ಭಾರತ-ಯುಎಸ್ ವ್ಯಾಪಾರ ಒಪ್ಪಂದ ಒಂದು ‘ಸಂಪೂರ್ಣ ಶರಣಾಗತಿ’ ಸಂಯುಕ್ತ ಕಿಸಾನ್‍ ಮೋರ್ಚಾ ಖಂಡನೆ

ಕೇಂದ್ರ ವಾಣಿಜ್ಯ ಮಂತ್ರಿ ಪೀಯೂಷ್‍ ಗೋಯಲ್‍ ರಾಜೀನಾಮೆಗೆ ಆಗ್ರಹ 

ನವದೆಹಲಿ: ಶನಿವಾರ, ಫೆಬ್ರುವರಿ 7ರಂದು  ಅಧಿಕೃತವಾಗಿ ಬಿಡುಗಡೆಗೊಂಡಿರುವ  ಭಾರತ -ಯುಎಸ್‍ ವ್ಯಾಪಾರ ಒಪ್ಪಂದದ  ರೂಪರೇಖೆಯ ಪ್ರಕಾರ, ನರೇಂದ್ರ ಮೋದಿ ಸರ್ಕಾರ ವ್ಯಾಪಾರ ಒಪ್ಪಂದದಲ್ಲಿ ಅಮೆರಿಕದ ಎದುರು “ಸಂಪೂರ್ಣ ಶರಣಾಗತಿ” ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರ ಐಕ್ಯ ವೇದಿಕೆಯಾದ  ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ),  ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ರಾಜೀನಾಮೆ ನೀಡಬೇಕೆಂದು  ಆಗ್ರಹಿಸಿದೆ.

“ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳ ಮೇಲೆ ಮತ್ತು ಅಮೆರಿಕದ ಆಹಾರ ಹಾಗೂ ಕೃಷಿ ಉತ್ಪನ್ನಗಳ ವಿಶಾಲ ಶ್ರೇಣಿಯ ಮೇಲೆ ಭಾತ ಸುಂಕಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ, ಇಲ್ಲವೇ  ಕಡಿತ ಮಾಡುತ್ತದೆ” ಎಂದು ಇದರಲ್ಲಿ ಹೇಳಲಾಗಿದೆ. ಒಣಗಿಸಿದ ಡಿಸ್ಟಿಲ್ಲರ್ಸ್‌ ಗ್ರೇನ್ಸ್ (DDGs), ಪ್ರಾಣಿಗಳ ಆಹಾರಕ್ಕೆ ಬಳಸುವ ಕೆಂಪು ಜೋಳ (red sorghum), ಮರದ ಬೀಜಗಳು, ತಾಜಾ ಹಾಗೂ ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್  ಹಾಗೂ ಇತರೆ ಹೆಚ್ಚುವರಿ ಉತ್ಪನ್ನಗಳು ಇದರಲ್ಲಿ ಸೇರಿವೆ.

ಇದು ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು ಮುಕ್ತ ವ್ಯಾಪಾರ ಒಪ್ಪಂದಗಳಿಂದ ಹೊರಗಿಡಲಾಗಿದೆ ಹಾಗೂ ಕೃಷಿಯ ಹಿತಾಸಕ್ತಿಗಳ ಮೇಲೆ ಭಾರತ ಸರ್ಕಾರ ಯಾವುದೇ ಸಮಜಾಯಿಷಿ ಮಾಡಿಕೊಳ್ಳುವುದಿಲ್ಲ ಎಂದು ಮಾಡಿದ ದಾವೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದಂತಾಗಿದೆ. ಯು.ಕೆ,, ನ್ಯೂಜಿಲೆಂಡ್ ಮತ್ತು ಯುರೋ ಕೂಟದೊಂದಿಗೆ ಸಹಿ ಮಾಡಿರುವ ಎಫ್‌ಟಿಎಗಳಲ್ಲಿ ಹೈನು ಉತ್ಪನ್ನಗಳು ಸೇರಿವೆ. ಇತ್ತೀಚಿನ ಬಹಿರಂಗಕ್ಕೆ ಬಂದಿರುವ ಸಂಗತಿಗಳು ವಾಣಿಜ್ಯ ಮಂತ್ರಿಗಳು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹರಡುತ್ತಿದ್ದು, ರೈತರರಿಗೂ ಸಮಸ್ತ ಜನರಿಗೂ ವಿಶ್ವಾಸದ್ರೋಹ ಬಗೆಯುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿವೆ ಎಂದಿರುವ ಎಸ್‌ಕೆಎಂ ತಾವು ವಾಣಿಜ್ಯ ಸಚಿವರು ವಿಶ್ವಾಸದ್ರೋಹಿಯ ಪಾತ್ರವನ್ನು ವಹಿಸಿದ್ದಾರೆ ಎಂದು ಪರಿಗಣಿಸಿ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಭಾರತ–ಯುಎಸ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡುವುದನ್ನು ಪ್ರಧಾನಿ ತಡೆಯದಿದ್ದರೆ, ದೇಶವ್ಯಾಪಿ ಭಾರೀ ಐಕ್ಯ ಜನಾಂದೋಲನಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿಗೆ ಎಚ್ಚರಿಕೆಯನ್ನೂ ಎಸ್‍ಕೆಎಎಂ ನೀಡಿದೆ.

ಫೆಬ್ರವರಿ 12ರಂದು ನಡೆಯುವ ಪ್ರತಿಭಟನಾ ಪ್ರದರ್ಶನಗಳಲ್ಲಿ ದೇಶದಾದ್ಯಂತ ರೈತರು ಭಾಗವಹಿಸಬೇಕು ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು—ರೈತ ಸಮೂಹದ ಬೆಂಬಲದೊಂದಿಗೆ—“ಜನವಿರೋಧಿ” ಮೋದಿ ಸರ್ಕಾರಕ್ಕೆ ತಕ್ಕ ಉತ್ತರವಾಗಿ ರೂಪಿಸಬೇಕೆಂದು ಎಸ್‌ಕೆಎಂ ಕರೆ ನೀಡಿದೆ.

ಭಾರತೀಯ ರೈತರು ಮತ್ತು ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವ ಸರ್ಕಾರದ ನಡೆಯನ್ನು ತಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜನ, ವರ್ಗ ಮತ್ತು ಸಾಮೂಹಿಕ ಸಂಘಟನೆಗಳು ಒಗ್ಗೂಡಬೇಕೆಂದು ಎಸ್‍ಕೆಎಂ  ಕರೆ ನೀಡಿದೆ.

ಇದೆಂತಾ ಮುಕ್ತ ವ್ಯಾಪಾರ!

ಅಮೆರಿಕದಿಂದ 18% ಸುಂಕ ಮತ್ತು ಭಾರತದಿಂದ ಶೂನ್ಯ ಶೇಕಡಾ ಸುಂಕ—ಇದು ಮುಕ್ತ ವ್ಯಾಪಾರವಲ್ಲ. ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕ 2023–24ರಲ್ಲಿ ಶೂನ್ಯದಿಂದ 3% ಇದ್ದದ್ದು  ಈಗ 18%ಕ್ಕೆ ಏರಿದೆ. ಆದರೆ ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ನಮ್ಮ ಸುಂಕ ದರಗಳು 30ರಿಂದ 150%ವರೆಗೆ ಇದ್ದವು; ಈಗ ಅವು ಶೂನ್ಯಕ್ಕೆ ಇಳಿದಿವೆ. ಇದರಿಂದ ಭಾರತೀಯ ಕೃಷಿ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳ ನೇಣಿಗೆ ಸಿಲುಕುವಂತಾಗುತ್ತದೆ. ಮಧ್ಯಂತರ ಒಪ್ಪಂದದ ರೂಪರೇಖೆಯ ಪ್ರಕಾರ, ಸುಂಕೇತರ ಅಡೆತಡೆಗಳನ್ನು ಕೂಡ ಕಡಿತಗೊಳಿಸಲಾಗುತ್ತದೆ, ಇದು ಅಮೆರಿಕದಿಂದ ಹಾಲಿನ ಆಮದಿಗೆ ನೆರವಾಗುತ್ತದೆ. ಮಾಂಸಾಹಾರಿ ಪ್ರಾಣಿಗಳ ಹಾಲನ್ನು ಆಮದು ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿಕೊಂಡಿತ್ತು; ಅದು ಒಂದು ಸುಂಕೇತರ ತಡೆ ಆಗಿತ್ತು. ಈಗ ಡೊನಾಲ್ಡ್ ಟ್ರಂಪ್ ಅವರ ಮುಂದೆ ಆರ್‌ಎಸ್‌ಎಸ್ ತನ್ನದೇ ದಾವೆಯನ್ನು ನುಂಗಿ ಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದು, ಆತನ  ಎದುರು ಸಂಪೂರ್ಣವಾಗಿ ಮಣಿದಿದೆ ಎಂದು ಎಸ್‍ಕೆಎಂ ಕಟುವಾಗಿ ಟೀಕಿಸಿದೆ.

 

ಹುರ್ರೆ! ಭಾರತ ಯುಎಸ್‍ ನ್ನು
18-0 ಯಿಂದ ಸೋಲಿಸಿದೆ!
ವ್ಯಂಗ್ಯಚಿತ್ರ ಕೃಪೆ: ಸಜಿತ್‍ ಕುಮಾರ್,ಡೆಕ್ಕನ್‍ ಹೆರಾಲ್ಡ್
                             

 

ಪ್ರೆಸ್‍ ಇನ್ಫೊರ್ಮೇಷನ್ಪ್ರ ಬ್ಯುರೊ (ಪಿಐಬಿ) ಪ್ರಕಟಣೆಯ ಪ್ರಕಾರ, ಮೆಕ್ಕೆಜೋಳವನ್ನು ಒಣಗಿಸಿದ ಡಿಸ್ಟಿಲ್ಲ್ಡ್ ಗ್ರೇನ್ (DDB) ರೂಪದಲ್ಲಿ ಮತ್ತು ಜೋಳವನ್ನು ಪ್ರಾಣಿಗಳ ಆಹಾರವಾಗಿ ಮಾರಾಟ ಮಾಡಲಾಗುತ್ತದೆ. ಪ್ರಾಣಿಗಳ ಆಹಾರ ಮಾರುಕಟ್ಟೆಯ ನಿಯಂತ್ರಣ ಸಂಪೂರ್ಣವಾಗಿ ಅಮೆರಿಕದ ಕಂಪನಿಗಳ ಕೈಯಲ್ಲಿ ಏಕಾಧಿಪತ್ಯವಾಗಲಿದೆ. ಅಮೆರಿಕ ಈಗಾಗಲೇ ಮೆಕ್ಕೆಜೋಳ, ಸೋಯಾಬೀನ್, ಹತ್ತಿ ಮೊದಲಾದ ಬೆಳೆಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆ. ಅಮೆರಿಕದ ಗೋಧಿಯನ್ನು ಪ್ರತಿ ಕೆ.ಜಿ.ಗೆ ₹18.50ಕ್ಕೆ ಆಮದಾಗುತ್ತಿದೆ; ಅದು ಭಾರತೀಯ ಮಾರುಕಟ್ಟೆಗೆ ಪ್ರವಾಹವಾಗಿ ಹರಿದು ಬಂದರೆ  ಭಾರತೀಯ ರೈತರನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಜಿಎಂ ಆಹಾರಗಳು ಮತ್ತು ಜಿಎಂ ಬೀಜಗಳ ಆಮದಿಗೆ ಮುಕ್ತ ಅವಕಾಶ ನೀಡಲಾಗುತ್ತದೆ; ಇದು ನಮ್ಮ ನೈಸರ್ಗಿಕ ಫಲವತ್ತತೆಯನ್ನೇ  ನಾಶಮಾಡುವುದರ ಜೊತೆಗೆ ಧಾನ್ಯ, ಕಾಳು ಮತ್ತು ಎಣ್ಣೆಬೀಜ ಮಾರುಕಟ್ಟೆಗಳನ್ನು ಹಾಳುಮಾಡುತ್ತದೆ. ಸೋಯಾ ಎಣ್ಣೆಯ ಆಮದಿನ ಗುರಿಯಿಟ್ಟುಕೊಳ್ಳಲಾಗಿದೆ. ಎಥನಾಲ್ ಕೂಡ ಮುಕ್ತವಾಗಿ ಆಮದು ಆಗಲಿದೆ. ಸೇಬು, ಅನಾನಸ್, ತೆಂಗು, ಗೋಡಂಬಿ ಸೇರಿ ಒಣಹಣ್ಣುಗಳ ಆಮದು ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಇತರೆ ಈಶಾನ್ಯ ರಾಜ್ಯಗಳ ರೈತರನ್ನು ನಾಶಮಾಡುತ್ತದೆ.

ಈಗ ಯುಎಸ್‍ನ ಅಗ್ಗದ ಆಮದು ಸರಕುಗಳನ್ನು  ಭಾರತೀಯ ಮಾರುಕಟ್ಟೆಗಳಲ್ಲಿ ತಂದು ಸುರಿಯುವ ಭಾರೀ ಅಪಾಯವನ್ನು ಭಾರತೀಯ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳು ಎದುರಿಸುತ್ತಿವೆ. ಫೆಬ್ರವರಿ 1ರಂದು ಮಂಡಿಸಲಾದ ಕೇಂದ್ರ ಬಜೆಟ್ ಈಗಾಗಲೇ ಕೃಷಿ ವೃದ್ಧಿದರ (3.1%) ಮತ್ತು ಉದ್ಯೋಗ ಸೃಷ್ಟಿಯ ಕುಸಿತವನ್ನು ಬಹಿರಂಗಪಡಿಸಿದೆ ಹಾಗೂ ಬೆಳವಣಿಗೆಯ ಕೊರತೆಯನ್ನು ಪರಿಹರಿಸಲು ಸರ್ಕಾರದ ಬಳಿ ಯಾವುದೇ ಪ್ರಸ್ತಾಪಗಳಿಲ್ಲ ಎಂಬುದನ್ನು ತೋರಿಸಿದೆ.ಕನಿಷ್ಟ ಬೆಂಬಲ ಬೆಲೆಗಳು (ಎಂಎಸ್‍ಪಿ) ಎ2 ವೆಚ್ಚಕ್ಕೂ ಕೆಳಗಿದೆ, ಮಾರುಕಟ್ಟೆ ಬೆಲೆಗಳು ಎಂಎಸ್‌ಪಿಗಿಂತ ಕಡಿಮೆ, ಯೂರಿಯಾ ಮತ್ತು ಡಿಎಪಿ ವೆಚ್ಚ ಹೆಚ್ಚುತ್ತಿದೆ, ರೈತರ ಸಾಲ ಏರುತ್ತಿದೆ. ಸಾಮಾಜಿಕ ವೆಚ್ಚಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಕಡಿತಗೊಳಿಸಲಾಗಿದೆ. ಕಾರ್ಪೊರೇಟ್ ಸಮೂಹಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವೆ ಸಲ್ಲಿಸಲು  4 ಕಾರ್ಮಿಕ ಸಂಹಿತೆಗಳು ಮತ್ತು ವಿಬಿ–ಗ್ರಾಮ್‍ ಜಿ ಮೂಲಕ ನಗರ ಕಾರ್ಮಿಕರು ಮತ್ತು ಗ್ರಾಮೀಣ ಕೂಲಿಕಾರರ ಮೇಲೆ ಆರ್‌ಎಸ್‌ಎಸ್–ಬಿಜೆಪಿ ಸರ್ಕಾರ ದಾಳಿ ನಡೆಸುತ್ತಿದೆ. 2026–27ರ ಕೇಂದ್ರ ಬಜೆಟ್ ಬಹುತೆಕ ಕ್ಷೇತ್ರಗಳಲ್ಲಿ ಸೀಮಾ ಸುಂಕವನ್ನು ತೆಗೆದುಹಾಕಿದ್ದು, ಇದು ತಕ್ಷಣವೂ ಮತ್ತು ದೀರ್ಘಾವಧಿಯಲ್ಲೂ ಮಧ್ಯಮ,ಸಣ್ಣ ಮತ್ತು ಕಿರು ಉದ್ಯಮಗಳನ್ನು  ಮತ್ತು ಭಾರತೀಯ ಕೈಗಾರಿಕೆಯನ್ನು ನಾಶಮಾಡುತ್ತದೆ.

ಅಮೆರಿಕದ ಕೃಷಿ ಸಚಿವ ರೋಲಿನ್ಸ್, ಭಾರತವೇ ವಿಶ್ವದ ಅತಿದೊಡ್ಡ ಕೃಷಿ ಮಾರುಕಟ್ಟೆ ಎಂದು ಹೇಳಿದ್ದು, ಅದನ್ನು ಅಮೆರಿಕಕ್ಕೆ ತೆರೆಯುವುದರಿಂದ ಗ್ರಾಮೀಣ ಅಮೆರಿಕಕ್ಕೆ ಆದಾಯ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಜಗತ್ತಿನಲ್ಲಿ ಅತಿಹೆಚ್ಚು ಬಡ ಜನಸಂಖ್ಯೆ ಹೊಂದಿರುವ ದೇಶವನ್ನು ಆರ್‌ಎಸ್‌ಎಸ್ ತನ್ನ ಮೆಚ್ಚಿನ ವಿದೇಶಿ ಯಜಮಾನರುಗಳ ಲಾಭಕ್ಕಾಗಿ ಇನ್ನಷ್ಟು ಅಮಾನವೀಯ ಸ್ಥಿತಿಗೆ ತಳ್ಳುತ್ತಿದೆ. ಮೋದಿ ಸರ್ಕಾರ ಭಾರೀ ಸಹಾಯಧನ ಹೊಂದಿರುವ ಅಮೆರಿಕದ ಕೃಷಿ ಮತ್ತು ಹೈನು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗಳಿಗೆ ತಳ್ಳುತ್ತಿದೆ. ಭಾರತೀಯ ಕೃಷಿ ಈಗಾಗಲೇ ನಕಾರಾತ್ಮಕ ಸರ್ಕಾರಿ ಸಹಾಯಧನದಿಂದ ಬಳಲುತ್ತಿದೆ. 17.2 ಕೋಟಿ ಗ್ರಾಮೀಣ ಕುಟುಂಬಗಳು ಮತ್ತು 86% ಸಣ್ಣ ಹಾಗೂ ಅಂಚಿನ ರೈತರು—ಭಾರತ ಸರ್ಕಾರವೇ ಉತ್ತೇಜಿಸುತ್ತಿರುವ ಸಾಮ್ರಾಜ್ಯಶಾಹೀ ದಾಳಿಯಿಂದ ತಮ್ಮ ಜೀವನೋಪಾಯದ ಮೇಲೆ ಭಾರೀ ಅಪಾಯ ಎದುರಿಸುತ್ತಿದ್ದಾವೆ ಎಂದು ಎಸ್‍ಕೆಎಂ ಹೇಳಿದೆ.

ಜನವಿರೋಧಿ ಮೋದಿ ಸರ್ಕಾರಕ್ಕೆ ತಕ್ಕ ಉತ್ತರವಾಗಿ ಸಾರ್ವತ್ರಿಕ ಮುಷ್ಕರ

ಮೋದಿ ಸರ್ಕಾರ ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು ಹೊಗಳಲು ಬಂಟ ಕಾರ್ಪೊರೇಟ್ ಸಮೂಹಗಳ  ಒಕ್ಕೂಟಗಳ  ಪ್ರತಿನಿಧಿಗಳು ಪೈಪೋಟಿ ನಡೆಸುತ್ತಿದ್ದಾರೆ ಎಂದು ತೀವ್ರವಾಗಿ ಖಂಡಿಸುತ್ತ  ಎಸ್‌ಕೆಎಂ, ಇವರಿಗೆ  ರೈತರು, ಕಾರ್ಮಿಕರು ಮತ್ತು ಆಧುನಿಕ ಭಾರತ ನಿರ್ಮಿಸಲು ಜೀವ ತ್ಯಾಗ ಮಾಡಿದ ಸಮಸ್ತ ಕಾರ್ಮಿಕ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ,  ಕೇವಲ ತಮ್ಮ ಲಾಭಕೋರತನ ಮಾತ್ರವೇ  ಇವರ ಪ್ರೇರಣೆ, ದೇಶದ ವಿಶಾಲ ಶ್ರಮಶಕ್ತಿ ಮತ್ತು ಸಂಪನ್ಮೂಲಗಳ ಸೂರೆಗೆ  ಮುಂದಾಗಿವೆ  ಎಂದು ಹೇಳಿದೆ.

ಭಾರತದ ಇತಿಹಾಸದಲ್ಲೇ ಅತ್ಯಂತ ರಾಷ್ಟ್ರವಿರೋಧಿ ವ್ಯಾಪಾರ ಒಪ್ಪಂದಗಳಿಗೆ ವಿರುದ್ಧವಾಗಿ, ಭಾರತೀಯ ಸಂಸತ್ತು ಮತ್ತು ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ಅವಮಾನ ಮಾಡುವ ಈ ಒಪ್ಪಂದಗಳಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು,ರೈತ ಮತ್ತು ಕೃಷಿ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಸಂಘಗಳು ಹಾಗೂ ಎಲ್ಲಾ ಸಾಮೂಹಿಕ ಮತ್ತು ವರ್ಗ ಸಂಘಟನೆಗಳಿಗೆ  ಮನವಿ ಮಾಡುತ್ತ, ಎಸ್‌ಕೆಎಂ ಭಾರತೀಯ ರೈತರು ಮತ್ತು ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುವ ಸರ್ಕಾರದ ನಡೆ ತಡೆಯಲು ಒಗ್ಗೂಡಬೇಕು ಎಂದು ಕರೆ ನೀಡಿದೆ. ಫೆಬ್ರವರಿ 12, 2026ರಂದು ದೇಶದಾದ್ಯಂತ ರೈತರು ಪ್ರತಿಭಟನಾ ಪ್ರದರ್ಶನಗಳಲ್ಲಿ ಭಾಗವಹಿಸಿ, ಜನವಿರೋಧಿ ಮೋದಿ ಸರ್ಕಾರಕ್ಕೆ ತಕ್ಕ ಉತ್ತರವಾಗಿ ಸಾರ್ವತ್ರಿಕ ಮುಷ್ಕರವನ್ನು ರೂಪಿಸಬೇಕೆಂದು ಕರೆನೀಡಿದೆ.

      ಬೆಸ್ಟ್ ಫ್ರೆಂಡ್         ಬೆಸ್ಟ್ ಡೀಲ್

    ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ, ಸೌತ್‍ ಫಸ್ಟ್
Donate Janashakthi Media

Leave a Reply

Your email address will not be published. Required fields are marked *