- ಉತ್ತರ ಪ್ರದೇಶದ ಅಲಿಗಡ ಸಮೀಪ ನೀಲಾಚಲ್ ರೈಲಿನಲ್ಲಿ ಭೀಕರ ಘಟನೆ
- ಚಲಿಸುತ್ತಿದ್ದ ರೈಲಿನ ಒಳಗೆ ನುಗ್ಗಿದ ಕ್ರೌಬಾರ್ ರಾಡಿನಿಂದ ಪ್ರಯಾಣಿಕ ಸಾವು
- ಕಿಟಕಿ ಸೀಳಿಕೊಂಡು ಬಂದು ಪ್ರಯಾಣಿಕನ ಕುತ್ತಿಗೆಗೆ ಚುಚ್ಚಿದ ಕಬ್ಬಿಣದ ರಾಡು
ಪ್ರಯಾಗರಾಜ್ : ವ್ಯಕ್ತಿಯೊಬ್ಬರು ದೆಹಲಿ-ಕಾನ್ಪುರ ನೀಲಾಂಚಲ್ ಎಕ್ಸ್‌ಪ್ರೆಸ್(12876) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಗರಾಜ್ ವಿಭಾಗದ ಸೋಮ್ನಾ ಮತ್ತು ದನ್‌ಬಾರ್ ರೈಲು ನಿಲ್ದಾಣಗಳ ನಡುವೆ ಐದು ಅಡಿ ಉದ್ದ ಮತ್ತು 1.5 ಇಂಚು ದಪ್ಪದ ಕಬ್ಬಿಣದ ರಾಡ್ ಕಿಟಕಿಯ ಗಾಜು ಒಡೆದು ತೂರಿ ಬಂದಿದ್ದು, ರಾಡ್ ಕುತ್ತಿಗೆಗೆ ಚುಚ್ಚಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಬೆಳಗ್ಗೆ 8:45ಕ್ಕೆ ಈ ದಾರುಣ ಘಟನೆ ನಡೆದಿದ್ದು, ರೈಲಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಸುಲ್ತಾನ್‌ಪುರ ಜಿಲ್ಲೆಯ ಗೋಪಿನಾಥಪುರದ ಹರಿಕೇಶ್ ಕುಮಾರ್ ದುಬೆ ಅವರು ರಾಡು ಚುಚ್ಚಿ ಮೃತಪಟ್ಟಿದ್ದಾರೆ. ದುಬೆ ಅವರ ಮೃತದೇಹವನ್ನು ಅಲಿಗಢ ರೈಲು ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಅಲಿಗಢ ರೈಲು ನಿಲ್ದಾಣಕ್ಕೆ ಧಾವಿಸಿದರು. ಮೂಲಗಳ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ರೈಲ್ವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಕಿಟಕಿಯಿಂದ ತೂರಿ ಬಂದ ಕಬ್ಬಿಣದ ರಾಡ್ ಪ್ರಯಾಣಿಕನ ಸಾವಿಗೆ ಕಾರಣವಾಗಿದೆ.
ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಹರಿಕೇಶ್ ದುಬೆ ಅವರು ಕಿಟಕಿ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಆಗ ಕಿಟಕಿಯ ಗಾಜನ್ನು ಸೀಳಿಕೊಂಡು ಬಂದ ಕಬ್ಬಿಣದ ಸರಳು, ಅವರ ಕುತ್ತಿಗೆಯನ್ನು ಛೇದಿಸಿದೆ. ಸುಮಾರು ಐದು ಅಡಿ ಉದ್ದದ ಕ್ರೌಬಾರ್ ರಾಡು ಎಷ್ಟು ಬಲವಾಗಿ ನುಗ್ಗಿತ್ತೆಂದರೆ, ಬರ್ತ್‌ಗಳನ್ನು ಪ್ರತ್ಯೇಕಿಸುವ ಮರದ ಗೋಡೆಯ ಮೂಲಕವೂ ಒಂದು ಅಡಿಯಷ್ಟು ತೂರಿಕೊಂಡು ಹೋಗಿದೆ. ಅದೃಷ್ಟವಶಾತ್ ಅಲ್ಲಿ ಯಾರೂ ಕುಳಿತಿರಲಿಲ್ಲ. ಇಲ್ಲದಿದ್ದರೆ ಮತ್ತೊಬ್ಬರು ಕೂಡ ಅದಕ್ಕೆ ಬಲಿಯಾಗುತ್ತಿದ್ದರು. ಕಿಟಕಿ ಗಾಜು ಒಡೆದ ಪರಿಣಾಮ ಮಹಿಳೆಯೊಬ್ಬರಿಗೆ ಗಾಯವಾಗಿದೆ. ರೈಲ್ವೆ ಟ್ರ್ಯಾಕ್‌ನ ನಿರ್ವಹಣೆ ಕಾರ್ಯ ನಡೆಸಿದ್ದ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಕ್ರೌಬಾರ್ ಅನ್ನು ಅಲ್ಲಿಯೇ ಬಿಟ್ಟು ಹೋಗಿರಬಹುದು. 130 ಕಿಮೀ ವೇಗದಲ್ಲಿ ಚಲಿಸುವ ರೈಲು, ಆನಂದ್ ವಿಹಾರ ನಿಲ್ದಾಣದಿಂದ ಹೊರಟ ಬಳಿಕ , ಅವಘಡ ಸಂಭವಿಸಿದ ಸ್ಥಳದಲ್ಲಿ 30 ಕಿಮೀ ವೇಗದಲ್ಲಿತ್ತು. ಅದು ಹೆಚ್ಚಿನ ವೇಗ ಪಡೆದುಕೊಳ್ಳುವಾಗ ರೈಲಿನ ಚಕ್ರಕ್ಕೆ ಸಿಲುಕಿದ ರಾಡು, ವೇಗವಾಗಿ ಚಿಮ್ಮಿ ಬಂದಿರಬಹುದು ಎಂದು ಊಹಿಸಲಾಗಿದೆ.
“ನನ್ನ ಸಹೋದರ ಟೆಲಿಫೋನ್ ಟವರ್ ಟೆಕ್ನೀಶಿಯನ್ ಆಗಿದ್ದ. ಆದರೆ ಕೆಲಸ ಕಳೆದುಕೊಂಡ ಬಳಿಕ, ಹೊಸದಿಲ್ಲಿಯ ಸೋನಿಯಾ ವಿಹಾರದಲ್ಲಿ ಪತ್ನಿ ಶಾಲಿನಿ ದುಬೆ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದ” ಎಂದು ಹರಿಕೇಶ್ ಅಣ್ಣ ಬಬಿತ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.