ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ; ಇನ್ನೆರಡು ದಿನದಲ್ಲಿ ಎಸ್ಐಟಿ ತಂಡ ರಚನೆ

ಬೆಂಗಳೂರು: ಮಾಜಿ ಸಚಿವರ ಲೈಂಗಿಕ ವಿವಾದ ಸಂಬಂಧ ತನಿಖೆಗೆ ಗೃಹ ಇಲಾಖೆ ನೇಮಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್​ಐಟಿ) ಕೇವಲ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲಿದೆ. ಆನಂತರ ಎಫ್​ಐಆರ್ ದಾಖಲಿಸಬೇಕೆ ಬೇಡವೇ ಎಂಬುದರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 2 ದಿನಗಳಲ್ಲಿ ಎಸ್​ಐಟಿ ತಂಡ ರಚನೆ ಆಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾಜಿ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ನೀಡಿದ್ದ ದೂರನ್ನು ಹಿಂಪಡೆಯಲಾಗಿದೆ. ಇದೀಗ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದಿನ ಷಡ್ಯಂತ್ರ ರೂಪಿಸಿದವರು ಯಾರೆಂದು ವಿವರವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಲಿದೆ. ಆದರೆ, ಬಂಧಿಸುವ ಅಧಿಕಾರ ಇರುವುದಿಲ್ಲ. ಇದು ಘಟನೆ ಕುರಿತು ಮಾಜಿ ಸಚಿವರು ಸೇರಿ ಪ್ರಕರಣಕ್ಕೆ ಸಂಬಂಧಿಸಿದವರ ಹೇಳಿಕೆ ಮತ್ತು ಸಾಕ್ಷ್ಯ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ವಿಚಾರಣೆ ಪೂರ್ಣಗೊಳಿಸಿದ ಬಳಿಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಎಸ್​ಐಟಿ ಶಿಫಾರಸು ಮಾಡಲಿದೆ. ಆನಂತರ ಎಫ್​ಐಆರ್ ದಾಖಲಿಸಿ ತನಿಖೆ ನಡೆಯಲಿದೆ.

ಗೃಹ ಸಚಿವರ ಆದೇಶದಲ್ಲಿ ವಿಚಾರಣೆ ಬದಲಿಗೆ ತನಿಖೆ ಎಂದು ಉಲ್ಲೇಖವಾಗಿದ್ದರೆ ಪೊಲೀಸರು, ವಿವಾದ ಸಂಬಂಧ ಎಫ್​ಐಆರ್ ದಾಖಲಿಸಬೇಕಿತ್ತು. ಮಾಜಿ ಸಚಿವ ಅಥವಾ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ಯುವತಿ ದೂರು ನೀಡದೆ ಹೋಗಿದ್ದರೂ ಇತ್ತೀಚಿನ ಘಟನಾವಳಿ ಆಧರಿಸಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ಎಫ್​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಬೇಕಿತ್ತು. ಬಳಿಕ ಕೋರ್ಟ್​ಗೆ ಆರೋಪ ಪಟ್ಟಿ ಅಥವಾ ಪ್ರಕರಣದಲ್ಲಿ ಹುರುಳಿಲ್ಲದೆ ಹೋದರೆ ಬಿ ರಿಪೋರ್ಟ್ ಸಲ್ಲಿಸಬಹುದು. ಎಫ್​ಐಆರ್ ದಾಖಲಾದರೆ ತನಿಖೆಗೆ ಗಂಭೀರತೆ ಇರುತ್ತದೆ. ತಪ್ಪಿತಸ್ಥರನ್ನು ಬಂಧಿಸುವ ಅಧಿಕಾರ ಎಸ್​ಐಟಿಗೆ ಹೊಂದಿರುತ್ತದೆ. ಈ ಹಿಂದೆ ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧ ಆರೋಪ ಕೇಳಿ ಬಂದಾಗಲೂ ಲೈಂಗಿಕ ಹಗರಣವನ್ನು ಸಿಐಡಿ ವಿಚಾರಣೆಗೆ ಅಂದಿನ ಸರ್ಕಾರ ಆದೇಶಿಸಿತ್ತು. ಆಗ ಯಾರ ವಿರುದ್ಧವೂ ಪ್ರಕರಣ ದಾಖಲಾಗಲಿಲ್ಲ. ಕೊನೆಗೆ ಮೂಲ ವಿಡಿಯೋ ಪತ್ತೆಯಾಗಿಲ್ಲ. ಇದು ನಕಲಿಯೋ ಅಥವಾ ಅಸಲಿಯೋ ಎಂಬುದು ನಿಗೂಢವಾಗಿದೆ ಎಂದು ವರದಿ ಒಪ್ಪಿಸಿದರು. ಇದೀಗ ಮಾಜಿ ಸಚಿವರ ಲೈಂಗಿಕ ಹಗರಣವೂ ಅದೇ ಹಾದಿಯಲ್ಲಿ ಸಾಗಲಿದೆ ಎನ್ನಲಾಗುತ್ತಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ಸಲ್ಲಿಸುವ ವಿಚಾರ ಗೊತ್ತಿಲ್ಲ. ಸಿಡಿಯಿಂದಾಗಿ ತಮ್ಮ ತೇಜೋವಧೆ, ಮಾನಹಾನಿಯಾಗಿದೆ. ಷಡ್ಯಂತ್ರವಿರುವುದು ಸ್ಪಷ್ಟವಾಗಿದೆ ಎಂದು ಅವರು ಪತ್ರ ಬರೆದು ಮಾಡಿಕೊಂಡ ಮನವಿ ಮೇರೆಗೆ ಎಸ್​ಐಟಿ ನೇಮಿಸಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *