ಅಸಹಿಷ್ಣುತೆ ದೇಶವನ್ನು ಆಳುತ್ತಿದೆ: ಕೇರಳ ಮಾಜಿ ಮಂತ್ರಿ ಶೈಲಜಾ ಟೀಚರ್

ಬೆಂಗಳೂರು: ಅಸಹಿಷ್ಣುತೆ ಈ ದೇಶವನ್ನು ಆಳುತ್ತಿದ್ದು, ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಎಪ್ಪತ್ತು ವರ್ಷಗಳ ನಂತರವೂ ಕಾಪಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಕೇರಳದ ಮಾಜಿ ಸಚಿವೆ, ಶಾಸಕಿ ಶೈಲಜಾ ಟೀಚರ್ ಮಂಗಳವಾರ ಹೇಳಿದ್ದಾರೆ. ಅವರು ಗೌರಿ ಮೆಮೋರಿಯಲ್ ಟ್ರಸ್ಟ್‌ ಆಯೋಜಿಸಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಸ್ಮರಣಾರ್ಥ ನಗರದ ಟೌನ್‌ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾರದ ಕಾಲದಲ್ಲಿ ಭಾರತವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಭೆಯಲ್ಲಿ ಮಾತನಾಡಿದ ಅವರು, “ಕರ್ನಾಟಕದ ಮುಖ್ಯಮಂತ್ರಿ ಇಲ್ಲಿದ್ದಾರೆ. ಅವರು ಕೋಮುವಾದಿಗಳನ್ನು ಸೋಲಿಸಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದಗಳು. ಕೋಮುವಾದಿ ಶಕ್ತಿಗಳನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆ. ಜಾತ್ಯಾತೀತತೆ ನಮ್ಮ ಸಂವಿಧಾನದ ಗುಣ. ವಿವಿಧೆತೆಯಲ್ಲಿ ಏಕತೆ ನಮ್ಮ ವೇದ ವಾಕ್ಯ. ಸಂಘಪರಿವಾರ ಇದನ್ನು ಒಪ್ಪುವುದಿಲ್ಲ” ಎಂದು ಹೇಳಿದರು. ಶೈಲಜಾ ಟೀಚರ್

ಇದನ್ನೂ ಓದಿ: ಬಿಜೆಪಿ ಸರ್ಕಾರಿ ವಕೀಲರ ಮದುವೆಯಲ್ಲಿ ಲಲಿತ್‌ ಮೋದಿ ಭಾಗಿ!

“ಸನಾತನವನ್ನು ಖಂಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ ಸನಾತನ ಧರ್ಮ ಎಂದರೇನು? ಸಂಘಪರಿವಾರದ ಸನಾತನ ಧರ್ಮವೇ ಬೇರೆ. ದೇವರೇ ಚಾತುರ್ವರ್ಣ ರಚಿಸಿದ್ದಾನೆ ಎನ್ನುತ್ತಾರೆ. ಬ್ರಾಹ್ಮಣರು ತಲೆಯಲ್ಲಿ ಹುಟ್ಟಿದವರು, ವಿದ್ಯೆ ಅವರಿಗೆ ಎನ್ನುವುದನ್ನು ನಾವು ಒಪ್ಪಲು ಸಾಧ್ಯವೇ? ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವುದನ್ನು ಒಪ್ಪಲು ಸಾಧ್ಯವೇ? ಅದು ಸಾಧ್ಯವಿಲ್ಲ” ಎಂದು ಶೈಲಜಾ ಅವರು ತಿಳಿಸಿದರು.

“ಪ್ರಜಾಪ್ರಭುತ್ವವನ್ನು ನಾವು ಉಳಿಸಬೇಕಾಗಿದೆ. ಹಿಂದುತ್ವ ಪರಿಕಲ್ಪನೆ ಅಂದರೆ ಒಡೆದು ಆಳುವ ಪರಿಕಲ್ಪನೆ. ಫ್ಯಾಸಿಸಂ ನಮ್ಮನ್ನು ಆಳುತ್ತಿದೆ. ಜನರನ್ನು ನಿಯಂತ್ರಿಸುತ್ತದೆ. ಗಾಂಧೀಜಿ ಯಾರು? ಸಾವರ್ಕರ್ ಯಾರು? ಎಂಬುದು ನಮಗೆ ತಿಳಿದಿದೆ. ಗಾಂಧಿಜಿಯ ಜಾಗದಲ್ಲಿ ಸಾವರ್ಕರ್ ಅವರನ್ನು ಇಡುವುದನ್ನು ಸಹಿಸಲು ಸಾಧ್ಯವೆ ಇಲ್ಲ” ಎಂದು ಶೈಲಜಾ ಟೀಚರ್ ಹೇಳಿದರು.

ಇದನ್ನೂ ಓದಿ: ಸನಾತನ ಧರ್ಮ ಹೇಳಿಕೆ ಉದಯನಿಧಿ ಸ್ಟಾಲಿನ್‌, ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರಕರಣ ದಾಖಲು

“ಅವರು ಸನಾತನ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಇಂದು ಏನಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಅವಿಶ್ವಾಸ ಗೊತ್ತುವಳಿಯನ್ನು ವಿರೋಧ ಪಕ್ಷಗಳು ಮಂಡಿಸಿದಾಗ ಅವರು ಸಂಸತ್ತಿಗೆ ಬರಬೇಕಾಯಿತು. ಆದರೆ ಒಂದುವರೆ ಗಂಟೆಗಳ ಭಾಷಣದಲ್ಲಿ ಅವರು ಮಣಿಪುರದ ಬಗ್ಗೆ ಕೆಲವೇ ಕೆಲವು ನಿಮಿಷಗಳು ಮಾತನಾಡಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೊರಾನಾ ಸಮಯದಲ್ಲಿ ದನದ ಗಂಜಲ ಸವರಿಕೊಳ್ಳಿ ಎಂದರು. ದೇಶ ಈ ದಿಕ್ಕಿನಲ್ಲಿ ಸಾಗುತ್ತಿದೆ. ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು, ಸೆಕ್ಯುಲರಿಸಂ ಉಳಿಸಲು ನಾವು ಗೌರಿ ಹೆಸರಲ್ಲಿ ಮುಂದಡಿ ಇಡಬೇಕಾಗಿದೆ” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತ ನಾಯಕ ರಾಕೇಶ್ ಟಿಕಾಯತ್, ನಟ ಪ್ರಕಾಶ್ ರಾಜ್, ರಾಜಕೀಯ ಹೋರಾಟಗಾರ್ತಿ ಏಂಜೆಲಾ ರಂಗದ್, ಪತ್ರಕರ್ತೆ ಸುಪ್ರಿಯಾ ಶ್ರೀ ನಟೆ, ಮುಸ್ಲಿಂ ಒಕ್ಕೂಟದ ಯಾಸಿನ್ ಮಲ್ಪೆ, ಮಾಜಿ ಸಚಿವ ಹೆಚ್‌. ಆಂಜನೇಯ, ಸಿನಿಮಾ ನಿರ್ಮಾಪಕಿ ಕವಿತಾ ಲಂಕೇಶ್, ಗೌರಿ ಟ್ರಸ್ಟ್‌ನ ದೀಪು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media

Donate Janashakthi Media

Leave a Reply

Your email address will not be published. Required fields are marked *