ಟೋಕಿಯೋ: ಒಲಿಂಪಿಕ್ಸ್‌ನ ಮಹಿಳಾ ಹಾಕಿ ಪಂದ್ಯದ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಭಾರತ ಮಹಿಳಾ ಹಾಕಿ ತಂಡವು ಅಂತಿಮ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಒಲಿಂಪಿಕ್ಸ್ ಪಂದ್ಯವು 9ನೇ ದಿನವಾದ ಇಂದು ʻಎʼ ಗುಂಪಿನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು 4-3 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ.
ಇದನ್ನು ಓದಿ: ಡಿಸ್ಕಸ್ ಥ್ರೊ: ಫೈನಲ್ ಪ್ರವೇಶಿಸಿ ಶ್ರೇಷ್ಠ ಸಾಧಕಿ ಕಮಲ್‌ಪ್ರೀತ್ ಕೌರ್
ಈ ಪಂದ್ಯ ಗೆಲ್ಲುವುದರೊಂದಿಗೆ ಭಾರತವು ಒಲಿಂಪಿಕ್ಸ್‌ನ ಮಹಿಳಾ ಹಾಕಿ ಪಂದ್ಯದ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸು ಜೀವಂತವಾಗಿದೆ. ಭಾರತ ಆಟಗಾರ್ತಿ ವಂದನಾ ಕಟಾರಿಯಾ ‘ಹ್ಯಾಟ್ರಿಕ್ ಗೋಲು’ ಸಾಧನೆ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯದ ನಾಲ್ಕನೇ ನಿಮಿಷದಲ್ಲಿ ನವ್‍ನೀತ್ ಕೌರ್ ಬಳಿಯಲ್ಲಿಂದ ವಂದನಾ ಗೋಲ್ ದಾಖಲಿಸುವ ಮೂಲಕ 1-0 ಅಂತರದ ಮುನ್ನಡೆ ಕಾಯ್ದುಕೊಂಡರು. ಕೆಲವೇ ಹೊತ್ತಿನಲ್ಲಿ ಟರಿನ್ ಗ್ಲಾಸ್ಬಿ (15ನೇ ನಿಮಿಷ) ರೂಪದಲ್ಲಿ ದಕ್ಷಿಣ ಆಫ್ರಿಕಾ ತಿರುಗೇಟು ನೀಡಿತು. ಆದರೆ 17ನೇ ನಿಮಿಷದಲ್ಲಿ ವಂದನಾ ಮತ್ತೊಂದು ಗೋಲು ಬಾರಿಸಿದಾಗ ಉಬಯ ತಂಡಗಳು 2-1ರ ಮುನ್ನಡೆ ಸಾಧಿಸಿತು. ದಕ್ಷಿಣ ಆಫ್ರಿಕಾದ ಎರಿನ್ ಹಂಟರ್ 30ನೇ ನಿಮಿಷದಲ್ಲಿ ಸಮಬಲದ ಗೋಲು ದಾಖಲಿಸಿದರು. ಇನ್ನೆರಡು ನಿಮಿಷಗಳಲ್ಲಿ ನೇಹಾ ಗೋಯಲ್ (32ನೇ ನಿಮಿಷ) ತಿರುಗೇಟು ನೀಡಿದರು. 39ನೇ ನಿಮಿಷದಲ್ಲಿ ಮಾರಿಜೆನ್ ಮಾರೈಸ್ ಗೋಲು ಬಾರಿಸುವುದರೊಂದಿಗೆ ಭಾರತದ ಪಡೆಯಲ್ಲಿ ಆತಂಕ ಸೃಷ್ಟಿಯಾಯಿತು. ಮತ್ತೆ ವಂದನಾ ಪಂದ್ಯದ 49ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ರೋಚಕ ಗೆಲುವಿಗೆ ಆಸರೆಯಾದರು.
ಇನ್ನೂ ವಂದನಾ ಕಟಾರಿಯಾ ಸತತ ಮೂರು ಗೋಲ್ ದಾಖಲಿಸುವ ಮೂಲಕ ಹೊಸ ದಾಖಲೆಯನ್ನ ತಮ್ಮ ಹೆಸರಿನಲ್ಲಿ ಬರೆದುಕೊಂಡರು. ವಂದನಾ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿದ್ದಾರೆ. ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್ ನಡುವಿನ ಪಂದ್ಯದ ನಂತರ ಪೂಲ್-ಎ ಪಂದ್ಯಗಳ ಕ್ವಾರ್ಟರ್ ಫೈನಲ್ ತಲುಪುವ ತಂಡ ಯಾವುದು ಅಂತ ಗೊತ್ತಾಗಲಿದೆ.
ಇದನ್ನು ಓದಿ: ಒಲಿಂಪಿಕ್ಸ್: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು
ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶವನ್ನು ಪಡೆಯಲಿವೆ. ಐರ್ಲೆಂಡ್ ನಾಲ್ಕು ಪಂದ್ಯಗಳಲ್ಲಿ ಮೂರು ಅಂಕಗಳನ್ನು ಹೊಂದಿವೆ. ಐರ್ಲೆಂಡ್ ಕೊನೆಯ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಸವಾಲನ್ನು ಎದುರಿಸಲಿದೆ. ಅಂತಿಮ ಪಂದ್ಯದಲ್ಲಿ ಐರ್ಲೆಂಡ್ ಗೆದ್ದರೆ ಭಾರತದಷ್ಟೇ ಅಂಕ ಗಳಿಸಲಿದೆ. ಆದರೆ ಗೋಲುಗಳ ಲೆಕ್ಕಾಚಾರದಲ್ಲಿ ಕ್ವಾರ್ಟರ್‌ಗೆ ಪ್ರವೇಶಿಸಲಿದೆ.
ಆರ್ಚರಿ, ಬಾಕ್ಸಿಂಗ್‍ನಲ್ಲಿ ನಿರಾಸೆ:
ಇದೇ ಸಂದರ್ಭದಲ್ಲಿ ಆರ್ಚರಿ ಮತ್ತು ಬಾಕ್ಸಿಂಗ್ ನಲ್ಲಿ ಭಾರತ ನಿರಾಸೆ ಕಂಡಿದೆ. ಅರ್ಚರಿಯಲ್ಲಿ ಅತನು ದಾಸ್ ಮತ್ತು ಬಾಕ್ಸರ್ ಅಮಿತ್ ಪಂಘಲ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಇಬ್ಬರು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಕಂಡರು.