ಭಾರತೀಯ ಕೃಷಿಯನ್ನು ಒತ್ತೆಯಿಡುವುದನ್ನುನಿಲ್ಲಿಸಬೇಕು-ಎಐಕೆಎಸ್

“ವಾಣಿಜ್ಯಮಂತ್ರಿಗಳು ರೈತರನ್ನು ದಾರಿ ತಪ್ಪಿಸಲು ಸುಳ್ಳು, ವಂಚನೆಗಿಳಿದಿದ್ದಾರೆ”

ಭಾರತ -ಯುಎಸ್‍ ಜಂಟಿ ಹೇಳಿಕೆ ರೈತರನ್ನು ಕಾಡಿಸುತ್ತಿದ್ದ   ಭಯವನ್ನು ದೃಢ ಪಡಿಸಿದೆ, ಮೋದಿ ನೇತೃತ್ವದ ಬಿಜೆಪಿ-ಎನ್‍ಡಿಎ ಸರಕಾರ ಯುಎಸ್‍ ಸಾಮ್ರಾಜ್ಯಶಾಹಿಯ ಎದುರು ಹೀನ ರೀತಿಯಲ್ಲಿ ಶರಣಾಗಿದೆ ಮತ್ತು ಅದರೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದ ಭಾರತದ ರೈತರಿಗೆ ಅಕ್ಷರಶಃ ಮರಣ ಶಾಸನವಾಗಿದೆ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್‍)  ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಯುಎಸ್‍ ಸಾಮ್ರಾಜ್ಯಶಾಹಿಗೆ ಮತ್ತು ದೇಶದೊಳಗಿನ ಗುತ್ತೇದಾರಿ ಬಂಡವಳಿಗರಿಗೆ ಈ ಸರಕಾರದ ಸಂಪೂರ್ಣ ಅಡಿಯಾಳುತನವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದೂ ಅದು ಹೇಳಿದೆ. ಭಾರತೀಯ 

ಈ  ಹೇಳಿಕೆ  ಕೃಷಿಕ್ಷೇತ್ರದಲ್ಲಿ ಯಾವ ರಿಯಾಯ್ತಿಗಳನ್ನೂ ಕೊಟ್ಟಿಲ್ಲ ಎಂದು ಹೇಳಿಕೊಂಡಿರುವ ಕೇಂದ್ರ ವಾಣಿಜ್ಯ ಮತ್ತು ಉದ್ದಿಮೆ ಮಂತ್ರಿ ಪೀಯೂಷ್‍ ಗೋಯಲ್‍ ರವರ ಸುಳ್ಳುಗಳು ಮತ್ತು ವಂಚನೆಯನ್ನೂ ಪ್ರಕಟಪಡಿಸಿದೆ, ಏಕೆಂದರೆ ಜಂಟಿ ಹೇಳಿಕೆಯ ಮೊದಲ ಪರಿಚ್ಛೇದ ತದ್ವಿರುದ್ಧವಾದುದನ್ನೇ ಹೇಳುತ್ತದೆ. ಗೋಯಲ್‍ ರೈತರನ್ನು ದಾರಿ ತಪ್ಪಿಸಲು ಎಂದಿನ ಎರಡು ನಾಲಗೆಯ ದಾರಿ ಹಿಡಿದಿದ್ದಾರೆ. ವಾಸ್ತವವಾಗಿ, ಅಮೆರಿಕ ಸಂಯುಕ್ತ ಸಂಸ್ಥಾನಗಳ ದೊಡ್ಡ ಕೃಷಿವ್ಯಾಪಾರೀ  ಕಂಪನಿಗಳು ಮತ್ತು ರೈತರ ಅತ್ಯಂತ  ಹೆಚ್ಚು ಸಬ್ಸಿಡಿ ಪಡೆದಿರುವ ಅಗ್ಗದ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗಳಲ್ಲಿ ರಾಶಿ-ರಾಶಿಯಾಗಿ ಬಂದು ಬೆಲೆಗಳು ಕುಸಿಯುವಂತೆ ಮಾಡುತ್ತವೆ ಮತ್ತು ಭಾರತೀಯ ರೈತರನ್ನು ನಾಶ ಮಾಡುತ್ತವೆ ಎಂದು ಎಐಕೆಎಸ್‍ ತೀವ್ರ ಆಕ್ರೋಶ ವ್ಯಕ್ಪಪಡಿಸಿದೆ.

ಈ ಮೊದಲು 2ರಿಂದ 3ಶೇ. ವರೆಗೆ ಮಾತ್ರ ಇದ್ದ ಸುಂಕಗಳನ್ನು 25ಶೇ.ಕ್ಕೆ, ಕೆಲವು ಸರಕುಗಳಿಗೆ 50ಶೇ. ವರೆಗೂ ಏಕಪಕ್ಷೀಯವಾಗಿ ಹೆಚ್ಚಿಸಲಾಯಿತು ಎಂಬುದನ್ನು ಮರೆಮಾಚುತ್ತ   ಸುಂಕಗಳನ್ನು ಈಗ ಈ ಒಪ್ಪಂದದಲ್ಲಿ 18ಶೇ..ಕ್ಕೆ ಇಳಿಸಲು ಯುಎಸ್‍ ಒಪ್ಪಿದೆ ಎಂಬುದನ್ನೇ ಒಂದು ದೊಡ್ಡ ವಿಜಯ ಎಂಬಂತೆ ಈ ಮಂತ್ರಿಗಳು ಚಿತ್ರಿಸಿದ್ದಾರೆ. ಈ ಯುಎಸ್‍ ಆಡಳಿತದ ಚಾಳಿಯನ್ನು ನೋಡಿದರೆ ಇದನ್ನು ಅದು ಗೌರವಿಸುತ್ತದೆ ಎಂಬ ಭರವಸೆಯೇನೂ ಇಲ್ಲ.

ಯುಎಸ್‍ ಭಾರತವನ್ನು ಅದರ ದೀರ್ಘ ಕಾಲದ ಮಿತ್ರ ದೇಶಗಳಾದ ರಷ್ಯಾ ಮತ್ತು ಇರಾನಿನಿಂದ ದೂರ ಸರಿಸಲು ಪ್ರಯತ್ನಿಸುತ್ತಿದೆ, ಜಾಗತಿಕ ದಕ್ಷಿಣದ ದೇಶಗಳ ದುಡಿಯುವ ಜನರಿಗೆ ನೈಜ ಪರಿಹಾರ ಕೊಡಬಲ್ಲ ಎಸ್‍ಸಿಒ , ಬ್ರಿಕ್ಸ್ ನಂತಹ ಸಂಸ್ಥೆಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಯುಎಸ್‍ ಸಾಮ್ರಾಜ್ಯಶಾಹಿ ಪತನ ಹೊಂದುತ್ತಿರುವಾಗ, ಟ್ರಂಪ್‍ ಆಡಳಿತ ಅದನ್ನು ತಡೆದು ನಿಲ್ಲಿಸಲು ಅದರ ಬಿಕ್ಕಟ್ಟನ್ನು ಭಾರತದಂತಹ ದೇಶಗಳ ದುಡಿಯುವ ಜನರ ಹೆಗಲಿಗ ದಾಟಿಸಲು ಪ್ರಯತ್ನಿಸುತ್ತಿರುವಾಗ, ಸಂಘ ಪರಿವಾರ ಸಾಮ್ರಾಜ್ಯಶಾಹಿಯೊಂದಿಗೆ ತನ್ನ ಶಾಮೀಲಿನ ಪರಂಪರೆಗೆ ತಕ್ಕಂತೆ ಮತ್ತೊಮ್ಮೆ ಭಾರತದ ಜನತೆಗೆ ವಿಶ್ವಾಸದ್ರೋಹ ಬಗೆದಿದೆ ಎಂದು ಎಐಕೆಎಸ್‍ ಹೇಳಿದೆ.

ಈ ಒಪ್ಪಂದದ ಬಗ್ಗೆ ತೀವ್ರ  ಟೀಕೆಯನ್ನು ಮಾಡುತ್ತ ವಾಣಿಜ್ಯ ಮಂತ್ರಿಗಳು ತಕ್ಷಣವೇ ರಾಜೀನಾಮೆ ಕೊಡಬೇಕು ಎಂಬ ಸಂಯುಕ್ತ ಕಿಸಾನ್‍ ಮೋರ್ಚಾದ ಆಗ್ರಹವನ್ನು ಬೆಂಬಲಿಸುತ್ತ ಎಐಕೆಎಸ್ ಸಂಸತ್ತನ್ನು ದಾರಿ ತಪ್ಪಿಸಿದ್ದಕ್ಕೆ ಮತ್ತು ಭಾರತದ ಕೃಷಿ ವಲಯವನ್ನು ಸಾಮ್ರಾಜ್ಯಶಾಹೀ ಹಿತಗಳಿಗೆ ಒಳಪಡಿಸಿರುವುದಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಹೇಳಿದೆ. ಎಲ್ಲ ದುಡಿಯುವ ಜನರು ಮತ್ತು ದೇಶಪ್ರೇಮಿ ವಿಭಾಗಗಳು ಸಾಮ್ರಾಜ್ಯಶಾಹಿ-ಪರ ಧೋರಣೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕು, ಫೆಬ್ರುವರಿ12 ರ ಸಾರ್ವತ್ರಿಕ ಮುಷ್ಕರದಲ್ಲಿ ಮೋದಿ ಮತ್ತು ಟ್ರಂಪ್‍ ಪ್ರತಿಕೃತಿಗಳನ್ನು ಸುಡಬೇಕು ಎಂದು ಕರೆ ನೀಡಿದೆ.

ಇದನ್ನೂ ಓದಿ : ಮ್ಯಾಪಿಂಗ್‌ ಹೆಸರಿನ ಪರಿಷ್ಕರಣೆ – ಕರ್ನಾಟಕದಲ್ಲಿ ಎಸ್‌ಐಆರ್

ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ-ಸಿಪಿಐ(ಎಂ) ಖಂಡನೆ

ಭಾರತ–ಯು.ಎಸ್. ವ್ಯಾಪಾರ ಒಪ್ಪಂದದ ವಿವರಗಳು ನಿಧಾನವಾಗಿ ಹೊರಬರುತ್ತಿರುವಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಥಾಕಥಿತ ‘ಮಧ್ಯಂತರ ಒಪ್ಪಂದ’ದಲ್ಲಿ ಯು.ಎಸ್‍.ಗೆ ವಿಪರೀತ ರಿಯಾಯಿತಿಗಳನ್ನು ನೀಡಿರುವುದು ಸ್ಪಷ್ಟವಾಗುತ್ತಿದೆ. ಈ ರಿಯಾಯಿತಿಗಳು ಭಾರತದ ಅರ್ಥವ್ಯವಸ್ಥೆ, ಕೃಷಿ ಹಾಗೂ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯನ್ನು ಉಂಟುಮಾಡುವಂತವುಗಳು ಎಂದು ಫೆಬ್ರುವರಿ 8ರಂದು ನೀಡಿರುವ ಹೇಳಿಕೆಯಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಸಾರ್ವಜನಿಕವಾಗಿ ಲಭ್ಯವಿರುವ ಅಪೂರ್ಣ ಮಾಹಿತಿಯ ಪ್ರಕಾರವೂ, ಯು.ಎಸ್.ನಿಂದ ಆಮದು ಆಗುವ ಹಣ್ಣುಗಳು, ಹತ್ತಿ, ಮರದ ಕಾಯಿ ಉತ್ಪನ್ನಗಳು, ಸೋಯಾಬೀನ್ ಎಣ್ಣೆ ಹಾಗೂ ಇನ್ನಿತರ ಕೆಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೆ ಯಾವುದೇ ಸುಂಕ (ಶೂನ್ಯ ಸುಂಕ) ವಿಧಿಸುವುದಿಲ್ಲ ಎಂದು ಭಾರತ ಸರ್ಕಾರ ಒಪ್ಪಿಕೊಂಡಿದೆ. ಈ ನಿರ್ಧಾರವು ದೇಶದಾದ್ಯಂತ ಲಕ್ಷಾಂತರ ಸೇಬು ಬೆಳೆಗಾರರು, ಹತ್ತಿ ಮತ್ತು ಸೋಯಾ ರೈತರ ಜೀವನೋಪಾಯಕ್ಕೆ ಭಾರೀ ಹಾನಿ ಉಂಟುಮಾಡಲಿದೆ.

ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ರಾಜ್ಯಗಳ ಸೇಬು ರೈತರು ಈಗಾಗಲೇ ನ್ಯೂಜಿಲ್ಯಾಂಡ್ ಮುಂತಾದ ದೇಶಗಳೊಂದಿಗೆ ಈ ಮೊದಲು ಸಹಿ ಹಾಕಿದ ವ್ಯಾಪಾರ ಒಪ್ಪಂದಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಯು.ಎಸ್‍.ನೊಂದಿಗೆ ಮಾಡಿರುವ ಪ್ರಸ್ತುತ ಒಪ್ಪಂದವು ಅವರ ಜೀವನೋಪಾಯಗಳನ್ನು ಇನ್ನಷ್ಟು ನಾಶಗೊಳಿಸುತ್ತದೆ. ಈಗಾಗಲೇ ಹೆಚ್ಚುತ್ತಿರುವ ಲಾಗುವಾಡು ವೆಚ್ಚಗಳು ಮತ್ತು ತೀವ್ರಗೊಳ್ಳುತ್ತಿರುವ ಕೃಷಿ ಸಂಕಷ್ಟದಿಂದ ನರಳುತ್ತಿರುವ ಹತ್ತಿ ರೈತರು ಕೂಡ ಇದೇ ರೀತಿಯ ವಿನಾಶವನ್ನು ಎದುರಿಸಬೇಕಾಗುತ್ತದೆ.

ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ  ಸುಂಕೇತರ ಅಡೆತಡೆಗಳನ್ನು (non-tariff barriers) ತೆಗೆದುಹಾಕಲು ಕೂಡ  ಭಾರತ ಸರ್ಕಾರ ಒಪ್ಪಿಕೊಂಡಿದೆ ಎಂಬುದನ್ನು ವರದಿಗಳು ಸೂಚಿಸುತ್ತಿವೆ. ಇದರ ಅರ್ಥವೆಂದರೆ,  ಭಾರತೀಯ ರೈತರಿಗೆ ನೀಡಲಾಗುತ್ತಿರುವ ಬೆಂಬಲ ಮತ್ತು ಸಬ್ಸಿಡಿಗಳನ್ನು  ಹಿಂಪಡೆಯಲಾಗುವುದು. ಭಾರತದ ರೈತರನ್ನು ಇದು ಭಾರೀ ಸಬ್ಸಿಡಿಗಳನ್ನು ಪಡೆಯುತ್ತಿರುವ ಯು.ಎಸ್. ಕೃಷಿ ಉತ್ಪನ್ನಗಳೊಂದಿಗೆ ಸ್ಪರ್ಧೆಗೆ ಒಡ್ಡುತ್ತದೆ ಮತ್ತು  ಭಾರತೀಯ ಕೃಷಿ ಇನ್ನಷ್ಟು ಅವ್ಯವಹಾರಿಕವಾಗುವ ಸ್ಥಿತಿಗೆ ತಲುಪುತ್ತದೆ.

ಈ ವ್ಯಾಪಾರ ಒಪ್ಪಂದವು ನಮ್ಮ ಸಾರ್ವಭೌಮತ್ವಕ್ಕೆ ಭಾರೀ ಹೊಡೆತವಾಗಿದೆ, ಏಕೆಂದರೆ ರಷ್ಯಾದಿಂದ ತೈಲ ಖರೀದಿಸುವ ಕುರಿತು ನಮ್ಮ ಧೋರಣೆಯೂ ಸೇರಿದಂತೆ  ನಮ್ಮ ಧೋರಣೆಗಳು ಏನಿರಬೇಕು ಎಂಬುದನ್ನು ಯುಎಸ್‍ ನಮಗೆ ಆದೇಶಿಸುವಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವು ಈ ನಿರ್ದೇಶನಗಳ ಪಾಲನೆಯ ಉಸ್ತುವಾರಿಗೆ ಒಂದು  ವ್ಯವಸ್ಥೆಯನ್ನು ಸ್ಥಾಪಿಸಿಉತ್ತದೆ ಮತ್ತು ಅದನ್ನು  ಉಲ್ಲಂಘಿಸಿದಲ್ಲಿ ಸುಂಕ ಹೇರುವ ಬೆದರಿಕೆಯನ್ನು ಒಡ್ಡುತ್ತದೆ. ಇದು ಬಿಜೆಪಿಯ ನೇತೃತ್ವದ ಸರ್ಕಾರದ ಒಂದು  ಲಜ್ಜಾಸ್ಪದ ಶರಣಾಗತಿಯಾಗಿದೆ ಎಂದು ಪೊಲಿಟ್‍ಬ್ಯುರೊ ವರ್ಣಿಸಿದೆ.

ಯು.ಎಸ್. ರಕ್ಷಣಾ ಸರಬರಾಜುಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದಕ್ಕೆ ಸರ್ಕಾರ ಬದ್ಧತೆ ತೋರಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಇದು ಭಾರತದ ಸಾಮರಿಕ ಹಿತಾಸಕ್ತಿಗಳಿಗೆ ಹಾನಿಕಾರಕವಾಗಲಿದೆ ಎಂದಿರುವ  ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಒಪ್ಪಂದದ ಸಂಪೂರ್ಣ ವಿವರಗಳನ್ನು ತಕ್ಷಣವೇ ಸಂಸತ್ತಿನ ಮುಂದೆ ಮಂಡಿಸಬೇಕು  ಮತ್ತು ಸಾರ್ವಜನಿಕಗೊಳಿಸಬೇಕೆಂಬ ತನ್ನ ಆಗ್ರಹವನ್ನು  ಪುನರುಚ್ಛರಿಸಿದೆ. ಭಾರತೀಯ ಕಾರ್ಮಿಕರು, ರೈತರು ಮತ್ತು ಒಟ್ಟಾರೆಯಾಗಿ ಜನಸಾಮಾನ್ಯರ ಹಿತಾಸಕ್ತಿಗಳಿಗೆ ಹಾನಿಕಾರಕವಾಗುವ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸರ್ಕಾರ ತಕ್ಷಣವೇ ತ್ಯಜಿಸುವಂತೆ ಒತ್ತಾಯ ಹಾಕಬೇಕು  ಎಂದು ಅದು ಕರೆ ನೀಡಿದೆ.

ಇದನ್ನೂ ನೋಡಿ : ಫೆ12ರ ಮುಷ್ಕರ | ಕೃಷಿ ರೈತರದ್ದು, ಕಾರ್ಪರೇಟ್‌ ಕಂಪನಿಗಳದ್ದು ಅಲ್ಲ | ಸಿದ್ಧನಗೌಡ ಪಾಟೀಲ್‌ | ಗುರುರಾಜ ದೇಸಾಯಿ

 

Donate Janashakthi Media

Leave a Reply

Your email address will not be published. Required fields are marked *