ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿ ಕೂಗು: 7 ಮಂದಿ ಬಂಧನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿಗೆ ಆಗ್ರಹಿಸಿ ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಘೋಷಣೆ ಕೂಗಿದ್ದ ಏಳು ಮಂದಿಯನ್ನು ವಿಧಾನಸೌಧ ಠಾಣೆಯ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಹೆಚ್‌ಎಸ್‌ಆರ್ ಲೇಔಟ್ ಎ.ವಿಜಯಕುಮಾರ್, ಎಸ್.ಎಸ್.ವಿಜಯಶೇಖರ್, ಹೊಸಪಾಳ್ಯ ಮುಖ್ಯರಸ್ತೆಯ ಸತ್ಯೇಂದ್ರಕುಮಾರ್, ಜಾಂಬವನಗರದ ಎಂ.ರಾಜರತ್ನಂ ಸರ್ಜಾಪುರದ ಎಸ್.ವಿ.ಸುರೇಶ್, ಚೊಕ್ಕಸಂದ್ರದ ಎನ್.ವೇಣುಗೋಪಾಲ್. ಸರ್ಜಾಪುರ ಅಂಬೇಡ್ಕರ್ ಕಾಲೊನಿಯ ಎಸ್.ವಿ.ಶ್ರೀನಿವಾಸ್ ಎಂದು ಗುರ್ತಿಸಲಾಗಿದೆ.

ಇದನ್ನು ಓದಿ :“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ವಿಧಾನಸಭೆ ದಂಡನಾಯಕ ಹೆಚ್.ಎಸ್.ಜಯಕೃಷ್ಣ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಬಂಧಿತ ಏಳು ಮಂದಿ ಬಜೆಟ್‌ ಅಧಿವೇಶನದ ವೀಕ್ಷಣೆ ಮಾಡುತ್ತಿದ್ದರು. ಮುಖ್ಯಮಂತ್ರಿಗಳು ಬಜೆಟ್‌ ಮಂಡನೆ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸದಾಶಿವ ಆಯೋಗದ ವರದಿ ಜಾರಿ, ಒಳ ಮೀಸಲಾತಿ ಜಾರಿ ಮಾಡಿ ಎಂದು ಘೋಷಣೆ ಕೂಗಿದರು. ಕೂಡಲೇ ಮಾರ್ಷಲ್‌ಗ‌ಳು ಅವರನ್ನು ವಶಕ್ಕೆ ಪಡೆದುಕೊಂಡರು.

ನಂತರ ವಿಧಾನಸಭೆ ದಂಡನಾಯಕ ಎಚ್‌.ಎಸ್‌.ಜಯಕೃಷ್ಣ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಿ, ವಿಧಾನಸೌಧ ಠಾಣೆಗೆ ಕರೆದೊಯ್ದು ದೂರು ನೀಡಿದರು.

ಸದನದ ನಿಯಮಾವಳಿಯನ್ನು ಉಲ್ಲಂಘನೆ ಮಾಡುವುದರ ಜೊತೆಗೆ ಮಾರ್ಷಲ್‌ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದಡಿ ಪೊಲೀಸರು 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದಾರಂದು ತಿಳಿದುಬಂದಿದೆ..

ಇದನ್ನು ಓದಿ :ಬೆಂಗಳೂರು| ಚಿತ್ರಮಂದಿರಗಳ ಟಿಕೆಟ್ ದರ 200 ರೂ.ಗಳಿಗೆ ಸೀಮಿತ: ರಾಜ್ಯ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *