ಬೆಂಗಳೂರು: ಇಂದು ಕೇಂದ್ರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ಗೆ ಕರ್ನಾಟಕದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ರೈತ ಮತ್ತು ಕನ್ನಡಪರ ಸಂಘಟನೆಗಳು ಸೇರಿದಂತೆ ಇತರೆ ಸಂಘಟನೆಗಳು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದವು. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಇನ್ನೂ ಮೊದಲಾದವರ ನೇತೃತ್ವದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದವು. ಬೆಳಗ್ಗೆಯಿಂದ ಶುರುವಾದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಮುಕ್ತಾಯದ ಹಂತಕ್ಕೆ ಬಂದಿತ್ತು. ಇಂದಿನ ರೈತರ ಪ್ರತಿಭಟನೆ ಮುಕ್ತಾಯವಾಗಿದ್ದು, ನಾಳೆ ವಿಧಾನಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ.
ಈ ಕುರಿತು ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ಇಂದು ರೈತರ ಪ್ರತಿಭಟನೆ ಅಂತ್ಯವಾಗಿದೆ. ಆದರೆ ನಾಳೆಯೂ ಅನ್ನದಾತರ ಧರಣಿ ಇರುತ್ತದೆ. ರೈತರು ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇಂದು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾಳೆ ವಿಧಾನಸೌಧ ಬಾರ್ ಕೋಲ್ ಚಳುವಳಿ ಇರುತ್ತದೆ ಎಂದು ಹೇಳಿದರು.
ಇನ್ನು, ಬೆಳಗ್ಗೆಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯೂ ಮುಕ್ತಾಯವಾಗಿದೆ. ಕುರುಬೂರು ಶಾಂತಕುಮಾರ್ ಹಾಗೂ ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿ ಹೊರಟರು. ಬಳಿಕ ಪೊಲೀಸರು ಬ್ಯಾರಿಕೇಡ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬ್ಯಾರಿಕೇಡ್ ತೆರವುಗೊಳಿಸಲಾಯಿತು. ಬೆಳಗ್ಗೆಯಿಂದ ಸುಮಾರು 7 ತಾಸುಗಳಿಂದ ಬ್ಲಾಕ್ ಆಗಿದ್ದ ರಸ್ತೆ ಈ ಸಂಚಾರಕ್ಕೆ ಓಪನ್ ಆಗಿದೆ.
ಮತ್ತೋರ್ವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರತಿಕ್ರೀಯೆ ನೀಡುತ್ತಾ, ಇಂದು ನಮ್ಮ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಸರ್ಕಾರ ಮಣಿದಿಲ್ಲ ಎಂದರೆ ಇದಕ್ಕಿಂತ ಉಗ್ರ ರೂಪದ ಹೋರಾಟ ನಡೆಸಲಿದ್ದೇವೆ. ಜೈಲ್ ಬರೋ ಚಳುವಳಿ, ಅಹೋರಾತ್ರಿ ಧರಣಿ ಮುಂತಾದ ಮಾದರಿಯ ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ನಮ್ಮ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮೋದಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಲಿ. ಇಲ್ಲದೆ ಹೋದರೆ ರೈತರ ಮತ್ತೊಂದು ಮುಖ ನೋಡಬೇಕಾಗುತ್ತೆ ಎಂದು ಹೇಳಿದರು.
ಇಂದು ಬೆಳಗ್ಗೆಯಿಂದ ವಿವಿಧ ರೈತ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು. ಒಂದೆಡೆ ನಗರದ ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ರೈತರ ಮೆರವಣಿಗೆ ಹೊರಡಲಾಯಿತು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಈ ರೈತರ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಭಾಗಿಯಾಗಿದ್ದರು. ಇನ್ನೊಂದೆಡೆ ವಾಟಾಳ್ ನಾಗರಾಜ್ ಹಾಗೂ ಇತರೆ ರೈತ ಸಂಘಟನೆಗಳು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.