ರಾಮನಗರ: ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಸಂಬಂಧ ನೈಸ್ ಸಂಸ್ಥೆ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಮನಗರ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದೆ.
ರಾಮನಗರ ಜಿಲ್ಲೆಯ ನೈಸ್ ಸಂತ್ರಸ್ಥ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ಮಾತನಾಡಿ ನೈಸ್ ಸಂಸ್ಥೆಯಿಂದ ಭೂ ಸ್ವಾಧೀನ ರದ್ದುಪಡಿಸಬೇಕು , ನೈಸ್ ಸಂಸ್ಥೆ ನಡೆಸಿರುವ ಹಗರಣ, ಆಕ್ರಮ ಹಾಗೂ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು ಎಂದರು.
ಇದನ್ನೂ ಓದಿ:ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು
ನೈಸ್ ಸಂಸ್ಥೆ ಆಕ್ರಮ ಸಂಬಂಧದ ಸದನ ಸಮಿತಿ ವರದಿ ಜಾರಿ ಮಾಡಬೇಕು , 1997 ರ ಕೆಎಐಡಿಬಿ ಭೂ ಸ್ವಾಧೀನದ ನೆಪ ಮಾಡಿಕೊಂಡು , ಭೂ ಕಬಳಿಕೆಗಾಗಿ ನೈಸ್ ಸಂಸ್ಥೆ , ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ-ದಬ್ಬಾಳಿಕೆ ನಿಲ್ಲಿಸಬೇಕು ಹಾಗೂ ನೊಂದ ರೈತರ ಅಹವಾಲು ಕೇಳಿದ ಮಾಜಿ ಸಚಿವ ಟಿ ಬಿ ಜಯಚಂದ್ರ ರವರಿಗೆ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ರಾಮನಗರ ಜಿಲ್ಲಾ ನೈಸ್ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಾರಾಯಣಪ್ಪ ,ಚಂದ್ರು ಕೆಪಿಆರ್ಎಸ್, ಜಿಲ್ಲಾ ಮುಖಂಡರುಗಳಾದ ಅಂಕಪ್ಪ, ನಾಗೇಶ್, ಚನ್ನಾಪ್ಪಾಜಿ ಮುಂತಾದವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.