ಮಧುಗಿರಿ: ಅರುಂಧತಿ ಸಿನಿಮಾ ನೋಡಿ ‘ಮುಕ್ತಿ’ಗಾಗಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ದುರಂತ ಅಂತ್ಯಕಂಡಿದ್ದಾನೆ. ಸಾವಿಗೂ ಮುನ್ನ ಅತ್ಯಂತ ದಯನೀಯ ಸ್ಥಿತಿಯಲ್ಲೂ ‘ಮುಕ್ತಿ ಕೊಡಿಸಪ್ಪಾ…’ ಎಂದು ತಂದೆ ಬಳಿ ಅಂಗಲಾಚುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ತೆಲುಗಿನಲ್ಲಿ ತೆರೆಕಂಡಿದ್ದ ಅರುಂಧತಿ ಸಿನಿಮಾದಿಂದ ಪ್ರಭಾವಿತಗೊಂಡಿದ್ದ ಈತ ಪದೇ ಪದೇ ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾಭ್ಯಾಸ ಬಿಟ್ಟು ಮನೆಗೂ ಬರದೆ ತುಮಕೂರಿನಲ್ಲಿ ಉಳಿದುಕೊಂಡಿದ್ದ. ಕಳೆದ ಭಾನುವಾರ ಊರಿಗೆ ಬಂದಿದ್ದಾಗಲೂ ತಂದೆ-ತಾಯಿ ಈತನಿಗೆ ಬುದ್ಧಿವಾದ ಹೇಳಿದರೂ ಸಹ ಅರುಂಧತಿ ನೋಡುವುದನ್ನು ಬಿಟ್ಟಿರಲಿಲ್ಲ. ಆ ಚಿತ್ರದ ಕೊನೆಯಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ಪದೇ ಪದೇ ನೋಡಿ ಅದೇ ರೀತಿ ಬೆಂಕಿ ಹಚ್ಚಿಕೊಳ್ಳಲು 20 ಲೀಟರ್ ಪೆಟ್ರೋಲ್ ಖರೀದಿಸಿದ್ದ.
ಒಂದು ಜೊತೆ ಬಟ್ಟೆಯನ್ನು ಪ್ರತ್ಯೇಕವಾಗಿ ತಂದು, ನಿನ್ನೆ ಸಂಜೆ ರೇಷ್ಮೆ ಇಲಾಖೆ ನರ್ಸರಿ ಬಳಿಯ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಶಾಖ ತಡೆಯಲಾಗದೆ ರಸ್ತೆ ಕಡೆಗೆ ಓಡಿ ಬಂದು ಮುಕ್ತಿ ಕೊಡುವಂತೆ ಗೋಳಾಡಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದವರು ಈತನ ಚೀರಾಟ ಗಮನಿಸಿ ರಕ್ಷಿಸಿ, ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಸುಟ್ಟಗಾಯಗಳಿಂದ ನರಳುತ್ತಿದ್ದ ಮಗನ ಸ್ಥಿತಿ ನೋಡಿ ಕಣ್ಣೀರಿಟ್ಟ ತಂದೆ ಸಿದ್ದಪ್ಪ, ‘ಯಾಕಪ್ಪ ರೇಣುಕಣ್ಣ.. ಹೀಗೆ ಮಾಡಿಕೊಂಡೆ… ಏನಾಗಿದೆ ನಿನಗೆ. ಆ ತೆಲುಗು ಅರುಂಧತಿ ಸಿನಿಮಾ ನೋಡಬೇಡ ಎಂದು ಪದೇಪದೆ ಹೇಳಿದರೂ, ನೀನು ಕೇಳಲಿಲ್ಲ. ಆ ಸಿನಿಮಾ ನೋಡಿ ಅದೇ ರೀತಿ ಮಾಡಿಕೊಂಡಿದ್ದೀಯಲ್ಲಪ್ಪ..’ ಎಂದು ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಆಗ ತಂದೆಯ ಕಣ್ಣುಗಳನ್ನೇ ದೃಷ್ಟಿಸಿದ ಮಗ ರೇಣುಕಾ, ‘ಅಪ್ಪ ನನಗೆ ಮುಕ್ತಿ ಕೊಡಿಸಪ್ಪಾ.. ಕೊನೆಯ ಸ್ಟೇಜ್ ಅಪ್ಪಾ…’ ಎಂದು ಸಿನಿಮಾ ಮಾದರಿಯಲ್ಲೇ ತಂದೆಯನ್ನು ಅಂಗಲಾಚಿದ. ‘ನಿನಗೆ ನಾನು ಯಾವ ರೀತಿ ಮುಕ್ತಿಕೊಡಿಸಲಪ್ಪಾ.. ಸಿನಿಮಾ ಗೀಳು ಹಚ್ಚಿಕೊಳ್ಳಬೇಡ ಎಂದರೂ ಕೇಳಲಿಲ್ಲ. ಈಗ ನೋಡು ಎಂತಹ ಪರಿಸ್ಥಿತಿ ತಂದುಕೊಂಡೆ’ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಎಸ್‌ಎಸ್‌ಎಲ್‌ಸಿ ಟಾಪರ್ ಆಗಿದ್ದ: ಆತ್ಯಹತ್ಯೆಗೆ ಯತ್ನಿಸಿದ ಯುವಕನ ತಂದೆ ಮತ್ತು ಗ್ರಾಮಸ್ಥರು ಹೇಳುವಂತೆ ಯುವಕ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆಗಿದ್ದ. ಆದರೆ ಎಸ್ಸೆಸ್ಸೆಲ್ಸಿ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ತುಮಕೂರಿನ ಹಾಸ್ಟೆಲ್ ಸೇರಿಕೊಂಡು ಅಲ್ಲಿ ಕೆಲ ಹುಡುಗರ ಸ್ನೇಹ ಬೆಳೆಸಿ ಸಿನಿಮಾ ಗೀಳು ಹತ್ತಿಸಿಕೊಂಡಿದ್ದ , 5 ವರ್ಷದಿಂದ ಸರಿದಾರಿಗೆ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣಬಿಟ್ಟ… ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.