ಬೆಂಗಳೂರು: ಮುಂದಿನ 30 ದಿನಗಳಲ್ಲಿ ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ, ನೇಮಕಾತಿ ಪ್ರಾಧಿಕಾರಗಳಿಗೆ ರಾಜ್ಯ ಸರಕಾರ ಸೂಚನೆ ನೀಡಿದೆ. ಭರ್ತಿ
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆಶಾ ಕುಮಾರಿ ಎ.ಜೆ. ಆದೇಶ ಹೊರಡಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗಧಿಪಡಿಸಿ ನೇಮಕಾತಿ ಅಧಿಸೂಚನೆಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದುಡಿಯುವವರ ಆದಾಯ ಕಡಿಮೆಯಾಗುತ್ತಿದೆ, ಕುಳಿತು ತಿನ್ನುವವರ ಆದಾಯ ಹೆಚ್ಚುತ್ತಿದೆ – ಯು.ಬಸವರಾಜ
ಆದರೆ, ಹೈಕೋರ್ಟ್‍ನ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಗಳು /ನೇಮಕಾತಿ ಪ್ರಾಧಿಕಾರಗಳು ಮುಂದಿನ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಶೇ.6ರಷ್ಟು(ಪರಿಶಿಷ್ಟ ಜಾತಿಗೆ ಶೇ.2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.4) ಹುದ್ದೆಗಳನ್ನು ಕಾಯ್ದಿರಿಸಬೇಕು ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹಾಗೆಯೇ 2025ರ ನ.27ರ ಮದ್ಯಂತರ ಆದೇಶಕ್ಕಿಂತ ಹಿಂದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿರುವ ಪ್ರಕರಣಗಳನ್ನು ಯಥಾಪ್ರಕಾರ ಮುಂದುವರೆಸಿ, ಅಂತಿಮಗೊಳಿಸಬೇಕು. ಆದರೆ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ “ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ” ಎಂದು ಷರಾ ದಾಖಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ನೋಡಿ: ಪರಿಶಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಯಾಕೆ? Janashakthi Media
