ನವದೆಹಲಿ: ಭಾರತ, ಇಸ್ರೇಲ್(ಐ2), ಅಮೆರಿಕ, ಯುಎಇ (ಯು2) ದೇಶಗಳನ್ನೊಳಗೊಂಡ ‘ಐ2ಯು2’ ವರ್ಚುವಲ್ ಸಮ್ಮೇಳನ ‘ಆಹಾರ ಭದ್ರತಾ ಬಿಕ್ಕಟ್ಟು, ಶುದ್ಧ ಇಂಧನ, ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸುದೀರ್ಘ ಅವಧಿವರೆಗೂ ಕಾಪಿಟ್ಟುಕೊಳ್ಳಲು ಇರುವ ನವೀನ ಮಾರ್ಗೋಪಾಯಗಳು ಹಾಗೂ ಆಹಾರ ಪೂರೈಕೆ ವ್ಯವಸ್ಥೆಯ ಕುರಿತು ಚರ್ಚೆಗಳು ನಡೆದಿದ್ದು, ಭಾರತದಾದ್ಯಂತ ಏಕೀಕೃತ ‘ಆಹಾರ ಪಾರ್ಕ್’ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುಮಾರು ₹16 ಸಾವಿರ ಕೋಟಿ (2 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲು ನಿರ್ಧರಿಸಿದೆ.
ನಾಲ್ಕು ಸದಸ್ಯ ದೇಶಗಳಿರುವ ‘ಐ2ಯು2′ ಸಭೆಯಲ್ಲಿ ಈ ಭರವಸೆಯನ್ನು ಯುಎಇ ನೀಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಯಯೀರ್ ಲಪಿಡ್ ಮತ್ತು ಯುಎಇ ಅಧ್ಯಕ್ಷ ಮೊಹಮದ್ ಬಿನ್ ಜಯಾದ್ ಅಲ್ ಅನಹ್ಯಾನ್ ಪಾಲ್ಗೊಂಡಿದ್ದರು.
ಆಹಾರ ಭದ್ರತೆ, ಸ್ವಚ್ಛ ಇಂಧನ, ದೀರ್ಘಾವಧಿಗೆ ವೈವಿಧ್ಯಮಯ ಆಹಾರ ಉತ್ಪಾದನೆ ಹಾಗೂ ವಿತರಣೆ ವ್ಯವಸ್ಥೆ ರೂಪಿಸುವ ಬಗ್ಗೆ ಹಲವು ಅಂಶಗಳನ್ನು ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಆಹಾರ ಪಾರ್ಕ್ ಯೋಜನೆ ಕುರಿತು ಪ್ರಸ್ತಾಪಿಸಿರುವ ಜಂಟಿ ಹೇಳಿಕೆಯಲ್ಲಿ ‘ಭಾರತವು ಈ ಯೋಜನೆಗೆ ಬೇಕಿರುವಷ್ಟು ಭೂಮಿಯನ್ನು ಒದಗಿಸುವ ಜೊತೆಗೆ ರೈತರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಮೆರಿಕ ಮತ್ತು ಇಸ್ರೇಲ್ನ ಖಾಸಗಿ ವಲಯದ ಕಂಪನಿಗಳು ತಮ್ಮ ಪರಿಣತಿ ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳಬೇಕು. ಬೆಳೆಯ ಇಳುವರಿ ಹೆಚ್ಚಿಸಲು, ಆ ಮೂಲಕ ದಕ್ಷಿಣ ಏಷ್ಯಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಎದುರಿಸುತ್ತಿರುವ ಆಹಾರದ ಅಭದ್ರತೆ ನಿವಾರಿಸಲು ಈ ಯೋಜನೆ ಸಹಕಾರಿಯಾಗಲಿದೆ. ಈ ಮೂಲಕ ಯೋಜನೆಯ ಒಟ್ಟಾರೆ ಸುಸ್ಥಿರತೆಗೆ ನೆರವಾಗಬೇಕು’ ಎಂದು ತಿಳಿಸಿದೆ.
‘ಇಂಧನ ಭದ್ರತೆ, ಆಹಾರ ಭದ್ರತೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಐ2ಯು2 ಕಾಣಿಕೆ ನೀಡಲಿದ್ದು, ನಾವು ಜಂಟಿಯಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅವುಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ರೂಪುರೇಷೆಯನ್ನೂ ಸಿದ್ಧಪಡಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಜಲ, ಇಂಧನ, ಸಾರಿಗೆ, ಅಂತರಿಕ್ಷ, ಆರೋಗ್ಯ ಮತ್ತು ಆಹಾರ ಭದ್ರತೆಯಂತಹ ಬಹುಮುಖ್ಯ ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆ ಮಾಡುವ ಸಂಬಂಧ ಒಪ್ಪಂದವೊಂದನ್ನು ಮಾಡಿಕೊಂಡಿದ್ದೇವೆ’ ಎಂದೂ ತಿಳಿಸಿದ್ದಾರೆ.