ನ್ಯೂಯಾರ್ಕ್: ಅಂತರ್ಜಾಲ ಸಂಪರ್ಕ ಸ್ಥಗಿತಗೊಳಿಸುವುದು, ಸಂಪರ್ಕಗಳಿಗೆ ಅಡೆತಡೆ ಹೇರುವುದ ಹೆಚ್ಚಿನ ಅಪಾಯಕಾರಿಯಾಗಿದ್ದು, ಇದರಿಂದ ತೀವ್ರವಾದ ಪರಿಣಾಮಗಳುಂಟಾಗಲಿದೆ. ಹೀಗಾಗಿ ದೇಶಗಳು ಅಂತರ್ಜಾಲಗಳ ಮೇಲೆ ನಿರ್ಬಂಧ ಹೇರುವುದನ್ನು ಕೂಡಲೇ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.
ಅಂತರ್ಜಾಲ ಸ್ಥಗಿತಗೊಂಡಲ್ಲಿ, ಲಕ್ಷಾಂತರ ಜನರ ಜೀವನ ಹಾಗೂ ಮಾನವ ಹಕ್ಕುಗಳ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತರ್ಜಾಲ ಹಾಗೂ ದೂರಸಂಪರ್ಕ ಸೇವೆಗಳು ಮಾನವನಿಗೆ ಹೆಚ್ಚು ಅವಶ್ಯಕವಾದದ್ದು, ಅದು ಸ್ಥಗಿತಗೊಂಡಲ್ಲಿ, ತುರ್ತು ಸಂದರ್ಭ ಆಸ್ಪತ್ರೆಗಳು ತಮ್ಮ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗವುದಿಲ್ಲ. ಮತದಾರರು ಅಭ್ಯರ್ಥಿಗಳ ಮಾಹಿತಿಯಿಂದ ವಂಚಿತರಾಗುವುದು, ಕರಕುಶಲ ತಯಾರಕರು ಗ್ರಾಹಕರಿಂದ ದೂರ ಉಳಿಯುವುದು ಹಾಗೂ ಹಿಂಸಾತ್ಮಕ ದಾಳಿಯ ಸಂದರ್ಭ ಶಾಂತಿಯನ್ನು ಸ್ಥಾಪಿಸಲು ಸಹಾಯಕ್ಕೆ ಅಧಿಕಾರಿಗಳನ್ನು ಕರೆಸುವುದು ಸಾಧ್ಯವಾಗುವುದಿಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್, ತಂತ್ರಜ್ಞಾನ ಜಗತ್ತು ಮಾನವ ಜಗತ್ತಿಗೆ ಅತ್ಯಗತ್ಯವಾಗಿದೆ. ಇಂತಹ ಸಮಯದಲ್ಲಿ ಸ್ಥಗಿತಗಳಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.
ಅಂತರ್ಜಾಲಗಳ ನಿರ್ಬಂಧದಿಂದಾಗಿ ಲೆಕ್ಕಿಸಲಾಗದಷ್ಟು ಹಾನಿ ಉಂಟಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಜಾಗತಿಕ ಗಮನವನ್ನು ಸೆಳೆದ ಮೊದಲ ಮುಖ್ಯ ಅಂತರ್ಜಾಲ ಸ್ಥಗಿತ 2011ರಲ್ಲಿ ಈಜಿಪ್ಟ್‌ನಲ್ಲಿ ನಡೆದಿತ್ತು. ತಹ್ರೀರ್ ಸ್ಕ್ವೇರ್ ಪ್ರದರ್ಶನದ ಸಮಯದಲ್ಲಿ ಅಂತರ್ಜಾಲ ಸ್ಥಗಿತಗೊಂಡು, ಹಿಂಸಾತ್ಮಕ ಘಟನೆಗಳು ನಡೆದವು. ಹಲವು ಹತ್ಯೆಗಳು ನಡೆದು, ನೂರಾರು ಜನರು ಬಂಧನಕ್ಕೊಳಗಾಗಿದ್ದರು ಎಂದು ತಿಳಿಸಿದರು.
ಇಂತಹ ಸ್ಥಗಿತಗಳು ಸಂಭವಿಸಿತು ಎಂದಾದಲ್ಲಿ, ಜನರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಜನರನ್ನು ನಿಯಂತ್ರಿಸಲಾಗದಷ್ಟು ಮಟ್ಟದಲ್ಲಿ ಹಕ್ಕುಗಳ ಉಲ್ಲಂಘನೆ, ಹತ್ಯೆಗಳು ನಡೆಯಬಹುದು ಎಂದು ಹೇಳಿದ್ದಾರೆ.