ಹರ್ಯಾಣ ಎಡಿಜಿಪಿ ಆತ್ಮಹತ್ಯೆಯ ನ್ಯಾಯಾಂಗ ವಿಚಾರಣೆಗೆ ಆಗ್ರಹ -ಪ್ರಧಾನಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ

ನವದೆಹಲಿ :ಹರ್ಯಾಣದ ಎ.ಡಿ.ಜಿ.ಪಿ. ಯಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಐಪಿಎಸ್‍ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಕುಟುಂಬದ ಸದಸ್ಯರನ್ನು ಸಿಪಿಐ(ಎಂ) ನಿಯೋಗವು ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ನೇತೃತ್ವದಲ್ಲಿ ಭೇಟಿ ಮಾಡಿತು. ಎಡಿಜಿಪಿ

ಬಿ. ವಿ. ರಾಘವುಲು (ಸದಸ್ಯರು, ಪೊಲಿಟ್ ಬ್ಯೂರೋ), ಪ್ರೇಮ್ ಚಂದ್ (ಕಾರ್ಯದರ್ಶಿ, ಹರಿಯಾಣ ರಾಜ್ಯ ಸಮಿತಿ), ಇಂದರ್ಜಿತ್ ಸಿಂಗ್ (ಮಾಜಿ ಕಾರ್ಯದರ್ಶಿ, ಹರಿಯಾಣ ರಾಜ್ಯ ಸಮಿತಿ) ಮತ್ತು ಆರ್. ಎಲ್. ಮೌದ್ಗಿಲ್ (ಸದಸ್ಯರು, ಪಂಜಾಬ್ ರಾಜ್ಯ ಸಮಿತಿ) ನಿಯೋಗದ ಭಾಗವಾಗಿದ್ದರು.

ಭೇಟಿಯ ನಂತರ, ಎಂ. ಎ. ಬೇಬಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಸತ್ಯವನ್ನು ಅನಾವರಣಗೊಳಿಸಲು ಮತ್ತು ನ್ಯಾಯ ನೀಡಿಕೆಯನ್ನು ಖಚಿತಪಡಿಸಲು ಈ ವಿಷಯವು ಸ್ವತಂತ್ರ ಮತ್ತು ಪಾರದರ್ಶಕ ತನಿಖೆಗೆ ಅರ್ಹವಾಗಿದೆ ಎನ್ನುತ್ತ, ಪೂರಣ್ ಕುಮಾರ್ ಸಾವಿಗೆ ಕಾರಣವಾದ ಸಂದರ್ಭಗಳು, ಜಾತಿ- ಆಧಾರಿತ ಕಿರುಕುಳದ ಆರೋಪಗಳು ಮತ್ತು ಸಾಂಸ್ಥಿಕ ಬೆಂಬಲದಲ್ಲಿನ ಯಾವುದೇ ಲೋಪಗಳ ತನಿಖೆ ನಡೆಸಲು ಸರ್ಕಾರವು ತಕ್ಷಣವೇ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ನ್ಯಾಯಾಂಗ ವಿಚಾರಣೆಯನ್ನು ರಚಿಸಬೇಕೆಂದು ಆಗ್ರಹಿಸಿದ್ದಾರೆ.

ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿ ಬಿಡುಗಡೆ ಮಾಡಿರುವ ಈ ಪತ್ರದ ಪಠ್ಯ ಹೀಗಿದೆ:

ಗೌರವಾನ್ವಿತ ಪ್ರಧಾನ ಮಂತ್ರಿಗಳೇ,

ಕೆಲವು ಅಧಿಕಾರಿಗಳ ಕೈಯಲ್ಲಿ ಜಾತಿ ಆಧಾರಿತ ಕಿರುಕುಳ ಮತ್ತು ತಾರತಮ್ಯವನ್ನು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾದ ಶ್ರೀ. ವೈ. ಪೂರಣ್ ಕುಮಾರ್, ಐಪಿಎಸ್ ಅವರ ದುರಂತ ನಿಧನದ ಬಗ್ಗೆ ನಮ್ಮ ಆಳವಾದ ಕಳವಳ ಮತ್ತು ದುಃಖವನ್ನು ವ್ಯಕ್ತಪಡಿಸಲು ನಾವು ಬರೆಯುತ್ತಿದ್ದೇವೆ.

ಈ ಘಟನೆಯು ದೇಶಾದ್ಯಂತ ಆಘಾತದ ಅಲೆಗಳನ್ನು ಉಂಟುಮಾಡಿದೆ ಮತ್ತು ಪೊಲೀಸ್ ಸೇವೆಯಲ್ಲಿರುವ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ಅಧಿಕಾರಿಗಳಿಗೆ ಲಭ್ಯವಿರುವ ಕೆಲಸದ ಪರಿಸ್ಥಿತಿಗಳು, ಹೊಣೆಗಾರಿಕೆ ಮತ್ತು ರಕ್ಷಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನುಕರಣೀಯ ಸೇವಾ ದಾಖಲೆಯ ಒಬ್ಬ ದಲಿತ ಅಧಿಕಾರಿ ಶ್ರೀ. ಪೂರಣ್ ಕುಮಾರ್ ಅವರು ಇಂತಹ ತೀವ್ರವಾದ ಹೆಜ್ಜೆ ಇಡುವಂತಾಗಿರುವುದು ವಿಶೇಷವಾಗಿ ಯಾತನೆಯ ಸಂಗತಿಯಾಗಿದೆ. ಹೈದರಾಬಾದ್ ವಿಶ್ವವಿದ್ಯಾಲಯ(ಎಚ್‌ಸಿಯು)ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ದುರಂತ ಆತ್ಮಹತ್ಯೆ ಮತ್ತು ಅಸಹನೀಯ ಜಾತಿ ತಾರತಮ್ಯ ಮತ್ತು ಸಾಂಸ್ಥಿಕ ಕಿರುಕುಳದಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸುವತ್ತ ಧಾವಿಸಬೇಕಾಗಿ ಬಂದಿರುವ ದಲಿತ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ಇಂತಹ  ಅನೇಕ ಪ್ರಕರಣಗಳು, ನಮ್ಮ ಸಂಸ್ಥೆಗಳನ್ನು ಇನ್ನೂ ಪೀಡಿಸುತ್ತಿರುವ ಆಳವಾಗಿ ಬೇರೂರಿರುವ ವ್ಯವಸ್ಥಾಗತ ದಬ್ಬಾಳಿಕೆಯನ್ನು ಎತ್ತಿ ತೋರಿಸುತ್ತವೆ.

ಇದನ್ನೂ ಓದಿ :ಧರ್ಮಸ್ಥಳ ಪ್ರಕರಣ: ಒಂದೇ ಜಾಗದಲ್ಲಿ 10 ಮೃತದೇಹ ಹೂತಿದ್ದಾಗಿ ದೂರುದಾರ ಸ್ಫೋಟಕ ಹೇಳಿಕೆ

ನಾವು ಚಂಡೀಗಢದಲ್ಲಿ ಅವರ ದುಃಖಿತ ಕುಟುಂಬ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇವೆ ಮತ್ತು ಅವರ ಆಳವಾದ ದುಃಖ ಮತ್ತು ನೋವನ್ನು ಕೇಳಿದ್ದೇವೆ. ಸತ್ಯವನ್ನು ಅನಾವರಣಗೊಳಿಸಲು ಮತ್ತು ನ್ಯಾಯ ನೀಡಿಕೆಯನ್ನು ಖಚಿತಪಡಿಸಲು ಈ ವಿಷಯವು ಸ್ವತಂತ್ರ ಮತ್ತು ಪಾರದರ್ಶಕ ತನಿಖೆಗೆ ಅರ್ಹವಾಗಿದೆ ಎಂದು ಅವರ ಸಾಕ್ಷ್ಯವು ಸ್ಪಷ್ಟಪಡಿಸುತ್ತದೆ.

ಈ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಶ್ರೀ ಪೂರಣ್ ಕುಮಾರ್ ಅವರ ಸಾವಿಗೆ ಕಾರಣವಾದ ಸಂದರ್ಭಗಳು, ಜಾತಿ- ಆಧಾರಿತ ಕಿರುಕುಳದ ಆರೋಪಗಳು ಮತ್ತು ಸಾಂಸ್ಥಿಕ ಬೆಂಬಲದಲ್ಲಿನ ಯಾವುದೇ ಲೋಪಗಳ ತನಿಖೆ ನಡೆಸಲು ಸರ್ಕಾರವು ತಕ್ಷಣವೇ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ನ್ಯಾಯಾಂಗ ವಿಚಾರಣೆಯನ್ನು ರಚಿಸಬೇಕೆಂದು ನಾವು ಆಗ್ರಹಿಸುತ್ತೇವೆ.

ಇದಲ್ಲದೆ, ದಿವಂಗತ ಅಧಿಕಾರಿ ಹೆಸರಿಸಿರುವ ಎಲ್ಲಾ ಅಧಿಕಾರಿಗಳನ್ನು ನ್ಯಾಯಾಂಗ ವಿಚಾರಣೆಯ ಫಲಿತಾಂಶದ ವರೆಗೆ ತಕ್ಷಣವೇ ಅಮಾನತುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರು ತನಿಖೆಯ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಂತೆ ಅಥವಾ ರಾಜಿಗೀಡಾಗದಂತೆ ಖಚಿತಪಡಿಸಲು ಇದು ಅತ್ಯಗತ್ಯ.

ಒಂದು ನ್ಯಾಯಯುತ ಮತ್ತು ಪಾರದರ್ಶಕ ನ್ಯಾಯಾಂಗ ವಿಚಾರಣೆಯು ದುಃಖಿತ ಕುಟುಂಬಕ್ಕೆ ಸಾಂತ್ವನ ನೀಡುವುದಲ್ಲದೆ, ಸಾಂವಿಧಾನಿಕ ಮೌಲ್ಯಗಳಿಗೆ ಮತ್ತು ಯಾವುದೇ ರೀತಿಯ ತಾರತಮ್ಯದಿಂದ ತನ್ನ ಸಾರ್ವಜನಿಕ ಸೇವಕರ ರಕ್ಷಣೆಗೆ  ದೇಶವು ಬದ್ಧವಾಗಿದೆ  ಎಂಬುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

ನಿಮ್ಮ ಗೌರವಾನ್ವಿತ ಕಚೇರಿ ಈ ವಿಷಯವನ್ನು ಅದಕ್ಕೆ ತಕ್ಕುದಾದ ತುರ್ತಿನಿಂದ ಮತ್ತು ಗಂಭೀರತೆಯಿಂದ ಪರಿಗಣಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಎಂ.ಎ ಬೇಬಿಯವರ ಸಹಿಯುಳ್ಳ ಪತ್ರ ಬರೆಯಲಾಗಿದೆ.

ಇದನ್ನೂ ನೋಡಿ : ಸರ್ಕಾರಿ ಜಾಗಗಳಲ್ಲಿ RSS ಕಾರ್ಯಕ್ರಮ ನಿಷೇಧ | ಪ್ರಿಯಾಂಕ್‌ ಖರ್ಗೆಗೆ ಕೊಲೆ ಬೆದರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *