ಮುವತ್ತು ವರ್ಷ ಕಳೆದರೂ ಮುಗಿಯದ ಏತ ನೀರಾವರಿ ಕಾಮಗಾರಿ

– ಮಲ್ಲಿಕಾರ್ಜುನ ಕಡಕೋಳ

ಎರಡು ಸಾವಿರದ ಹತ್ತೊಂಬತ್ತನೆಯ ಇಸವಿ ಡಿಸೆಂಬರ್ ತಿಂಗಳು ಇಪ್ಪತ್ತೆರಡನೇ ತಾರೀಖು. ಅವತ್ತು ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ. ಅದು ಮೊಟ್ಟ ಮೊದಲ‌ ಸಾಹಿತ್ಯ ಸಮ್ಮೇಳನ ಆಗಿದ್ದರಿಂದ ಸಹಜವಾಗಿ ತಾಲೂಕಿನ ತುಂಬೆಲ್ಲ ಸಂಭ್ರಮ, ಸಡಗರ ತುಂಬಿ ತುಳುಕಿತ್ತು. ಒಂದೂವರೆ ಕಿಲೋಮೀಟರ್ ಉದ್ದಕ್ಕೂ ಹಾಡು, ಕುಣಿತ, ವಿವಿಧ ವಾದ್ಯ, ಕಲಾಮೇಳಗಳ ವರ್ಣರಂಜಿತ ಮೆರವಣಿಗೆ. ಅಂತಹ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಅವಕಾಶ ನನಗೆ ಒದಗಿ ಬಂದಿತ್ತು. ಮಲ್ಲಾಬಾದಿ

ಅಂದಿನ ಸಮ್ಮೇಳನಾಧ್ಯಕ್ಷ ಭಾಷಣವನ್ನು “ಏಕತಾರಿ ನಾದ ಧ್ಯಾನದ ಬಯಲು ಕಟ್ಟೋಣ” ಎಂಬ ಪುಸ್ತಿಕೆ ರೂಪದಲ್ಲಿ ಪ್ರಕಟಿಸಿ ತಂದಿದ್ದೆ. ಇಪ್ಪತ್ತು ಪುಟಗಳ ಸುದೀರ್ಘ ಭಾಷಣ ಓದಿ ಹೇಳುವಷ್ಟು ಮತ್ತು ಕೇಳುವಷ್ಟು ವ್ಯವಧಾನ ಕಡೆಯ ಗಳಿಗೆಯಲ್ಲಿ ಇಲ್ಲವಾದ್ದರಿಂದ ಮುದ್ರಿತ ಭಾಷಣದ ಮೂರು ಸಾವಿರ ಪ್ರತಿಗಳನ್ನು ಹಂಚಲಾಯಿತು. ಅಂದಹಾಗೆ ಅಂದಿನ ನನ್ನ ಭಾಷಣದ ಪ್ರಮುಖ ಅಂಶವೊಂದು ಇಂದು ಮುನ್ನೆಲೆಗೆ ಬಂದಿದೆ. ಹಾಗೆ ನೋಡಿದರೆ ಅಂದು ಪ್ರಸ್ತಾಪಿಸಿದ ಮತ್ತು ಮುನ್ನೆಲೆಗೆ ಬರಬೇಕಾದ ಜನಮುಖಿಯಾದ ಇನ್ನೂ ಕೆಲವು ಸಂಗತಿಗಳಿವೆ. ಅವಕ್ಕೂ ಕಾಲ ಕೂಡಿ ಬರುವ ಕಾಲ ಸನ್ನಿಹಿತ.

ಸಮ್ಮೇಳನಾಧ್ಯಕ್ಷ ಭಾಷಣದ ಪುಸ್ತಿಕೆಯ ಪುಟಸಂಖ್ಯೆ ಹದಿನೈದರ “ಕಡಕೋಳ ಮಡಿವಾಳಪ್ಪನ ನಾಡಿಗೆ ಬೇಕಾದ ಎಂಟು ಅಗತ್ಯ” ಅಂಶಗಳಲ್ಲಿ ಇದೀಗ ಮುನ್ನೆಲೆಗೆ ಬಂದು ತೀವ್ರ ಸಂಚಲನೆ ಮೂಡಿಸಿರುವ ಮೂರನೇ ಅಂಶ ಹೀಗಿದೆ. “ನೆನೆಗುದಿಗೆ ಬಿದ್ದಿರುವ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳ್ಳಬೇಕು. ಅದಕ್ಕಾಗಿ ಮಠಾಧೀಶರು ಮತ್ತೊಮ್ಮೆ ಸತ್ಯಾಗ್ರಹಕ್ಕೆ ಕೂಡುವಂತಾಗ ಬಾರದು”. ಅಂಸತ್ಯಾಗ್ರಹದಿನ ಪ್ರಥಮ ಸಾಹಿತ್ಯ ಸಮ್ಮೇಳನ ಈ ಕುರಿತು ಠರಾವು ಸಹಿತ ತೆಗೆದು ಕೊಂಡಿತ್ತು. ತಾಲೂಕು ಅಲ್ಲ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ತೆಗೆದುಕೊಳ್ಳುವ ಅನೇಕ ನಿರ್ಣಯಗಳಿಗೂ ಸರಕಾರದ ನಿರ್ಲಕ್ಷ್ಯವೇ ಗತಿ.

ಬಹುಪಾಲು ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿಗೆ ಸರ್ಕಾರದ ಕಣ್ಣು ಕಿವಿಗಳು ಸೂಕ್ಷ್ಮ ಸಂವೇದನೆ ಕಳಕೊಳ್ಳುವುದು ರೂಢಿಯಾಗಿ ಹೋಗಿದೆ. ಮಲ್ಲಾಬಾದಿ ಏತ ನೀರಾವರಿ ಯೋಜನೆ ಕುರಿತಾದ ನಿರ್ಣಯ ಅದಕ್ಕೆ ಹೊರತಾಗಿ ಉಳಿಯಲು ಸಾಧ್ಯವಾಗಲಿಲ್ಲ. ಏಕೆಂದರೆ ರಾಜಕಾರಣ ಮತ್ತು ರಾಜಕಾರಣಿ ಎಲ್ಲಕಡೆ ಮತ್ತು ಎಲ್ಲ ಕಾಲಕ್ಕೂ ಒಂದೇಬಗೆಯ ರಕ್ತದಗುಂಪಿಗೆ ಸೇರಿಕೆ ಆಗಿರುವ ಪ್ರಭೇದಗಳು. ಅದು ಆಳುವ ಪ್ರಭುತ್ವದ ಬಲಾಢ್ಯ ಅವಲಕ್ಷಣವೂ ಆದಂತಿದೆ. ಆದರೆ ದಡ್ಡುಗಟ್ಟಿದ ಅಧಿಕಾರಶಾಹಿಗೆ ಮತ್ತು ಕುಯುಕ್ತಿಯ ರಾಜಕಾರಣಕ್ಕೆ ಪಾಠ ಕಲಿಸುವ ಸಾಮರ್ಥ್ಯ ಜನಶಕ್ತಿಗಿದೆ ಎಂಬುದನ್ನು ಯಾರೂ ಮರೆಯಬಾರದು.

ಅಂದಿನ ಅವಿಭಜಿತ ಜೇವರ್ಗಿ ತಾಲೂಕಿನ ನಮ್ಮವರೇ ಆಗಿದ್ದ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದರು. ತಾಲೂಕಿನ ನಮಗೆಲ್ಲ ಅಪಾರ ಸಂತಸ. ಅಪರಿಮಿತ ಆನಂದ. ಹೀಗೆ ಏನೆಲ್ಲ ಪ್ರೀತಿ, ಮಮಕಾರಗಳ ಮಹಾಪೂರ. ಸಹಜವಾಗಿ ತಾಲೂಕಿನ ಮಲ್ಲಾಬಾದಿ ಏತ ನೀರಾವರಿಗೆ ಮುಕ್ತಿ ದೊರಕುತ್ತದೆಂಬ ಮುಗುಮ್ಮಾದ ನಂಬಿಕೆ ನಮಗೆಲ್ಲರಿಗೂ ಇತ್ತು. ಅದು ಫಲಿಸದೇ ಇದ್ದಾಗ ಜೇವರ್ಗಿ ತಾಲೂಕಿನ ಸಾವಿರಾರು ರೈತರು, ಹದಿನಾರು ಮಂದಿ ಮಠಾಧೀಶರು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಕುಂತರು. ಒಂಬತ್ತು ದಿನಗಳ ಕಾಲ ಜರುಗಿದ ಸತ್ಯಾಗ್ರಹದ ಸಾರಥ್ಯ ವಹಿಸಿದವರು ಅಂದಿನ ಜೆಡಿಎಸ್ ಪಕ್ಷದ ತಾಲೂಕು ಮತ್ತು ಜಿಲ್ಲಾ ಮುಖಂಡರಾಗಿದ್ದ ಕೇದಾರಲಿಂಗಯ್ಯ. ಸತ್ಯಾಗ್ರಹಕ್ಕೆ ತಾತ್ಕಾಲಿಕ ಪರಿಹಾರವೂ ದೊರಕಿತು.

ಅದೇ ಕೇದಾರಲಿಂಗಯ್ಯ, ಕಳೆದ ವಿಧಾನಸಭೆ ಚುನಾವಣೆಯ ಬದಲಾದ ರಾಜಕೀಯ ಸಂದರ್ಭದಲ್ಲಿ ಧರ್ಮಸಿಂಗ್ ಅವರ ಮಗ ಅಜಯಸಿಂಗ್ ಅವರೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಸೇರ್ಪಡೆಯಾದರು. ತನ್ಮೂಲಕ ಮಲ್ಲಾಬಾದಿ ಏತ ನೀರಾವರಿಯಂತಹ ಅನೇಕ ಜನಪರ ಕಾರ್ಯಗಳ ಕುರಿತು ತಾಲೂಕಿನಲ್ಲಿ ಮೊದಲಿನಂತೆ ಹಕ್ಕಿನೊಡೆತನ ಹಾಗೂ ಹೋರಾಟದ ಧ್ವನಿಯಲ್ಲಿ ಮಾತಾಡುವುದನ್ನು ಅವರು ಕಳೆದುಕೊಂಡರು. ಆದಾಗ್ಯೂ ಒಂದರೆಡು ಬಸ್ಸುಗಳಲ್ಲಿ ರೈತರನ್ನು ಬೆಂಗಳೂರಿಗೆ ಕರಕೊಂಡು ಹೋಗಿ ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಅವರನ್ನು ಭೆಟ್ಟಿ ಮಾಡಿ ಮಲ್ಲಾಬಾದಿ ಏತ ನೀರಾವರಿಗೆ ಪೂರ್ಣ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ, ಕೇದಾರಲಿಂಗಯ್ಯ ನನ್ನೊಂದಿಗೆ ಮಾತಾಡುತ್ತಾ ನಿಸೂರದ ದನಿಯಲ್ಲಿ ಹೇಳಿದರು.

ಇದನ್ನು ಓದಿ : ಹತ್ರಾಸ್ ನಲ್ಲಿ ಕಾಲ್ತುಳಿತದಿಂದ 121 ಜನರ ಬಲಿ: ಮೂಢನಂಬಿಕೆಗೆ ಕೊನೆಯೇ ಇಲ್ಲವೇ?

ಹಿರಿಯ ಹೋರಾಟಗಾರ, ರೈತಪ್ರೇಮಿ ಕೇದಾರಲಿಂಗಯ್ಯ ಹೇಳುವ ಪ್ರಕಾರ ಇದು ಜೆ. ಎಚ್. ಪಟೇಲರು ಮುಖ್ಯಮಂತ್ರಿ ಆಗಿರುವಾಗಲೇ ಶುರುವಾದ ಕೆಲಸ. ಯಡ್ರಾಮಿ ಮತ್ತು ಜೇವರ್ಗಿ ಪ್ರಾಂತ್ಯಗಳ ಎತ್ತರ ಪ್ರದೇಶದ ಭೂಸಮೀಕ್ಷೆ ಕಾರ್ಯ ಆಗಲೇ ಜರುಗಿತು. ಹಾಗೆ ಶುರುವಾದ ಮಲ್ಲಾಬಾದಿ ಏತ ನೀರಾವರಿ ಕಾರ್ಯ ಮೂವತ್ತು ವರ್ಷಗಳ ಕಾಲ ಆಮೆಗತಿಯಲ್ಲಿ ಜರುಗುತ್ತಲೇ ನಡೆದಿದೆ. ಬೆಂಗಳೂರು, ಬೆಳಗಾವಿ, ಕಲಬುರ್ಗಿಯಲ್ಲಿ ಜರುಗಿದ ವಿಧಾನಸಭಾ ಅಧಿವೇಶನಗಳ ಕಾರ್ಯಕಲಾಪಗಳಲ್ಲಿ ಹತ್ತಾರು ಬಾರಿ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಚರ್ಚೆಗೂ ಗ್ರಾಸವಾಗಿದೆ. ಹಾಗೆಯೇ ಅದರ ಪ್ರಗತಿಯೂ ಕುಂಟುತ್ತಲೇ ಜರುಗಿದೆ.

ಅಪ್ಪ ಧರ್ಮಸಿಂಗ್ ಮುಖ್ಯಮಂತ್ರಿ ಆದಾಗಿಂದ ಹಿಡಿದು ಅವರ ಮಗ ಡಾ. ಅಜಯಸಿಂಗ್ ಮೂರನೇ ಬಾರಿಗೆ ಜೇವರ್ಗಿ ಶಾಸಕ ಮತ್ತು ಮೊದಲ ಬಾರಿಗೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದರು. ತಂದೆ ಮಗ ಇಬ್ಬರೂ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೂ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಅಬಾಧಿತವಾಗಿ ಸಂಪೂರ್ಣಗೊಂಡು ಯಡ್ರಾಮಿ, ಜೇವರ್ಗಿ ಸೀಮೆಯ ರೈತರ ಹಸಿವು ಹಿಂಗಿಸಲಿಲ್ಲ. ಶಾಸಕ ಅಜಯಸಿಂಗ್ ಸಹಿತ ವಿಧಾನಸಭೆಯ ಅಧಿವೇಶನಗಳಲ್ಲಿ ಈ ಕುರಿತು ಕೆಲವು ಸಲ ಪ್ರಸ್ತಾಪಿಸಿದ್ದೇ ಸಾಧನೆ ಆಗಿ ಬಿಟ್ಟಿತು. ಆದರೆ ಮಲ್ಲಾಬಾದಿ ಏತ ನೀರಾವರಿಯ ಕಾಮಗಾರಿ ಕೆಲಸಗಳು ಮಾತ್ರ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ತೀವ್ರ ಕೊರತೆಯಿಂದಾಗಿ ಕಲ್ಯಾಣ ಕರ್ನಾಟಕದ ಬಹುಪಾಲು ಯೋಜನೆಗಳು ನಿಷ್ಕ್ರಿಯಗೊಂಡಿವೆ. ಅದರಿಂದಾಗಿ ಮೊಗಲಾಯಿ ನೆಲದ ಮುಗ್ದ ಜನಮಾನಸ ಸಂಕಟದ ಮಡುವಲ್ಲಿ ಮುಳುಗಿ ನಲುಗುವಂತಾಗಿದೆ. ಜನರು ನೀಡಿದ ಟ್ಯಾಕ್ಸ್ ಹಣದಲ್ಲಿ ಜನಪ್ರತಿನಿಧಿಗಳು ವಿಮಾನ, ಐಷಾರಾಮಿ ಬಂಗಲೆ, ಕಾರುಗಳಲ್ಲಿ ಮೋಜು ಮಸ್ತಿ ಮಾಡಿ ಮೆರೆದಾಡುವುದು ಮಾತ್ರ ತಪ್ಪಿಲ್ಲ.

ಆದರೆ ಜನಚಳವಳಿ ನಿಂತಿಲ್ಲ. ಮುಖ್ಯವಾಗಿ ಯಡ್ರಾಮಿ ಮತ್ತು ಜೇವರ್ಗಿ ಎಂಬ ಅವಳಿ ತಾಲೂಕು ಹಳ್ಳಿಗಳ ನೆಲದೊಡಲ ಹಸಿವಿನ ಕತೆಯಿದು. ಸರಕಾರ ಮತ್ತು ಅಧಿಕಾರಿಗಳ ಲೆಕ್ಕದಲ್ಲಿ ಅಂಕಿಅಂಶಗಳ ಸಬೂಬಿನ ಲೆಕ್ಕ. ಯಡ್ರಾಮಿ ತಾಲೂಕಿನ ಮೂವತ್ತೆಂಟು ಹಳ್ಳಿಗಳ ಹದಿನಾರು ಸಾವಿರದ ಏಳುನೂರಾ ಎಪ್ಪತ್ತೆರಡು (16772) ಹೆಕ್ಟೇರ್ ಭೂಪ್ರದೇಶ ಮತ್ತು ಜೇವರ್ಗಿ ತಾಲೂಕಿನ ಇಪ್ಪತ್ತು ಹಳ್ಳಿಗಳ ಎಂಟು ಸಾವಿರದ ಆರು ನೂರಾ ನಲವತ್ತೆರಡು(8642) ಹೆಕ್ಟೇರ್ ಭೂಪ್ರದೇಶದ ನೀರುಣ್ಣುವ ಯೋಜನೆ ಇದಾಗಿದೆ. ಅದಲ್ಲದೇ ಪಕ್ಕದ ಸುರಪುರ ಮತ್ತು ಶಹಾಪುರ ತಾಲೂಕಿನ ಭೂಪ್ರದೇಶಗಳ ಸಹಸ್ರಾರು ಹೆಕ್ಟೇರ್ ಜಮೀನು ಸೇರಿದಂತೆ ಅಜಮಾಸು ಒಂದು ಲಕ್ಷ ಎಕರೆಯಷ್ಟು ನೀರಾವರಿ ಪ್ರದೇಶವೇ ಮಲ್ಲಾಬಾದಿ ಏತ ನೀರಾವರಿ ಯೋಜನೆ. ಅದೆಲ್ಲವು ಭೂತಾಯ ಹಸಿವು ನೀಗಬೇಕಾದ ವ್ಯಥೆಯ ಕಥನ. ನೀರಾವರಿ ಎನ್ನುವುದು ಕೇವಲ ಭೂಮಿ, ಬೆಳೆ ಕೇಂದ್ರಿತ ನೀರಧಾರೆಯಲ್ಲ. ಅದು ನಿಸರ್ಗವಾಸಿ ಪಶು, ಪಕ್ಷಿ, ಪ್ರಾಣಿ, ಕೀಟ ಒಟ್ಟಾರೆ ಎಲ್ಲಾ ಜೀವಸಂಕುಲದ ಪಾಲಿನ ಜೀವಜಲಧಾರೆಯ ಅಮೃತ ಸಿಂಚನ.

ಮೂರು ದಶಕಗಳ ಮಲ್ಲಾಬಾದಿ ಏತ ನೀರಾವರಿ ಮೂರು ಮುಖ್ಯ ಜಾಗೆಗಳಲ್ಲಿ ಕೃಷ್ಣೆಯ ಮುಖ್ಯ ಕಾಲುವೆಯ ನೀರೆತ್ತುವ ಮೂಲಕ ಮೂರುಕಡೆ ಲಿಫ್ಟ್ ಮಾಡುವ ಕೇಂದ್ರಗಳ ವ್ಯವಸ್ಥೆ ನಿರ್ಮಾಣಗೊಂಡಿದೆ. ಸುರಪುರ ತಾಲೂಕಿನ ನಗನೂರು ಮತ್ತು ಯಡ್ರಾಮಿ ತಾಲೂಕಿನ ಬಳಬಟ್ಟಿ ‌ಮತ್ತು ಜಮಖಂಡಿ ಗ್ರಾಮಗಳ ಬಳಿ ನಿರ್ಮಾಣಗೊಂಡ ವಾಟರ್ ಲಿಫ್ಟ್ ಕೇಂದ್ರಗಳ ಮೂಲಕ ರೈತರ ಹೊಲಗಳು ನೀರುಣ್ಣುತ್ತವೆ. ಕಳೆದ ವರ್ಷ ೦೭.೦೩.೨೦೨೩ ರಂದು ಜರುಗಿದ ೧೩೮ನೇ ಮಂಡಳಿ ಸಭೆಯಲ್ಲಿ ₹ ೧೩೨ ಕೋಟಿ ಅನುಮೋದನೆ ದೊರಕಿದ ಮಾಹಿತಿ ಇದೆ. ಇದು ಎಂ.ಬಿ.ಸಿ. ಶಾಖಾ ಕಾಲುವೆಗೆ ಸಂಬಂಧಿಸಿದ್ದಾಗಿದೆ. ಜೆ.ಬಿ.ಸಿ.ಗೆ ಸಂಬಂಧಿಸಿದಂತೆ ₹ ೧೫೪ ಕೋಟಿ. ಒಟ್ಟಾರೆ ಯೋಜನೆ ಪೂರ್ಣಗೊಳಿಸಲು ₹ ೨೮೪ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುಮೋದನೆಗೊಂಡ ಯೋಜನೆಗೆ ಟೆಂಡರ್ ಕರೆಯುವಲ್ಲಿ ವಿಳಂಬನೀತಿ ಯಾಕೆ.? ಏನೇ ಕೇಳಿದರೂ ಗ್ಯಾರಂಟಿಗಳದ್ದೇ ಅಡ್ಡಿ ಎಂಬಂತೆ ಸಾಮಾನ್ಯ ಜನರೇ ಮಾತಾಡಿಕೊಳ್ಳುವಂಥ ವೈರುಧ್ಯಸ್ಥ ವಾತಾವರಣ. ಅಷ್ಟಕ್ಕೂ ಈಗ ಆಗಬೇಕಾಗಿರುವುದು ಶಾಖಾ ಕಾಲುವೆ ಮತ್ತು ಉಪ ಕಾಲುವೆ, ಹೊಲದೊಳಗಿನ ಕಿರು ಕಾಲುವೆಗಳ ನಿರ್ಮಾಣ ಕಾರ್ಯ.

ಯಡ್ರಾಮಿ ಮತ್ತು ಜೇವರ್ಗಿ ಅವಳಿ ತಾಲೂಕುಗಳ ಐವತ್ತೆಂಟು ಹಳ್ಳಿಗಳ ರೈತರು, ಕೃಷಿ ಕಾರ್ಮಿಕರು, ವಿಶೇಷವಾಗಿ ರೈತ ಮಹಿಳೆಯರು ದಿನಾಂಕ: ೧೬.೦೭.೨೦೨೪ ರಂದು ಮಂಗಳವಾರ ಬೀಳವಾರ ಗ್ರಾಮದಲ್ಲಿ ಸಭೆ ಸೇರಲಿದ್ದಾರೆ. ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಕಲಬುರ್ಗಿ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ನೇತೃತ್ವದಲ್ಲಿ ಮಲ್ಲಾಬಾದಿ ಏತ ನೀರಾವರಿ ಕುರಿತಂತೆ “ಮಾಡು ಇಲ್ಲವೇ ಮಡಿ” ಎಂಬ ಹೋರಾಟಕ್ಕೆ ರೈತಸೈನ್ಯ ಸಿದ್ದಗೊಳ್ಳುತ್ತಲಿದೆ. ಆರೂವರೆ ಟಿಎಂಸಿ ನೀರು, ನೆಲದ ಮಕ್ಕಳ ಹಕ್ಕಿನಂತೆ ಪಡೆದೇ ತೀರುವ ಸಂಕಲ್ಪ ರೈತರದು.

ಹೌದು ನಮ್ಮನೆಲದ ನೋವುಗಳು ಇಂದು ನಿನ್ನೆಯವಲ್ಲ. ನಮ್ಮದು ಆರುನೂರು ವರುಷಗಳ ನೋವಿನ ಕಥನ. ಸ್ವಾತಂತ್ರ್ಯ ಬಂದು ಏಳೂವರೆ ದಶಕದಲ್ಲಿ ಐದೂವರೆ ದಶಕ ಕಾಲ ಧರ್ಮಸಿಂಗ್ ಮನೆತನವೇ ಆಳಿದೆ. ಸೆಕ್ಯುಲರ್ ಮನಸ್ಥಿತಿಯ ನಮ್ಮ ನೆಲವು ಅವರಿಗೆ ನೀಡಿದ ಸಹೃದಯ ಅವಕಾಶದಿಂದ ಮುಖ್ಯಮಂತ್ರಿಯಾಗಿದ್ದು, ಅವರ ಮಗ ಮೂರು ಬಾರಿ ಶಾಸಕರಾದುದು ನಮಗೆ ಹೆಮ್ಮೆಯೇ ಆಗಿದೆ. ಆದರೆ ನೆಲದ ಕಣ್ಣೀರು ಒರೆಸುವ ಋಣದ ಕಿಂಚಿತ್ತೂ ಕಾಳಜಿ ಅವರಿಗೆ ಇಲ್ಲದೇ ಹೋಯ್ತಲ್ಲ.!?

ಇದನ್ನು ನೋಡಿ : ಕನ್ನಡ ಕಟ್ಟುವಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಾತ್ರ – ಡಾ. ಪುರುಷೋತ್ತಮ ಬಿಳಿಮಲೆ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *