ಮರಕುಂಬಿ ಪ್ರಕರಣಕ್ಕೆ 1 ವರ್ಷ |ದಲಿತರು ಭಾಗವಹಿಸುತ್ತಾರೆ ಎಂದು ಜಾತ್ರೆಗಳನ್ನೇ ನಿಲ್ಲಿಸಿದರು….

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ನಡೆದಿದ್ದ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ತೀರ್ಪು ಪ್ರಕಟವಾದ ದಿನ ಇಂದು. ಸವರ್ಣೀಯರು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ 117 ಜನರ ವಿರುದ್ಧ ದೂರು ದಾಖಲಾಗಿತ್ತು. ನಂತರ 101 ಜನರಿಗೆ ಶಿಕ್ಷೆಯಾಗಿತ್ತು, ಇದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿತವಾಗಿತ್ತು. ಈ ತೀರ್ಪಿನ ವಿರುದ್ಧ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರು. ಹಾಗಾಗಿ ಧಾರವಾಡ ಹೈಕೋರ್ಟ್ 99 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಗುರುರಾಜ ದೇಸಾಯಿ

ತೀರ್ಪು ಬಂದ ನಂತರ ಮರಕುಂಬಿ ಸಂಪೂರ್ಣ ಸ್ಥಬ್ದವಾಗಿತ್ತು. ದೀಪಾವಳಿಯನ್ನು ಯಾರೂ ಕೂಡ ಆಚರಿಸಿರಲಿಲ್ಲ. ಒಂದುಂದು ಮನೆಯಿಂದ ಇಬ್ಬರು – ಮೂರು ಮಂದಿ ಶಿಕ್ಷೆಗೆ ಒಳಗಾಗಿದ್ದ ಕಾರಣ ಭಾವನಾತ್ಮಕ ತಿರುವು ಪಡೆದುಕೊಂಡಿತ್ತು. ನೋವಿನಲ್ಲಿರುವ ಕಾರಣ ದೀಪ ಬೆಳಗಲು ಮನಸ್ಸು ಒಪ್ಪುತ್ತಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದೊಂದು ಷಡ್ಯಂತ್ರ, ವಿನೂತನ ರೀತಿಯ ಅಸ್ಪೃಶ್ಯತೆ ಎಂದು ಮತ್ತೊಂದು ಮಗ್ಗುಲಿಂದ ಸ್ಪಷ್ಟವಾಗಿದೆ.

ಹೌದು… ಮರಕುಂಬಿಯಲ್ಲಿ ಈಗ ಶಾಂತಿವಾತಾವರಣ ನೆಲಸಿದೆ ಎಂದು ಕಂಡು ಬಂದರೂ, ಬೂದಿ ಮುಚ್ಚಿದ ಕೆಂಡದಂತಿದೆ. ಸವರ್ಣೀಯರು ಅಗೋಚರ ಅಸ್ಪೃಶ್ಯತಾ ಆಚರಣೆಯ ಮೂಲಕ ದಲಿತರ ಮೇಲೆ ಇನ್ನೊಂದು ರೀತಿಯ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ಜನಶಕ್ತಿ ಮೀಡಿಯಾ ನಡೆಸಿದ ಗ್ರೌಂಡ್‌ ರಿಪೋರ್ಟ್‌ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ: ಚೂರಿ ಇರಿತ ಪ್ರಕರಣ: ನಾಲ್ವರು ಆರೋಪಿಗಳ ಗುರುತು ಪತ್ತೆ

ಜಾತ್ರೆಗಳನ್ನೆ ನಿಲ್ಲಿಸಿದರು: ಊರು ಎಂದ ಮೇಲೆ ದೇವಸ್ಥಾನಗಳು ಇದ್ದೆ ಇರುತ್ತವೆ. ದುರಗಮ್ಮ, ದ್ಯಾಮಮ್ಮ, ಶಿವರಾತ್ರಿ, ಬಸವಜಯಂತಿ, ಶರಣ ಬಸವೇಶ್ವರ ಜಾತ್ರೆ, ಮೊಹರಂ ಹೀಗೆ ಎಲ್ಲರೂ ಕೂಡಿ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ಹಳ್ಳಿಗಳಲ್ಲಿ ನೋಡಿದ್ದೇವೆ. ದಲಿತರನ್ನು ಈ ಜಾತ್ರೆಗಳಲ್ಲಿ ದೇವಸ್ಥಾನಕ್ಕೆ ಬಿಡದಿದ್ದರೂ ಒಂದು ಪ್ರದೇಶವನ್ನು ನಿಗದಿ ಮಾಡಿ ಅಲ್ಲಿ ಕಾಯಿ ಕರ್ಪೂರ ಪೂಜೆಗೆ ಅವಕಾಶ ನೀಡಲಾಗುತ್ತದೆ.

ಮರಕುಂಬಿಯಲ್ಲಿಯೂ ಇದೇರೀತಿ ಹಿಂದಿನಿಂದ ನಡೆದುಕೊಂಡು ಬದಿದೆ. ಆದರೆ ಪ್ರಕರಣದ ತೀರ್ಪು ಬಂದ ನಂತರದಿಂದ ಇಲ್ಲಿಯವರೆಗೆ ಯಾವ ಹಬ್ಬಗಳನ್ನು ಮಾಡಿಲ್ಲ. ಗ್ರಾಮ ದೇವತೆಯಾದ ದುರುಗಮ್ಮ ಜಾತ್ರೆಯನ್ನು ಇಬ್ಬರೂ ಸೇರಿ ಮಾಡುತ್ತಿದ್ದರು. ತೀರ್ಪು ಪ್ರಕಟವಾಗುವ ಮುನ್ನ ಈ ಜಾತ್ರೆಯನ್ನು ಕೂಡಿಯೇ ಮಾಡಿದ್ದರು. ಆದರೆ ಈ ವರ್ಷ ಈ ಜಾತ್ರೆಯನ್ನು ಮಾಡಲಾಗಿಲ್ಲ. “ದುರುಗಮ್ಮ ಕೇರಿಯಲ್ಲಿ ಇದ್ದಾಳೆ ಅವರೇ ಮಾಡಿಕೊಳ್ಳಲಿ ಎಂದು ಜಾತ್ರೆ ಮಾಡುವುದನ್ನು ನಿಲ್ಲಿಸಿದ್ದಾರೆ” ಎಂದು ಹಿರಿಯ ದಲಿತರೊಬ್ಬರು ಜನಶಕ್ತಿ ಮೀಡಿಯಾ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಬನ್ನಿ ಹಬ್ಬವನ್ನು ಸಾರ್ವಜನಿಕವಾಗಿ ನಡೆಸಿ, ಎಲ್ಲರೂ ಪರಸ್ಪರ ಬನ್ನಿ ಮುಡಿಯುತ್ತಿದ್ದರು. ಆದರೆ ಈ ಬಾರಿ ಸಾರ್ವಜನಿಕವಾಗಿ ಬನ್ನಿ ವಿತರಿಸುವುದನ್ನು ನಿಲ್ಲಿಸಿದರು ಎಂದು ಮಾಹಿತಿಯನ್ನು ನೀಡಿದ್ದಾರೆ.

ಮೊಹರಂ ಹಬ್ಬವನ್ನು ಅದ್ದುರಿಯಾಗಿ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಮೊಹರಂ ಆಚರಿಸಲೇ ಇಲ್ಲ. ಮುಸ್ಲಿಂವ್ಯಕ್ತಿಯೊಬ್ಬ ನಿಂದರಕಿ ದೇವರನ್ನು ಸ್ಥಾಪಿಸಿದ್ದರು. ನಿಂದರಕಿ ದೇವರನ್ನು ನಿಲ್ಲಿಸಲು ಪ್ರತಿಬಾರಿ ಹರಕೆ ಹೊತ್ತವರು ಇಡುತ್ತಿದ್ದರು. ಈ ಬಾರಿ ಅವರು ಯಾರು ದೇವರನ್ನು ಇಡಲಿಲ್ಲ. ಮಡಿವಾಳ ಸಮುದಾಯಕ್ಕೆ ಸೆರಿದ ಕುಟುಂಬವೊಂದರ ಮನೆಯಲ್ಲಿ ಅಲಾಯಿ ಪೆಟ್ಟಿಗೆ ಇಟ್ಟಿರುತ್ತಾರೆ. ಅದನ್ನು ಮಸೀದಿಗೆ ತಂದು ಪೂಜೆ ಮಾಡಲಾಗುತ್ತದೆ. ನಂತರ ಸಾರ್ವಜನಿಕರು ಸಕ್ರಿ ಓದಿಸುತ್ತಾರೆ. (ಸಕ್ಕರಿ ಅಥವಾ ಬೆಲ್ಲದ ರೂಪದ ಪ್ರಸಾದ ಅರ್ಪಿಸುವುದು) ಆದರೆ ಈ ಬಾರಿ ದಲಿತರನ್ನು ದೂರ ಇಡಬೇಕು ಎಂಬ ಕಾರಣಕ್ಕೆ, ಆ ಸಂಪ್ರದಾಯವನ್ನು ನಿಲ್ಲಿಸಲಾಯಿತು. ಮಡಿವಾಳರ ಮನೆಯಲ್ಲಿದ್ದ ಅಲಾಯಿ ಪೆಟ್ಟಿಗೆ ಮಸೀದಿಗೆ ಬರಲೇ ಇಲ್ಲ. “ನಾವು ಭಾಗವಹಿಸುತ್ತೇವೆ ಎಂಬ ಕಾರಣಕ್ಕಾಗಿ ಹಬ್ಬಗಳನ್ನೆ ನಿಲ್ಲಿಸುತ್ತಿದ್ದಾರೆ. ಮಾನಸಿಕವಾಗಿ ನಮ್ಮನ್ನು ಅವಮಾನಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ದಲಿತ ಯುವಕನೊಬ್ಬ ಜನಶಕ್ತಿ ಮೀಡಿಯಾಗೆ ಮಾಹಿತಿ ನೀಡಿದರು.

ಗ್ರಾಮದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರೊಬ್ಬರು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಕುಟುಂಬಕ್ಕೆ ಸೇರಿದ ಅಡವಿ ಸಿದ್ದೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಿದ್ದಾರೆ. ಇತರೆ ಸಮುದಾಯದ ಜನ ಅಲ್ಲಿಗೆ ಪ್ರವೇಶ ಮಾಡಬಹುದು. ಆದರೆ ದಲಿತ ಸಮುದಾಯದಯದವರು ಅಲ್ಲಿಗೆ ಬರುವ ಹಾಗಿಲ್ಲ. ದಲಿತರು ಬರುತ್ತಾರೆ ಎಂಬ ಕಾರಣಕ್ಕೆ ಜಾತ್ರೆಗಳನ್ನು ನಿಲ್ಲಿಸಿದ್ದು ನಿಜ, ಆದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿ ಮಾತ್ರ ಪೂಜೆ ಪುನಸ್ಕಾರ, ಕುಟುಂಬಕ್ಕೆ ಸೇರಿದ ದೇವಸ್ಥಾನದ ಜಾತ್ರೆ ಮಾಡುವುದು ಎಷ್ಟು ಸರಿ? ಗ್ರಾಮದ ಸಾರ್ವಜನಿಕ ಜಾತ್ರೆ ಬೇಡ ಅಂದವರು ಇವರೇ.. ಈಗ ಅವರು ಮಾತ್ರ ಜಾತ್ರೆ ನಡೆಸುತ್ತಾರೆ. ಇದನ್ನು ಪ್ರಶ್ನಿಸುವ ದೈರ್ಯ ನಮಗೆ ಇಲ್ಲ ಎಂದು ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಮಾಹಿತಿಯನ್ನು ನೀಡಿದರು. ಆ ಗ್ರಾಮದಲ್ಲಿ ಇತರೆ ಜಾತಿಯವರು ಕೂಡ ಎಷ್ಟು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.

ದಲಿತ – ಮುಸ್ಲಿಂರ ನಡುವೆ ವೈಷಮ್ಯ ಬಿತ್ತುವ ಪ್ರಯತ್ನ : ಸವರ್ಣೀಯ ಸಮುದಾಯಕ್ಕೆ ಸೇರಿದ ಹಿರಿಯರು, ದಲಿತ ಮತ್ತು ಮುಸ್ಲಿಂ ಸಮುದಾಯದ ನಡುವೆ ವೈಷಮ್ಯ ಬಿತ್ತುತ್ತಿದ್ದಾರೆ ಎಂದು ದಲಿತ ಮುಖಂಡರೊಬ್ಬರು ಆರೋಪಿಸಿದ್ದಾರೆ. “ ದಲಿತರು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೀವು ಇಲ್ಲಿಯೇ ಇದ್ದರೆ ಅವರು ನಿಮ್ಮ ಮನೆಗೆ ಬೆಂಕಿ ಹಚ್ಚಿ, ನಿಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ. ಹಾಗಾಗಿ ನೀವು ಊರು ಬಿಡುವುದು ಸೂಕ್ತ ಎಂದು ಹೆದರಿಸುತ್ತಿದ್ದಾರೆ. ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಜನಶಕ್ತಿ ಮೀಡಿಯಾ ಜೊತೆ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಹಿರಿಯರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. “ನಮ್ಮಿಬ್ಬರ ನಡುವೆ ವೈಷಮ್ಯ ತಂದು ನಾವಿಬ್ಬರು ಕಚ್ಚಾಡುವಂತೆ ಮಾಡಿರುವ ಷಡ್ಯಂತ್ರವಿದು. ಜೊತೆಗೆ ಈ ಘಟನೆಯನ್ನು ಬಳಸಿಕೊಂಡು ನಿಮ್ಮನ್ನು ಊರಿನಿಂದ ಹೊರ ದುಬ್ಬಲು ಹನ್ನಾರ ನಡೆಸಿದ್ದಾರೆ. ನಾವು ಹಿಂಸೆ ಮಾಡುವ ಜನರಲ್ಲ “ ಎಂದು ಮುಸ್ಲಿಂರೊಟ್ಟಿಗೆ ಮಾತುಕತೆ ಮಾಡಿದ್ದೇವೆ ಎಂದೆನ್ನುತ್ತಾರೆ ದಲಿತ ಮುಖಂಡರು.

ಮರಕುಂಬಿ ಗ್ರಾಮದಲ್ಲಿ ಅಗೋಚರ ಅಸ್ಪ್ರಶ್ಯತಾ ಆಚರಣೆಯೆ ಕುರಿತು ಜನಶಕ್ತಿ ಮೀಡಿಯಾ ತಾಲ್ಲೂಕ ಸಮಾಜ ಕಲ್ಯಾಣಾಧಿಕಾರಿ ಶೃತಿಯವರನ್ನು ಮಾತನಾಡಿಸಿತು. “ ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ನಾನು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ”, ಎಂದು ತಿಳಿಸಿದರು.

ಪ್ರಕರಣ ಹಿನ್ನೆಲೆ 

ಆಗಸ್ಟ್ 28, 2014 ರಂದು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರದಲ್ಲಿ ಇದೇ ಮರಕುಂಬಿ ಗ್ರಾಮದ ದಲಿತ ಸಮುದಾಯದ ಮಂಜುನಾಥ ಮತ್ತು ಸ್ನೇಹಿತರು ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯೋ ವಿಚಾರದಲ್ಲಿ ಸವರ್ಣೀಯರು ಜಗಳ ಆರಂಭಿಸಿದ್ದರು. ಅಂದು ಸಂಜೆ ಗ್ರಾಮದ ಸವರ್ಣೀಯರು ಇದೇ ವಿಚಾರದ ನೆಪದ ಮೇಲೆ ದಲಿತರ ಮನೆಗಳಿಗೆ ನುಗ್ಗಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.

ಪವರ್ ಸಿನೆಮಾ ವಿಚಾರದಲ್ಲಿ ಗಲಾಟೆಯಾಯಿತು ಎಂಬುದು ನೆಪ ಮಾತ್ರ, 2014 ರ ಜುಲೈ ತಿಂಗಳಲ್ಲಿ ಹೊಟಲ್ ನಲ್ಲಿನ ಪ್ರತ್ಯೇಕ ಲೋಟ ಪದ್ದತಿ ನಿಲ್ಲಿಸಬೇಕು, ನಮಗೂ ಕ್ಷೌರ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನೇತೃತ್ವದಲ್ಲಿ ದಲಿತರು ಹೋರಾಟ ಆರಂಭಿಸುತ್ತಾರೆ. ದಲಿತರು ಈ ಹೋರಾಟವನ್ನು ನಡೆಸಬಾರದು ಎಂದು, ಅವರ ಕುಟುಂಬಗಳನ್ನು ಹೆದರಿಸಲು ಸವರ್ಣೀಯರು ದಲಿತರ ನಾಲ್ಕು ಮನೆಗಳಿಗೆ ಬೆಂಕಿ ಇಟ್ಟರು. ದಲಿತರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಕಾಂಗ್ರೆಸ್ ಬೆಂಬಲಿತ ಊರ ಸಾಹುಕಾರನೊಬ್ಬ ದಲಿತರ ಉಪಯೋಗಕ್ಕಾಗಿ ಇದ್ದ ಸಮುದಾಯ ಭವನವನ್ನು ಭತ್ತವನ್ನು ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದ, ಇದನ್ನು ಪ್ರಶ್ನಿಸುವ ನಿಟ್ಟಿನಲ್ಲಿ 2003ನೇ ಇಸ್ವಿಯಲ್ಲಿ” ಈ ಸಮುದಾಯ ಭವನ ನಮ್ಮ ಮನೆಯ ಮದುವೆ, ಇತ್ಯಾದಿ ಕಲ್ಯಾಣ ಕೆಲಸಗಳಿಗೆ ಬೇಕಾಗಿದೆ ಹಾಗಾಗಿ ಸಾಹುಕಾರನಿಗೆ ಬತ್ತ ತೆಗೆಯಲು ಹೇಳೋಣ ಎಂದು ಯುವಕರು ನಿರ್ಧರಿಸುತ್ತಾರೆ. ಈ ಸುದ್ದಿ ಸಾಹುಕಾರನಿಗೆ ಗೊತ್ತಾಗಿ ನನ್ನ ಹಾಗೂ ಇತರ ಮೂವರ ಮೇಲೆ ಕಳ್ಳತನ ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಮಾಡಿ ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಭೀಮೇಶ್‌ ಎಂಬ ವ್ಯಕ್ತಿಗೆ ಎಂಟತ್ತು ಗಂಟೆಗಳ ಕಾಲ ನಿರಂತರ ಹಿಂಸೆ ನೀಡಿದ್ದರು. ಪ್ರಕರಣ ಪ್ರಮುಖ ಸಾಕ್ಷಿಯಾಗಿದ್ದ ವಿರೇಶಪ್ಪನನ್ನು ರೈಲ್ವೆ ಹಳಿಮೇಲೆ ಕೊಲೆ ಮಾಡಿದೇಹವನ್ನು ಬಿಸಾಡಿದ್ದರು. ಈ ಪ್ರಕರಣದ ಹಿನ್ನಲೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಸಿ ಚಂದ್ರಶೇಖರ್‌ ತೀರ್ಪು ಪ್ರಕಟಿಸಿದ್ದರು. 98 ಮಂದಿಗೆ ಎಸ್‌ಸಿ, ಎಸ್‌ಟಿ, ದೌರ್ಜನ್ಯ ತಡೆ ಕಾಯಿದೆ ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿದ್ದರು.

ಆರೋಪಿಗಳ ಜಾತಿ ಹಿನ್ನೆಲೆ ಹೀಗಿದೆ: ವೀರಶೈವ ಲಿಂಗಾಯತ(ಜಂಗಮ) -18 ; ಲಿಂಗಾಯತ (ಬಣಜಿಗ, ರೆಡ್ಡಿ, ಶೆಟ್ಟಿ) –25; ಈಳಗೇರ್ (ಈಡಿಗ) 24; ಮಡಿವಾಳ –13; ಮುಸ್ಲಿಂ – 12; ಗಂಗಾಮತಸ್ಥ (ಮಡ್ಡೇರ್)‌ -08; ಕುಂಬಾರ –05; ನಾಯಕ (ಎಸ್‌ಟಿ)– 02; ಭೋವಿ (ಎಸ್‌ಸಿ) – 03; ಇತರ ಜಾತಿಯವರು (ಕುರುಬ, ಗೊಲ್ಲ, ವಿಶ್ವಕರ್ಮ, ಕ್ಷತ್ರಿಯ) – 07

ಮರಕುಂಬಿ ಕುರಿತು ಪುಸ್ತಕ: ಜನಶಕ್ತಿ ಪ್ರಕಾಶನವು “ ಮರಕುಂಬಿ ಚಾರಿತ್ರಿಕ ತೀರ್ಪು” ಎಂಬ ಪುಸ್ತಕವನ್ನು ಪ್ರಕಟಿಸಿದೆ. ಈ ಪ್ರಕರಣದ ಒಟ್ಟಾರೆ ಅಂಶಗಳನ್ನು ತಿಳಿಸುವಲ್ಲಿ ಈ ಕೃತಿ ಮಹತ್ವದ ಪಾತ್ರ ವಹಿಸಿದೆ. ಮರಕುಂಬಿಯಲ್ಲಿ ಆರಂಭವಾದ ಹೋರಾಟ, ಹೋರಾಟದಲ್ಲಿ ನಡೆದ ಸಂಘರ್ಷ, ಗೆಲುವು ನಂತರದಲ್ಲಿ ಸವರ್ಣೀಯರು ನಡೆಸಿದ ಚಿತ್ರಹಿಂಸೆ .. ಹೀಗೆ ಎಲ್ಲಾ ಅಂಶಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲಿದೆ.

ಹೈಕೋರ್ಟ್‌ ಅಂಗಳದಲ್ಲಿ : ಮೇಲ್ಮನವಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠವು 98 ಅಪರಾಧಿಗಳ ಪೈಕಿ 97 ಜನರಿಗೆ ಜಾಮೀನು ಮುಂಜೂರು ಮಾಡಿದೆ. ಜಾಮೀನು ಅರ್ಜಿ ಹಾಕದ ಎ1 ಮಂಜುನಾಥ ಹೊರತು ಪಡಿಸಿ ಉಳಿದೆಲ್ಲರಿಗೂ ಜಾಮೀನು ಮುಂಜೂರು ಮಾಡಿದೆ. ಮತ್ತೊಬ್ಬ ಅಪರಾಧಿ ರಾಮಣ್ಣ ಭೋವಿ ಶಿಕ್ಷೆಯ ಆದೇಶ ಪ್ರಕಟವಾದ ನಂತರ ಮೃತಪಟ್ಟಿದ್ದರು. ಜಾಮೀನಿನ ಮೇಲೆ ಅಪರಾಧಿಗಳು ಹೊರ ಬರಲು ಪ್ರತಿಯೊಬ್ಬರಿಗೂ 50 ಸಾವಿರ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಪಡೆಯುವುದು ಕಡ್ಡಾಯವಾಗಿದೆ ಎಂದು ಷರತ್ತು ವಿಧಿಸಿತ್ತು.  ಈ ಪ್ರಕರಣವನ್ನು ನಡೆಸಲು ಆರೋಪಿತರು ಜಾತಿಗೊಬ್ಬರಂತೆ ವಕೀಲರ ಸಲಹೆ ಪಡೆದು ಅವರ ಮಾರ್ಗದರ್ಶನದಂತೆ ನಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಲಾಯದ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿಯುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಜಾತ್ರೆಗಳನ್ನು ಹಾಗೂ ಸಂಪ್ರದಾಯಗಳನ್ನು ನಿಲ್ಲಿಸಿದರೆ ಊರಿಗೆ ಕೇಡು ಬರುತ್ತದೆ ಎಂದು ಎಷ್ಟೆ ಕಷ್ಟವಿದ್ದರೂ, ಯಾರೇ ಸತ್ತಿದ್ದರೂ ಜಾತ್ರೆಗಳನ್ನು ನಿಲ್ಲಿಸುವುದಿಲ್ಲ. ಆದರೆ ಮರಕುಂಬಿಯಲ್ಲಿ ದಲಿತರು ಭಾಗವಹಿಸುತ್ತಾರೆ ಎಂಬ ಕಾರಣಕ್ಕೆ ಜಾತ್ರೆಗಳನ್ನು ನಿಲ್ಲಿಸಿರುವುದು “ ಇದೊಂದು ಅಸ್ಪೃಶ್ಯತೆಯ ಹೊಸ ರೂಪವಾಗಿದೆ” ಮಾನಸಿಕವಾಗಿ ಅವರನ್ನು ಕುಗ್ಗುವಂತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಗ್ರಾಮ ಸಭೆ ನಡೆಸಿ ಅಸ್ಪ್ರುಶ್ಯತಾ ಆಚರಣೆಯನ್ನು ನಿಲ್ಲಿಸಲು ಮುಂದಾಗಬೇಕಿದೆ.

ಇದನ್ನೂ ನೋಡಿ : ಮರಕುಂಬಿ ಪ್ರಕರಣ : ಗ್ರೌಂಡ್‌ ರಿಪೋರ್ಟ್‌ – ” ಉಳುಮೆಗೆ ಭೂಮಿ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದರು”

Donate Janashakthi Media

Leave a Reply

Your email address will not be published. Required fields are marked *