ಪೋಷಣೆಗೆ ಮದುವೆಯೆಂಬ ಸಂಸ್ಥೆಯೇ ಬಹುದೊಡ್ಡ ಅಸ್ತ್ರ. ಜಾತಿಯೊಳಗೆ, ರಕ್ತ ಸಂಬಂಧದೊಳಗೆ (ಅದು ಅವೈಜ್ಞಾನಿಕವೇ) ಮದುವೆಯಾಗಬೇಕೆಂಬ ಕಾನೂನು ಮಾಡಿದ್ದು ಇದೇ ಊಳಿಗಮಾನ್ಯ ವ್ಯವಸ್ಥೆ, ಪುರೋಹಿತಶಾಹಿ ವ್ಯವಸ್ಥೆ. ಆದರೆ ಶರಣರು ಇದನ್ನು, ಈ ಅವೈಜ್ಞಾನಿಕ ನಂಬಿಕೆಯನ್ನು ಮುರಿದರು. ಅದಕ್ಕಾಗಿ ತೆತ್ತ ಬೆಲೆ ಬಹು ಆಗಾಧವಾದದ್ದು. ಹರಳಯ್ಯ ಮಧುವರಸ ದಂಪತಿಗಳ ಕಣ್ಣು ಕಿತ್ತಿ, ಆನೆ ಕಾಲಿಗೆ ಕಟ್ಟಿ, ಕಲ್ಯಾಣದ ಪಟ್ಟಣದ ತುಂಬ ಎಳಹೂಟೆ ಮಾಡಲಾಯಿತು. ಇದೊಂದು ಮನುವಾದಿಗಳ ಸಾಂಸ್ಕೃತಿಕ ಭಯೋತ್ಪಾದನೆಯೇ ಆಗಿತ್ತು. ಕಲ್ಯಾಣದ ಪಟ್ಟಣಕ್ಕೆ ಅಂದು ಅಂಟಿದ ಶರಣರ ರಕ್ತದ ಕಲೆ ಇನ್ನೂ ಮಾಸಿಲ್ಲ. ಭಾಲ್ಕಿ

ಶರಣರ ಮೇಲೆ ವೈದಿಕರ ಧಾಳಿ ನಡೆಯುತ್ತದೆ. ಶರಣರು ದಿಕ್ಕಾಪಾಲಾಗುವ ಪರಿಸ್ಥಿತಿ ಬರುತ್ತದೆ. ಆಗ ಮಕ್ಕಳು, ಮನೆ ಅನ್ನಲಾರದೆ ಶರಣರು ವಚನ ಸಾಹಿತ್ಯದ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಅಟ್ಟಡವಿ, ದುರ್ದಾಳಿ, ಭಯೋತ್ಪಾದನೆಯ ಬೇಟೆ ಎಲ್ಲವನ್ನು ಎದುರಿಸುತ್ತ ಓಡಿದರು. ಮತ್ತು ತಮ್ಮ ಜೀವಕ್ಕಿಂತಲೂ ಮಿಗಿಲಾಗಿ ವಚನ ಸಾಹಿತ್ಯವನ್ನು ರಕ್ಷಿಸಿದರು. ಅವರು ಚಳುವಳಿಯನ್ನು, ಚರಿತ್ರೆಯನ್ನು, ಜನ ಚರಿತ್ರೆಯನ್ನು ಉಳಿಸಿದರು. ಮೈಯ ರಕ್ತ ಹರಿಸಿ ಉಳಿಸಿದರು. ಇಂತಹ ಚರಿತ್ರೆಯನ್ನೇ ತಿರುಚಲು ಹೊರಟಿದ್ದಾರೆ ಬಸವರಾಜ ಪಾಟೀಲ ಸೇಡಂ ಮತ್ತವರ ಸಂಘದ ಗೆಳೆಯರು. ಅವರೆಲ್ಲ ಕರ್ಮಸಿದ್ಧಾಂತಿಗಳೇ. ಸೇಡಂನ ಸಂಘೋತ್ಸವದಲ್ಲಿ ಹೋಮ ಹವನ ಮಾಡಿದ್ದಾರೆ. ಅಲ್ಲಿಗೆ ಹೋದ ಲಿಂಗವಂತ ಮಠಾಧೀಶರೆನ್ನಿಸಿಕೊಳ್ಳುವವರು ಕಿಂಚಿತ್ತಾದರೂ ಅದನ್ನು ಖಂಡಿಸಿದ್ದಾರೆಯೇ? ಅಲ್ಲಿ ಹೋಗಿಯೂ ಬಸವಣ್ಣನ ಮಾತೇ ಆಡುತ್ತೇವೆಂದು ಮರುಳು ಮಾತಾಡಿದರಲ್ಲ. ಅವರದ್ದೇ ತುತ್ತೂರು ಊದಿ ಬಂದಿದ್ದಾರೆ ಅಷ್ಟೆ. ಭಾಲ್ಕಿ

ಜನಸಾಮಾನ್ಯರು ವಚನ ತತ್ವ ಉಳಿಸುತ್ತಾರೆ

ಮೇಲೆ ಉಲ್ಲೇಖ ಮಾಡಿದಂತೆ, ಕಾಯಕ ಜೀವಿಗಳನ್ನು ಒಗ್ಗೂಡಿಸಿ ಆ ಜ್ಞಾನ ಶಿಶುಗಳನ್ನು ಅಜ್ಞಾನದ ತೊಟ್ಟಿಲಲ್ಲಿ ಹಾಕಿ, ಸಕಲ ವೇಧ ಶಾಸ್ತ್ರಗಳ ನೇಣು ಬಿಗಿದು, ಭ್ರಾಂತಿ ಹಾಡುತ್ತಿದ್ದ ಜೋಗುಳವನ್ನು ನಿಲ್ಲಿಸಲಾರದೆ ಗುಹೇಶ್ವನೆಂಬ ವಿವೇಕವು ಕಾಣಲಾಗದು ಎಂದು ಅಲ್ಲಮಪ್ರಭುದೇವರು ಹೇಳಿದರೆ, ಆ ಕಾಯಕ ಜೀವಿಗಳಿಗೆಲ್ಲ ಅನುಭವ ಮಂಟಪದಲ್ಲಿ ಚಿಂತನೆಯ ಮೂಸೆಗೊಡ್ಡಿ, ಚಳುವಳಿಯ ಹಾದಿಗೆ ಸಜ್ಜುಗೊಂಡರು. ಬಸವಣ್ಣ ಮತ್ತು ಶರಣರು ಸಮತೆಯ ಸಿದ್ಧಾಂತವನ್ನು ಮುಂದಕ್ಕೊಯ್ಯುವುದಕ್ಕಾಗಿ ನೆಚ್ಚಿದ್ದು ಕಾಯಕ ಜೀವಿಗಳನ್ನು ಎಂದು ಹೇಳಿದೆನಲ್ಲ, ಅದು ಚರಿತ್ರೆಯಲ್ಲಿ ಪುರಾವೆಯೊಂದಿಗೆ ನಮ್ಮ ಮುಂದಿದೆ. ಈಗಲೂ ಹಾಗೆಯೇ ಇದೆ ಪರಿಸ್ಥಿತಿ. ಕಸ ಹೊಡೆಯುವ ನನ್ನ ಜನ, ಚರಂಡಿ ತೆಗೆವ ನನ್ನ ಜನ ಕೊರಳಲ್ಲಿ ಲಿಂಗ ಧರಿಸಿ, ತಾವೇ ವಿಭೂತಿ ಪೂಸಿಕೊಂಡು, ಗುರು ಲಿಂಗ ಜಂಗಮದ ಹಂಗಿಲ್ಲದ ನಿರಂತರವಾಗಿ ಕಾಯಕದಲ್ಲಿ ನಿರತರಾಗಿದ್ದಾರೆ. ಭಾಲ್ಕಿ

ಅವರಿಗೆ ಇಂತಹ ಯಾವ ಸ್ವಾಮಿಗಳು ಅವರ ಓಣಿಯತನಕ, ಮನೆಯತನಕ ಹೋಗಿ ದೀಕ್ಷೆ ಕೊಟ್ಟಿಲ್ಲ. ಬಸವಣ್ಣ ಹೇಳಿದಂತೆ ತಮ್ಮ ಕಾಯಕದ ಕೈಗಳ ಮೂಲಕ, ತಮ್ಮ ದೇಹಾಲಯವೆಂಬ ದೇವಾಲಯದ ಮೂಲಕ ವಚನ ತತ್ವವನ್ನು ಆವಾಹಿಸಿಕೊಂಡಿದ್ದಾರೆ. ಅಂತೆಯೇ ಅಂದಿಗೂ ಇಂದಿಗೂ ಎಲ್ಲರೂ ಬಳಸುವ ಸಕಲ ಸಂಪತ್ತನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಮತ್ತು ಕರ್ಮಸಿದ್ಧಾಂತಕ್ಕೆ ಎದುರಾಗಿ ಸೆಡ್ಡು ಹೊಡೆಯುತ್ತಿದ್ದಾರೆ. ಗುರುಮನೆ ಅರಮನೆಯ ಹಂಗಿಲ್ಲದ ಶರಣ ತತ್ವದ ಮೇಲೆ ಪಟ್ಟಭದ್ರ ಸ್ವಾರ್ಥಿಗಳು ಕೋಟೆ ಕಟ್ಟ ಹೊರಟರೆ ಅದು ಶರಣ ದ್ರೋಹವೇ ಆಗುವುದು. ಮತ್ತು ಲಾಂಛನಗಳನ್ನು ಧರಿಸಿ ಮಠ ಪೀಠದಾಶ್ರಯದಲ್ಲಿ ಮತ್ತೆ ಬಸವ ತತ್ವವನ್ನು, ಶರಣ ಸಿದ್ಧಾಂತವನ್ನು ವೈದಿಕೀಕರಣಗೊಳಿಸುವ ಹುನ್ನಾರ ಹೆಣೆಯುವುದನ್ನು ಜನತೆ ಸಹಿಸುವುದಿಲ್ಲ. ಜನಸಾಮಾನ್ಯರು ಈ ತತ್ವ ಉಳಿಸುತ್ತಾರೆ.

ಬಸವಣ್ಣ ಮತ್ತು ಶರಣರ ಹೆಸರಿನಲ್ಲಿ ವಚನ ವಿರೋಧಿ ವ್ಯಕ್ತಿ ಶಕ್ತಿಗಳನ್ನು ಕರೆಸುವುದಾಗಲಿ, ತಾವೇ ಅಂತಲ್ಲಿ ಹೋಗುವುದಾಗಲಿ ಮಾಡಿದರೆ ಅದು ತಮ್ಮ ಹಿಪೊಕ್ರಸಿ ಎಂದೇ ಭಾವಿಸಬೇಕಾಗುತ್ತದೆ. ಮತ್ತು ಎಲ್ಲರ ಹಂಗು ಹರಿದು ವಚನ ಸಿದ್ಧಾಂತ ವಚನ ಚಳುವಳಿಯ ಚರಿತ್ರೆ ರಕ್ಷಿಸಲು ಮತ್ತದೇ ಶರಣರು ತೋರಿದ ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಭಾಲ್ಕಿ

ಲಿಂಗಾಯತ ಎಂಬುದು ಜಾತಿಯಲ್ಲ. ಅದೊಂದು ತತ್ವ. ಸಕಲ ಜೀವರಿಗೆ ಲೇಸು ಬಯಸುವ ತತ್ವ. ವರ್ಗ, ವರ್ಣ, ಲಿಂಗ, ಜಾತಿ ತಾರತಮ್ಯವನ್ನು ಕಿತ್ತು ಹಾಕುವ ತತ್ವ. ಸರ್ವ ಸಮಾನತೆಯ ಭೂಮಂಡಲ ಕಟ್ಟುವ, ಅರ್ಥಾತ್ ಮನುಷ್ಯರಿಂದ ಮನುಷ್ಯರ ಶೋಷಣೆಯಿಲ್ಲದ ಸಮಾಜ ಕಟ್ಟುವ ಸಿದ್ಧಾಂತವನ್ನು ಯಾರು ಆಯ್ಕೆ ಮಾಡಿಕೊಳ್ಳುವರೊ ಅವರು ಲಿಂಗಾಯತರು. ಇದನ್ನು ಆಗು ಮಾಡಲಿಕ್ಕಾಗಿ ಈ ಗುರಿ ಗಮ್ಯವನ್ನು ತಲುಪಲಿಕ್ಕಾಗಿ ಬಸವಣ್ಣ ಮತ್ತು ಶರಣರು ನೆಚ್ಚಿದ್ದು ಪ್ರಭುತ್ವವನ್ನಲ್ಲ, ರಾಜಶಾಹಿಯನ್ನಲ್ಲ, ಅಥವ ಉಳ್ಳವರನ್ನಲ್ಲ. ಇದನ್ನು ಆಗು ಮಾಡುವವರು ಕಾಯಕ ಜೀವಿಗಳು ಎಂಬ ಸ್ಪಷ್ಟತೆ ಶರಣರಿಗಿತ್ತು.

ಇದನ್ನೂ ನೋಡಿ: ಸುಳ್ಳು ಪ್ರಕರಣವನ್ನು ದಾಖಲಿಸುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ‌#bdayananda |Commissioner of Police,

Donate Janashakthi Media

Leave a Reply

Your email address will not be published. Required fields are marked *