ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಹಣಕಾಸು ಸ್ಥಿರತೆ ವರದಿಯ ಪ್ರಕಾರ, ಭಾರತದಲ್ಲಿ ವೈಯಕ್ತಿಕ ಸಾಲಗಾರರ ತಲಾ ಸಾಲವು ಕಳೆದ ಎರಡು ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದ್ದು, ಮಾರ್ಚ್ 2023 ರಲ್ಲಿ ರೂ. 3.9 ಲಕ್ಷದಿಂದ ಮಾರ್ಚ್ 2025 ರಲ್ಲಿ ರೂ. 4.8 ಲಕ್ಷಕ್ಕೆ ಏರಿದೆ. ಉದ್ಯೋಗ ಮತ್ತು ಉದ್ಯೋಗಾವಕಾಶಗಳ ಕೊರತೆ, ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯದಿಂದ ಉಂಟಾಗುವ ಹಣದುಬ್ಬರವು ಸಾಮಾನ್ಯ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ. ಆಹಾರ, ಶಿಕ್ಷಣ, ಔಷಧ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ಸಾಲ ಪಡೆಯಬೇಕಾದ ಪರಿಸ್ಥಿತಿ ಉದ್ಭವಿಸುತ್ತಿದೆ. ಸಾಲದ
-ಸಿ. ಸಿದ್ದಯ್ಯ
ಪ್ರತಿ ಭಾರತೀಯನ ಸರಾಸರಿ ಸಾಲವು ಮಾರ್ಚ್ 2025 ರ ಹೊತ್ತಿಗೆ 4.8 ಲಕ್ಷ ರೂಪಾಯಿಗಳಾಗಿವೆ. ಮಾರ್ಚ್ 2023 ರಲ್ಲಿ ಇದು 3.9 ಲಕ್ಷ ರೂ.ಗಳಷ್ಟಿತ್ತು, ಅಂದರೆ, ಕೇವಲ ಎರಡು ವರ್ಷಗಳಲ್ಲಿ ಸುಮಾರು 23 ಪ್ರತಿಶತದಷ್ಟು (90 ಸಾವಿರ ರೂ) ಹೆಚ್ಚಳವಾಗಿದೆ. ಇದು ಸಾಮಾನ್ಯ ಜನರು ಆರ್ಥಿಕವಾಗಿ ಹೇಗೆ ಕಷ್ಟಪಡುತ್ತಿದ್ದಾರೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಕಳೆದ ವರ್ಷ ವಸತಿ ನಿರ್ಮಾಣಕ್ಕಾಗಿ ತೆಗೆದುಕೊಂಡ ಸಾಲಗಳು ಜಿಡಿಪಿಯ 23.1 ಪ್ರತಿಶತದಷ್ಟಿದ್ದರೆ, ಈ ವರ್ಷ ಅವು 23.9 ಪ್ರತಿಶತವನ್ನು ತಲುಪಿವೆ. ಮತ್ತೊಂದೆಡೆ, ಕೊರೊನಾಗೆ ಮುನ್ನ ಶೇ.19 ರಷ್ಟಿದ್ದ ನಿವ್ವಳ ಉಳಿತಾಯವು 2024 ರ ವೇಳೆಗೆ ಶೇ.13.1 ಕ್ಕೆ ಇಳಿದಿದೆ. ಸಾಲದ
ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ
ಉದ್ಯೋಗ ಮತ್ತು ಉದ್ಯೋಗಾವಕಾಶಗಳ ಕೊರತೆ, ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯದಿಂದ ಉಂಟಾಗುವ ಹಣದುಬ್ಬರವು ಸಾಮಾನ್ಯ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ. ಆದಾಯಕ್ಕಿಂತ ಹೆಚ್ಚಿನ ಖರ್ಚುಗಳನ್ನು ಪೂರೈಸಲು ಸಾಲವನ್ನು ಅವಲಂಬಿಸಬೇಕಾಗಿರುವುದು ಒಂದು ಪ್ರವೃತ್ತಿಯಾಗುತ್ತಿದೆ. ಆಹಾರ, ಶಿಕ್ಷಣ, ಔಷಧ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ಸಾಲ ಪಡೆಯಬೇಕಾದ ಪರಿಸ್ಥಿತಿ ಉದ್ಭವಿಸುತ್ತಿದೆ. ಚಿಲ್ಲರೆ ಸಾಲಗಳಲ್ಲಿ ಶೇ. 91 ರಷ್ಟು ವೈಯಕ್ತಿಕ ಸಾಲಗಳಾಗಿವೆ ಎಂಬುದು ಗಮನಾರ್ಹ. ಇವುಗಳಲ್ಲಿ ಶೇ. 55 ರಷ್ಟು ಬಳಕೆ ವೆಚ್ಚಗಳಾಗಿವೆ! ಅಂದರೆ, ಅವರು ತಿಂಗಳಿಂದ ತಿಂಗಳಿಗೆ ಬದುಕಲು ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ.
ಇದನ್ನೂ ಓದಿ: ರೈತರ ಓಟು ನಮಗೆ ಬೇಕಾಗಿಲ್ಲ ಎಂದು ಹೇಳುವ ಧೈರ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಇದೆಯಾ? ಎಸ್‌ಕೆಎಂ ನಾಯಕರ ಪ್ರಶ್ನೆ
ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮ

ಸಾಮಾನ್ಯ ಜನರ ಸಾಲದ ಹೆಚ್ಚಳಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ. ವಾಸ್ತವವಾಗಿ, ಸರ್ಕಾರಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಪ್ರತಿ ಹಂತದಲ್ಲೂ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. 2016 ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವು ಸಾಮಾನ್ಯ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಇದರಿಂದ ದೊಡ್ಡ ಸಂಖ್ಯೆಯ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದು ಅಸಂಘಟಿತ ವಲಯದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ, ಉದ್ಯೋಗಗಳು ನಷ್ಟವಾಗಿವೆ ಮತ್ತು ಜನರು ಸಾಲ ಅವಲಂಬಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬಂತಾಗಿದೆ. ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ನೀತಿಯು ಲಕ್ಷಾಂತರ ಸಣ್ಣ ಉದ್ಯಮಗಳು ಮತ್ತು ಅವುಗಳನ್ನು ಅವಲಂಬಿಸಿರುವ ಜನರ ಮೇಲೂ ತೀವ್ರ ಪರಿಣಾಮ ಬೀರಿದೆ.
ಸರ್ಕಾರಿ ಅಂಕಿಅಂಶಗಳ ಪ್ರಕಾರ, 2022-23 ರ ವೇಳೆಗೆ ಉತ್ಪಾದನಾ ವಲಯದಲ್ಲಿ ಸಣ್ಣ ಕೈಗಾರಿಕೆಗಳ ಸಂಖ್ಯೆ (ಅಸಂಘಟಿತ ವಲಯ) ಶೇಕಡಾ 9.3 ಕ್ಕೆ ಇಳಿದಿದೆ. ಈ ಕೈಗಾರಿಕೆಗಳಲ್ಲಿ ಶೇಕಡಾ 15 ರಷ್ಟು ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕೊರೊನಾ ಪೂರ್ವ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ 20 ಲಕ್ಷದವರೆಗೆ ಈ ರೀತಿಯ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದವು. ದೇಶವು ಅಷ್ಟರ ಮಟ್ಟಿಗೆ ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಸುಳಿಯಲ್ಲಿ
ಅದೇ ಸಮಯದಲ್ಲಿ, ಸಾಲದೊಂದಿಗೆ ಆರ್ಥಿಕ ಚಕ್ರವನ್ನು ಚಾಲನೆ ಮಾಡುವ ತಂತ್ರಕ್ಕೆ ಸರ್ಕಾರ ತೆರೆದುಕೊಂಡಿದೆ. ಪರಿಣಾಮವಾಗಿ, ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಸಾಲದ ಅಪ್ಲಿಕೇಶನ್ ಗಳು ಮೊಬೈಲ್ ಫೋನ್ ಗಳಲ್ಲಿ ಲಭ್ಯವಾಗಿವೆ. ‘Financial Inclusion’ ಎಂಬ ಈ ಪ್ರಕ್ರಿಯೆಯಲ್ಲಿ, ಶ್ರೀಸಾಮಾನ್ಯರು ಸಹ ಇದರ ಭಾಗವಾಗಿದ್ದಾರೆ. 2023 ರ ಹೊತ್ತಿಗೆ, ಈ ವಲಯದಲ್ಲಿ ಸಾಲಗಾರರ ಸಂಖ್ಯೆ ಆರು ಕೋಟಿ ತಲುಪಿದೆ.
ಒಟ್ಟು ಸಾಲದ ಹೊರೆಯಲ್ಲಿ ಅವರ ಪಾಲು ಶೇಕಡಾ 15 ರಿಂದ 20 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಸಾಲಗಳನ್ನು ವಸೂಲಿ ಮಾಡಲು ಅಂತಹ ಕಂಪನಿಗಳು ಜಾರಿಗೆ ತರುವ ವಿಧಾನಗಳು ಬಹಳಷ್ಟು ವಿವಾದಾಸ್ಪದವಾಗಿವೆ. ಇದರಿಂದ ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಾಯಿಸಲ್ಪಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕಾರ್ಪೊರೇಟ್ ಗಳ ಸಾಲ ಮನ್ನಾ! ಸಾಮಾನ್ಯ ಗ್ರಾಹಕರಿಗೆ ದಂಡ, ಶುಲ್ಕ!!

ಒಂದೆಡೆ ಸಾಲ ಮರುಪಾವತಿಸಲು ಅಸಮರ್ಥತೆಯಿಂದ ಸಾಮಾನ್ಯ ಪ್ರಜೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಕಾರ್ಪೊರೇಟ್ ಕುಳಗಳು ಸರ್ಕಾರದಿಂದ ಭಾರಿ ಸಬ್ಸಿಡಿಗಳನ್ನು ಪಡೆಯುತ್ತಿವೆ. ಇದೂ ಅಲ್ಲದೆ, ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡದೇ, ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿಸಿಕೊಳ್ಳುತ್ತಿದ್ದಾರೆ. 2014-24 ರ ನಡುವೆ, ಬ್ಯಾಂಕುಗಳು ಕಾರ್ಪೊರೇಟ್ ಗಳಿಗೆ ನೀಡಲಾದ 16.61 ಲಕ್ಷ ಕೋಟಿ ರೂ. ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡಿವೆ. ಮತ್ತೊಂದಡೆ, ‘ಕನಿಷ್ಠ ಬಾಕಿ’ ಹೆಸರಿನಲ್ಲಿ ದಂಡ, ಹಣ ವರ್ಗಾವಣೆ ಶುಲ್ಕ ಸೇರಿದಂತೆ ಹಲವು ರೀತಿಯ ದಂಡ, ಶುಲ್ಕಗಳ ಹೆಸರಿನಲ್ಲಿ ಸಾಮಾನ್ಯ ಗ್ರಾಹಕರಿಂದ ಬ್ಯಾಂಕುಗಳು ಹಣ ಸುಲಿಗೆ ಮಾಡುತ್ತಿವೆ.
ಕಾರ್ಪೊರೇಟ್‌ಗಳಿಗೆ ಲಕ್ಷಾಂತರ ಕೋಟಿ ಪಾವತಿಸುತ್ತಿರುವ ಸರ್ಕಾರವು ಶ್ರೀಸಾಮಾನ್ಯರ ಬಗ್ಗೆ ಆಸಕ್ತಿ ಹೊಂದಿಲ್ಲ. ಉದ್ಯೋಗಾವಕಾಶಗಳನ್ನು ಸುಧಾರಿಸುವುದರ ಜೊತೆಗೆ, ಸಾಲಗಳನ್ನು ಮನ್ನಾ ಮಾಡುವುದು ಮತ್ತು ಬಡವರನ್ನು ಸಾಲ ಮುಕ್ತಗೊಳಿಸುವುದು ಸಹ ಅಗತ್ಯವಾಗಿದೆ. ಕಾರ್ಪೊರೇಟ್ ಗಳ ಮೇಲೆ ಸಂಪತ್ತು ತೆರಿಗೆ ವಿಧಿಸಬೇಕು ಮತ್ತು ಅದನ್ನು ಬಡವರ ಅಭಿವೃದ್ಧಿಗೆ ಖರ್ಚು ಮಾಡಬೇಕು. ಆಗ ಮಾತ್ರ ಸಾಮಾನ್ಯ ಜನರಿಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ.
ಇದನ್ನೂ ನೋಡಿ: ಪತ್ರಿಕಾಗೋಷ್ಠಿ ನೇರ ಪ್ರಸಾರ | ಚನ್ನರಾಯ ಪಟ್ಟಣ ಹೋರಾಟಕ್ಕೆ SKM ನಾಯಕರ ಬೆಂಬಲ
