ಟೆಹ್ರಾನ್: ಇಲ್ಲಿನ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದೆ. ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಮತ್ತು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕಾಗಿದೆ. ಇದಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ.
ಮಹ್ಸಾ ಅಮಿನಿ ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಿಂದ ತನ್ನ ಸಂಬಂಧಿಕರನ್ನು ಭೇಟಿಯಾಗಲು ರಾಜಧಾನಿ ಟೆಹ್ರಾನ್ ಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಮಹ್ಸಾ ಹಿಜಾಬ್ ಅನ್ನು ಸಮರ್ಪಕವಾಗಿ ಹಿಜಾಬ್ ಧರಿಸಿಲ್ಲ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು.
ಮಹ್ಸಾ ಅಮಿನಿ ಅವರ ಮೇಲಿನ ಇರಾನ್ ಪೋಲೀಸರ ದೌರ್ಜನ್ಯವನ್ನು ಖಂಡಿಸಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಹ್ಸಾ ಅಮಿನಿ ಅವರನ್ನು ಬಂಧಿಸಿದ ನಂತರ ಆಕೆ ಕೋಮಾಕ್ಕೆ ಜಾರಿ ಶುಕ್ರವಾರ ನಿಧನರಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಮಹಿಳಾ ಹಕ್ಕುಗಳ ಪ್ರತಿಭಟನೆ ಹೆಚ್ಚಾಗಿದೆ. ಆಕೆಯನ್ನು ಥಳಿಸಲಾಯಿತು ಎಂಬ ಆರೋಪಗಳಿವೆ.
ಇರಾನ್ ಪೊಲೀಸರ ಹೇಳಿಕೆ ಪ್ರಕಾರ, ಆಕೆ ಬಂಧನಕ್ಕೆ ಒಳಗಾದ ವೇಳೆ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಹೇಳಿಕೆ, ಅಮಿನಿಯನ್ನು ಪೊಲೀಸರು ಹೊಡೆದು ಹತ್ಯೆಗೈದಿರುವುದಾಗಿ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದರು.
ಇರಾನಿನ ಮಹಿಳೆಯರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ವಿಡಿಯೋ, ಸರ್ಕಾರದ ಮಹಿಳಾ ವಿರೋಧಿ ವರ್ತನೆಗೆ ಧಿಕ್ಕಾರ ಹಾಕಿ, ಕೂದಲು ಕತ್ತರಿಸುವ ಹಾಗೂ ಹಿಜಾಬ್ ಸುಟ್ಟು ಹಾಕುವ ವಿಡಿಯೋವನ್ನು ಹಾಕುತ್ತಿದ್ದಾರೆ. ಈ ವಿಡಿಯೋಗಳು ಈಗ ಸಾಕಷ್ಟು ವೈರಲ್ ಆಗಿವೆ.
ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಾಸಿಹ್ ಅಲಿನೆಜಾದ್ ವಿಡಿಯೋವೊಂದನ್ನು ಟ್ವೀಟ್ ಮಾಡಿ “ಹಿಜಾಬ್ ಪೊಲೀಸು ಮಹ್ಸಾ ಅಮಿನಿ ಅವರನ್ನು ಕೊಂದದ್ದನ್ನು ವಿರೋಧಿಸಿ ಇರಾನಿಯನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಮತ್ತು ಹಿಜಾಬ್ ಅನ್ನು ಸುಡುವ ಮೂಲಕ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ. ನಾವು 7ನೇ ವಯಸ್ಸಿನಿಂದ ನಮ್ಮ ಕೂದಲು ರಕ್ಷಣೆಯನ್ನು ಮಾಡದಿದ್ದರೆ ನಮಗೆ ಶಾಲೆಗೆ ಹೋಗಲು ಅಥವಾ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸತ್ತಿದ್ದೇವೆ” ಎಂದೂ ಬರೆದುಕೊಂಡಿದ್ದಾರೆ.
ಅವರ ಮತ್ತೊಂದು ಟ್ವೀಟ್‌ನಲ್ಲಿ, ಇದು ನಿಜವಾದ ಇರಾನ್, ಇರಾನ್‌ನ ಸಕ್ವೆಜ್‌ನಲ್ಲಿ ಭದ್ರತಾ ಪಡೆಗಳು ಮಹ್ಸಾ ಅಮಿನಿಯ ಸಾವಿನ ನಂತರ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಮೊದಲ ಹಿಜಾಬ್ ಪೊಲೀಸರು 22 ವರ್ಷದ ಹುಡುಗಿಯನ್ನು ಕೊಂದರು ಮತ್ತು ಈಗ ಬಂದೂಕುಗಳನ್ನು ಬಳಸುತ್ತಿದ್ದಾರೆ ಮತ್ತು ದುಃಖಿತ ಜನರ ವಿರುದ್ಧ ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.
ಇರಾನಿನಲ್ಲಿ ಷರಿಯ ಕಾನೂನಿನ ಪ್ರಕಾರ 7 ವರ್ಷಕ್ಕಿಂತ ಮೇಲ್ಪಟ ಎಲ್ಲರೂ ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆನ್ನುವ ನಿಯಮವೊಂದು ಇದೆ. ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಮತ್ತು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಲೇಬೇಕಾಗಿದೆ. ಈ ಕಾನೂನು ಉಲ್ಲಂಘಿಸಿದ ಅಪರಾಧಿಗಳು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ. ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.