ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಿರುವ ಜಂಬೂ ಸವಾರಿಗೆ ಮೈಸೂರು ಅರಮನೆ ಆವರಣದಲ್ಲಿರುವ ಗಜಪಡೆಗೆ ಇಂದಿನಿಂದ ತಾಲೀಮು ಶುರುವಾಗಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಯಲಿದೆ.
ಮೈಸೂರು ಅರಮನೆಯಿಂದ ಬನ್ನಿಮಂಟಪದ ತನಕ ನಾಲ್ಕೂವರೆ ಕಿಲೋಮೀಟರ್ ಸಾಗುವ ಆನೆಗಳು ಮತ್ತೆ ಅರಮನೆಗೆ ತಲುಪಲಿದೆ. ಮೈಸೂರಿನ ರಾಜ ಬೀದಿಗಳಾದ ಮೈಸೂರು ಅರಮನೆಯಿಂದ ಆರಂಭವಾಗಿ ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್.ವೃತ್ತ, ಬಂಬೂ ಬಜಾರ್, ಹೈವೆ ವೃತ್ತ ಮೂಲಕ ಬನ್ನಿಮಂಟಪಕ್ಕೆ ಸಾಗಿ ವಾಪಸ್ಸು ಮತ್ತೆ ಮೈಸೂರು ಅರಮನೆಯ ಆನೆ ಶಿಬಿರ ಸೇರಿತು.
ಮಾವುತರೊಂದಿಗೆ ಸಾಲು ಸಾಲಾಗಿ ಸಾಗಿದ ಆನೆಗಳ ನೋಟ ಜನರ ಆಕರ್ಷಣೆಗೆ ಒಳಗಾಗಿತ್ತು. ಆನೆಗಳು ಸಾಗುವ ದೃಶ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕುತೂಹಲದಿಂದ ವೀಕ್ಷಿಸಿದರು.
ಅರಣ್ಯ ಅಧಿಕಾರಿ ಕರಿಕಾಳನ್ ಮಾತನಾಡಿ, ದಸರಾ ಮಹೋತ್ಸವಕ್ಕಾಗಿ ಆನೆಗಳಿಗೆ ಇಂದಿನಿಂದ ತಾಲೀಮು ಆರಂಭಿಸಲಾಗಿದೆ. ಆನೆಗಳಿಗೆ ತೂಕ ಮಾಡಿಸಲಾಗಿದೆ. ಎಲ್ಲಾ ಆನೆಗಳು ಅರೋಗ್ಯವಾಗಿದೆ. ಒಂದು ವಿಶೇಷವೆನೆಂದರೇ ನಗರದ ವಾತಾವರಣಕ್ಕೆ ಆನೆಗಳು ಹೊಂದಿಕೊಂಡಿದೆ. ಒಂದು ವಾರದ ನಂತರ ಭಾರ ಹೊರುವ ತಾಲೀಮು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಶುರುವಾಗಲಿದೆ. ಮೊದಲ ವಾರ ಆನೆಗಳಿಗೆ ತಾವು ಸಾಗಬೇಕಾದ ಹಾದಿಯ ಪರಿಚಯ ಮಾಡಿಸುವ ಕೆಲಸ ನಡೆಯುತ್ತದೆ. ನಂತರ ಹಂತ ಹಂತವಾಗಿ ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಲಾಗುತ್ತದೆ.
57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, 63 ವರ್ಷದ ಅರ್ಜುನ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ 18 ವರ್ಷದ ಪಾರ್ಥಸಾರಥಿ ಆನೆಗಳ ಆಗಮನವಾಗಿದೆ.
ಎರಡು ವರ್ಷ ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ದಸರಾ ನಡೆಯದ ಕಾರಣ. ಈ ಬಾರಿ ಒಂದು ವಾರ ಕಾಲ ಕೇವಲ ಹಾದಿ ಪರಿಚಿಯಿಸುವ ತಾಲೀಮು ನಡೆಸಲಾಗುತ್ತಿದೆ.