- 5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ
- ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಸಂಚಾರ
ಬೆಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ 5 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಇಂದಿನಿಂದ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಬೈಯಪ್ಪನಹಳ್ಳಿ ನಿಲ್ದಾಣದಿಂದ ಮೊದಲ ರೈಲು ಸಂಚಾರ ಆರಂಭವಾಗಿದ್ದು, ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮಾತ್ರ ಇಂದು ರೈಲು ಸಂಚಾರ ನಡೆಸಿದೆ. ಟೋಕನ್ ವ್ಯವಸ್ಥೆ ಸದ್ಯ ಸ್ಥಗಿತ ಗೊಳಿಸಿದ್ದು, ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬಹುದು. ಬೆಳಗ್ಗೆ 8 ರಿಂದ 11ರ ತನಕ ಮತ್ತು ಸಂಜೆ 4.30ರಿಂದ 7.30ರ ತನಕ ಮಾತ್ರ ಮೆಟ್ರೋ ರೈಲು ಸಂಚಾರ ನಡೆಸಲಿದೆ. 5 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಮೆಟ್ರೋ ನಿಲ್ದಾಣಗಳಲ್ಲಿ 50 ಜನರು ಮಾತ್ರ ಇರಲು ಅವಕಾಶ ನೀಡಲಾಗಿದೆ. ನಮ್ಮ ಮೆಟ್ರೋ ನಿಲ್ದಾಣದ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಥರ್ಮಲ್ ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಮೆಟ್ರೋ ಸೇವೆ ಬಳಸಬಹುದು ಎಂದು ಬಿಎಂಆರ್‌ಸಿಎಲ್ ಹೇಳಿದೆ.