ಕೊರೊನಾ ನಿರ್ವಹಣೆ, ಆಕ್ಸಿಜನ್, ಬೆಡ್, ವೆಂಟಿಲೇಟರ್ ಗಿಂತಲೂ ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಯ ಕೊರತೆ ಭಯಂಕರವಾಗಿ ಕಾಡಲಿದೆ. ಈ ವಿಚಾರ ಬಹಳಷ್ಟು ನನ್ನನ್ನು ಕಾಡುತ್ತಿದೆ ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸಿಂಬಯೋಸಿಸ್ ಗೋಲ್ಡನ್ ಜ್ಯೂಬಿಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಡಾ.ಶೆಟ್ಟಿ, ಮುಂದೆ ಎದುರಾಗಬಹುದಾದ ಈ ಗಂಭೀರ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎನ್ನುವುದರ ಬಗ್ಗೆಯೂ ವಿವರಣೆಯನ್ನು ನೀಡಿದ್ದಾರೆ.
ಈಗ ಕೋವಿಡ್ನ ಸಂಪೂರ್ಣ ಚರ್ಚೆಯು ಆಮ್ಲಜನಕದ ಸುತ್ತ ಇದೆ. ಇಷ್ಟು ಅಲ್ಪಾವಧಿಯಲ್ಲಿ ಇಂತಹ ಆತಂಕಗಳು ಸಂಭವಿಸಲಿದೆ ಎಂದು ಯಾರೂ ಉಹಿಸಿರಲಿಲ್ಲ. ಏಕೆಂದರೆ ನಾವು ಯುವ ರಾಷ್ಟ್ರವಾಗಿದ್ದು, ಹೆಚ್ಚಿನ ಸಂಖ್ಯೆಯ ಯುವಕರು ನಮ್ಮ ದೇಶದಲ್ಲಿದ್ದಾರೆ. ಅವರು ಸಹಜವಾಗಿಯೇ ಸೋಂಕಿಗೆ ಒಳಗಾಗುತ್ತಾರೆ. ಕೈಗಾರಿಕೆಗಳು ಮತ್ತು ಸರ್ಕಾರದ ಹಸ್ತಕ್ಷೇಪದೊಂದಿಗೆ ಮುಂದಿನ ಕೆಲವು ವಾರಗಳಲ್ಲಿ ನಾವು ಆಮ್ಲಜನಕದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ. ಏಕೆಂದರೆ ನಮ್ಮಲ್ಲಿ ಸಾಕಷ್ಟು ಸ್ಟೀಲ್ ಕಾರ್ಖಾನೆಗಳಿವೆ, ಕೈಗಾರಿಕಾ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆಕ್ಸಿಜನ್ ಅಗತ್ಯವಿರುವ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆಮ್ಲಜನಕ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ.
ಇದನ್ನು ಓದಿ: ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು
ನನಗೆ ಕಳವಳವಿದೆ, ನಾನು ದುಃಖಿತನಾಗಿದ್ದೇನೆ, ಆದರೆ ನಾನು ಆತಂಕಕ್ಕೊಳಗಾಗುವುದಿಲ್ಲ. ಏಕೆಂದರೆ ಈ ದೇಶದ ಕೈಗಾರಿಕೆಗಳು ವಾಸ್ತವವನ್ನು ಪರಿಹರಿಸಲು ಎಚ್ಚರಗೊಳ್ಳುತ್ತವೆ ಎಂದು ನನಗೆ ತಿಳಿದಿದೆ. ಅಕ್ಸಿಜನ್ ಮುಂತಾದ ಸಮಸ್ಯೆಗಳು ಸದ್ಯದಲ್ಲೇ ಬಗೆಹರಿಯಲಿದೆ. ಆದರೆ, ಇನ್ನು ಕೆಲವೇ ವಾರಗಳಲ್ಲಿ ಇಡೀ ದೇಶ ಗಂಭೀರ ಸಮಸ್ಯೆಯನ್ನು ಎದುರಿಸಲು ಸಿದ್ದವಾಗಬೇಕಿದೆ. ಪಿಪಿಇ, ಆಕ್ಸಿಜನ್, ವೆಂಟಿಲೇಟರ್ ಮುಂತಾದ ಹೆಡ್ಲೈನ್ ಗಳನ್ನು ನಾವು ನೋಡುತ್ತಿದ್ದೆವು. ಇನ್ನು ಇದು ಬದಲಾಗಲಿದೆ ಎಂದು ಡಾ.ಶೆಟ್ಟಿ ಹೇಳಿದ್ದಾರೆ. ಐಸಿಯುನಲ್ಲಿರುವ ರೋಗಿಗಳು, ವೈದ್ಯರು ಮತ್ತು ನರ್ಸ್ ಗಳು ಇಲ್ಲದೇ ಇರುವುದರಿಂದ ಮೃತ ಪಡುತ್ತಿದ್ದಾರೆ ಎನ್ನುವ ಹೆಡ್ಲೈನ್ ಇರಲಿದೆ ಎಂದು ಡಾ.ಶೆಟ್ಟಿ ಹೇಳಿದ್ದು, ಕೊರೊನಾ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಲಿಲ್ಲ ಎನ್ನುವ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಶೇ. ಐದರಷ್ಟು ಕೋವಿಡ್ ಪಾಸಿಟೀವ್ ಇರುವವರಿಗೆ ಐಸಿಯು ಬೆಡ್ : ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಇದುವರೆಗಿನ ಕೊರೊನಾ ಮಾಡಿರುವ ತೊಂದರೆಯ ಪ್ರಕಾರ ಹೇಳುವುದಾದರೆ ಶೇ. ಐದರಷ್ಟು ಕೋವಿಡ್ ಪಾಸಿಟೀವ್ ಇರುವವರಿಗೆ ಐಸಿಯು ಬೆಡ್ ಬೇಕಾಗುತ್ತದೆ. ಹಾಗಾಗಿ, ಹೊಸದಾಗಿ ಎಂಬತ್ತು ಸಾವಿರದಷ್ಟು ಐಸಿಯು ಬೆಡ್ ಬೇಕಾಗುತ್ತದೆ. ನಮ್ಮ ದೇಶದಲ್ಲಿರುವ ಒಟ್ಟಾರೆ ಐಸಿಯು ಬೆಡ್ ಗಳು 75-90 ಸಾವಿರ ಬೆಡ್ ಗಳು. ಕೋವಿಡ್ ಸೋಂಕಿತರು ಕನಿಷ್ಟ ಅಂದರೆ ಹತ್ತು ದಿನವಾದರೂ ಐಸಿಯು ನಲ್ಲಿ ಇರಬೇಕಾಗುತ್ತದೆ ಎಂಬ ಆತಂಕವನ್ನು ಡಾ.ದೇವಿ ಶೆಟ್ಟಿ ಹೊರಹಾಕಿದ್ದಾರೆ.
ಐದು ಲಕ್ಷ ಹೆಚ್ಚುವರಿಯಾಗಿ ಬೆಡ್ ಅನ್ನು ನಾವು ಅತ್ಯಂತ ತುರ್ತಾಗಿ ಸಿದ್ದಪಡಿಸಬೇಕಾಗಿದೆ : ಐದು ಲಕ್ಷ ಹೆಚ್ಚುವರಿಯಾಗಿ ಬೆಡ್ ಅನ್ನು ನಾವು ಅತ್ಯಂತ ತುರ್ತಾಗಿ ಸಿದ್ದಪಡಿಸಬೇಕಾಗಿದೆ. ಇದರ ಜೊತೆಗೆ, ವೈದ್ಯರು, ಪ್ಯಾರಾ ಮೆಡಿಕಲ್ ಸ್ಟಾಫ್ ಮತ್ತು ನರ್ಸ್ ಗಳು ಕೂಡಾ ಬೇಕಾಗುತ್ತದೆ. ಯಾಕೆಂದರೆ, ಐಸಿಯುನಲ್ಲಿ ರೋಗಿಯನ್ನು ನೋಡಿಕೊಳ್ಳುವುದು ನರ್ಸ್ ಗಳು, ವೈದ್ಯರಲ್ಲ. ಕೋವಿಡ್ ಗೂ ಮುನ್ನ ಸರಕಾರೀ ಆಸ್ಪತ್ರೆಗಳಲ್ಲಿ ಶೇ. 75ರಷ್ಟು ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿತ್ತು. ಎರಡು ಲಕ್ಷ ನರ್ಸುಗಳು ಮತ್ತು ಒಂದೂವರೆ ಲಕ್ಷ ವೈದ್ಯರನ್ನು ನಾವು ತುರ್ತಾಗಿ ನೇಮಿಸಬೇಕಿದೆ. ಯಾಕೆಂದರೆ, ಕೊರೊನಾ ವೈರಸ್ ಮುಂದಿನ ಮೂರ್ನಾಲ್ಕು ತಿಂಗಳು ಇರಲಿದೆ, ಇದಾದ ಮೇಲೆ, ಮೂರನೇ ಅಲೆ ಮುಂದಿನ ಒಂದು ವರ್ಷಕ್ಕೆ ಅನ್ವಯವಾಗುವಂತೆ ನೇಮಕಾತಿ ಆಗಬೇಕಿದೆ. ಈ ವೈರಸ್ ಮುಂದಿನ ಮೂರ್ನಾಲ್ಕು ತಿಂಗಳು ಇರಲಿದೆ. ಇದಾದ ಮೇಲೆ, ಮೂರನೇ ಅಲೆಯನ್ನೂ ನಾವು ಎದುರಿಸಬೇಕಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ನರ್ಸ್ ಗಳನ್ನು ಹೇಗೆ ನೇಮಕಾತಿ ಮಾಡಬಹುದು ಎನ್ನುವುದನ್ನು ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಮತ್ತು ಆರೋಗ್ಯ ಇಲಾಖೆಗೆ ತುತರ್ತಾಗಿ ಗಮನ ನೀಡಬೇಕಿದೆ ಎಂದು ಡಾ.ಶೆಟ್ಟಿ ವಿವರಿಸಿದ್ದಾರೆ.
ಇದನ್ನೂ ಓದಿ : ಆಕ್ಸಿಜೆನ್ ಗಾಗಿ ಹಾಹಾಕಾರ. ಬೆಡ್ ಗಾಗಿ ಪರದಾಟ, ಇದು ಕರ್ನಾಟಕದ ಕರುಣಾಜನಕ ಕತೆ
ಮೆಟ್ರೋ ಸಿಟಿಗಳಲ್ಲಿ ಈಗ ಕೊರೊನಾ ಹೆಚ್ಚಿರಬಹುದು, ಆದರೆ ಇತರ ನಗರಗಳಲ್ಲೂ ಇದು ವ್ಯಾಪಕವಾಗಿ ಮುಂದಿನ ದಿನಗಳಲ್ಲಿ ಹರಡಲಿದೆ. ಹಾಗಾಗಿ, ಈ ಸಲಹೆಗೆಳನ್ನು ಸರಕಾರ ಮತ್ತು ಸಂಬಂಧ ಪಟ್ಟವರು ಅವಲೋಕಿಸಿ ಕಾರ್ಯೋನ್ಮುಖರಾದರೆ ಕೋವಿಡ್ ವಿರುದ್ದ ನಾವು ಜಯಗಳಿಸಬಹುದು. ಇಲ್ಲದಿದ್ದರೆ, ಬಹುದೊಡ್ಡ ದುರಂತ ಎದುರಾಗಲಿದೆ. ಕೊರೊನಾ ಮೊದಲನೇ ಅಲೆಯ ವೇಳೆ ವೈದ್ಯರು, ನರ್ಸ್ ಗಳಿಗೆ ಇದ್ದ ಉತ್ಸಾಹ, ಶಕ್ತಿ ಈಗಿಲ್ಲ. ಹಾಗಾಗಿ ಯುವ ಸಮುದಾಯವನ್ನು ಈ ಕೆಲಸಕ್ಕೆ ನಿಯೋಜಿಸುವ ಅಗತ್ಯತೆಯಿದೆ ಎಂದು ಡಾ.ದೇವಿ ಪ್ರಸಾದ್ ಶೆಟ್ಟಿ ವಿವರಿಸಿದ್ದಾರೆ.
ಕೊರೊನಾ ಭಯಂಕರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಡಾ.ಶೆಟ್ಟಿಯವರ ಈ ಹೇಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದರೆ, ಮುಂದೆ ಎದುರಾಗಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದಾಗಿದೆ.