ನವದೆಹಲಿ: ಕೇಂದ್ರ ಸರ್ಕಾರವು ‘ಜಲಿಯಾನ್ ವಾಲಾಬಾಗ್ ಸ್ಮಾರಕ‘ವನ್ನು ನವೀಕರಣದ ನೆಪದಲ್ಲಿ ‘ಹುತಾತ್ಮರಿಗೆ ಮಾಡಿದ ಅವಮಾನ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ‘ಹುತಾತ್ಮ‘ ಎಂಬುದರ ಅರ್ಥ ತಿಳಿದವರು ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ನಂತರ, ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಸ್ಮಾರಕದ ನವೀಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಸುದ್ದಿಯನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹುತಾತ್ಮ ಎಂಬುದರ ಅರ್ಥ ತಿಳಿಯದವರು ಮಾತ್ರ ಜಲಿಯನ್ ವಾಲಾ ಬಾಗ್ ಹುತಾತ್ಮರನ್ನು ಹೀಗೆ ಅವಮಾನ ಮಾಡಲು ಸಾಧ್ಯ‘ ಎಂದು ಬರೆದಿದ್ದಾರೆ.
‘ನಾನು ಹುತಾತ್ಮರ ಮಗ. ಹುತಾತ್ಮರಿಗೆ ಮಾಡಿರುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂಥ ಕ್ರೌರ್ಯದ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ‘ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್ ಮೂಲಕ ಸ್ಮಾರಕದಲ್ಲಿ ಡಿಜಿಟಲ್ ವಸ್ತುಪ್ರದರ್ಶನದ ಗ್ಯಾಲರಿಗಳನ್ನು ಉದ್ಘಾಟಿಸಿದರು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ನವೀಕೃತ ಜಲಿಯಾನ್ ವಾಲಾಬಾಗ್ ಸ್ಮಾರಕವನ್ನು ಉದ್ಘಾಟಿಸಿ, ‘ಇತಿಹಾಸವನ್ನು ರಕ್ಷಿಸುವುದು ದೇಶದ ಕರ್ತವ್ಯ‘ ಎಂದು ಒತ್ತಿ ಹೇಳಿದ್ದರು. ಹಿಂದಿನ ಘಟನೆಗಳು ‘ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಹಾಗೆಯೇ, ದೇಶವನ್ನು ಮುನ್ನಡೆಸಲು ನಿರ್ದೇಶನ ನೀಡುತ್ತವೆ‘ ಎಂದು ಹೇಳಿದ್ದರು.