ಪ್ರತಿ ವರ್ಷವೂ ಮೇ 12ರಂದು ವಿಶ್ವದಾದ್ಯಂತ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಚರನೆ ಅತ್ಯಂತ ಮಹತ್ವ ಮತ್ತು ಘನತೆಯನ್ನು ತಂದುಕೊಟ್ಟಿದೆ. ಇಂದಿನ ಸಂದರ್ಭದಲ್ಲಿ ದಾದಿಯರ ಸೇವೆ ಏನೆಂಬುದ ಸಾಮಾನ್ಯ ಜನರಿಗೂ ಪರಿಪೂರ್ಣವಾಗಿ ಅರ್ಥವಾಗುತ್ತದೆ.
ಕೊವಿಡ್-19 ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಂತೂ ದಿನವೊಂದಕ್ಕೆ ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈ ಸಮಯದಲ್ಲಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ ವೈದ್ಯರೊಂದಿಗೆ ಸದಾ ಕೆಲಸ ಮಾಡುತ್ತಿರುವ ದಾದಿಯರಿಗೆ ಇಂದು ವಿಶೇಷವಾಗಿ ಕೃತಜ್ಞತೆಗಳು ಹರಿದು ಬರುತ್ತಿವೆ.
ಇದನ್ನು ಓದಿ: ಕೋವಿಡ್ ಬಿಕ್ಕಟ್ಟು: ದೇಶದಲ್ಲಿ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ
ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಅವರು ಕೊರೊನಾ ಸಮಯದಲ್ಲಿ ತಮ್ಮ ಮನೆಗೂ ಹೋಗದೇ ಆಸ್ಪತ್ರೆಯಲ್ಲಿಯೇ ವಾಸವಿದ್ದು ಅದೆಷ್ಟೋ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಪ್ರಸಕ್ತ ಸನ್ನಿವೇಶದಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರಷ್ಟೇ ಅಲ್ಲ. ಆರೋಗ್ಯ ಕ್ಷೇತ್ರದಲ್ಲಿ ಜನರ ಆರೈಕೆಯಲ್ಲಿ ಸದಾ ಸೇವೆ ಸಲ್ಲಿಸುತ್ತಿರುವ ಅಸಂಖ್ಯಾತ ದಾದಿಯರಿದ್ದಾರೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸ್ವಯಂಸ್ಪೂರ್ತಿಯಿಂದ ತೊಡಗಿಸಿಕೊಂಡಿರುವವರಿಗೂ ಸಹ ಇಂದಿನ ವಿಶೇಷ ನಮನವನ್ನು ಸಲ್ಲಬೇಕಿದೆ.
ಇದನ್ನು ಓದಿ: ಲಸಿಕೆ ಲಸಿಕೆ ಲಸಿಕೆಗಾಗಿ ಶುರುವಾಗಿದೆ ಹಾಹಾಕಾರ, ಎರಡನೇ ಡೋಸ್ ಪಡೆಯಲು ಪರದಾಟ
ಆರೋಗ್ಯ ಹದಗೆಟ್ಟಾಗ ನಾವು ಆಸ್ಪತ್ರೆಗಳಿಗೆ ಭೇಟಿ ನೀಡುತ್ತೇವೆ. ಅಲ್ಲಿನ ವೈದ್ಯರನ್ನು ಭೇಟಿ ಮಾಡುತ್ತೇವೆ. ವೈದ್ಯರು ಒಂದಷ್ಟು ಸಲಹೆಗಳನ್ನು ದಾದಿಯರಿಗೆ ಹೇಳುತ್ತಾರೆ. ಅವರು ವೈದ್ಯರ ಸಲಹೆಗಳನ್ನು ಪಾಲಿಸುತ್ತಾರೆ. ಹಾಗೆಯೇ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿ ವಾರ್ಡ್ ಗಳಲ್ಲಿ ಮಲಗಿರುವ ರೋಗಿಗಳಿಗೆ ಸಮಯಕ್ಕೆ ತಕ್ಕಂತೆ ಔಷಧಿ ನೀಡುತ್ತಾ ಅವರ ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳುವ ದಾದಿಯರು ಕೇವಲ ದಾದಿಯರಾಗಿಯಷ್ಟೆ ಅಲ್ಲ. ಅವರ ಹಿಂದಿನ ಶ್ರಮಗಳು ನಮಗೆ ಅರ್ಥವೇ ಆಗುವುದಿಲ್ಲ.
ದಾದಿಯರ ಕುರಿತಂತೆ ಜಯಂತ ಕಾಯ್ಕಿಣಿ ಹೇಳಿದ್ದು…
ಡಾಕ್ಟರ್ ಬಂದಾಗ ಆಕೆ ಹಿಂದೆ ಆಜ್ಞಾಧಾರಕಳಂತೆ, ಆಪರೇಷನ್ ಥೇಟರುಗಳಲ್ಲಿ ಸಮಯ ಪ್ರಜ್ಞೆಯ ಚುರುಕು ಸಹಾಯಕಿಯಂತೆ, ಹಟಮಾರಿ ರೋಗಿಗಳ ಎದುರು ಕಟು ಶಿಕ್ಷಕಿಯಂತೆ, ಬೈಪಾಸ್ ಸರ್ಜರಿ ಆದವರನ್ನು ಅಮೃತಶಿಲೆಯ ವಾರ್ಡುಗಳಲ್ಲಿ ಪ್ರಶಾಂತವಾಗಿ ನಡೆಸುತ್ತಿರುತ್ತಾಳೆ. ಕೆಮೋಥೆರಪಿಯಲ್ಲಿ ಜೀವದ ಬೆಳಕನ್ನೇ ಕಳೆದುಕೊಳ್ಳುತ್ತಿರುವ ಕ್ಯಾನ್ಸರ್ ವಾರ್ಡಿನ ಮಕ್ಕಳ ಜತೆ ಆಡುತ್ತಿರುತ್ತಾಳೆ. ನಂತರ ತನ್ನ ಡ್ಯೂಟಿ ಮುಗಿದಿದ್ದೇ ತನ್ನ ಗರಿಗರಿ ಬೆಳ್ಳನೆ ಉಡುಪು ಬದಲಿಸಿ ಸೀರೆ, ಸಲ್ವಾರಿನಲ್ಲಿ ಓಡೋಡುತ್ತಾ ಇದೇ ಸಂತೆಯಲ್ಲಿ ಸೇರಿಕೊಂಡು ತನ್ನ ಬಸ್ ಹಿಡಿಯುತ್ತಾಳೆ. ಅವಳಿಗೂ ಅವಳದೇ ಸಂಸಾರವಿದೆ. ಕಾಯುವ ಮಕ್ಕಳಿದ್ದಾರೆ. ಎಂಥ ಕಾಯಿಲೆಗೂ ಪುಕ್ಕಟೆ ಸಲಹೆಗಾಗಿ ಅರಸಿಕೊಂಡು ಬರುವ ಸಂಬಂಧಿಕರಿದ್ದಾರೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ವರ್ಣಿಸುತ್ತಾರೆ.
ದಾದಿಯರ ಸೇವೆಗೆ ಮೀಸಲಿಟ್ಟ ಒಂದು ಗೌರವಯುತ ದಿನ
ಮನೆಯವರೇ ಸೇವೆ ಮಾಡಲು ಹಿಂಜರಿಯುವ ಸಮಯದಲ್ಲಿ ರೋಗಿಗಳ ಸೇವೆ ಮಾಡುತ್ತಾ ಅದರಲ್ಲೇ ಬದುಕನ್ನು ಕಟ್ಟಿಕೊಂಡಿರುವ ದಾದಿಯರಿಗೊಂದು ದಿನವನ್ನು ಮೀಸಲಿಡುವ ಮೂಲಕ ಇವತ್ತು ವಿಶ್ವದಾದ್ಯಂತ ಅವರ ಕಾರ್ಯ, ಸೇವೆಗೆ ಗೌರವ ಸಲ್ಲಿಸಲಾಗುತ್ತಿದೆ.
1965ರಲ್ಲಿ ಮೊದಲ ಬಾರಿಗೆ ದಾದಿಯರ ದಿನವನ್ನು ಆಚರಿಸಲಾಗಿದ್ದು, ಅಂದಿನಿಂದ ಪ್ರತಿ ವರ್ಷ ದಾದಿಯರ ದಿನಾಚರಣೆ ಆಚರಿಸಲಾಗುತ್ತಿದೆ.
ದಾದಿಯರಿಗೆ ಘನತೆ ತಂದ ಕೊಟ್ಟ ಫ್ಲಾರೆನ್ಸ್ ನೈಟಿಂಗೇಲ್
ಫ್ಲಾರೆನ್ಸ್ ನೈಟಿಂಗೇಲ್ ಅವರು ಜನಿಸಿದ್ದು 1820ರ ಮೇ 12ರಂದು. ಇಟಲಿಯ ಫ್ಲಾರೆನ್ಸ್ ನಗರದಲ್ಲಿ. ಇವರದು ಶ್ರೀಮಂತ ಕುಟುಂಬವಾಗಿದ್ದರೂ ನೈಂಟಿಗೇಲ್ ಅವರಿಗೆ ಸಮಾಜಸೇವೆಯಲ್ಲಿ, ರೋಗಿಗಳ ಶುಶ್ರೂಷೆ ಮಾಡುವುದರಲ್ಲಿ ಆಸಕ್ತಿ. ನೈಟಿಂಗೇಲ್ ಹುಟ್ಟಿದ ಮಾರನೇ ವರ್ಷವೇ ಅವರ ಕುಟುಂಬ ಇಂಗ್ಲೆಂಡ್‌ಗೆ ಬಂದು ನೆಲೆಸಿತು. ಶ್ರೀಮಂತ ಕುಟುಂಬವಾಗಿದ್ದರಿಂದ ನೈಟಿಂಗೇಲ್ ಯಾವುದೇ ಕೆಲಸ ಮಾಡುವ ಅಗತ್ಯವಿರಲಿಲ್ಲ. ಆದರೆ ಸೇವೆಯತ್ತಲೇ ತುಡಿಯುತ್ತಿದ್ದ ನೈಟಿಂಗೇಲ್ ಸುಮ್ಮನಿರಲಿಲ್ಲ.
ಕುಟುಂಬ ವಿರೋಧಿಸಿದರೂ ಅವರು ಅದಕ್ಕೆ ಸೊಪ್ಪು ಹಾಕದೆ 1844ರಲ್ಲಿ ನರ್ಸಿಂಗ್ ಕಲಿಯಲು ಆರಂಭಿಸಿದರು. ಆ ನಂತರ ಕ್ರಿಮಿನ್ ಯುದ್ಧದ ಸಮಯದಲ್ಲಿ ನುರಿತ ದಾದಿಯರ ತಂಡದ ನಾಯಕತ್ವ ವಹಿಸಿಕೊಂಡು ಯೋಧರ ಸೇವೆಗೆ ಮುಂದಾದರು. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಂಡರು. ರಾತ್ರಿ ಹೊತ್ತು ಯುದ್ಧ ಭೂಮಿಯಲ್ಲಿ ಕತ್ತಲಿನ ನಡುವೆ ದೀಪವನ್ನು ಹಿಡಿದುಕೊಂಡು ನೊಂದ ಮತ್ತು ಗಾಯಗೊಂಡ ಸೈನಿಕರ ಸೇವೆ ಮಾಡಿ ‘ಲೇಡಿ ಆಫ್ ಲ್ಯಾಂಪ್’ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದ್ದರು. ಸುಮಾರು 90 ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಈಕೆ ಅವರು 1910 ಆಗಸ್ಟ್ 13ರಂದು ಮರಣ ಹೊಂದಿದರು.
ಲಂಡನ್‌ನ ಸೆಂಟ್ ಥಾಮಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ಅವರ ಹೆಸರಿನಲ್ಲಿ 1860ರಲ್ಲಿ ನರ್ಸಿಂಗ್ ಶಾಲೆಯನ್ನು ಆರಂಭಿಸಲಾಯಿತು. 1912ರಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಫ್ಲಾರೆನ್ಸ್ ನೈಟಿಂಗೇಲ್ ಪದಕವನ್ನು ವಿಶಿಷ್ಟ ಸೇವೆ ಸಲ್ಲಿಸುವ ದಾದಿಯರಿಗೆ ನೀಡಲು ಆರಂಭಿಸಿದೆ. ಭಾರತದಲ್ಲಿ 1973ರಿಂದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪದಕ ಎಂಬುದಾಗಿ ರಾಷ್ಟ್ರಪತಿಗಳ ಪದಕಗಳನ್ನು ನೀಡಲಾಗುತ್ತಿದೆ.