- ಯುಪಿಎಸ್ಸಿಯಲ್ಲಿ ಕಡಿಮೆ ಶ‍್ರೇಣಿ ಹೊಂದಿರುವ ಸುನೀಲ್‍ಕುಮಾರ್‍ಗೆ ಬಡ್ತಿ: ಅಸಮಾಧಾನ
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಗೃಹ ಇಲಾಖೆ ಹಲವು ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿತ್ತು. ಆದರೆ, ಈ ಬಡ್ತಿ ಹಲವಾರು ಅಧಿಕಾರಿಗಳಿಗೆ ತೃಪ್ತಿ ನೀಡಿದ್ದರೆ, ಇನ್ನೂ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ತಮ್ಮ ಸೀನಿಯಾರಿಟಿ ತಕ್ಕ ಸ್ಥಾನಮಾನ ನೀಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ ರವೀಂದ್ರನಾಥ್ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಇಲಾಖೆಯಲ್ಲಿ ಹಲವರನ್ನು ಅಚ್ಚರಿಗೆ ದೂಡಿದೆ ಎನ್ನಲಾಗುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ರವೀಂದ್ರನಾಥ್, “ನಿನ್ನೆ ರಾತ್ರಿ 10:45 ರ ಸುಮಾರಿಗೆ ಡಿಜಿ ಕಚೇರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡಿದ ಬಳಿಕ ಡಿಜಿ ಪ್ರವೀಣ್ ಸೂದ್ ಅವರು ನನ್ನ ಸಂಪರ್ಕಕ್ಕೆ ಯತ್ನಿಸಿದ್ದರು. ಮೊದಲು ಮೆಸೇಜ್ ಮೂಲಕ ಕಾಲ್ ಮಾಡುವಂತೆ ತಿಳಿಸಿದ್ದರು. ಇದಾದ ಬಳಿಕ ನೇರ ಬಂದು ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ರಾಜೀನಾಮೆ ನೀಡಿದ ಬಳಿಕ ನಾನು ಹೋಗಿ ಭೇಟಿ ಆಗೋದು ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ಅವರನ್ನು ಭೇಟಿಯಾಗಿರಲಿಲ್ಲ” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿನ ಬಡ್ತಿ ಪ್ರಕ್ರಿಯೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ರವೀಂದ್ರನಾಥ್, “ನನ್ನ ಜೂನಿಯರ್ ಆಗಿರೋ ಸುನೀಲ್ ಕುಮಾರ್ ಗೆ ಡಿಜಿಪಿ ಪ್ರಮೋಷನ್ ನೀಡಿದ್ದಾರೆ. ನಾನು ಸೀನಿಯರ್ ಆಗಿದ್ರೂ ನನ್ನ ಹೆಸರನ್ನು ಬಡ್ತಿಗೆ ಪರಿಗಣಿಸಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೂ ಈ ವಿಚಾರವನ್ನು ತಿಳಿಸಿದ್ದೇನೆ.
ನನಗೆ ಆಗ್ತಾ ಇರೋ ಅನ್ಯಾಯ ಬೇರೆಯಾರಿಗೂ ಆಗೋದು ಬೇಡ. 2014 ರಲ್ಲಿಯೂ ಆಪಾದನೆ ಮಾಡಿ ನನ್ನ ಮೇಲೆ ಕೇಸ್ ಹಾಕಿದ್ದರು. ಆದರೆ, ಕೋರ್ಟ್ ಪೊಲೀಸರು ಸಲ್ಲಿಕೆ ಮಾಡಿದ್ದ ಚಾರ್ಜ್ ಶೀಟ್ ನ ವಜಾ ಮಾಡಿತ್ತು. ನನ್ನ ಮೇಲೆ ಯಾವುದೇ ಇಲಾಖಾ ತನಿಖೆ ಸದ್ಯಕ್ಕೆ ಇಲ್ಲ. ಇಂತಹ ಟೈಂನಲ್ಲಿ ಪ್ರಮೋಷನ್ ನಲ್ಲಿ ಮೋಸ ಆಗಿದೆ. ಹೀಗಾಗಿ ನಮ್ಮ ವಕೀಲರ ಜೊತೆ ಮಾತುಕತೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ಎಡಿಜಿಪಿ ರವೀಂದ್ರನಾಥ್ ಮತ್ತು ಸುನೀಲ್ ಕುಮಾರ್ ಇಬ್ಬರೂ 1989 ಬ್ಯಾಚ್ ಐಪಿಎಸ್ ಅಧಿಕಾರಿಗಳಾಗಿದ್ದು, ಯುಪಿಎಸ್‌ಸಿ ಶ್ರೇಯಾಂಕದಲ್ಲಿ ರವೀಂದ್ರನಾಥ್ ಅವರು ಸುನೀಲ್ ಕುಮಾರ್ ಗಿಂತ ಉತ್ತಮ ಶ್ರೇಣಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಸುನೀಲ್ ಅವರಿಗೆ ಬಡ್ತಿ ನೀಡಿರುವುದು ರವೀಂದ್ರನಾಥ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.