ಕೊರೊನಾ ನಂತರ ಭಾರತದ ಆರ್ಥಿಕ ಚೇತರಿಕೆ ಹೇಗೆ?

ಪ್ರೊ.ಪ್ರಭಾತ್ ಪಟ್ನಾಯಕ್

ಕೊರೊನಾ ಸಂದರ್ಭದಲ್ಲಿ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜಿಡಿಪಿ ಕುಸಿತ ಕಂಡ ದೇಶಗಳಲ್ಲಿ ಒಂದು ಎಂಬ ಹಿನ್ನೆಲೆಯಲ್ಲಿ, ಈ ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ನಿರೀಕ್ಷಿತವೇ. ಅದು ಕೇಕೆಹಾಕುವ ವಿಷಯವೇನೂ ಅಲ್ಲ. ಈ ಚೇತರಿಕೆಯು ನಿಸ್ಸಂಶಯವಾಗಿ ಸುಸ್ಥಿರವಲ್ಲ. ಬಳಕೆ ಹೆಚ್ಚಾದರೆ ಮಾತ್ರ ಚೇತರಿಕೆ ತಾಳುತ್ತದೆ. ಇಲ್ಲದಿದ್ದರೆ ಬೆಳವಣಿಗೆ ಕುಂದುತ್ತದೆ. ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಎರಡು ಆಯ್ಕೆಗಳು ಉಳಿಯುತ್ತವೆ. ಒಂದು, ಸರ್ಕಾರವು ಕುಟುಂಬಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಖಾಸಗಿ ಬಳಕೆಯನ್ನು ಉತ್ತೇಜಿಸಬಹುದು. ಎರಡನೆಯ ಆಯ್ಕೆ ಎಂದರೆ, ಸರ್ಕಾರದ ವೆಚ್ಚಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದು. ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಇತರ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚಗಳನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ಕಾರ್ಪೊರೇಟ್‌ಗಳಿಗೆ ಸಬ್ಸಿಡಿ ಮತ್ತು ತೆರಿಗೆ ರಿಯಾಯಿತಿ ಒದಗಿಸುವ ಬದಲು, ಖಾಸಗಿ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂಬ ಸರಳ ಅಂಶವನ್ನೂ ಅರ್ಥಮಾಡಿಕೊಳ್ಳದಷ್ಟು ಅಸಮರ್ಥವಾಗಿದೆ ಮೋದಿ ಸರ್ಕಾರ!

ಅಲೆ ಅಲೆಯಾಗಿ ಅಪ್ಪಳಿಸಿ ಇಡೀ ವಿಶ್ವವನ್ನೇ ವ್ಯಾಪಿಸಿಕೊಂಡಿರುವ ಕೋರೊನಾ ಸಾಂಕ್ರಾಮಿಕವು ಇನ್ನೂ ಕೊನೆಗೊಂಡಿಲ್ಲ. ಅನೇಕ ದೇಶಗಳು ಅದರ ಹಾವಳಿಯಿಂದ ಇನ್ನೂ ನರಳುತ್ತಿವೆ. ಆದರೆ, ಲಾಕ್‌ಡೌನ್ ಪ್ರಕರಣಗಳು ಬಹುತೇಕ ಇಲ್ಲವಾಗಿವೆ. ಭಾರತದಲ್ಲೂ ಸಹ, ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಕ್‌ಡೌನ್ ಇರಲಿಲ್ಲ. ಅರ್ಥವ್ಯವಸ್ಥೆಯ ಕಾರ್ಯಾಚರಣೆಗಳು ಆಬಾಧಿತವಾಗಿದ್ದವು. ಅದರ ಕಾರ್ಯಕ್ಷಮತೆಗೆ ಯಾವ ಅಡ್ಡಿ-ಆತಂಕಗಳೂ ಇರಲಿಲ್ಲ. ಆರ್ಥಿಕ ಚಟುವಟಿಕೆಗಳು ಮಾಮೂಲಿನಂತೆ ಜರುಗಿವೆ. ಹಿಂದಿನ ವರ್ಷ ಕೊರೊನಾದಿಂದಾಗಿ ವಿಶ್ವದ ಅರ್ಥವ್ಯವಸ್ಥೆಯ ಹದಗೆಟ್ಟಿತ್ತು ಎಂಬುದನ್ನು ಮರೆಯುವಂತಿಲ್ಲ.

ಭಾರತದ ಅರ್ಥವ್ಯವಸ್ಥೆಯ ಚೇತರಿಕೆಯು ಸಾರವತ್ತಾಗಿದೆ ಮತ್ತು ಅದು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಅಂಕಿ ದರದ ಬೆಳವಣಿಗೆಯನ್ನು ಕಾಣಲಿದೆ ಎಂಬುದಾಗಿ ಸರ್ಕಾರದ ವಕ್ತಾರರು ಹೇಳುತ್ತಾರೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅರ್ಥವ್ಯವಸ್ಥೆಯು ಎರಡು ಅಂಕಿ ದರದಲ್ಲಿ ಬೆಳೆಯುವುದು ಒಂದು ಆಶ್ಚರ್ಯದ ವಿಷಯವೇ ಅಲ್ಲ. ಏಕೆಂದರೆ, ಹಿಂದಿನ ವರ್ಷದಲ್ಲಿ ಜಿಡಿಪಿಯು ತೀವ್ರವಾಗಿ ಕುಸಿದಿತ್ತು. ಬೇರೆ ಯಾವದೇ ದೇಶಕ್ಕಿಂತ ಹೆಚ್ಚು ಕಠಿಣವಾದ ಲಾಕ್‌ಡೌನನ್ನು ಭಾರತದಲ್ಲಿ ಹೇರಿದ್ದರಿಂದಾಗಿ ಜಿಡಿಪಿಯು 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಿಗ್ಭ್ರಮೆಗೊಳಿಸುವ ಶೇಕಡಾ 24 ರಷ್ಟು ಕುಸಿತ ಕಂಡಿತ್ತು. ಇದು, ವಾಸ್ತವವಾಗಿ, ಕೊರೊನಾ ಸಂದರ್ಭದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕುಸಿತಗಳಲ್ಲೊಂದಾಗಿತ್ತು. ಕುಸಿತದ ಹಿನ್ನೆಲೆಯಲ್ಲಿ, ಈ ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ನಿರೀಕ್ಷಿತವೇ. ಅದು ಕೇಕೆಹಾಕುವ ವಿಷಯವೇ ಅಲ್ಲ.

ಕಳೆದ 10 ತ್ರೈಮಾಸಿಕಗಳಲ್ಲಿ ಜಿಡಿಪಿ % ಬದಲಾವಣೆ ಮತ್ತು ಜಿಡಿಪಿ 2011-12ರ ಬೆಲೆಗಳಲ್ಲಿ(ಲಕ್ಷ ಕೋಟಿ ರೂ.ಗಳು)

ನಿಜಕ್ಕೂ ಸವಾಲಿನ ಪ್ರಶ್ನೆಯೆಂದರೆ, ಪ್ರಸಕ್ತ ಹಣಕಾಸು ವರ್ಷದ ಜಿಡಿಪಿಯ ಬೆಳವಣಿಗೆಯು, ಕೊರೊನಾ ಪೂರ್ವ ಹಣಕಾಸು ವರ್ಷದ, ಅಂದರೆ, 2019-20ರ ಜಿಡಿಪಿಯ ಬೆಳವಣಿಗೆಯೊಂದಿಗೆ ಹೇಗೆ ಹೋಲುತ್ತದೆ ಎಂಬುದು. ಈ ರೀತಿಯ ತುಲನೆ ಮಾಡುವಾಗ, ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯು 2019-20ರ ಮೊದಲ ತ್ರೈಮಾಸಿಕಕ್ಕಿಂತಲೂ ಕೆಳಗಿದೆ ಎಂಬುದು ಕಾಣುತ್ತದೆ. ಈ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿಯು 2019-20ರ ಎರಡನೇ ತ್ರೈಮಾಸಿಕದ ಜಿಡಿಪಿಯಷ್ಟೇ ಇದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಜಿಡಿಪಿಯಲ್ಲಿ ಶೇ.7.3ರಷ್ಟು ಕುಸಿತವಾಗಿದ್ದು, ಈ ವರ್ಷದ ಶೇ.10ರ ಮಟ್ಟದ ಎರಡಂಕಿಯ ಬೆಳವಣಿಗೆ ದರವೂ ಸಹ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಸರ್ಕಾರಿ ಸಂಸ್ಥೆಯ ಅಂದಾಜಿನ ಪ್ರಕಾರವೇ ಶೇ.9.5 ಮಟ್ಟದಲ್ಲಿ ಬೆಳೆಯಲಿದೆ ಎಂಬುದಕ್ಕಿAತ ತುಸು ಹೆಚ್ಚಿನದು ಮತ್ತು 2019-20ರ ವರ್ಷಕ್ಕೆ ಹೋಲಿಸಿದರೆ, 1.97% ಹೆಚ್ಚಿನದು. ಈ ಮಟ್ಟದ ಬೆಳವಣಿಗೆಯು, ಅರ್ಥವ್ಯವಸ್ಥೆಯ ಸಕಾರಾತ್ಮಕ ಪ್ರವೃತ್ತಿಯ ಪ್ರತೀಕವೇನಲ್ಲ.

ಈ ಚೇತರಿಕೆಯೂ ಸಹ ಸುಸ್ಥಿರವಾದುದೇನಲ್ಲ. ಏಕೆ ಸುಸ್ಥಿರವಾದುದಲ್ಲ ಎಂಬುದು ಈ ವರ್ಷದ ಎರಡನೇ ತ್ರೈಮಾಸಿಕದಲ್ಲೂ ಬಳಕೆಯು 2019-20ರ ಇದೇ ತ್ರೈಮಾಸಿಕದಲ್ಲಿದ್ದುದಕ್ಕಿಂತ 3.5% ಕಡಿಮೆ ಇದೆ ಎಂಬ ಅಂಶದಿಂದ ಸ್ಪಷ್ಟವಾಗುತ್ತದೆ. 2021-22ರ ಎರಡನೇ ತ್ರೈಮಾಸಿಕದ ಜಿಡಿಪಿಯ 2019-20ರ ಎರಡನೇ ತ್ರೈಮಾಸಿಕದಷ್ಟೇ ಮಟ್ಟಕ್ಕೆ ಚೇತರಿಕೆಯಾಗಿರುವ ವಿದ್ಯಮಾನಕ್ಕೆ ಹೂಡಿಕೆಯು ಅಪಾರ ಕೊಡುಗೆ ನೀಡಿದೆ. ಹಿಂದೆ ತೆಗೆದುಕೊಂಡ ನಿರ್ಧಾರಗಳ ಫಲಿತಾಂಶವಾಗಿ ಪರಿಶೀಲನೆಯ ಹಂತದಲ್ಲಿದ್ದ ಹೂಡಿಕೆಗಳು ಬಹುಶಃ ಈಗ ಫಲಕಾರಿಯಾಗಿವೆ. ಇದು ಏನನ್ನು ಅರ್ಥೈಸುತ್ತದೆ ಎಂದರೆ, ಪ್ರಸಕ್ತ ವರ್ಷದಲ್ಲಿ, ಈ ಹೂಡಿಕೆಗಳಿಂದಾಗಿ ಉತ್ಪಾದಕ ಸಾಮರ್ಥ್ಯವು ಹೆಚ್ಚುತ್ತದೆಯಾದರೂ, ಜಿಡಿಪಿಯು 2019-20ರ ಮಟ್ಟದಲ್ಲಿದ್ದಂತೆಯೇ ಇರುತ್ತದೆ. ಆದರೆ, ಉತ್ಪಾದನಾ ಸಾಮರ್ಥ್ಯದ ಬಳಕೆಯಲ್ಲಿ ಕುಸಿತವಾಗುತ್ತದೆ. ಪರಿಣಾಮವಾಗಿ, ಮುಂಬರುವ ವರ್ಷದಲ್ಲಿ ಹೂಡಿಕೆಗಳು ಕಡಿಮೆಯಾಗುತ್ತವೆ. ಅದರ ಜೊತೆಯಲ್ಲಿ ಜಿಡಿಪಿಯೂ ಕಡಿಮೆಯಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಚೇತರಿಕೆಯು ನಿಸ್ಸಂಶಯವಾಗಿ ಸುಸ್ಥಿರವಲ್ಲ. ಬಳಕೆ ಹೆಚ್ಚಾದರೆ ಮಾತ್ರ ಚೇತರಿಕೆ ತಾಳುತ್ತದೆ. ಇಲ್ಲದಿದ್ದರೆ ಬೆಳವಣಿಗೆ ಕುಂದುತ್ತದೆ. ಅದಕ್ಕೆ ಕಾರಣವನ್ನು ಹೀಗೆ ವಿವರಿಸಬಹುದು: ಅರ್ಥಮಾಡಿಕೊಳ್ಳುವ ಸರಳತೆಗಾಗಿ, ನಿವ್ವಳ ರಫ್ತುಗಳನ್ನು ಜಿಡಿಪಿಯ ಲೆಕ್ಕಾಚಾರದಿಂದ ಹೊರಗಿಡಬಹುದು, ಏಕೆಂದರೆ, ಅವು ಜಿಡಿಪಿಯ ಒಟ್ಟು ಲೆಕ್ಕದಲ್ಲಿ ಒಂದು ಬಹಳ ಸಣ್ಣ ಅಂಶವಾಗುತ್ತವೆ. ಜಿಡಿಪಿಯು, ಖಾಸಗಿ ಬಳಕೆ ಮತ್ತು ಖಾಸಗಿ ಹೂಡಿಕೆ ಮತ್ತು ಸರ್ಕಾರದ ವೆಚ್ಚಗಳ ಒಟ್ಟು ಮೊತ್ತಕ್ಕೆ ಸಮನಾಗುತ್ತದೆ. ಖಾಸಗಿ ಹೂಡಿಕೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯ ಗಾತ್ರವು ಎಷ್ಟು ಬೆಳದಿದೆ ಎಂಬುದನ್ನು ಆಧರಿಸಿ ಅದಕ್ಕೆ ತಕ್ಕಂತೆ ಹೂಡಿಕೆಯಾಗುತ್ತದೆ. ಹೂಡಿಕೆಯು ಜಿಡಿಪಿಯ ಬೆಳವಣಿಗೆಯ ಒಂದು ಸೂಚಕವೂ ಹೌದು. ಅರ್ಥವ್ಯವಸ್ಥೆಯ ಸುಸ್ಥಿತಿ ಅಥವಾ ಅದರ ನಿರಂತರ ಚೇತರಿಕೆಗಾಗಿ ಖಾಸಗಿ ಬಳಕೆಯಲ್ಲಾಗಲಿ ಅಥವಾ ಸರ್ಕಾರಿ ವೆಚ್ಚಗಳಲ್ಲಾಗಲಿ ಸಾಕಷ್ಟು ಹೆಚ್ಚಳ ಇರಲೇಬೇಕಾಗುತ್ತದೆ. ಆದರೆ, ಅಧಿಕೃತ ವಕ್ತಾರರು, ಸಾಮಾನ್ಯವಾಗಿ, ಸರ್ಕಾರದ ಮೂಲಸೌಕರ್ಯ ಹೂಡಿಕೆಯೇ ಈ ಅಂಶವನ್ನು ನೋಡಿಕೊಳ್ಳುತ್ತದೆ ಎಂಬ ಅಭಿಪ್ರಾಯನ್ನು ಹೊಂದಿರುತ್ತಾರೆ.

ಆದರೆ, ಸರ್ಕಾರವು “ನಗದೀಕರಣ”ದ ಮೂಲಕ ಸಾರ್ವಜನಿಕ ವಲಯದ ಮೂಲಸೌಕರ್ಯದ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಮೂಲಕ ಅಥವಾ ಸಾರ್ವಜನಿಕ ಆಸ್ತಿಗಳನ್ನು ಬೇಕೆಂದೇ ಬೆಲೆ ಇಳಿಸ್ಲಿ ಖಾಸಗಿಯವರಿಗೆ ಮಾರುವ ಮೂಲಕ ಅಥವಾ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ದೀರ್ಘ ಕಾಲದ ಗುತ್ತಿಗೆ ಕೊಡುವ ಮೂಲಕ ಮೂಲಸೌಕರ್ಯಗಳಿಗೆ ಹೂಡಿಕೆ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ, ಮೋದಿ ಸರ್ಕಾರವು ಜನರ ಹಣದಿಂದ ರಚಿಸಿದ ಮೂಲಸೌಕರ್ಯಗಳ ಬಹು ದೊಡ್ಡ ಭಾಗವನ್ನು ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸುವ ನೀತಿಯನ್ನು ಪ್ರಕಟಿಸಿದೆ.

ಅದೂ ಅಲ್ಲದೆ, ಮೂಲಸೌಕರ್ಯ ಹೂಡಿಕೆಯು ಸಾಮಾನ್ಯವಾಗಿ ಭೂ ಸ್ವಾಧೀನವನ್ನು ಒಳಗೊಂಡಿರುತ್ತದೆ. ಈ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒರಟುತನ ತಲೆ ಹಾಕಿದಾಗ, ಸಾಮಾಜಿಕ ಪ್ರತಿರೋಧ ಎದುರಾಗುತ್ತದೆ. ಆದ್ದರಿಂದ, ಅಂತಹ ಹೂಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಂದು ಮಟ್ಟದ ಸಹಕಾರದ ಅಗತ್ಯವಿರುತ್ತದೆ. ಆದರೆ, ನರೇಂದ್ರ ಮೋದಿ ಆಡಳಿತವು ಈ ಸಹಕಾರದ ಅಂಶವನ್ನು ಬಹುತೇಕ ಅಸಾಧ್ಯಗೊಳಿಸಿದೆ. ಹಾಗಾಗಿ, ಈ ರೀತಿಯ ಮೂಲಸೌಕರ್ಯ ಹೂಡಿಕೆಯು ಅರ್ಥವ್ಯವಸ್ಥೆಯ ಚೇತರಿಕೆಯನ್ನು ಉತ್ತೇಜಿಸುವ ಒಂದು ಸಾಧನವಾಗಿ ಪರಿಣಾಮಕಾರಿಯಾಗದು.

ಹಾಗಾಗಿ, ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಎರಡು ಆಯ್ಕೆಗಳು ಉಳಿಯುತ್ತವೆ. ಒಂದು, ಸರ್ಕಾರವು ಕುಟುಂಬಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಖಾಸಗಿ ಬಳಕೆಯನ್ನು ಉತ್ತೇಜಿಸಬಹುದು. ಕೊರೊನಾ ನಿಮಿತ್ತದ ಲಾಕ್‌ಡೌನ್‌ನಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅರ್ಥಶಾಸ್ತ್ರಜ್ಞರು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು, ಕುಟುಂಬಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಕ್ರಮವನ್ನು ಬಹಳ ಸಮಯದಿಂದಲೂ ಒತ್ತಾಯಿಸಿವೆ. ಮೂಲತಃ, ಲಾಕ್‌ಡೌನ್ ಸಮಯದಲ್ಲಿ ಜನರು ಇದ್ದಕ್ಕಿದ್ದಂತೆ ತಮ್ಮ ಆದಾಯದ ಮೂಲಗಳನ್ನು ಕಳೆದುಕೊಂಡಿದ್ದರಿAದ, ಕುಟುಂಬಗಳಿಗೆ ನೇರ ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಯಿತು. ಆ ಪರಿಸ್ಥಿತಿ ಹಿಂದಕ್ಕೆ ಸರಿದಿದೆಯಾದರೂ ವರ್ಗಾವಣೆಗಳ ಅಗತ್ಯವೇನೂ ಕಡಿಮೆಯಾಗಿಲ್ಲ. ಏಕೆಂದರೆ, ಜನರು ಸಾಲ ಮಾಡುವ ಮೂಲಕ ಆ ಸಮಯದಲ್ಲಿ ತಮ್ಮ ತೊಂದರೆಗಳನ್ನು ನಿಭಾಯಿಸಿಕೊಂಡರು. ಈ ಸಾಲಗಳು ಅವರ ತಲೆಯ ಮೇಲೆ ತೂಗಾಡುವ ಕತ್ತಿಯಂತೆ ನೇತಾಡುತ್ತಿವೆ. ಆದ್ದರಿಂದ, ಅವರು ತಮ್ಮ ಸಾಲ ತೀರಿಸುವ ಸಲುವಾಗಿ ಹೊಟ್ಟೆ-ಬಟ್ಟೆ ಕಟ್ಟಿ ತಮ್ಮ ಬಳಕೆಯನ್ನು ಕಡಿಮೆ ಮಾಡಿಕೊಳ್ಳುವ ಅನಿವಾರ್ಯಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಲಾಕ್‌ಡೌನ್ ಇಲ್ಲದಿದ್ದರೆ ಬಳಕೆಯು ಯಾವ ಮಟ್ಟದಲ್ಲಿರುತ್ತಿತೊ ಅದೇ ಮಟ್ಟದ ಬಳಕೆಯನ್ನು ಲಾಕ್‌ಡೌನ್ ನಂತರದ ಅವಧಿಯಲ್ಲಿ ಇರುವಂತೆ ನೋಡಿಕೊಳ್ಳಲು ನೇರ ವರ್ಗಾವಣೆಗಳು ಅಗತ್ಯವಾಗುತ್ತವೆ. ಆದ್ದರಿಂದ, ಕೇಂದ್ರ ಸರ್ಕಾರವು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರಿಗೆ, ತಿಂಗಳಿಗೆ 7,500 ರೂ.ಗಳಂತೆ ಕೆಲವು ತಿಂಗಳುಗಳ ಕಾಲವಾದರೂ ವರ್ಗಾಯಿಸಬೇಕೆಂಬ ಬೇಡಿಕೆಯನ್ನು ಈಡೇರಿಸಿದರೆ, ಬಳಕೆಯ ಕೊರತೆಯನ್ನು ನಿವಾರಿಸಬಹುದು.

ಈ ರೀತಿಯ ನೇರ ವರ್ಗಾವಣೆಗಳಿಂದ ಉಂಟಾಗುವ ಇನ್ನೂ ಹೆಚ್ಚಿನ ಪ್ರಯೋಜನವೆಂದರೆ, ಫಲಾನುಭವಿ ಕುಟುಂಬಗಳು ಬಳಸುವ ವಸ್ತುಗಳು ಬಹುತೇಕ ಕಿರು-ಉತ್ಪಾದನಾ ವಲಯದಲ್ಲಿ ಅಥವಾ ಸಣ್ಣ ಬಂಡವಾಳ ವಲಯದಲ್ಲಿ ಉತ್ಪಾದನೆ ಯಾಗುವುದರಿಂದ ಮತ್ತು ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆಯಂತಹ ಕ್ರಮಗಳಿಂದಾಗಿ ಇನ್ನೂ ಸೊರಗುತ್ತಿರುವ ಈ ವಲಯಗಳು ಚೇತರಿಸಿಕೊಳ್ಳುತ್ತವೆ ಮತ್ತು ಉದ್ಯೋಗಗಳೂ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ಈ ಮೂಲಕವಾಗಿ ಎರಡನೆಯ ಮತ್ತು ಮೂರನೆಯ ಸುತ್ತಿನ ಬಳಕೆಯ ವೆಚ್ಚಗಳು ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಮೂಡಿಸುತ್ತವೆ.

ಈ ವರ್ಗಾವಣೆಯ ಕಾರ್ಯಕ್ರಮದಲ್ಲಿ ಮಾಡಬೇಕಿರುವ ಮತ್ತೊಂದು ಬದಲಾವಣೆ ಎಂದರೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒದಗಿಸುವ ವೆಚ್ಚವನ್ನು ಹೆಚ್ಚಿಸುವುದು. ಆದರೆ, ಈ ಉದ್ಯೋಗ ಖಾತ್ರಿ ಯೋಜನೆಯು ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ಅದೂ ಕೂಡ ಗರಿಷ್ಠ 100 ದಿನಗಳ ಅವಧಿಗೆ (ಇಷ್ಟನ್ನೂ ಒದಗಿಸಲಿಲ್ಲ), ಉದ್ಯೋಗ ಒದಗಿಸುವ ಸೀಮಿತ ವ್ಯಾಪ್ತಿ ಹೊಂದಿರುವುದನ್ನು ಗಮನಿಸಿದರೆ, ಈ ಯೋಜನೆಯು ಸಂಪೂರ್ಣವಾಗಿ ಅಸಮರ್ಪಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಈ ಯೋಜನೆಗೆ ಪೂರಕವಾಗಿ ನೇರ ನಗದು ವರ್ಗಾವಣೆಯನ್ನೂ ಮಾಡಬೇಕಾಗುತ್ತದೆ. ಬಳಕೆಯ ಅಂಶವು ಜಿಡಿಪಿಯಲ್ಲಿ 55% ಭಾಗದ ಪಾಲು ಹೊಂದಿರುವುದರಿAದ, ಜಿಡಿಪಿಯ 1% ಬಳಕೆಯ ಹೆಚ್ಚಳಕ್ಕೂ ಸುಮಾರು 2 ಲಕ್ಷ ಕೋಟಿ ರೂ ಹಣದ (ಅಥವಾ ಖರ್ಚುಗಳ) ಅಗತ್ಯವಿದೆ. ಮತ್ತೊಂದೆಡೆ, ಬಜೆಟ್ ನಿಗದಿಪಡಿಸಿದ್ದಕ್ಕಿಂತ ಅಧಿಕವಾಗಿ ನವೆಂಬರ್ ಅಂತ್ಯದಲ್ಲಿ ಘೋಷಿಸಲಾದ ಕೇವಲ 22,000 ಕೋಟಿಗಳ ಹೆಚ್ಚಳದ ಮೊತ್ತವು ಬಳಕೆಯ ಹೆಚ್ಚಳಕ್ಕೆ ಬೇಕಾಗಿದ್ದ ಮೊತ್ತದ ಹತ್ತನೇ ಒಂದು ಭಾಗದಷ್ಟಾಗುತ್ತದೆ. ಹೀಗಾಗಿ, ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸದ ಹೊರತು, ಬಳಕೆಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಈ 22,000 ಕೋಟಿಗಳ ಮೊತ್ತವು ಸಾಲುವುದಿಲ್ಲ.

ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಉಳಿದ ಎರಡನೆಯ ಆಯ್ಕೆ ಎಂದರೆ, ಸರ್ಕಾರದ ವೆಚ್ಚಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದು. ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಇತರ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚಗಳನ್ನು ಹೆಚ್ಚಿಸಬೇಕಾಗುತ್ತದೆ. ಭೌತಿಕ ಮೂಲಸೌಕರ್ಯಗಳ ಮೇಲೆ ಮಾಡುವ ಹಲವು ರೀತಿಯ ವೆಚ್ಚಗಳಿಗಿಂತ ಭಿನ್ನವಾಗಿ ಆರೋಗ್ಯ, ಶಿಕ್ಷಣ ಮುಂತಾದ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚಗಳನ್ನು ಜನರು ಸ್ವಾಗತಿಸುತ್ತಾರೆ. ಈ ಸೇವೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುವ ಪರಿಣಾಮ ಹೊಂದಿವೆ. ಆದರೆ, ಇಲ್ಲಿಯೂ ಸಹ, ಮೋದಿ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಖಾಸಗೀಕರಣಗೊಳಿಸುವಲ್ಲಿ ನಿರತವಾಗಿದೆ. ಹಾಗಾಗಿ, ಸರ್ಕಾರ ತನ್ನ ದಿಕ್ಪಥವನ್ನು ಬದಲಾಯಿಸುವ ಮತ್ತು ಈ ಸೇವೆಗಳಿಗೆ ವೆಚ್ಚವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಹೀಗಾಗಿ, ಜನರಿಗೆ ನೇರ ನಗದು ವರ್ಗಾವಣೆಗಳ ಮೂಲಕ ಮತ್ತು ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ಸೇವೆಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಮೂಲಕ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸುವ ಅಗತ್ಯವಿರುವ ತುರ್ತಿನ ಈ ಸಮಯದಲ್ಲಿ, ಅವುಗಳನ್ನು ಪೂರೈಸುವುದು ಮೋದಿ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ತೋರುತ್ತದೆ. ಚುನಾವಣಾ ಉದ್ದೇಶಗಳಿಂದ ಕೂಡಿದ ಕೆಲವು ಸಾಂಕೇತಿಕ ಕೊಡುಗೆ ನೀಡುವುದನ್ನು ಹೊರತುಪಡಿಸಿದರೆ, ಈ ಎರಡೂ ಮಾರ್ಗಗಳಲ್ಲಿ ಖಂಡಿತವಾಗಿಯೂ ಅದು ಖರ್ಚು ಮಾಡುವುದಿಲ್ಲ. ಹಾಗಾಗಿ, ಆರ್ಥಿಕ ಚೇತರಿಕೆಯು ಅಸಂಭವವಾಗುತ್ತದೆ.

ಸರ್ಕಾರವು ತಳೆದಿರುವ ನಿಲುವಿನ ತಳದಲ್ಲಿರುವ ತಪ್ಪು ತಿಳಿವಳಿಕೆ ಹೀಗಿದೆ: ಕಾರ್ಪೊರೇಟ್ ವಲಯಕ್ಕೆ ಸಬ್ಸಿಡಿಗಳು ಮತ್ತು ತೆರಿಗೆ-ರಿಯಾಯಿತಿಗಳನ್ನು ಒದಗಿಸಿದಾಗ, ಆ ವಲಯವು ಹೆಚ್ಚಿನ ಹೂಡಿಕೆ ಮಾಡುತ್ತದೆ. ಇದು ಅರ್ಥವ್ಯವಸ್ಥೆಯ ಚೇತರಿಕೆಯನ್ನು ಉತ್ತೇಜಿಸುತ್ತದೆ ಎಂದು ಅದು ನಂಬುತ್ತದೆ. ಆದರೆ ಯಾವುದೇ ಒಂದು ಕಾರ್ಪೊರೇಟ್ ಸಂಸ್ಥೆಯು ಬೇಡಿಕೆಯ ಬೆಳೆಯುತ್ತದೆ ಎಂಬ ನಿರೀಕ್ಷೆ ಇದ್ದಾಗ ಮಾತ್ರ ಒಂದು ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತದೆ. ಬೇಡಿಕೆಯಲ್ಲಿ ಸೊನ್ನೆ ಬೆಳವಣಿಗೆಯ ನಿರೀಕ್ಷೆ ಇದ್ದರೆ, ಅದು ಮಾಡುವ ಹೂಡಿಕೆಯೂ ಸೊನ್ನೆಯೇ. ಅಂದರೆ, ಉತ್ಪಾದನಾ ಸಾಮರ್ಥ್ಯವು ಹೆಚ್ಚುವುದಿಲ್ಲ. ಹಾಗಾಗಿ, ಬೇಡಿಕೆಯು ವೃದ್ಧಿಸದಿದ್ದರೆ, ತಮಗೆ ಸರ್ಕಾರ ನೀಡಿದ ಸಬ್ಸಿಡಿ ಮತ್ತು ತೆರಿಗೆ-ರಿಯಾಯಿಯ ಹಣವನ್ನು ಕಾರ್ಪೊರೇಟ್‌ಗಳು ನೀಟಾಗಿ ತಮ್ಮ ಜೇಬಿಗೆ ಇಳಿಸುತ್ತವೆ ಮತ್ತು ಹೆಚ್ಚುವರಿಯಾಗಿ ಎಳ್ಳಷ್ಟು ಹೂಡಿಕೆಯನ್ನೂ ಕೈಗೊಳ್ಳುವುದಿಲ್ಲ. ಆದ್ದರಿಂದ, ಕಾರ್ಪೊರೇಟ್‌ಗಳಿಗೆ ಸಬ್ಸಿಡಿ ಮತ್ತು ತೆರಿಗೆ ರಿಯಾಯಿತಿ ಒದಗಿಸುವ ಬದಲು, ಸರ್ಕಾರವು ಖಾಸಗಿ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಆದರೆ, ಈ ಸರಳ ಅಂಶವನ್ನೂ ಅರ್ಥಮಾಡಿಕೊಳ್ಳದಷ್ಟು ಅಸಮರ್ಥವಾಗಿದೆ ಮೋದಿ ಸರ್ಕಾರ!

ಅನು:ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *