ಇಂದಿನ ಶಿಕ್ಷಣ ವ್ಯವಸ್ಥೆ ಮಠದ ಪ್ರವಚನದಂತಿದೆ: ಪ್ರೊ. ಎಂ. ಚಂದ್ರಪೂಜಾರಿ

ಮಂಗಳೂರು: ಜಾತಿ ಧರ್ಮ ಹಾಗೂ ಲಿಂಗ ಭೇದವಿಲ್ಲದೆ ವಿದ್ಯಾರ್ಥಿಗಳ ಐಕ್ಯತೆಗಾಗಿ, ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಎಸ್‌ಎಫ್‌ಐ ನಡೆಸುತ್ತಿರುವ ಈ ಅಧ್ಯಯನ ಶಿಬಿರ ಉದ್ಘಾಟನೆ ಮಾಡಲು ಖುಷಿಯಾಗುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯೂ ಮಠದ ಪ್ರವಚನದಂದೆ ಆಗಿದ್ದು ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವ ಕಳೆದುಕೊಂಡಿದ್ದಾರೆ ಎಂದು ಪ್ರೊ. ಎಂ. ಚಂದ್ರ ಪೂಜಾರಿ ಅವರು ಹೇಳಿದರು.

ಇಂದು (ಜುಲೈ 16)  “ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ವಿದ್ಯಾರ್ಥಿಗಳ ಐಕ್ಯತೆಗಾಗಿ” ನಡೆದ ಭಾರತ ವಿದ್ಯಾರ್ಥಿ ಫೆಡರೇಶನ್‌ನ (ಎಸ್‌ಎಫ್‌ಐ) ಜಿಲ್ಲಾ ಮಟ್ಟದ ವಿದ್ಯಾರ್ಥಿ ಶಿಬಿರವನ್ನು ಉದ್ಘಾಟಿಸಿ ಪ್ರೊ.ಚಂದ್ರ ಪೂಜಾರಿ ಮಾತಾನಾಡಿದರು.

ಆಧ್ಯಯನ ಶಿಬಿರದ ಉದ್ಘಾಟನೆ ಮಾಡಿದ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು, ನಾಡಿನ ಚಿಂತಕ ಪ್ರೊ. ಎಂ. ಚಂದ್ರ ಪೂಜಾರಿ ಅವರು, ಪಠ್ಯ ಕೊಡುವ ಸಮಾಜಕ್ಕೂ ಮತ್ತು ನಿಜ ಜೀವನದ ಸಮಾಜಕ್ಕೂ ತುಂಬಾ ಅಂತರವಿದೆ. ಸ್ಥಳೀಯ ಆಚಾರ-ವಿಚಾರ-ಸಂಸ್ಕೃತಿಯ ಬಗ್ಗೆ ಎಲ್ಲೂ ಪಠ್ಯದಲ್ಲಿ ಹೇಳಿರುವುದಿಲ್ಲ. ಭಾರತದ ಶಿಕ್ಷಣದಲ್ಲಿಯೂ ಸಮಾನತೆ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇರುವ ಗುಣಮಟ್ಟದ ಶಿಕ್ಷಣವು ಸರಕಾರಿ ಶಾಲೆಗಳಲ್ಲಿ ಲಭಿಸುತ್ತಿಲ್ಲ. ಇನ್ನುಳಿದಂತೆ ಖಾಸಗಿ ಕಾಲೇಜುಗಳ ಸ್ಥಿತಿ ಬೇರೆಯೇ ಇದೆ ಎಂದರು.

ಸಮಾಜದಲ್ಲಿನ ಬಲಾಢ್ಯರ ಸಂಸ್ಕೃತಿಯನ್ನು ಎಲ್ಲರ ಮೇಲೆ ಹೇರಲಾಗುತ್ತಿದೆ. ಶಿಕ್ಷಣ ನಾಯಕತ್ವವನ್ನು ಹುಟ್ಟು ಹಾಕುವುದರ ಬದಲಾಗಿ ಕಾರ್ಮಿಕರನ್ನು ಹುಟ್ಟಿ ಹಾಕುತ್ತಿದೆ. ಬಹು ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ ನಮ್ಮದು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಘೋಷಣೆಗಳನ್ನು ದೇಶಾದ್ಯಂತ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಎತ್ತಿ ಹಿಡಿಯುತ್ತಿದೆ. ಅಂತಹ ಸಂಘಟನೆಗೆ ನೀವು ಸೇರಬೇಕು ಎಂದು  ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಾರತಕ್ಕೆ ನೈಜ ನಾಯಕತ್ವದ ಕೊರತೆಯಿದ್ದು, ವಿದ್ಯಾರ್ಥಿ ಚಳುವಳಿ ನೈಜ ನಾಯಕತ್ವವನ್ನು ಬೆಳೆಸಬೇಕಿದೆ. ನಾಯಕತ್ವ ಗುಣಗಳನ್ನು ಯುವ ಸಮುದಾಯದ ನಡುವೆ ಬಿತ್ತರಿಸಬೇಕಾಗಿದೆ.  ‘ಸಿಂಪತಿ’ ನಾಯಕತ್ವ ನಿಜವಾದ ಗುಣವಲ್ಲ. ಮತ್ತೊಬ್ಬರ ಜಾಗದಲ್ಲಿ ನಿಂತು ಯೋಚಿಸುವುದೇ ನಾಯಕತ್ವದ ಬಹು ದೊಡ್ಡ ಗುಣ. ಸತ್ಯ ಯಾವುದು?, ಬಹುತೇಕರ ಆಸಕ್ತಿಗೆ ಪೂರಕವಾದದ್ದು ಯಾವುದು? ಯಾರ ಮೇಲೆ ದಬ್ಬಾಳಿಕೆಗಳು ಆಗುತ್ತಿವೆ. ಯಾರ ಮೇಲೆ ಯಜಮಾನಿಕೆ ಆಗುತ್ತಿದೆ?, ಏನು ಅನ್ಯಾಯಗಳು ಆಗುತ್ತಿದೆ?, ಎನ್ನುವ ಅರಿವು ಮತ್ತು ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಮತ್ತು ಪ್ರಾಮಾಣಿಕತೆ ನಾಯಕನಿರಬೇಕು” ಎಂದು ತಿಳಿಸಿದರು.

“ನಾಯಕನಿಗೆ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಆದರೆ ಇಂದಿನ ನಾಯಕರೆನ್ನುವ ರಾಜಕಾರಣಿಗಳಲ್ಲಿ ಈ ಯಾವ ಗುಣಗಳು ಇಲ್ಲ. ನಮ್ಮ ಪ್ರಧಾನ ಮಂತ್ರಿಗಳು ಬೆಳಗಾವಿಯಲ್ಲಿ ನೆರೆಯಿಂದ ಜನ ಕಷ್ಟಪಡುತ್ತಿರುವಾಗ ಬೆಂಗಳೂರಿಗೆ ಬಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಗೆ ಮರಳುತ್ತಾರೆ. ಆದರೆ ಬೆಳಗಾವಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಅಲ್ಲಿನ ಜನರ ನೋವುಗಳಿಗೆ ಸ್ಪಂದಿಸಬೇಕೆಂದು ಅವರಿಗೆ ಅನಿಸಲೇ ಇಲ್ಲ” ಎಂದು ಟೀಕಿಸಿದರು.

ಪ್ರಾಸ್ತಾವಿಕ ಮಾತುಗಳನ್ನು ಆಡಿದ ವಿದ್ಯಾರ್ಥಿ ನಾಯಕಿ ಮಾಧುರಿ ಬೋಳಾರ್ ಜಿಲ್ಲೆಯಲ್ಲಿ ಕೆಲವೊಂದಿಷ್ಟು ವರ್ಷಗಳಿಂದ ವಿದ್ಯಾರ್ಥಿಗಳು ಧರ್ಮಗಳ ಆಧಾರದ ಮೇಲೆ ವಿಂಗಡನೆ ಆಗುತ್ತಿದ್ದಾರೆ. ಇದು ಜಿಲ್ಲೆಯ ಅಭಿವೃದ್ಧಿಗೆ ಅಂತಕಕಾರಿ ಬೆಳವಣಿಗೆ ಹಾಗಾಗಿ ವಿದ್ಯಾರ್ಥಿಗಳ ಮಧ್ಯೆ ಐಕ್ಯತೆಯನ್ನು ಬೆಸೆಯಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಗುಣಮಟ್ಟದ ಶಿಕ್ಷಣ ಪಡೆಯಲು ನಾವುಗಳು ಜೊತೆಯಾಗಬೇಕು. ಇವುಗಳ ಬಗ್ಗೆ ಈ ಅಧ್ಯಯನ ಶಿಬಿರ ಚಿಂತನೆಗೆ ಹಚ್ಚಿ ವಿದ್ಯಾರ್ಥಿಗಳನ್ನು ಅರಿವು ಮೂಡಿಸಲಿದೆ ಎಂದು ಹೇಳಿದರು.

ಎಸ್‌ಎಫ್‌ಐ ಮಾಜಿ ಜಿಲ್ಲಾ ಮುಖಂಡ ಮನೋಜ್ ವಾಮಂಜೂರು, ಎಸ್‌ಎಫ್‌ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ಮಾಧುರಿ ಬೋಳಾರ, ಜಿಲ್ಲಾ ಮುಖಂಡರಾದ ವಿನೀತ್ ದೇವಾಡಿಗ, ವಿನುಶ ರಮಣ ಉಪಸ್ಥಿತರಿದ್ದರು.

ಶಿಬಿರದಲ್ಲಿ ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ ಎಂಬ ಘೋಷಣೆಯಡಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ನಡೆಯಲಿರುವ ಜಾಥಾದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.

ವರದಿ: ಭೀಮನಗೌಡ

Donate Janashakthi Media

Leave a Reply

Your email address will not be published. Required fields are marked *