ನವದೆಹಲಿ: ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಖಂಡಿಸಲು ಇಂಡಿಯಾ ಒಕ್ಕೂಟದ ಮೈತ್ರಿಯ ನಾಯಕರು ಭಾನುವಾರ ಮಾರ್ಚ್ 31ರಂದು ದೇಶದ ರಾಜಧಾನಿ ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ವಿಪಕ್ಷದ ಒಕ್ಕೂಟದ ಮೈತ್ರಿಯ ಈ ಜಾಥಾವನ್ನು ಆಮ್ ಆದ್ಮಿ ಪಕ್ಷ ಪ್ರಾಥಮಿಕವಾಗಿ ಆಯೋಜಿಸಿದ್ದು, ದೆಹಲಿಯ ಪೊಲೀಸರು, ಮೆರವಣಿಗೆಗೆ ಮತ್ತು ಟ್ರ್ಯಾಕ್ಟರ್ ಮತ್ತು ಟ್ರಾಲರ್ ಬಳಕೆಗೆ ನಿಷೇಧವನ್ನು ಹೇರಿತ್ತು. ಈ ಜಾಥಾಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾಗ್ಯೂ, ಈ ಜಾಥಾವು ಸಾವಿರಾರು ಜನರ ಗಮನವನ್ನು ತನ್ನತ್ತ ಕೇಂದ್ರೀಕರಿಸುವಲ್ಲಿ ಪ್ರಮುಖಪಾತ್ರ ವಹಿಸಿತು.
ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಹೋರಾಟ ಇದಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯ ನಿರಂಕುಶವಾದಿ ಮತ್ತು ಬಂಡವಾಳಷಾಹಿ ಆಡಳಿತದ ವಿರುದ್ಧ ಧಿಕ್ಕಾರದ ಕೂಗುಗಳು, ಘೋಷಣೆಗಳು ಜಾಥಾದಲ್ಲಿ ಮಾರ್ಧನಿಸಿದವು.
ಇನ್ನು ಈ ಇಂಡಿಯಾ ಒಕ್ಕೂಟದ ಮೈತ್ರಿಯ ಜಾಥಾದಲ್ಲಿ ಪಾಲ್ಗೊಂಡಿದ್ದ ಮುಖಂಡರು, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ಬಲಪಡಿಸಬಲ್ಲದು ಎಂಬುದರ ಕುರಿತು ಮಾತನಾಡಿದರು.
ಇದನ್ನು ಓದಿ : ಮಂಡ್ಯ ಕ್ಷೇತ್ರ: ಸಮಲತಾ – ಕುಮಾರಸ್ವಾಮಿ ಮಹತ್ವದ ಮಾತುಕತೆ?
ಮುಖ್ಯಮಂತ್ರಿಗಳಾದ ಹೇಮಂತ್ ಸೋರೆನ್ ಮತ್ತು ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ನಡೆದ ಮೊದಲ ಸಭೆ ಇದಾಗಿದ್ದು, ಚಳಿಗಾಲದಲ್ಲಿ ನಡೆದಿದ್ದ ಪಾಟ್ನಾ ಶಕ್ತಿ ಪ್ರದರ್ಶನದ ನಂತರ ಇದು ಭಾರತದ ಮೊದಲ ಮಹತ್ವದ ಜಾಥಾವಾಗಿದೆ. ಮಾರ್ಚ್ 17 ರಂದು ಮುಂಬೈನಲ್ಲಿ ನಡೆದಿದ್ದ ಸಾರ್ವಜನಿಕ ಸಭೆಗೆ ಹಲವಾರು ಭಾರತೀಯ ನಾಯಕರು ಒಟ್ಟಾಗಿ ಬಂದಿದ್ದರು. ಆದರೆ ಅದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮುಕ್ತಾಯ ಕಾರ್ಯಕ್ರಮವಾಗಿತ್ತು.
ಸಾಂಕೇತಿಕವಾಗಿ ನಡೆದ ಈ ಪ್ರತಿಭಟನೆಯನ್ನು ಸೂಚಿಸಲು ವೇದಿಕೆಯ ಮೊದಲ ಸಾಲಿನಲ್ಲಿ ಕೇಜ್ರಿವಾಲ್ ಮತ್ತು ಸೋರೆನ್ ಅವರಿಗೆ ಇರಿಸಲಾಗಿದ್ದ ಎರಡು ಕುರ್ಚಿಗಳನ್ನು ಖಾಲಿ ಹಾಗೆಯೇ ಬಿಡಲಾಗಿತ್ತು. ಇನ್ನುಳಿದಂತೆ “ಇಂಡಿಯಾ ಒಕ್ಕೂಟದ ಅಖಿಲ ಭಾರತ ನಾಯಕರು ಸೇರಿದಂತೆ ಕೇಜ್ರಿವಾಲ್, ಸೋರೆನ್, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರ ಪತ್ನಿಯರೂ ಜಾಥಾದಲ್ಲಿ ಉಪಸ್ಥಿತರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಕಾಂಗ್ರೆಸಿನ ನಾಯಕ ರಾಹುಲ್ ಗಾಂಧಿ, ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ನಾಯಕರಾದ ಶರದ್ ಪವಾರ್, ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್, ಡಿ. ರಾಜಾ, ಉದ್ಧವ್ ಠಾಕ್ರೆ, ಡೆರೆಕ್ ಒಬ್ರೇನ್, ಮೆಹಬೂಬಾ ಮುಫ್ತಿ, ತಿರುಚಿ ಶಿವಾ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಜಾಥಾದಲ್ಲಿ ಸುನೀತಾ ಕೇಜ್ರಿವಾಲ್ ಅವರು, ಕೇಜ್ರಿವಾಲ್ ಅವರ ಸಂದೇಶವನ್ನು ಓದಿದರು. ಅದು “ಶ್ರೀಮಂತರು ಅಥವಾ ಬಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯವನ್ನು ಒದಗಿಸುವ ಭಾರತದ ಬಗ್ಗೆ ಕನಸು ಕಾಣುತ್ತಲೇ ಇರುತ್ತೇನೆ” ಎಂದರು.
ಬಹುಕೋಟಿ ಚುನಾವಣಾ ಬಾಂಡ್ ಹಗರಣ ಬಹಿರಂಗಗೊಂಡು ಬಿಜೆಪಿ 8,261 ಕೋಟಿ ರೂ.ಗಳನ್ನು ಪಡೆದು ಕೊಂಡಿದೆ. ತನ್ನ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿರುವ ವಿಪಕ್ಷಗಳ ನಾಯಕರ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಸಿಕೊಳ್ಳಲಾಗುತ್ತದೆ ಎಂದು ನಾಯಕರು ಆರೋಪಿಸಿದರು.
ಪ್ರಬಲವಾದ ವಿರೋಧ ಕಟ್ಟುವ ಇತಿಹಾಸದಲ್ಲಿ ರಾಮಲೀಲಾ ಮೈದಾನಕ್ಕೆ ವಿಶೇಷ ಸ್ಥಾನವಿದೆ. 1977ರಲ್ಲಿ ಇಂದಿರಾಗಾಂಧಿ ವಿರುದ್ಧ ಚುನಾವಣೆಗೆ ಮುನ್ನ ನಡೆದ ಮೊದಲ ತುರ್ತುಪರಿಸ್ಥಿತಿ ಹಿಂಪಡೆದ ನಂತರ ನಡೆದಿದ್ದ ಜಾಥಾವು ಈ ನೆಲದ ಇತಿಹಾಸದಲ್ಲೊಂದು ಮೈಲುಗಲ್ಲಾಗಿದೆ. ಅಂದಿನ ಜಾಥಾದಲ್ಲಿ ಪ್ರತಿಪಕ್ಷದ ಜಯಪ್ರಕಾಶ್ ನಾರಾಯಣ್ ಪ್ರತಿಭಟನೆಯ ಚುಕ್ಕಾಣಿಯನ್ನು ಹಿಡಿದಿದ್ದರು. ಸಾಮಾನ್ಯವಾಗಿ ಹೋರಾಟಗಳಿಗೆ ಮೀಸಲಾಗಿರುವ ರಾಮಲೀಲಾ ಮೈದಾನವು ಹೋರಾಟದ ಸ್ಥಳವೆಂದು ಖ್ಯಾತಿ ಪಡೆದಿದೆ.
ಇದನ್ನು ನೋಡಿ : ಮೋದಿ ಸಾಹೇಬರೆ… ನಮ್ಮ ಪ್ರಶ್ನೆಗಳಿಗೆ ಜವಾಬು ಹೇಳಿ – ಅಂಬಣ್ಣ ಅರೋಳಿಕರ್ ಹಾಡು Janashakthi Media