ಪ್ರೊ.ರಾಜೇಂದ್ರ ಚೆನ್ನಿ
ಜನಪ್ರಿಯ ಕಲ್ಪನೆ ಹಾಗೂ ಕಥನಗಳ ಪ್ರಕಾರ 21ನೇ ಶತಮಾನದಲ್ಲಿ ಮನುಷ್ಯರನ್ನು ಕೊಲ್ಲುವ ಅಸಮಾನತೆಯು ಇರುವುದು ಅಸಾಧ್ಯ. ಅಭಿವೃದ್ಧಿಯಲ್ಲಿ ಏರುಪೇರುಗಳು ಸಹಜವಾಗಿರುವುದರಿಂದ ಹಿಂದುಳಿದ ರಾಷ್ಟ್ರಗಳಲ್ಲಿ ಅರ್ಥ ವ್ಯವಸ್ಥೆಯು ಅಸಮರ್ಪಕವಾಗಿರಬಹುದು, ಆದರೆ ಮನುಷ್ಯರನ್ನು ಕೊಲ್ಲುವ ಅಸಮಾನತೆ ಇದೆಯೆನ್ನುವುದು ಉತ್ಪೇಕ್ಷೆಯಾಗಿದೆ. ಬಂಡವಾಳಶಾಹಿಯು ತನ್ನ ಉದಯದ ಕಾಲದಲ್ಲಿ ಹಾಗೆ ಮಾಡಿರಬಹುದು, ಆದರೆ ಕ್ರಮೇಣವಾಗಿ ತನ್ನ ಬಿಕ್ಕಟ್ಟುಗಳನ್ನು ನಿವಾರಿಸಿಕೊಂಡು ಇಂದು ಪರ್ಯಾಯವಿಲ್ಲದ ಏಕಮಾತ್ರ ವ್ಯವಸ್ಥೆಯಾಗಿದೆಯೆಂದು ಎಲ್ಲಾ ವಲಯಗಳಲ್ಲಿ ಪ್ರಚಾರವು ಭರದಿಂದ ನಡೆಯುತ್ತಲಿದೆ. ಭಾರತೀಯ ಸಮಾಜದ ಹಾಗೂ ಜಗತ್ತಿನ ಭೀಕರ ಅಸಮಾನತೆಗಳನ್ನು ಕಂಡವರಿಗೆ ಇಂಥ ವಾದಗಳು ಯಾವುದೋ ಭ್ರಮಾಲೋಕದ ಸಂಗತಿಗಳಾಗಿ ಕಾಣುತ್ತವೆ.
ಇದನ್ನು ಓದಿ: ಭಾರತೀಯರಿಗೆ; ಜೀವನವೇ ಜಾತಿ, ಜಾತಿಯೇ ಜೀವನ
ಇದು (Inequality Kills) ಆಕ್ಸ್‌ಫಾಮ್ ಪ್ರಕಟಿಸಿದ ಜಾಗತಿಕ ಅಸಮಾನತೆಯ ಬಗೆಗಿನ ಕೃತಿಗೆ ಕೊಟ್ಟಿರುವ ಶೀರ್ಷಿಕೆಯಾಗಿದೆ. 21ನೇ ಶತಮಾನದಲ್ಲಿ ಬಂಡವಾಳಶಾಹಿಯು ಸೃಷ್ಟಿಸಿರುವ ಭೀಕರ ಅಸಮಾನತೆಯ ಬಗ್ಗೆ ಇದಕ್ಕಿಂತ ಸಮರ್ಪಕವಾದ ವ್ಯಾಖ್ಯಾನ ಇರಲಾರದು. ಜನಪ್ರಿಯ ಕಲ್ಪನೆ ಹಾಗೂ ಕಥನಗಳ ಪ್ರಕಾರ 21ನೇ ಶತಮಾನದಲ್ಲಿ ಮನುಷ್ಯರನ್ನು ಕೊಲ್ಲುವ ಅಸಮಾನತೆಯು ಇರುವುದು ಅಸಾಧ್ಯ. ಅಭಿವೃದ್ಧಿಯಲ್ಲಿ ಏರುಪೇರುಗಳು ಸಹಜವಾಗಿರುವುದರಿಂದ ಹಿಂದುಳಿದ ರಾಷ್ಟ್ರಗಳಲ್ಲಿ ಅರ್ಥವ್ಯವಸ್ಥೆಯು ಅಸಮರ್ಪಕವಾಗಿರಬಹುದು, ಆದರೆ ಮನುಷ್ಯರನ್ನು ಕೊಲ್ಲುವ ಅಸಮಾನತೆ ಇದೆಯೆನ್ನುವುದು ಉತ್ಪ್ರೇಕ್ಷೆಯಾಗಿದೆ. ಬಂಡವಾಳಶಾಹಿಯು ತನ್ನ ಉದಯದ ಕಾಲದಲ್ಲಿ ಹಾಗೆ ಮಾಡಿರಬಹುದು. ಆದರೆ ಕ್ರಮೇಣವಾಗಿ ತನ್ನ ಬಿಕ್ಕಟ್ಟುಗಳನ್ನು ನಿವಾರಿಸಿಕೊಂಡು ಇಂದು ಪರ್ಯಾಯವಿಲ್ಲದ ಏಕಮಾತ್ರ ವ್ಯವಸ್ಥೆಯಾಗಿದೆಯೆಂದು ಎಲ್ಲಾ ವಲಯಗಳಲ್ಲಿ ಪ್ರಚಾರವು ಭರದಿಂದ ನಡೆಯುತ್ತಲಿದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಫೂಕೋಯಾಮಾ ಅವರ ʻ The End of Historyʼ ಕೃತಿಯು ಇಂಥ ವಾದವನ್ನು ಮಂಡಿಸುತ್ತದೆ. ರಾಜಕೀಯವಾಗಿ ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆರ್ಥಿಕವಾಗಿ ಇಂದಿನ ಸ್ವರೂಪದ ಬಂಡವಾಳಶಾಹಿ ವ್ಯವಸ್ಥೆ ಇವುಗಳು ಮಾನವ ನಾಗರೀಕತೆ ಹಾಗೂ ಸಮಾಜಗಳು ತಲುಪಿರುವ ಅಂತಿಮ ಸ್ಥಿತಿಗಳು. ಅಂದರೆ ಚರಿತ್ರೆಯಲ್ಲಿ ನಡೆದ ಎಲ್ಲಾ ಪರಿವರ್ತನೆಗಳು ಈಗ ಈ ಅಂತಿಮ ಸ್ಥಿತಿಯಲ್ಲಿ ಮುಕ್ತಾಯ ಕಂಡಿವೆ. ಹೀಗಾಗಿ ಇನ್ನು ಚರಿತ್ರೆಯು ಹುಡುಕಬೇಕಾದ ಇನ್ನೊಂದು ಪರ್ಯಾಯ ವ್ಯವಸ್ಥೆ ಬೇಕಿಲ್ಲ.
ಇದನ್ನು ಓದಿ: ಬಂಡವಾಳಶಾಹಿ ವ್ಯವಸ್ಥೆಯ ಇಬ್ಬಂದಿತನ ಮತ್ತು ಅಮಾನವೀಯತೆ
ಇಂಥ ವಾದವನ್ನು ಮಂಡಿಸುವ ಅನೇಕ ಕೃತಿಗಳು ಬಂದಿವೆ. ಈ ಹಿಂದೆ ಜಾಗತೀಕರಣವನ್ನು ಸಮರ್ಥಿಸಿ ಬರೆದ ʻThe World is Flatʼ ಎನ್ನುವ ಕೃತಿಯು ಇದೇ ಕೆಲಸವನ್ನು ಮಾಡಿತ್ತು. ಅಂದರೆ ಚರಿತ್ರೆಯಲ್ಲಿ ಕಂಡಂಥ ಅಸಮಾನತೆಗಳು ಜಾಗತೀಕರಣ, ಮುಕ್ತ ಮಾರುಕಟ್ಟೆಗಳಿಂದಾಗಿ ಈಗ ಇಲ್ಲವಾಗಿ ‘ನೆಲ ಸಪಾಟಾಗಿದೆ’. ಅಥವಾ ಇಂಥ ಬರಹಗಾರರು ಹೇಳುವಂತೆ ಈ ಮುಕ್ತ ಆರ್ಥಿಕತೆಯಲ್ಲಿ ಎಲ್ಲರಿಗೂ Level playing field ಲಭ್ಯವಿದೆ. ಯಾರು ಬೇಕಾದರೂ ಪಂದ್ಯದಲ್ಲಿ ಭಾಗವಹಿಸಬಹುದು. ಸ್ವಲ್ಪ ವಿಷಯಾಂತರ ಮಾಡಿ ನೋಡಿದರೆ ಮೀಸಲಾತಿ ಬೇಡ ಎನ್ನುವವರದೂ ಇದೇ ಮಾದರಿಯ ವಾದವಾಗಿದೆ. ಒಂದು ಕಾಲದಲ್ಲಿ ಜಾತಿ ಅಸಮಾನತೆ, ಅಸ್ಪೃಶ್ಯತೆ ಇದ್ದಿದ್ದರಿಂದ ಅಸಮಾನತೆ ಇತ್ತು. ಅದನ್ನು ಸರಿಪಡಿಸಲು ಒಂದು ಕಾಲದಲ್ಲಿ ಮೀಸಲಾತಿ ಬೇಕಿತ್ತು. ಆದರೆ ಇಂದಿನ ಆಧುನಿಕ, ಜಾಗತೀಕರಣದ ಯುಗದಲ್ಲಿ ಈ ಹಳೆಯ ಯಾವುದೇ ಪಳೆಯುಳಿಕೆಗಳಿಲ್ಲ. ಈಗ ಮೆರಿಟ್ ಇರುವ ಯಾರಾದರೂ ಸ್ಪರ್ಧೆಗೆ ಇಳಿಯಬಹುದು. ನೆಲ ಸಪಾಟಾಗಿದೆ. ಆಟದ ಬಯಲು ಏರು, ದಿನ್ನೆ, ತಗ್ಗುಗಳಿಲ್ಲದೆ ಸಪಾಟಾಗಿದೆ. ಆದ್ದರಿಂದ ಮೀಸಲಾತಿಯು ಮೆರಿಟ್ ವಿರುದ್ಧ ಒಂದು ಷಡ್ಯಂತ್ರವಾಗಿದೆ.
ಭಾರತೀಯ ಸಮಾಜದ ಹಾಗೂ ಜಗತ್ತಿನ ಭೀಕರ ಅಸಮಾನತೆಗಳನ್ನು ಕಂಡವರಿಗೆ ಇಂಥ ವಾದಗಳು ಯಾವುದೋ ಭ್ರಮಾಲೋಕದ ಸಂಗತಿಗಳಾಗಿ ಕಾಣುತ್ತವೆ. ಜಾತಿ ವ್ಯವಸ್ಥೆಯು ಅತ್ಯಂತ ಪ್ರಬಲವಾಗುತ್ತಿದೆ. ವಿಶೇಷವಾಗಿ ಶಿಕ್ಷಿತ ಮುಂಚೂಣಿ ವರ್ಗಗಳಲ್ಲಿ, ಅಮೇರಿಕದಂಥ ದೇಶದಲ್ಲಿರುವ ಅನಿವಾಸಿ ಭಾರತೀಯರಲ್ಲಿ, ಜಾತಿ ಕೇಂದ್ರಿತ ತಾರತಮ್ಯ ಇರಕೂಡದು ಎನ್ನುವ ಕಾನೂನು, ಕ್ರಮಗಳನ್ನು ಅಮೇರಿಕದ ಕೆಲವು ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿರುವುದು ಈ ಅನಿವಾಸಿ ಭಾರತೀಯರಿಗೆ ಅಪಾಯಕಾರಿಯಾಗಿ ಕಂಡಿದೆ. ಅನೇಕ ದಶಕಗಳಿಂದ ಅಲ್ಲಿ ವಾಸಿಸುತ್ತಿರುವ, ಅಮೇರಿಕದ ನಾಗರೀಕತ್ವ ಪಡೆದುಕೊಂಡಿರುವ ಮೇಲ್ಜಾತಿ ಭಾರತೀಯರು ಇವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಬೋಧಿಸಲಾಗುತ್ತಿದ್ದ ಪಠ್ಯಪುಸ್ತಕಗಳಿಂದ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಇವುಗಳ ಪ್ರಸ್ತಾಪವನ್ನು ಕೈಬಿಡುವಂತೆ ಒತ್ತಡ ತಂದು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಅಮೇರಿಕದ ಒಂದು ಸಂಸ್ಥೆಯಲ್ಲಿ ಜಾತಿ ಕೇಂದ್ರಿತ ತಾರತಮ್ಯವಿದೆ ಎಂದು ಸಾಬೀತು ಆದಾಗ ಈ ವರ್ಗವು ಒಪ್ಪಲಿಲ್ಲ. ಇಂಥ ವರ್ಗಗಳು ಪ್ರತಿಪಾದಿಸುವ, ನಂಬುವ ವಾದವೆಂದರೆ ಇಂದಿನ ಯುಗ ತಾರತಮ್ಯಗಳಿಲ್ಲದ, ಜಾತಿ, ವರ್ಗಗಳಿಲ್ಲದ ಸಮಾನ ಅವಕಾಶಗಳಿರುವ ಅಧುನಿಕ ಯುಗ. ಇಲ್ಲಿ ಅಸಮಾನತೆಗಳಿಲ್ಲ.
ವಸ್ತುಸ್ಥಿತಿಯೆಂದರೆ ಭಾರತದಲ್ಲಿ ನವ-ಅಸ್ಪೃಶ್ಯತೆ ದಿನದಿನಕ್ಕೂ ಕ್ರೂರವಾಗುತ್ತಿದೆ, ಹಿಂಸಾಪರವಾಗುತ್ತಿದೆ. ಪ್ರತಿ ದಿನವೂ ದಲಿತ ಮಕ್ಕಳು, ಯುವತಿಯರ ಮೇಲೆ ಅತ್ಯಾಚಾರ, ದೈಹಿಕ ಹಿಂಸೆ ಹಾಗೂ lynching ಗಳು ಹೆಚ್ಚಾಗುತ್ತಿವೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ತಾರತಮ್ಯದಿಂದಾಗಿ ಪ್ರತಿಭಾವಂತ ದಲಿತ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಂದಿರುವ ಆಕ್ಸ್‌ಫಾಮ್ ವರದಿಯ ಪ್ರಕಾರ ಭಾರತದ ಶೇಕಡಾ 1% ರಷ್ಟು ಶ್ರೀಮಂತರು ಇಡೀ ದೇಶದ ಆಸ್ತಿಯಲ್ಲಿ 37% ಒಡೆತನ ಹೊಂದಿದ್ದಾರೆ. ಕೆಳಗಿನ ಶೇಕಡಾ 50% ರಷ್ಟು ಜನರು ಕೇವಲ 3% ದೇಶದ ಆಸ್ತಿಯ ಒಡೆತನ ಹೊಂದಿದ್ದಾರೆ. ನಿರಂತರ ಹಸಿವು, ಬಡತನಗಳು ಅಪೌಷ್ಟಿಕತೆಯಿಂದಾಗಿ ಭಾರತದ ಅನೇಕ ಮಿಲಿಯನ್ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಶಿಶುಮರಣ ಗಾಬರಿ ಹುಟ್ಟಿಸುತ್ತದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳನ್ನು ಬಿಟ್ಟರೆ ಭಾರತವು ಅತ್ಯಂತ ದರಿದ್ರ ಸ್ಥಾನದಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಮಾಧ್ಯಮಗಳು ಜಿ.ಡಿ.ಪಿ. ಅಂಕಿಸಂಖ್ಯೆಗಳನ್ನು ಸಂಭ್ರಮಿಸುತ್ತಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಐಜಾಜ್ ಅಹಮದ್ ಅವರು ಹೇಳಿದಂತೆ ಬಂಡವಾಳದ ಆಂತರಿಕ ತರ್ಕವೆಂದರೆ ವಿಸ್ತರಣೆ ಹಾಗೂ ಅಸಮಾನತೆಯ ಸೃಷ್ಟಿ. ಇಂದು ಅಗೋಚರವಾಗಿ ಇರುವ ಅಂತರ್‌ರಾಷ್ಟ್ರೀಯ ಬಂಡವಾಳಶಾಹಿಯು ಭೀಕರವಾದ ಅಸಮಾನತೆಯನ್ನು ಹುಟ್ಟು ಹಾಕಿದೆ. ಇಂಥ ವ್ಯವಸ್ಥೆಯನ್ನು ಉಳಿಸಿಕೊಂಡಿರಲು ಪ್ರಜಾಪ್ರಭುತ್ವವನ್ನು ನಾಶಮಾಡಿ ಬಲಪಂಥೀಯ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಗಳು ಜಗತ್ತಿನಲ್ಲಿ ಪ್ರಬಲವಾಗುತ್ತಿವೆ. ಈ ಪ್ರಭುತ್ವಗಳ ಗುರಿಯೆಂದರೆ ವಿಮರ್ಶೆ, ಪ್ರತಿರೋಧ, ವಿರೋಧ ಇವುಗಳು ಇಲ್ಲದೆ ಇರುವ ಸ್ಥಿತಿಯನ್ನು ನಿರ್ಮಿಸುವುದು. ಅಂದರೆ ಬಂಡವಾಳಕ್ಕಾಗಿ ʻʻಸಪಾಟಾದ ನೆಲವನ್ನುʼʼ ತಯ್ಯಾರು ಮಾಡುವುದು. ವಿಶೇಷವೆಂದರೆ ಈ ಸಪಾಟಾದ ನೆಲದಲ್ಲಿ ಏಕಮಾತ್ರ ಸ್ಪರ್ಧಿ, ಅದು ಬಂಡವಾಳಶಾಹಿ.
ಈ ಕೃತಿಯನ್ನು ಈ ಕೆಳಗಿನ ವೆಬ್ ಕೊಂಡಿಯಿಂದ ಡೌನ್ ಲೋಡ್ ಮಾಡಬಹುದು.