ಬೆಂಗಳೂರು: ನಟ ಪುನೀತ್ ರಾಜಕುಮಾರ್ ಪುತ್ರಿ ಧೃತಿ ಇಂದು ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಅಂತ್ಯಕ್ರಿಯೆ ಕುರಿತು ವಿವರ ನೀಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಡಾ.ರಾಜ್‌ಕುಮಾರ್ ಸಮಾಧಿ ಪಕ್ಕ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಇದೆ. ಅಮ್ಮನವರ ಸಮಾಧಿ ಪಕ್ಕ 55 ಅಡಿ ಬಿಟ್ಟು ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.
ಇದನ್ನು ಓದಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿಧನ
ಪುನೀತ್ ಪುತ್ರಿ ಧೃತಿ ಮಧ್ಯಾಹ್ನ ದೆಹಲಿ ತಲುಪುತ್ತಾರೆ. ಅವರನ್ನು ಸಂಜೆ 5ರೊಳಗೆ ಬೆಂಗಳೂರಿಗೆ ಕರೆತರಲಾಗುವುದು. ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ಬರುತ್ತಾರೆ ಎಂದು ಹೇಳಿದರು.
ನೆನ್ನೆ ಅಮೆರಿಕಾದ ನ್ಯೂಯಾರ್ಕ್‌ನಿಂದ ಹೊರಟಿರುವ ಧೃತಿ ಮಧ್ಯಾಹ್ನ 12.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪುವ ಸಾಧ್ಯತೆಯಿದೆ. ಅಲ್ಲಿಂದ ಅವರು ಬೆಂಗಳೂರು ತಲುಪುತ್ತಾರೆ. ಒಂದು ವೇಳೆ ದೆಹಲಿಯಲ್ಲಿ ವಿಳಂಬವಾರೆ ರಾಜ್ಯ ಸರ್ಕಾರ ವಿಶೇಷ ವಿಮಾನದಿಂದ ಕರೆತರಲು ವ್ಯವಸ್ಥೆ ಮಾಡಿದೆ.
ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಸ್ಪಂದನೆಯನ್ನು ನೀಡಿದೆ. ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋದಲ್ಲಿ ಸ್ಥಳಾವಕಾಶ ಒದಗಿಸಿದ್ದಾರೆ. ವೀಸಾ ತೊಂದರೆಯಾದಾಗ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಿದ್ದಾರೆ ಎಂದು ರಾಕ್‌ಲೈನ್ ವಿವರಿಸಿದರು.
ಸ್ಥಳ ಪರಿಶೀಲನೆ:
ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಎಲ್ಲ ಅಂತಿಮ ಸಿದ್ದತೆಗಳು ನಡೆಯುತ್ತಿವೆ. ಶುಕ್ರವಾರವೇ ಸ್ಥಳ ನಿಗದಿಪಡಿಸಿದ್ದು, ಬಿಬಿಎಂಪಿ ಅಧಿಕಾರಿ ಮತ್ತು ಸಿಬ್ಬಂದಿ ಇಡೀ ರಾತ್ರಿ ಎಲ್ಲ ಸಿದ್ದತೆಗಳನ್ನು ಮಾಡಿದ್ದಾರೆ. ಸಚಿವ ಕೆ. ಗೋಪಾಲಯ್ಯ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಂತಿಮ ವಿಧಿವಿಧಾನ ನಡೆಯುವ ಸ್ಥಳದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.
ಚಿತ್ರ ಪರದೆಗಳ ಮೂಲಕ ವೀಕ್ಷಣೆಗೆ ಅವಕಾಶ
ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಜನರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ವೀಕ್ಷಿಸಲು ದೊಡ್ಡ ಪರದೆಗಳನ್ನು ಅಳವಡಿಸಿ ದೃಶ್ಯಾವಳಿಯನ್ನು ಬಿತ್ತರಿಸಲಾಗುವುದು.
ಇದನ್ನು ಓದಿ: ʻಬೆಟ್ಟದ ಹೂವುʼ ನಂತೆಯೇ ಯಾರೂ ಎಟುಕಲಾರದ ಸ್ಥಾನಕ್ಕೇರಿದ ʻಯುವರತ್ನʼ
ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಚಿತ್ರರಂಗ ಮತ್ತು ರಾಜಕೀಯ ಪ್ರಮುಖರಿಗೆ ಮಾತ್ರ ಅವಕಾಶ ಇದೆ. ಇಲ್ಲಿ ಸ್ಥಳಾವಕಾಶ ಚಿಕ್ಕದಾಗಿ ಇರುವುದರಿಂದ ಹೆಚ್ಚಿನ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೆರವಣಿಗೆಗೆ ನಿಗದಿತ ಮಾರ್ಗದಲ್ಲಿ ವ್ಯವಸ್ಥೆ
ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.
ಮಧ್ಯಾಹ್ನ 3ಕ್ಕೆ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆ ಹೊರಡಲಿದ್ದು, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಆರ್.ಎಂ.ಸಿ. ಯಾರ್ಡ್, ಗೊರಗುಂಟೆ ಪಾಳ್ಯ, ರಿಂಗ್ ರಸ್ತೆ ಮೂಲಕ ಕಂಠೀರವ ಸ್ಟುಡಿಯೋ ತಲುಪುತ್ತದೆ. ಈ ಮಾರ್ಗ ಮಧ್ಯದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದಾರೆ.