– ವಸಂತರಾಜ ಎನ್.ಕೆ.
ಟ್ರಂಪ್ ತಮ್ಮ ಎರಡನೇ ಅವತಾರದಲ್ಲಿ ಉಕ್ರೇನ್ ಯುದ್ಧ ನಿಲ್ಲಿಸುವ ಶಾಂತಿದೂತನಂತೆ ಮಾತಾಡಿದರೆ, ಗಾಜಾ ಮತ್ತು ಇರಾನ್ ಗಳಲ್ಲಿ ಯುದ್ಧಕೋರತನ ಪ್ರದರ್ಶಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ತಮ್ಮ ಮೊದಲಿನ ಅವತಾರದಲ್ಲಿ ತಿರಸ್ಕರಿಸಿ ಹೊರಬಂದಿದ್ದ ಇರಾನ್ – ಅಮೆರಿಕ ಅಣು ಒಪ್ಪಂದದ ಕುರಿತು ಮತ್ತೆ ಮಾತುಕತೆ ಆರಂಭಿಸಿದ್ದಾರೆ. ಮಾತುಕತೆಯ ಮೊದಲು “ಒಪ್ಪಂದಕ್ಕೆ ಬಂದರೆ ಸರಿ ಇಲ್ಲದಿದ್ದರೆ ….” ಎಂಬ ಅವರ ವಿಶಿಷ್ಟ ಶೈಲಿಯ ಬೆದರಿಕೆ ಸಹ ಬಂದಿದೆ. ಇರಾನ್ ಸಹ ಈ ಬೆದರಿಕೆಗೆ ಸೂಕ್ತ ಪ್ರತಿ-ಕ್ರಮ ತೆಗೆದುಕೊಳ್ಳುವ ಬೆದರಿಕೆ ಸಹ ಹಾಕಿದೆ. ಆಗ ಹೊರ ಬಂದಿದ್ದು ಮತ್ತು ಈಗ ಮತ್ತೆ ಒಪ್ಪಂದಕ್ಕೆ ಮಾತುಕತೆ ಆರಂಭಿಸುವ ದರ್ದು ಟ್ರಂಪ್ ಗೆ ಏನಿದೆ? ಇದು ಇಸ್ರೇಲಿನ ಒತ್ತಡದಿಂದ ಇರಾನ್ ನಾಶ ಮಾಡುವ ಯುದ್ಧಕ್ಕೆ ಮುನ್ನುಡಿಯಾ ಅಥವಾ ಇರಾನ್ ಅಣ್ವಸ್ತ್ರ ತಡೆಯುವ ಕೊನೆಯ ಹತಾಶ ಪ್ರಯತ್ನವಾ? – ಒಂದು ವಿಶ್ಲೇಷಣೆ. ಇರಾನ್
ಇರಾನ್ ಅಣ್ವಸ್ತ್ರ ತಯಾರಿಸಿದೆ ಅಥವಾ ಅದಕ್ಕೆ ಹತ್ತಿರ ಬಂದಿದೆ ಎಂದು ಟ್ರಂಪ್ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಕೂಡಲೇ ಹೇಳಲು ಆರಂಭಿಸಿದರು. ಇದು ಹಿಂದಿನ ಒಪ್ಪಂದದ “ಉಲ್ಲಂಘನೆ”. ಇದನ್ನು ತಕ್ಷಣ ನಿಲ್ಲಿಸದಿದ್ದರೆ “ವಿನಾಶಕಾರಿ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರ ಎಂದಿನ ಶೈಲಿಯಲ್ಲಿ ಬೆದರಿಕೆ ಹಾಕಿದರು. ಯು.ಎಸ್ (ಮತ್ತು ಸ್ವತಃ ಟ್ರಂಪ್ ಮೊದಲ ಅವಧಿಯಲ್ಲಿ 2018ರಲ್ಲಿ) ಈ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂತೆಗೆದಿತ್ತು ಮತ್ತು ಮತ್ತೆ ಆರ್ಥಿಕ ದಿಗ್ಬಂಧನಗಳನ್ನು ಹೇರಿತ್ತು. ಹಾಗಾಗಿ ಇರಾನ್ ಈ ಒಪ್ಪಂದ ಪಾಲಿಸಲು ಬಾಧ್ಯವಾಗಿಲ್ಲ. ಯು.ಎಸ್ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ಆದರೆ ಈ ಕುರಿತು ಮಾತುಕತೆಗೆ ಸಿದ್ಧವಿದೆ ಎಂದು ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
ಇರಾನ್-ಯು.ಎಸ್ ಅಣು ಒಪ್ಪಂದ – 2015
ಟ್ರಂಪ್ ಉಲ್ಲೇಖಿಸುತ್ತಿರುವ ಒಪ್ಪಂದ 2015ರಲ್ಲಿ ಒಬಾಮ ಅಧ್ಯಕ್ಷರಾಗಿದ್ದಾಗ ಆಗಿದ್ದು. ಅದನ್ನು ಸಾಮಾನ್ಯವಾಗಿ ಇರಾನ್-ಯು.ಎಸ್ ಅಣು ಒಪ್ಪಂದವೆಂದು ಕರೆಯಲಾಗುತ್ತಿದ್ದರೂ, ಅದು ನಿಜವಾಗಿಯೂ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಐದು ಶಾಶ್ವತ ಸದಸ್ಯರು ಮತ್ತು ಜರ್ಮನಿ ಹಾಗೂ ಇರಾನ್ ನಡುವೆ ಆದ ಜಂಟಿ ಒಪ್ಪಂದ. ಈ ಒಪ್ಪಂದಕ್ಕೆ ಇದ್ದ ಬೆಂಬಲವನ್ನು ಬಿಂಬಿಸುವಂತೆ ‘P5+1 – ಇರಾನ್’ ಒಪ್ಪಂದವೆಂದೂ ಕರೆಯಲಾಗುತ್ತದೆ. ಆದರೆ ಅದರ ಅಧಿಕೃತ ಹೆಸರು Joint Comprehensive Plan of Action (JCPOA) ಅಂದರೆ (ಇರಾನ್ ಅಣ್ವಸ್ತ್ರ ತಡೆಗೆ) ಸಮಗ್ರ ಜಂಟಿ ಕಾರ್ಯ ಯೋಜನೆ. ಇದರ ಉದ್ದೇಶ ಇರಾನ್ ಅಣುಶಕ್ತಿ ಕಾರ್ಯಕ್ರಮವನ್ನು ನಾಗರಿಕ ಬಳಕೆಗಳಿಗೆ (ವಿದ್ಯುತ್ ಶಕ್ತಿ, ವೈದ್ಯಕೀಯ ಇತ್ಯಾದಿ)ಗೆ ಸೀಮಿತಗೊಳಿಸಿ, ಅಣ್ವಸ್ತ್ರ ತಯಾರಿಕೆಗೆ ನಿರ್ಬಂಧ ಹಾಕುವುದು. ಇದನ್ನು ಖಾತ್ರಿ ಪಡಿಸಲು ಇರಾನ್ ಅಣು ಕಾರ್ಯಕ್ರಮದ ಸ್ಥಾವರಗಳನ್ನು ಪರಿಕ್ಷೀಸಲು ಅವಕಾಶ ಕೊಡಬೇಕಾಗಿತ್ತು. ಆದರೆ ಯು.ಎಸ್ ಒಪ್ಪಂದದಿಂದ ಹೊರ ನಡೆದ ನಂತರ, ಇಂತಹ ಪರಿಕ್ಷಣೆ ಸೀಮಿತವಾಗಿದ್ದು, ಇರಾನ್ ಈ ಅವಕಾಶ ಬಳಸಿ ಅಣ್ವಸ್ತ್ರ ತಯಾರಿಸಿರಬಹುದು ಎಂಬುದು ಯು.ಎಸ್ ಆತ<ಕ.
ಆ ನಂತರ ಯು.ಎಸ್ ಈ ಕುರಿತು ಇರಾನ್ ಮಾತುಕತೆಯನ್ನು ಆರಂಭಿಸಿದೆ. ಒಮಾನ್ ಮಧ್ಯಸ್ಥಿಕೆಯಲ್ಲಿ ಎರಡು ಸುತ್ತಿನ ಪರೋಕ್ಷ ಮಾತುಕತೆ ನಡೆಯಿತು. ಏಪ್ರಿಲ್ 26 ರಿಂದ ಒಮಾನ್‌ನಲ್ಲಿ ನೇರ ಮಾತುಕತೆ ನಡೆಸಲು ಅಜೆಂಡಾ ರೂಪಿತವಾಗಿದೆ. ಈ ವರೆಗಿನ ಮಾತುಗಳು ತೃಪ್ತಿಕರವಾಗಿವೆ ಎಂದು ಎರಡೂ ಪಕ್ಷಗಳು ಹೇಳಿವೆ ಎಂದು ವರದಿಯಾಗಿದೆ. ಈ ಮಾತುಕತೆಗಳಿಂದ ಯು.ಎಸ್ ಮತ್ತು ಇರಾನ್ ಏನು ನಿರೀಕ್ಷಿಸುತ್ತಿದ್ದಾರೆ ಎಂಬುದರ ಮೇಲೆ ಈ ಮಾತುಕತೆಯ ಅಂತಿಮ ಫಲಿತಾಂಶ ಅವಲಂಬಿಸಿರುತ್ತದೆ ಎಂಬುದು ಸ್ಪಷ್ಟ.
ಅಣು ಒಪ್ಪಂದದಿದಂದ ಟ್ರಂಪ್ ನಿರೀಕ್ಷೆಯೇನು?
ಯು.ಎಸ್ ಇರಾನನ್ನು ಪಶ್ಚಿಮ ಏಶ್ಯಾದಲ್ಲಿ ತನ್ನ ಅಧಿಪತ್ಯವನ್ನು ಕಾಪಾಡಿಕೊಳ್ಳಲು ಇರುವ ಅಪಾಯವಾಗಿ ಕಾಣುತ್ತದೆ. ಒಂದು ಕಡೆ ಅದರ ಪ್ರಾದೇಶಿಕ ಪಾಳೆಯಗಾರನಾದ ಇಸ್ರೇಲ್ ಮತ್ತು ಇನ್ನೊಂದು ಕಡೆ ಅಗಾಧ ತೈಲ ಸಂಪತ್ತಿನ ಒಡೆಯರೂ ವಿಧೇಯ ಅಡಿಯಾಳುಗಳೂ ಆಗಿರುವ ಶೇಕ್ ಗಳ ಮೇಲೆ ಆಧಾರಿತ ಯು.ಎಸ್ ಅಧಿಪತ್ಯಕ್ಕೆ ಇರಾನ್ ಸವಾಲು ಹಾಕಉತ್ತಾ ಬಂದಿದೆ. ಅಣ್ವಸ್ತ್ರ ಸಜ್ಜಿತ ಅಥವಾ ಆ ಸಾಮರ್ಥ್ಯ ಹೊಂದಿರುವ ಇರಾನ್ ತಮ್ಮ ಅಧಿಪತ್ಯಕ್ಕೆ ಅಪಾಯಕಾರಿ ಎಂದು ಯು.ಎಸ್ ಮತ್ತು ಇಸ್ರೇಲ್ ಯಾವಾಗಲೂ ಭಾವಿಸಿತ್ತು. ಇರಾನ್ ಬೆಂಬಲಿತವೆನ್ನಲಾದ ಲೆಬನಾನ್ ನ ಹೆಜಬೊಲ್ಲಾ, ಯೆಮೆನ್ ನ ಹೌತಿ ಗೆರಿಲ್ಲಾ ಪಡೆಗಳು ಅಕ್ಟೋಬರ್ 2023ರ ನಂತರ ಇಸ್ರೇಲ್ ಆರಂಭಿಸಿದ ಯುದ್ಧ ಮತ್ತು ಗಾಜಾ ನರಮೇಧಕ್ಕೆ ಇಡೀ ಪ್ರದೇಶದಲ್ಲಿ ತೀವ್ರ ಪ್ರತಿರೋಧ ಒಡ್ಡಿವೆ.. ಪ್ಯಾಲೆಸ್ಟೈನಿ ವಾಸದ ಎಲ್ಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಬೃಹತ್ ಇಸ್ರೇಲ್ ನ ಕನಸು ಕಾಣುತ್ತಿರುವ ನೆತನ್ಯಾಹು ಸರಕಾರ ಈ ಸನ್ನಿವೇಶ ಬಳಸಿ ಹೆಜಬೊಲ್ಲಾ, ಹೌತಿ ಮತ್ತು ಹಾಮಾಸ್ ಗೆರಿಲ್ಲಾ ನಾಯಕರ, ಪಡೆಗಳ ಮತ್ತು ಮಿಲಿಟರಿ ಉಪಕರಣಗಳ ಬಹುಭಾಗವನ್ನು ನಾಶ ಮಾಡಿದೆ. ಯು.ಎಸ್, ಇಸ್ರೇಲ್ ಮತ್ತು ತುರ್ಕಿ ಜಂಟಿ ಪಿತೂರಿ ನಡೆಸಿ ಐ.ಎಸ್.ಐ.ಎಸ್ ಬಳಸಿ ಸಿರಿಯಾದ ಸರಕಾರವನ್ನು ಉರುಳಿಸಿತ್ತು.
ಇದೇ ಸನ್ನಿವೇಶದ ಲಾಭ ಪಡೆದು ಇರಾನ್ ಅಣು ಸ್ಥಾವರಗಳ ಮೇಲೆ ದಾಳಿ ಮಾಡಿ ಅದರ ಅಣ್ವಸ್ತ್ರ ಅಭಿವೃದ್ಧಿ ಸಾಮರ್ಥ್ಯ ಮತ್ತು ಸಾಧ್ಯತೆಯನ್ನು ನಾಶ ಮಾಡಬೇಕು ಎಂದು ಇಸ್ರೇಲ್ ಯು.ಎಸ್ ಮೇಲೆ ಗರಿಷ್ಠ ಒತ್ತಡ ಹಾಕಿತ್ತು. ಆದರೆ ಈಗಾಗಲೇ ಗಾಜಾ ನರಮೇಧದ ವಿರುದ್ಧ ತಮ್ಮ ದೇಶಗಳ ಜನಾಕ್ರೋಶಕ್ಕೆ ಬೆದರಿದ ಶೇಕ್ ಗಳು ಇದರ ವಿರುದ್ಧ ಪ್ರತಿರೋಧ ಒಡ್ಡಿ ತನ್ನ ಪ್ರಾದೇಶಿಕ ಹಿತಾಸಕ್ತಿಗೆ ಧಕ್ಕೆ ಬರಬಹುದೆಂಧು ಮತ್ತು ಮೂರನೇ ಯುದ್ಧದಲ್ಲಿ ತೊಡಗಲು ಸಿದ್ಧವಿಲ್ಲದ ಬಿಡೆನ್ ಇದಕ್ಕೆ ಒಪ್ಪಿರಲಿಲ್ಲ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಯುದ್ಧಕೋರ ನೆತನ್ಯಾಹು ಇತ್ತೀಚೆಗೆ ಟ್ರಂಪ್ ಭೇಟಿ ಮಾಡಿ ಇರಾನ್ ತನ್ನ ಅಣ್ವಸ್ತ್ರ ತ್ಯಾಗ ಮಾಡಲು ಒತ್ತಡ ಹಾಕಬೇಕು. ಅದು ಒಪ್ಪದಿದ್ದರೆ ಅದರ ಅಣು ಸ್ಥಾವರಗಳ ಮೇಲೆ ಜಂಟಿ ದಾಳಿ ಮಾಡಿ ನಾಶ ಮಾಡಬೇಕು ಎಂದು ಅವರ ಮೇಲೆ ಒತ್ತಡ ಹಾಕಿದ್ದಾರೆ.
ಇದನ್ನೂ ಓದಿ : ಪರ್ಯಾಯ ಬೆಳವಣಿಗೆಯ ಮಾದರಿ ಬೇಕಾಗಿದೆ ಇರಾನ್
ನೇತನ್ಯಾಹು ಲಿಬಿಯಾ ಮಾದರಿ ಅಂದರೆ ಏನು?
ವಾಶಿಂಗ್ಟನ್ ನ ಶ್ವೇತಭವನದಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ನಡೆದ ಸಭೆಯ ನಂತರ ನೆತನ್ಯಾಹು “ಇರಾನ್ ಅಣ್ವಸ್ತ್ರಗಳನ್ನು ಪಡೆಯಬಾರದು ಎಂಬ ಗುರಿಯ ಬಗ್ಗೆ ನಾವು ಇಬ್ಬರೂ ಸಹಮತದಲ್ಲಿದ್ದೇವೆ…ಇದು ಲಿಬಿಯಾದ ಮಾದರಿಯಂತೆ, ಪೂರ್ಣ ರಾಜತಾಂತ್ರಿಕ ಮಾರ್ಗದಲ್ಲಿ ಸಾಧ್ಯವಾದರೆ ಒಳ್ಳೆಯದು” ಎಂದು ಹೇಳೀದ್ದಾರೆ. ಲಿಬಿಯಾ ಮಾದರಿ ಎಂದರೆ ಗದ್ದಾಫಿ ಅಣ್ವಸ್ತ್ರ ತ್ಯಾಗ ಮಾಡಿ ಶರಣಾಗತರಾದರು ಮತ್ತು ತಕ್ಷಣವೇ ಅಮೇರಿಕಾ, ಬ್ರಿಟನ್ ಹಾಗೂ ಫ್ರಾನ್ಸ್ ಬೆಂಬಲಿತ ಬಂಡುಕೋರರಿಂದ ಕೊಲ್ಲಲ್ಪಟ್ಟರು. ಆ ಗದ್ದಾಫಿಯೇ ಆಫ್ರಿಕಾ ಒಕ್ಕೂಟದ ಮತ್ತು ಆಫ್ರಿಕಾದ ನವ-ವಸಾಹತುಶಾಹಿಯ ವಿರುದ್ಧ ಪ್ರತಿರೋಧದ ನಾಯಕರಾಗಿದ್ದರು. ಗದ್ದಾಫಿ ಕೊಲೆಯ ನಂತರ 10 ವರ್ಷಗಳಾದರೂ ಲಿಬಿಯಾ ಇನ್ನೂ ಯುದ್ಧಪೀಡಿತ ರಾಷ್ಟ್ರವಾಗಿಯೇ ಉಳಿದಿದೆ. ನೆತನ್ಯಾಹುಗೆ ಇರಾನ್‌ನಿಗೂ ಅದೇ ಗತಿ ಮಾಡಬೇಕೆಂಬ ಉದ್ದೇಶವಿದೆ.
ಆದರೆ ಇರಾನ್ ಲಿಬಿಯಾದಷ್ಟು ಸಣ್ಣ ರಾಷ್ಟ್ರವಲ್ಲ; ಯು.ಎಸ್ ಸೋಲಿಸಿ ನಾಶ ಮಾಡಿದ ಇರಾಕ್ ನ ನಾಲ್ಕು ಪಟ್ಟು ವಿಸ್ತೀರ್ಣ ಮತ್ತು ಮೂರು ಪಟ್ಟು ಜನಸಂಖ್ಯೆ ಹೊಂದಿದೆ. ವಿಶೇಷವಾಗಿ ದೂರಗಾಮಿ ಕ್ಷಿಪಣಿ ಮತ್ತು ಡ್ರೋನ್ ಸೇರಿದಂತೆ ಆಧುನಿಕ ಮಿಲಿಟರಿ ತಂತ್ರಜ್ಞಾನ ಪರಿಣತಿ ಮತ್ತು ಉತ್ಪಾದನೆ ಸಾಮರ್ಥ್ಯ ಪಡೆದಿದ್ದು, ಈ ಪ್ರದೇಶದಲ್ಲಿರುವ ಯು.ಎಸ್ ಮಿಲಿಟರಿ ನೆಲೆ ಮತ್ತು ಸೆಂಟ್ ಕಾಂ, 5ನೇ ನೌಕಾಪಡೆ ಮುಂತಾದ ಮಿಲಿಟರಿ ಮುಖ್ಯ ಕಚೇರಿ ಮೇಲೆ ನೇರ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇಸ್ರೇಲಿನ ರಕ್ಷಾಕವಚಗಳನ್ನು ಬೇಧಿಸಿ ಅದರ ನಗರಗಳ ಮತ್ತು ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯವನ್ನು ಈಗಾಗಲೇ ಪ್ರದೇಶಿಸಿದೆ.
ಅದು ಐತಿಹಾಸಿಕ ಪ್ರಬಲ ಸಂಸ್ಕೃತಿಯ ದೇಶವಾಗಿದೆ ಮತ್ತು ಇತ್ತೀಚಿನ ಇತಿಹಾಸದಿಂದ ಪಾಠ ಕಲಿತಿದೆ. ಹಿಂದೆ ಶಿಯಾ-ಸುನ್ನಿ ವಿವಾದದಿಂದ ಸೌದಿ ಅರೇಬಿಯ ಇತ್ಯಾದಿ ಇತರ ಪಶ್ಚಿಮ ಏಶ್ಯಾದ ದೇಶಗಳೊಂದಿಗೆ ಸಂಘರ್ಷ ಹೊಂದಿದ್ದು, ಈಗ ಚೀನಾದ ಮಧ್ಯಸ್ತಿಕೆಯಿಂದ ಸಂಬಂಧ ಉತ್ತಮ ಪಡಿಸಿಕೊಂಡಿದೆ. ಚೀನಾ ಮತ್ತು ರಶ್ಯಾ ಜತೆ ಘನಿಷ್ಠ ಆರ್ಥಿಕ, ಮಿಲಿಟರಿ ಸಂಬಂಧ ಹೊಂದಿದೆ. ಪ್ರಾದೇಶಿಕ ಮತ್ತು ಜಾಗತಿಕ ಒಂಟಿತನದಿಂದ ಹೊರಗೆ ಬಂದಿದೆ.
ಇರಾನ್ 2015ಕ್ಕಿಂತ ಹೆಚ್ಚು ಅನುಕೂಲಕರ ಒಪ್ಪಂದ ಬಯಸುತ್ತದೆ
ಬಹುಶಃ ಯುದ್ಧದ ಮೂಲಕ ಸಾಧ್ಯವಾಗದದ್ದನ್ನು ಮಾತುಕತೆಯ ಮೂಲಕ ಸಾಧಿಸಲೋ ಅಥವಾ ಇರಾನ್ ವಿರುದ್ಧ ಮಿಲಿಟರಿ ದಾಳಿಯ ಸಮಯ ಮೀರಿದೆ ಅಂತಲೋ ಯು.ಎಸ್ ಈ ಮಾತುಕತೆಗಳನ್ನು ಆರಂಭಿಸಿದೆ. JCPOA ಅಡಿಯಲ್ಲಿ ಇರಾನ್ ತನ್ನ ಯುರೇನಿಯಂ ಸಂಸ್ಕರಣ ಮಾಡುವ ಸೆಂಟ್ರಿಫ್ಯೂಜ್‌ಗಳನ್ನು 19,000ರಿಂದ 5,000ಕ್ಕೆ ಇಳಿಸಿತ್ತು, ಮತ್ತು ತನ್ನ ಯುರೇನಿಯಂ ಸಂಗ್ರಹವನ್ನು 10,000 ಕಿಲೋಗ್ರಾಂಗಳಿಂದ 300 ಕಿಲೋಗ್ರಾಂಗಳಿಗೆ ಇಳಿಸಿತು. ಆದರೆ ಟ್ರಂಪ್ ಒಪ್ಪಂದದಿಂದ ಹೊರಬಂದ ನಂತರ ಇರಾನ್ ತನ್ನ ಶಕ್ತಿಶಾಲಿ ಸೆಂಟ್ರಿಫ್ಯೂಜ್‌ಗಳನ್ನು ಪುನಃ ಚಲಾಯಿಸಲು ಪ್ರಾರಂಭಿಸಿತು ಮತ್ತು ಇಂದಿಗೆ ಸುಮಾರು 13,000 ಸೆಂಟ್ರಿಫ್ಯೂಜ್‌ಗಳನ್ನು ಸ್ಥಾಪಿಸಿದೆ. ಯುರೇನಿಯಂ ನ್ನು 5% ಕ್ಕಿಂತ ಹೆಚ್ಚು ಶುದ್ಧಿಕರಿಸಬಾರದು ಎಂಬ ನಿರ್ಬಂಧ ಮೀರಿ ಇರಾನ್ ಈಗ 60% ಶುದ್ಧತೆಗೆ ಏರಿಸಿದೆ. ಪಾಶ್ಚಾತ್ಯ ಅಂದಾಜುಗಳ ಪ್ರಕಾರ, 60% ರಿಂದ 90% ಯುರೇನಿಯಂ ಶುದ್ಧತೆಯ ಮಟ್ಟ ತಲುಪಿ ಅಣ್ವಸ್ತ್ರ ಸಾಮರ್ಥ್ಯ ಹೊಂದಲು, ಇರಾನ್ ಗೆ ಕೇವಲ ವಾರಗಳೇ ಬೇಕಾಗಿವೆ. ಇರಾನ್ ಒಂದು ಅಣ್ವಸ್ತ್ರ ರಾಷ್ಟ್ರವಾಗುವ ಗುರಿಗೆ ತೀರಾ ಹತ್ತಿರದಲ್ಲಿದೆ. ಬಿಡೆನ್ ಆಡಳಿತ ಟ್ರಂಪ್ ವಿಧಿಸಿದ ನಿರ್ಬಂಧಗಳನ್ನು ಮುಂದುವರೆಸಿದರೂ, ಇರಾನ್ ಮೇಲೆ ಯಾವುದೆ ಪರಿಣಾಮ ಬೀರಿಲ್ಲ. ಇರಾನ್ ಇಂದಿಗೂ ಇಸ್ರೇಲ್‌ಗೆ ವಿರುದ್ಧ ಬಲವಾಗಿ ನಿಂತಿದೆ.
ನೆತನ್ಯಾಹು ಹೇಳಿದ ಲಿಬಿಯಾ ಮಾದರಿ ಅಂದರೆ ಕೇವಲ ಅಣು ಶಸ್ತ್ರಾಸ್ತ್ರ ತ್ಯಾಗ ಮಾತ್ರವಲ್ಲ, ಇರಾನ್‌ನ್ನು ಸಂಪೂರ್ಣ ನಾಶಮಾಡುವ ಉದ್ದೇಶ. ಇದು ಇಂದಿನ ಕಾಲದ ಸಾಮ್ರಾಜ್ಯಶಾಹಿಯ ರೂಪ: ದೇಶಗಳನ್ನು ನಾಶಮಾಡುವ ಶಕ್ತಿ ಇದೆ. ಆದರೆ ಅವುಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲ.
ಇರಾನ್ ಯುರೇನಿಯಂ ಶುದ್ಧೀಕರಣವನ್ನು 2015ರ JCPOA ಒಪ್ಪಂದದಂತೆ 5%ಕ್ಕೆ ಸೀಮಿತಗೊಳಿಸಲು, ಅದರ ಅಣುಸಕ್ತಿ ರಿಯಾಕ್ಟರ್‌ಗಳ ಬಳಕೆ ಮತ್ತು ಸಂಶೋಧನೆಗಾಗಿ ಬೇಕಾದ 20% ಶುದ್ಧೀಕರಣದ ಉದ್ದೇಶ ಬಿಟ್ಟು ಬಿಡುವುದಿಲ್ಲ. ಇದು ಅಣು ಪ್ರಸರಣ ನಿಷೇಧ ಒಪ್ಪಂದದ ಅಡಿಯಲ್ಲಿ ಅವರ ಹಕ್ಕು ಕೂಡಾ. ಇರಾನ್ ತನ್ನ ಮೇಲಿನ ಎಲ್ಲ ಆರ್ಥಿಕ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಶರತ್ತು ಹಾಕುವ ಸಾಧ್ಯತೆಯಿದೆ.
ಟ್ರಂಪ್ ತಿರಸ್ಕರಿಸಿದ ಹಿಂದಿನ JCPOA ಗಿಂತ ಹೆಚ್ಚು ಇರಾನ್ ಗೆ ಅನುಕೂಲಕರವಾದ ಒಪ್ಪಂದಕ್ಕೆ ಬರಬೇಕಾಗಬಹುದು ಅಥವಾ ನೆತನ್ಯಾಹು ಒಪ್ಪಂದಕ್ಕೆ ಮಣಿದು ಮತ್ತೊಂದು ಭೀಕರ ಯುದ್ಧವನ್ನು ಪ್ರಾರಂಭಿಸಬೇಕಾಗಬಹುದು. ಇವೆರಡೇ ಆಯ್ಕೆಯಿರುವುದು ಟ್ರಂಪ್ ಗೆ. ಯುದ್ಧ ಆಯ್ಕೆ ಮಾಡಿದರೆ ಇಸ್ರೇಲ್‌ಗೆ ಅದು ಲಾಭಕರವಾಗಬಹುದು ಆದರೆ ಟ್ರಂಪ್‌ಗೆ ಅದು ಭಾರೀ ಹೊರೆ ಆಗಬಹುದು. ಪಶ್ಚಿಮ ಏಶ್ಯಾ ಪ್ರದೇಶಕ್ಕೆ ಮತ್ತು ಇಡಿ ಜಗತ್ತಿಗೆ ಮಾರಕವಾಗಲಿದೆ. ಟ್ರಂಪ್ ಆಡಳಿತ ಇಸ್ರೇಲಿನ ಒತ್ತಡಕ್ಕೆ ಮಣಿಯದೆ ಇರಾನ್ ಅಂಗಿಕಾರಾರ್ಹವಾದ ಒಪ್ಪಂದಕ್ಕೆ ಬರುವ ಪ್ರಬುದ್ಧತೆ ತೋರುತ್ತದೆ ಎಂದು ಆಶಿಸಬೇಕಾಗಿದೆ.
ಇದನ್ನೂ ನೋಡಿ : ನಿಶಿಕಾಂತ್ ದುಬೆ, ಧನ್ಕರ್ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media ಇರಾನ್