ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

  • 45 ಸಾವಿರ ಪ್ರೇಕ್ಷಕರು ಸೇರುವ ಸ್ಥಳದಲ್ಲಿ ನಿಯಮ ಉಲ್ಲಂಘನೆ
  • ಅಗತ್ಯ ಕ್ರಮ ತೆಗೆದುಕೊಳ್ಳುವವರೆಗೂ ಪಂದ್ಯಗಳನ್ನು ರದ್ದುಗೊಳಿಸಿ
  • 70 ವರ್ಷದ ಹಳೆಯ ಕ್ರೀಡಾಂಗಣ

ಒಡಿಶಾ: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ 2ನೇ ಟಿ20 ಪಂದ್ಯಗಳನ್ನು ರದ್ದುಗೊಳಿಸುವಂತೆ ಒಡಿಶಾ ಹೈಕೋರ್ಟ್‌ಗೆ ಮಾನವ ಹಕ್ಕುಗಳ ಹೋರಾಟಗಾರ ಸಂಜಯ್ ಕುಮಾರ್ ನಾಯಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಎಲ್‌ಐ) ಸಲ್ಲಿಸಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಟಿ20 ಸರಣಿ ಇದೇ ಜೂನ್ 9 ರಿಂದ ಆರಂಭವಾಗುತ್ತಿದೆ. ಇದರೊಂದಿಗೆ ಜೂನ್ 12ರಂದು ಕಟಕ್‌ನ ಬಾರಮತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಪಂದ್ಯವನ್ನು ರದ್ದುಗೊಳಿಸುವಂತೆ, ತುರ್ತು ವಿಚಾರಣೆ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಒಡಿಶಾ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐ ಸೇರಿದಂತೆ 15 ಪಕ್ಷಗಳನ್ನು ಪ್ರತಿವಾದಿಗಳಾಗಿಸಿದ್ದು,  ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಯಾವುದೇ ರಚನಾತ್ಮಕ ಸುರಕ್ಷತಾ ಪ್ರಮಾಣಪತ್ರವನ್ನು ನೀಡಿಲ್ಲ. ಹಾಗಾಗಿ 45,000 ಪ್ರೇಕ್ಷಕರು ಸೇರುವ ಸ್ಥಳದಲ್ಲಿ ನಿಯಮಗಳ ಉಲ್ಲಂಘನೆ ಸರಿಯಲ್ಲಾ ಎಂದು ಅವರು ಅರ್ಜಿಯಲ್ಲಿ ಸಂಜಯ್‌ ಕುಮಾರ್‌ ನಾಯಕ್‌ ಕಳವಳ ವ್ಯಕ್ತಪಡಿಸಿದ್ದಾರೆ.

ನಿಯಮಾನುಸಾರ ಕೈಗೊಳ್ಳಬೇಕಾದ ಅವಶ್ಯ ಕ್ರಮಗಳನ್ನು ಅನುಸರಿಸದ ಸಂಸ್ಥೆಯು ಸರ್ಕಾರಿ ಪದಾಧಿಕಾರಿಗಳ ಸಹಾಯದೊಂದಿಗೆ ಯಾವುದೇ ಕಾರ್ಯವನ್ನು ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಕಾನೂನಿನ ಕಡ್ಡಾಯ ಪಾಲನೆ ಬಗ್ಗೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ವಿಶೇಷವಾಗಿ ಒಡಿಶಾ ಅಗ್ನಿಶಾಮಕ ತಡೆಗಟ್ಟುವಿಕೆ ಮತ್ತು ಅಗ್ನಿ ಸುರಕ್ಷತಾ ನಿಯಮಗಳು-2017ರ ಅಡಿಯಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪಂದ್ಯಗಳನ್ನು ನಡೆಸಲು ಯಾವುದೇ ವಿರೋಧವಿಲ್ಲ, ಆದರೆ 70 ವರ್ಷಗಳ ಹಳೆಯ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ಪಂದ್ಯಗಳನ್ನು ಏರ್ಪಡಿಸುವುದು ಅಪಾಯಕಾರಿ. ಹಾಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವವರೆಗೂ ಪಂದ್ಯಗಳನ್ನು ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *