ಭಾರೀ ಮಳೆಯಿಂದಾಗಿ ಮೂರು ಮಂದಿ ನಿಧನ-10 ಮಂದಿ ನಾಪತ್ತೆ: 5 ಜಿಲ್ಲೆಗಳು ಗಂಭೀರ ಪರಸ್ಥಿತಿ

ತಿರುವನಂತಪುರ: ಕೇರಳ ರಾಜ್ಯದಲ್ಲಿ ವಿವಿದೆಡೆ ಭಾರೀ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಿಸಲಾಗಿದೆ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ಜಲಾವೃತಗೊಂಡ ರಸ್ತೆಯಲ್ಲಿ ಬಸ್​ ಒಂದು ಭಾಗಶಃ ಮುಳುಗಡೆಯಾಗಿದ್ದು, ಪ್ರಯಾಣಿಕರು ಬಸ್​ನಿಂದ ಹೊರಗಡೆ ಬರಲು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊಟ್ಟಾಯಂ ಗ್ರಾಮೀಣ ಭಾಗದಲ್ಲಿ ಸುರಿದ ಮಳೆಯಿಂದಾಗಿ ಇಡೀ ಪ್ರದೇಶ ನದಿಯಂತಾಗಿದ್ದು, ಕೊಚ್ಚಿ ಹೋಗುತ್ತಿರುವ ಕಾರನ್ನು ತಡೆಯುವ ಪ್ರಯತ್ನ ಮುಂದಾಗಿರುವ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಕೇರಳದಲ್ಲಿ ಈ ರೀತಿಯ ಘಟನೆ ಭಾರೀ ಮಳೆಯಿಂದಾಗಿ ಸಾಮಾನ್ಯವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭೂಕುಸಿತಕ್ಕೆ  ಮೂವರು ಬಲಿ, 10 ಮಂದಿ ನಾಪತ್ತೆ

ಕೊಟ್ಟಾಯಂನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ಸಿಬ್ಬಂದಿಗಳು ಹುಡುಕುವ ಪ್ರಯತ್ನದಲ್ಲಿದ್ದಾರೆ. ಕೊಟ್ಟಾಯಂನ ಕೂಟ್ಟಿಕಲ್ ಪಂಚಾಯತ್‌ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿದ್ದು, ಅಲ್ಲಿದ್ದ 13 ಜನರು ಕಾಣೆಯಾಗಿದ್ದರು. ಇಲ್ಲಿಯವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೂರು ಶವಗಳನ್ನು ಹೊರ ತೆಗೆಯಲಾಗಿದೆ. ರಕ್ಷಣಾ ಕಾರ್ಯಕ್ಕೆ ಭಾರತೀಯ ನೌಕಾಪಡೆಯ ಸಹಾಯವನ್ನು ಪಡೆಯಲಾಗಿದೆ.

ಈ ಬಾರಿ ಭಾರೀ ಮಳೆ ಇನ್ನಷ್ಟು ವ್ಯಾಪಕವಾಗಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಕೊಟ್ಟಾಯಂ, ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ವಿಪರೀತವಾಗಿ ಮಳೆಯಾಗುತ್ತಿದ್ದೆ. ಇಲ್ಲಿನ ಜಿಲ್ಲೆಗಳಲ್ಲಿ 20 ಸೆಂಮೀ ಗಿಂತ ಹೆಚ್ಚು ಮಳೆಯಾಗಲಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ತಿರುವನಂತಪುರಂ, ಕೊಲ್ಲಂ, ಅಳಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ಇಲ್ಲಿ 12 ರಿಂದ 20 ಸೆಂ.ಮೀ. ವರೆಗೂ ಮಳೆಯಾಗುವ ಸಂಭವವಿದೆ ಎಂದು ಎಚ್ಚರಿಸಿಲಾಗಿದೆ. ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಹಾಗೂ ಲಕ್ಷದ್ವೀಪದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕೇರಳದ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಅಕ್ಟೋಬರ್ 17ರ ಬೆಳಗಿನವರೆಗೂ ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಅಕ್ಟೋಬರ್ 18ರಂದು ಮಳೆ ಮುಂದುವರೆಯಲಿದ್ದು, ಅ. 19ರ ಬಳಿಕ ಮಳೆಯ ಆರ್ಭಟ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇರಳ ಕರಾವಳಿಯಲ್ಲಿ ಗಂಟೆಗೆ 40-50 ಕಿಮೀ ಇಂದ 60 ಕಿಮೀ ವೇಗದವರೆಗೆ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಆಗ್ನೇಯ ಅರಬ್ಬಿ ಸಮುದ್ರ, ಕೇರಳ ಕರಾವಳಿಯಾಚೆ ಹಾಗೂ ಲಕ್ಷದ್ವೀಪ ಪ್ರದೇಶಗಳಲ್ಲಿ ಮೀನುಗಾರರು ದೋಣಿಗಳನ್ನು ಉಳಿಸಬಾರದು ಈಗಾಗಲೇ ಎಂದು ಸೂಚನೆ ನೀಡಲಾಗಿದೆ.

ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಾರಿ ಪ್ರಮಾಣದ ನೀರು ಅಣೆಕಟ್ಟುಗಳಿಗೆ ಹರಿಯುತ್ತಿದೆ.  ಕೇರಳದ ಪ್ರಮುಖ ಅಣೆಕಟ್ಟುಗಳು ಈಗಾಗಲೇ ಅವುಗಳ ಸಾಮರ್ಥ್ಯದಷ್ಟು ತುಂಬಿಕೊಂಡಿದೆ.

ಕೊಟ್ಟಾಯಂ-ಕುಮಿಲಿ ಮಾರ್ಗದ ಕುಟ್ಟಿಕ್ಕಣಂ ಸಮೀಪದ ಪುಲ್ಲುಪರದಲ್ಲಿ ಭೂಕುಸಿತ ಸಂಭವಿಸಿದೆ. ತೊಡುಪ್ಪುಳ ಪಟ್ಟಣ ಮಳೆ ನೀರಿನಿಂದ ಆವೃತವಾಗಿದೆ. ಅನೇಕ ಅಣೆಕಟ್ಟೆಗಳು ರೆಡ್ ಅಲರ್ಟ್ ಸನ್ನಿವೇಶದಲ್ಲಿದ್ದು, ಇಂದು ಬೆಳಿಗ್ಗೆ ಮೊದಲ ಆರೇಂಜ್ ಅಲರ್ಟ್ ಘೋಷಣೆಯಾಗುತ್ತಿದ್ದಂತೆಯೇ ಕೆಳಹರಿವಿನ ನದಿಗಳಿಗೆ ನೀರು ಬಿಡಲಾಗುತ್ತಿದೆ.

ಕಲ್ಲಾರ್‌ಕುಟ್ಟಿ, ಕುಂಡಲಾ, ಶೋಲಾಯಾರ್ ಮತ್ತು ಕಕ್ಕಿ ಅಣೆಕಟ್ಟುಗಳಲ್ಲಿ ಮೂರನೇ ಹಂತದ ಅಲರ್ಟ್ ಘೋಷಣೆಯಾದ ಬಳಿಕ ರೆಡ್ ಅಲರ್ಟ್ ಎಚ್ಚರಿಕೆ ವಹಿಸಲಾಗಿದೆ. ಪೊರಿಂಗಲ್ಕುತು ಮತ್ತು ಮಟ್ಟುಪೆಟ್ಟಿ ಅಣೆಕಟ್ಟುಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ನೀರು ಹೊರಬಿಡಲಾಗಿದೆ. ಹೀಗಾಗಿ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಕಡೆಗಳಲ್ಲಿ ಬಸ್ ಹಾಗೂ ಕಾರುಗಳು ನಡು ರಸ್ತೆಯಲ್ಲಿ ನೀರಿನಲ್ಲಿ ಸಿಲುಕಿವೆ. ಮುಂದಿನ ಸೂಚನೆಯವರೆಗೂ ಪಂಬಾ ನದಿಯಲ್ಲಿ ಸ್ನಾನ ಮಾಡದಂತೆ ಶಬರಿಮಲೆ ಯಾತ್ರಾರ್ಥಿಗಳಿಗೆ ಸಲಹೆ ನೀಡಲಾಗಿದೆ. ನಿವಾಸಿಗಳು ಮನೆಗಳ ಒಳಗೇ ಇರುವಂತೆ ಹಾಗೂ ಭೂಕುಸಿತ ಉಂಟಾದ ಸ್ಥಳಗಳ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮನವಿ ಮಾಡಿದ್ದಾರೆ. ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಅಣೆಕಟ್ಟುಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಆಸುಪಾಸಿನಲ್ಲಿ ವಾಸಿಸುತ್ತಿರುವವರು ಅಧಿಕಾರಿಗಳು ನೀಡುವ ಸೂಚನೆಯನ್ನು ಅನುಸರಿಸಲು ಸಿದ್ಧರಿರುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ.

ಗಿರಿಧಾಮ ಪ್ರವೇಶ ನಿಷೇಧ

ತಿರುವನಂತಪುರಂ ಜಿಲ್ಲಾಧಿಕಾರಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪೊನ್ಮುಡಿ ಗಿರಿಧಾಮಕ್ಕೆ ಪ್ರವೇಶವನ್ನು ನಿಷೇಧಿಸಿದ್ದಾರೆ.

ಕಂಟ್ರೋಲ್ ರೂಂ ಸಂಖ್ಯೆ
ಕೇರಳ ಸರ್ಕಾರವು 8606883111, 9562103902, 9447108954, 9400006700 ಸಂಖ್ಯೆಗಳಿಗೆ ಕಂಟ್ರೋಲ್ ರೂಂ, ಕರೆ ಅಥವಾ ವಾಟ್ಸಾಪ್ ಸೇವೆಗಳನ್ನು ತೆರೆದಿದೆ.

Donate Janashakthi Media

Leave a Reply

Your email address will not be published. Required fields are marked *