ನವದೆಹಲಿ: ಐಎನ್‌ಎಕ್ಸ್ ಮೀಡಿಯಾದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾತಿಗೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ವಿನಾಯಿತಿಯನ್ನು ದೆಹಲಿಯ ವಿಶೇಷ ನ್ಯಾಯಾಲಯವು ಇಂದು ನೀಡಿದೆ.
ಅವರ ಪರ ವಕೀಲ ಆರ್ಷ್‌ದೀಪ್ ಸಿಂಗ್, ಈ ಹಿಂದೆ ‘ತಮ್ಮ ಇಬ್ಬರು ಕಕ್ಷಿದಾರರು ಸಂಸದರೂ ಆಗಿರುವುದರಿಂದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಾಗಿದ್ದಾರೆ. ಅವರಿಗೆ ನ್ಯಾಯಾಲಯಕ್ಕೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು‘ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ : ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್, ಇಬ್ಬರಿಗೂ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿದ್ದಾರೆ.
ಆರೋಪಿತ ಕಂಪೆನಿಗಳ ನೋಂದಾಯಿತ ಪ್ರತಿನಿಧಿಗಳಿಗೂ ಖುದ್ದು ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿತ್ತು. ಎಲ್ಲಾ ವಿನಾಯಿತಿಗಳು ಇಂದಿಗೆ ಮಾತ್ರ ಸೀಮಿತವಾಗಿರುತ್ತವೆ ಎಂದು ನ್ಯಾಯಾಲಯ ಹೇಳಿದೆ. ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಪರಿಗಣಿಸಿ ಐಎನ್‌ಎಕ್ಸ್ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪೂರಕ ಚಾರ್ಜ್ ಶೀಟ್‌ಗೆ ಸಲ್ಲಿಸಲು ಒಪ್ಪಿಗೆ ನೀಡಿದ ನಂತರ, ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾರ್ಚ್ 24 ರಂದು ನೋಟಿಸ್ ನೀಡಿತ್ತು.
ಇದನ್ನು ಓದಿ : ಪಂಜರದ ಬಂಧಿಯಾಗಿ ʻಮುಖ್ಯಮಂತ್ರಿʼ
ಐಎನ್‌ಎಕ್ಸ್ ಮೀಡಿಯಾದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಆ.21ರಂದು ಸಿಬಿಐ ಮಾಜಿ ಸಚಿವ ಪಿ. ಚಿದಂಬರಂರನ್ನು ಬಂಧನ ಮಾಡಿತ್ತು. ಸಿಬಿಐ ಪ್ರಕರಣದಲ್ಲಿ ಅಕ್ಟೋಬರ್ 22ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ 2019ರ ಡಿ.4 ರಂದು ಚಿದಂಬರಂ ಜಾಮೀನು ಪಡೆದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಪೀಟರ್ ಮುಖೇರ್ಜಿಯಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಪಟ್ಟಿಯ ಪ್ರತಿಗಳನ್ನು ಎಲ್ಲಾ ಆರೋಪಿಗಳು ಪೂರೈಸುವಂತೆ ನ್ಯಾಯಾಲಯ ಸೂಚಿಸಿದ್ದು, ದಾಖಲೆಗಳ ಪರಿಶೀಲನೆಯ ದಿನಾಂಕವನ್ನು ಏಪ್ರಿಲ್ 16ಕ್ಕೆ ನಿಗದಿಗೊಳಿಸಿದೆ. ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ಅಂದು ನಡೆಯಲಿದೆ.