ಯುವಕರು 70 ಗಂಟೆ ಕೆಲಸ ಮಾಡಬೇಕೆಂದ ಇನ್ಫೋಸಿಸ್ ನಾರಾಯಣ ಮೂರ್ತಿ!

ಹೀಗಾದರೆ ಲಾಭ ಗಳಿಸಿ ಕೊಬ್ಬಲಿದ್ದೀರಿ; ದಯವಿಟ್ಟು ಬಾಯಿ ಮುಚ್ಚಿ ಕೂತಿರಿ, ಉದ್ಯೋಗಿಗಳಿಗೆ ವರ್ಕ್‌ ಲೈಫ್‌ ಸಮತೋಲನದ ಅಗತ್ಯವಿದೆ ಎಂದ ಯುವಕರು ಇನ್ಫೋಸಿಸ್

ಬೆಂಗಳೂರು: ಜಾಗತಿಕವಾಗಿ ಸ್ಪರ್ಧಿಸಲು ಯುವ ಭಾರತೀಯರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಅನೇಕ ಉದ್ಯಮಗಳ ಸಿಇಒಗಳು, ಸಂಸ್ಥಾಪಕರು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಅವರ ಹೇಳಿಕೆಯನ್ನು ಬೆಂಬಲಿಸಿದರೆ, ಹೋರಾಟಗಾರರು, ಚಿಂತಕರು ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

ವರ್ಕ್‌ ಲೈಫ್‌ ಸಮತೋಲನ ಮತ್ತು ಉದ್ಯೋಗಿಗಳ ಮಾನಸಿಕ ಆರೋಗ್ಯವನ್ನು ಪರಿಗಣಿಸದೆ ಬೇಕಾಬಿಟ್ಟಿ ಹೇಳಿಕೆ ನೀಡಿದ ಕಾರಣಕ್ಕೆ ಅನೇಕ ಜನರು ಅವರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ರಾಮನಗರ ಜಿಲ್ಲೆ ತೆಗೆಯಲು ಬಂದಾಗ ಮಾತಾಡ್ತೇನೆ | ಡಿಸಿಎಂ ಡಿಕೆಶಿಗೆ ರೇವಣ್ಣ ಸವಾಲು 

“ಕಾರ್ಮಿಕರಿಗೆ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಅಂಬೇಡ್ಕರ್ ಅವರು 1942 ರಲ್ಲಿ 8 ಗಂಟೆಗಳ ಕೆಲಸ ಮಾದರಿಯನ್ನು ಜಾರಿಗೆ ತಂದರು. ಈ ನಿಯಮವೇ ಅಷ್ಟಾಗಿ ಕಾರ್ಯಗತವಾಗಿಲ್ಲ. ಇದೀಗ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳ ಕೆಲಸವನ್ನು ಔಪಚಾರಿಕಗೊಳಿಸಲು ಬಯಸಿದ್ದಾರೆ. ಮುಂದೇನು? ಶುದ್ಧ ಸಸ್ಯಾಹಾರ, ಜಾತಿಯತೆ ಮತ್ತು ಮಹಿಳೆಯರ ಗುಲಾಮಿತನವೆ?” ಎಂದು ಐಐಟಿ ಬಾಂಬೆಯ ಸಮಾಜಶಾಸ್ತ್ರದ ಪ್ರಾಧ್ಯಾಪಕ ಸೂರ್ಯಕಾಂತ್ ವಾಘ್ಮೋರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಓಲಾ ಕ್ಯಾಬ್ಸ್ ಸಹ ಸಂಸ್ಥಾಪಕ ಭವಿಶ್ ಅಗರ್ವಾಲ್ ಸಮರ್ಥಿಸಿಕೊಂಡಿದ್ದಾರೆ. “ಮೂರ್ತಿ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಕಡಿಮೆ ಕೆಲಸ ಮಾಡುವುದು ಮತ್ತು ಮನರಂಜಿಸುವ ಸಂದರ್ಭ ಇದರಲ್ಲ. ಬದಲಿಗೆ ಇತರ ದೇಶಗಳು ಹಲವು ತಲೆಮಾರುಗಳಲ್ಲಿ ನಿರ್ಮಿಸಿದ್ದನ್ನು ನಮ್ಮ 1 ತಲೆಮಾರಿನಲ್ಲಿ ನಿರ್ಮಿಸುವ ಸಂದರ್ಭ ಇದಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರಿಗಳು ನಾಗರಿಕ ಸಮಾಜದ ಪರಿಶೀಲನೆ ಹೆಚ್ಚಿಸಿದ್ದಾರೆಂಬ ಗ್ರಹಿಕೆ ದೇಶದಲ್ಲಿ ಬೆಳೆದಿದೆ: ವರದಿ

ಭವಿಶ್ ಅಗರ್ವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊನ್ನರು, “ಹೌದು, ಹೀಗಾದರೆ ನೀವು ಮತ್ತು ಮೂರ್ತಿಯಂತಹ CEO ಗಳು ದೊಡ್ಡ ಲಾಭ ಗಳಿಸಿ ಕೊಬ್ಬಲಿದ್ದೀರಿ. ವಾರಕ್ಕೆ 70 ಗಂಟೆಗಳೆಂದರೆ 6 ದಿನಗಳ ಕೆಲಸದಲ್ಲಿ ಪ್ರತಿದಿನ 11 ಗಂಟೆ 40 ನಿಮಿಷಗಳಿಗೆ ಬರುತ್ತದೆ. ಅದಕ್ಕೆ ಪ್ರಯಾಣದ ಸಮಯವನ್ನು ಸೇರಿಸಿದರೆ ಇದು ಸುಮಾರು 13.5 ರಿಂದ 14 ಗಂಟೆಗಳವರೆಗೆ ಬರುತ್ತದೆ. ಆದ್ದರಿಂದ ದಯವಿಟ್ಟು ಬಾಯಿ ಮುಚ್ಚಿ. ನಿಮ್ಮ ಉದ್ಯೋಗಿಗಳಿಗೆ ವರ್ಕ್‌ ಲೈಫ್‌ ಸಮತೋಲನದ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಿಐಟಿಯು ಕಾರ್ಮಿಕ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿ, “ಪ್ರಸ್ತುತ ನಮ್ಮ ದೇಶದಲ್ಲಿ ಕೆಲಸವನ್ನು ವಾರಕ್ಕೆ 48 ಗಂಟೆಯಿಂದ ವಾರಕ್ಕೆ 30 ರಿಂದ 35ನ ಗಂಟೆಗಳಿಗೆ ಇಳಿಸುವಂತೆ ಕಾರ್ಮಿಕ ಸಂಘಟನೆಗಳು ಬೇಡಿಕೆ ಸಲ್ಲಿಸುತ್ತಿವೆ. ಆದರೆ ನಾರಾಯಣ ಮೂರ್ತಿಯಂತವರು 70 ಗಂಟೆಗಳ ಕಾಲ ದುಡಿಯುವಂತೆ ಹೇಳಿ ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸೃಷ್ಟಿ ಮಾಡಲು ಹೊರಟಿದ್ದಾರೆ. ನಾರಾಯಣ ಮೂರ್ತಿಯಂತಹ ಬಂಡವಾಳಶಾಹಿಗಳು ಬೇರೆ ಮುಂದುವರೆದ ದೇಶಗಳೊಂದಿಗೆ ಪೈಪೋಟಿಗಾಗಿ ಯುವಕರನ್ನು ಹೆಚ್ಚು ದುಡಿಸಿ ಹೆಚ್ಚು ಲಾಭ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಕಾರ್ಮಿಕರಿಗೆ ಮುಂದುವರಿದ ದೇಶಗಳು ನೀಡುತ್ತಿರುವ ವೇತನ, ಸೌಲಭ್ಯದ ಬಗ್ಗೆ ಮಾತನಾಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾದಂತಹ ದೇಶಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಭಾರತೀಯ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಲು ಬದ್ಧರಾಗಿರಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಕೆಲಸದ ಉತ್ಪಾದಕತೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಮಾಜಿ ಇನ್ಫೋಸಿಸ್ ಸಿಇಒ ಮೋಹನ್‌ದಾಸ್ ಪೈ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು.

ವಿಡಿಯೊ ನೋಡಿ: ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ

Donate Janashakthi Media

Leave a Reply

Your email address will not be published. Required fields are marked *