ಇಂದಿನಿಂದ ‘ಕನ್ನಡ ಕಾಯಕ ವರ್ಷ’ ಆಚರಣೆ: ಸಿಎಂ ಯಡಿಯೂರಪ್ಪ

  • ತಂತ್ರಜ್ಞಾನ ಯುಗದಲ್ಲಿ ಕನ್ನಡದ ಬಳಕೆ ಮತ್ತು ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ  ಒಂದು ವರ್ಷ ರಚನಾತ್ಮಕ ಕಾರ್ಯಕ್ರಮ  

ಬೆಂಗಳೂರು : ಕನ್ನಡ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಗುರಿಯೊಂದಿಗೆ ಭಾನುವಾರದಿಂದ ಆರಂಭವಾಗಿ 2021ರ ಅಕ್ಟೋಬರ್‌ 31ರವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ತಂತ್ರಜ್ಞಾನ ಯುಗದಲ್ಲಿ ಕನ್ನಡದ ಬಳಕೆ ಮತ್ತು ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ಕನ್ನಡ ಕಾಯಕ ವರ್ಷ’ದ ಅಂಗವಾಗಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಯೋಜನೆಯ ಸ್ವರೂಪವನ್ನು ಪ್ರಕಟಿಸಿ, ಅನುಷ್ಠಾನಕ್ಕೆ ತರಲಾಗುವುದು. ಕನ್ನಡದ ಮೇಲಿನ ಪ್ರೀತಿ ನವೆಂಬರ್‌ ತಿಂಗಳಿಗೆ ಸೀಮಿತ ಆಗಬಾರದು. ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸುವ ದಿಸೆಯಲ್ಲಿ ಒಂದು ಸ್ಪಷ್ಟವಾದ ಕಾರ್ಯಸೂಚಿ ಹೊಂದುವುದು ಬಹಳ ಮುಖ್ಯ ಎಂದು ಹೇಳಿದರು.

ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಕ ಶಿಕ್ಷಣ ನೀಡುವುದಕ್ಕೆ ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಮತ್ತಷ್ಟು ಬಲ ದೊರಕುವ ವಿಶ್ವಾಸವಿದೆ ಎಂದರು.

‘ನಾಡು, ನುಡಿ, ಜಲದ ವಿಷಯದಲ್ಲಿ ಭಾವೋದ್ವೇಗ, ಭಾವನಾತ್ಮಕತೆ ಮತ್ತು ತಾಯ್ನಾಡಿನ ಮೇಲೆ ಅಪರಿಮಿತ ಪ್ರೀತಿ ಎಲ್ಲವೂ ಮುಖ್ಯ. ಆದರೆ, ಅವೆಲ್ಲವೂ ಆಚರಣೆಯಲ್ಲೇ ನೀರಿನಂತೆ ವ್ಯರ್ಥವಾಗಿ ಹರಿದು ಹೋಗಬಾರದು. ತಂತ್ರಜ್ಞಾನ ನಮ್ಮ ಬದುಕನ್ನು ಆವರಿಸಿಕೊಂಡಿದೆ. ನಮ್ಮ ಭಾಷೆ, ಸಂಸ್ಕೃತಿಯ ಮೇಲೂ ಅದು ಪ್ರಭಾವ ಬೀರುತ್ತಿದೆ. ಶರ ವೇಗದಲ್ಲಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಭಾಷೆಯನ್ನೂ ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

ಕರ್ನಾಟಕ ಏಕೀಕರಣಗೊಂಡು 64 ವರ್ಷಗಳು ಕಳೆದಿವೆ. 2,000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಭಾಷೆ ಕನ್ನಡ. ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತು ಹೊಂದಿರುವ ಭಾಷೆಯೂ ಹೌದು. ಸಹಸ್ರಾರು ಜನರ ಹೋರಾಟ, ತ್ಯಾಗದ ಫಲವಾಗಿ ‘ಅಖಂಡ ಕರ್ನಾಟಕ’ ದೊರಕಿದೆ. ರಾಜ್ಯವನ್ನು ಸಮಗ್ರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವ ದಿಸೆಯಲ್ಲಿ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಡುವೆಯೇ ಕೊರೊನಾ ಸೋಂಕು ಮತ್ತು ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲ ಅಡತಡೆಗಳನ್ನು ಮೀರಿ ಮುನ್ನಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ.  ಶೀಘ್ರದಲ್ಲಿ ಎಲ್ಲ ಸಮಸ್ಯೆಗಳಿಂದ ಹೊರಬರುವ ನಿರೀಕ್ಷೆ ಇದೆ ಎಂದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್‌ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು. 100 ಜನರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *