ಇರಾನ್-ಸೌದಿ ರಾಜಿ ಸಂಧಾನದತ್ತ, ರಾಯಭಾರ ಕಚೇರಿ ಆರಂಭಿಸುವ ಘೋಷಣೆ

ಪಶ್ಚಿಮ ಏಶ್ಯಾದ ಪ್ರಮುಖ ದೇಶಗಳೂ ಹಲವು ವರ್ಷಗಳಿಂದ ಪರಸ್ಪರ ವೈರತ್ವವನ್ನೂ ಹೊಂದಿದ್ದ ಇರಾನ್ ಮತ್ತು ಸೌದಿ ಅರೇಬಿಯಾ ರಾಜಿ ಸಂಧಾನ ಆರಂಭಿಸಿವೆ. ಬೆಜಿಂಗ್ ನಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಇರಾನ್ ವಿದೇಶ ಮಂತ್ರಿ ಹೊಸೈನ್ ಅಮೀರಾಬ್ದುಲ್ಲಾಹಿಯನ್ ಎರಡೂ ದೇಶಗಳು ಪರಸ್ಪರ ರಾಜಧಾನಿ ಮತ್ತು ಎರಡು ನಗರಗಳಲ್ಲಿ ರಾಯಭಾರ ಕಚೇರಿ ಆರಂಭಿಸುವ ಘೋಷಣೆಯನ್ನು ಟ್ವೀಟ್ ಮೂಲಕ ಮಾಡಿದ್ದಾರೆ. ಅವರು ಸೌದಿ ವಿದೇಶ ಮಂತ್ರಿ ಯುವರಾಜ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರ ಜತೆ ಮಾತುಕತೆಯ ನಂತರ ಈ ಘೋಷಣೆ ಮಾಡಿದ್ದಾರೆ. ಎರಡು ದೇಶಗಳ ನಡುವೆ ವಿಮಾನಯಾನ, ಅಧಿಕೃತ ಮತ್ತು ಖಾಸಗಿ ಪ್ರವಾಸ, ವೀಸಾ ವಿನಿಮಯ ಗಳನ್ನು ಶೀಘ‍್ರವೇ ಪುನಃ ಸ್ಥಾಪಿಸಬೇಕು ಎಂದೂ ಒಪ್ಪಲಾಗಿದೆ. ಪರಸ್ಪರ ಆರ್ಥಿಕ ಭದ್ರತೆ ಹೆಚ್ಚಿಸುವ ಕ್ರಮಗಳ ಕುರಿತು ಸಹ ಮಾತುಕತೆ ಆಗಿದೆಯೆನ್ನಲಾಗಿದೆ.

ಕಳೆದ ಏಳು ವರ್ಷಗಳಿಂದ ಎರಡೂ ದೇಶಗಳ ನಡುವೆ ಬಿಗುವು, ಪ್ರತ್ಯಕ್ಷ ಪರೋಕ್ಷ ಸಂಘರ್ಷ ಏರ್ಪಟ್ಟಿದ್ದು, ಈ ರಾಜಿ ಸಂಧಾನ ಅವನ್ನು ಕೊನೆಗೊಳಿಸುವತ್ತ ಸಾಗುತ್ತಿದೆ. ಎರಡೂ ದೇಶದ ನಡುವೆ 2016ರಿಂದ ಯಾವುದೇ ಅಧಿಕೃತ ಸಂಪರ್ಕವಿರಲಿಲ್ಲ. 2016ರಲ್ಲಿ ನಡೆದ ಒಂದು ಘಟನೆಯಿಂದ ಸಂಬಂಧ ಬಿಗಡಾಯಿಸಿತ್ತು. ಸೌದಿ ಅರೇಬಿಯಾ ಶಿಯಾ ಧಾರ್ಮಿಕ ನಾಯಕ ಮತ್ತು 46 ಅವರ ಸಹಚರರಿಗೆ ಮರಣ ದಂಡನೆ ವಿಧಿಸಿತ್ತು. ಅದಕ್ಕೆ ಪ್ರತಿಯಾಗಿ ಇರಾನಿ ಪ್ರತಿಭಟನಾಕಾರರು ಸೌದಿ ಕಚೇರಿಗಳಿಗೆ ದಾಳಿ ಮಾಡಿದ್ದರು.

ಈ ಒಪ್ಪಂದದಿಂದ ಪಶ್ಚಿಮ ಏಶ‍್ಯದಲ್ಲಿ ಹಲವು ಸಂಘರ್ಷಗಳು ಕೊನೆಗೊಳ್ಳುವ, ಹೊಸ ಸಂಘರ್ಷಗಳು ಆರಂಭವಾಗದಿರುವ ಸಾಧ‍್ಯತೆ ಹೆಚ್ಚಿದೆ. ವಿಶೇ಼ಷವಾಗಿ ಯೆಮೆನ್ ನಲ್ಲಿ ನಡೆಯುತ್ತಿರುವ ಮತ್ತು ಇರಾನ್ ಸೌದಿ ಅರೇಬಿಯಾ ಗಳು ಪರೋಕ್ಷವಾಗಿ ಆಳವಾಗಿ ತೊಡಗಿಸಿಕೊಂಡಿರುವ ದೀರ್ಘ ಯುದ್ಧ ಕೊನೆಗೊಳ್ಳುವ ಸಾಧ‍್ಯತೆ ಹೆಚ್ಚಿದೆ.

ಚೀನಾದ ಸಕ್ರಿಯ ಮಧ‍್ಯಸ್ತಿಕೆಯಿಂದಾಗಿ ಈ ರಾಜಿ ಸಂಧಾನ ಸಾಧ‍್ಯವಾಯಿತು ಎಂಬುದು ಗಮನಾರ್ಹ. ಯು.ಎಸ್ ನ ನಿಕಟ ಮಿತ್ರವಾಗಿದ್ದ ಸೌದಿ ಅರೇಬಿಯಾ ಅದರಿಂದ ದೂರ ಸರಿಯುತ್ತಿರುವುದು ಮತ್ತು ಪಶ್ಚಿಮ ಏಶ‍್ಯದಲ್ಲಿ ಯು.ಎಸ್ ನ ಪ್ರಭಾವ ಕುಗ್ಗುತ್ತಿರುವುದರ ಸಂಕೇತ ಕೂಡಾ ಈ ಬೆಳವಣಿಗೆ. ಚೀನಾ ಇತ್ತೀಚೆಗೆ ಸೌದಿ ಅರೇಬಿಯಾ ದ ಜತೆ ದೀರ್ಘ ಆರ್ಥಿಕ ಸಹಕಾರದ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಚೀನಾ ಪಶ್ಚಿಮ ಏಶ್ಯಾದಲ್ಲಿ ಯಾವುದೇ ಮಿಲಿಟರಿ ಅಸ್ತಿತ್ವವಿಲ್ಲದೆ ಯಾವುದೇ ಆರ್ಥಿಕ/ಮಿಲಿಟರಿ ಒತ್ತಡವಿಲ್ಲದೆ ಈ ರಾಜಿ ಸಂಧಾನ ಮಾಡಿದೆ ಎಂಬುದು ಗಮನಾರ್ಹ. ಒಂದು ಪ್ರದೇಶದಲ್ಲಿ ತನ್ನ ಮಿಲಿಟರಿ ಅಸ್ತಿತ್ವದಿಂದ ಬೆದರಿಕೆ/ಒತ್ತಡಗಳ ಮೂಲಕ ಎರಡು ದೇಶಗಳ ನಡುವೆ ಜಗಳ ಹಚ್ಚುವ ಅಥವಾ ತಮ್ಮದೇ ದೇಶ/ಪ್ರದೇಶಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವಂತೆ ಮಾಡುವ ಯು.ಎಸ್ ನ ಅವತಾರಗಳನ್ನು ಕಂಡಿರುವ ಪಶ್ಚಿಮ ಏಶ್ಯಾದ ದೇಶಗಳಿಗೆ ಚೀನಾದ ಧೋರಣೆ ಆಕರ್ಷಕವಾಗಿ ಕಂಡಿರಬೇಕು.

ಸೌದಿ ಅರೇಬಿಯಾ ಮತ್ತು ಪಶ್ಚಿಮ ಏಶ್ಯಾದ ಕೊಲ್ಲಿ ದೇಶಗಳು ಯು.ಎಸ್ ನ ಪ್ರಭಾವಲಯದಿಂದ ದೂರ ಸರಿಯುತ್ತಿರುವುದು ಇನ್ನೊಂದು ಇತ್ತೀಚಿನ ಪ್ರಕರಣದಲ್ಲೂ ಕಂಡು ಬಂದಿದೆ. ಸೌದಿ ಅರೇಬಿಯ ಸೇರಿದಂತೆ 8 ಪ್ರಮುಖ OPEC (ತೈಲ ಉತ್ಪಾದಕ ರಫ್ತು ಮಾಡುವ ) ದೇಶಗಳು ಯು.ಎಸ್ ಆಣತಿಯನ್ನು ಆಶಯಗಳನ್ನು ಧಿಕ್ಕರಿಸಿ ತಮ್ಮ ಉತ್ಪಾದನೆಯನ್ನು ಮೇ ನಿಂದ ವರ್ಷದ ಕೊನೆಯ ವರೆಗೆ ಪ್ರತಿ ದಿನ 10 ಲಕ್ಷ ಬ್ಯಾರೆಲ್ ದಷ್ಟು ಉತ್ಪಾದನೆಯನ್ನು ಕಡಿತ ಮಾಡುವ ನಿರ್ಣಯ ತೆಗೆದಕೊಂಡಿವೆ. ರಶ್ಯ ಈ ಮೊದಲೇ ಅದೇ ಅವಧಿಯಲ್ಲಿ 5 ಲಕ್ಷ ಬ್ಯಾರೆಲ್ ಪ್ರತಿ ದಿನ ಕಡಿತ ಮಾಡಲು ನಿರ್ಧರಿಸಿತ್ತು. ಅಂದರೆ ರಶ್ಯಾದ ನಿರ್ಣಯವನ್ನು ಬೆಂಬಲಿಸಿವೆ. ಈ ನಿರ್ಣಯದಲ್ಲಿ ಸೌದಿ ಅರೇಬಿಯ ಅಲ್ಲದೆ ಯು.ಎ.ಇ, ಕುವೈತ್, ಇರಾಕ್ , ಅಲ್ಜೀರಿಯಾ, ಒಮನ್ ಸಹ ಭಾಗಿಯಾಗಿವೆ ಎಂದು ಗಮನಿಸಬೇಕು.

ಇದು ತೈಲ ಬೆಲೆಯನ್ನು ತಗ್ಗಿಸಿ ರಶ್ಯಾದ ಆರ್ಥಿಕಕ್ಕೆ ಹೊಡೆತ ಕೊಡುವ ಯು.ಎಸ್ ತಂತ್ರಕ್ಕೆ ಪ್ರತಿ ತಂತ್ರವೆಂದು ಗಮನಿಸಬೇಕು. ಒಂದು ಕಡೆ ಯು.ಎಸ್./ಯುರೋ ಕೂಟ ರಶ್ಯಾದ ಮೇಲೆ ವಿಧಿಸಿದ ದಿಗ್ಬಂಧನಗಳು, ಇನ್ನೊಂದು ಕಡೆ ರಶ್ಯಾದ ತೈಲದ ಮೇಲೆ ಬೆಲೆ ಮಿತಿ ಹೇರಿದ ಜಿ7 ಕ್ರಮಗಳು ತೈಲ ಬೇಡಿಕೆ-ಪೂರೈಕೆಯ ವ್ಯವಸ್ಥೆಯನ್ನು ಏರುಪೇರು ಮಾಢಿದ್ದವು. ಯು.ಎಸ್ ತನ್ನ ವ್ಯೂಹಾತ್ಮಕ ಮೀಸಲು ತೈಲಾಗಾರದಿಂದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮುಂತಾದ ಕ್ರಮಗಳ ಮೂಲಕ ಅದನ್ನು ಇನ್ನಷ್ಟು ಬಿಗಡಾಯಿಸಲು ಪ್ರಯತ್ನಿಸುತ್ತಿದೆ. ಇದು ರಶ್ಯಾದ ಮಾತ್ರವಲ್ಲ ಈ ಎಲ್ಲ ದೇಶಗಳ ಆದಾಯಕ್ಕೆ ಹೊಡೆತ ಕೊಡುವಂಥದ್ದು. ಅದಕ್ಕಾಗಿ ಈ ದೇಶಗಳು ಈ ಪ್ರತಿತಂತ್ರ ಹೂಡಿವೆ. ಹಿಂದೆ ಇಂಥ ನಿರ್ಣಯ ತೆಗೆದುಕೊಳ್ಳಲು ಈ ದೇಶಗಳು ಹಿಂಜರಿಯುತ್ತಿದ್ದವು. ಉಕ್ರೇನ್ ಯುದ್ಧದ ನಂತರ ಅಂತತರಾಷ್ಟ್ರೀಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಬಂದಿದೆ ಮತ್ತು ಎಲ್ಲ ಪ್ರದೇಶಗಳಲ್ಲಿ ಯು.ಎಸ್ ನ್ನು ತೀವ್ರ ಸಂಶಯದಿಂದ ಕಾಣಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *