ಕೊಲಂಬೊ: ಶ್ರೀಲಂಕಾ ರಾಷ್ಟ್ರವು ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದು, ಈ ಹಿನ್ನೆಲೆ ವಿದೇಶಗಳಿಂದ ನೆರವು ಕೋರಲಾಗುತ್ತಿದೆ. ಅದರಂತೆ, ಶ್ರೀಲಂಕಾಕ್ಕೆ ಭಾರತ ದೇಶವು ಸುಮಾರು 40,000 ಮೆಟ್ರಿಕ್ ಟನ್ ಪೆಟ್ರೋಲ್ ಪೂರೈಕೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
‘ಭಾರತದ ನೆರವಿನ ಅಡಿಯಲ್ಲಿ ಸುಮಾರು 40,000 ಮೆಟ್ರಿಕ್ ಪೆಟ್ರೋಲ್ ಇಂದು ಕೊಲಂಬೊ ತಲುಪಿದೆ’ ಎಂದು ತಿಳಿಸಿದ್ದಾರೆ. ಸಾಲದ ಹೊರೆಯಿಂದ ಬಳಲುತ್ತಿರುವ ನೆರೆ ರಾಷ್ಟ್ರ ಶ್ರೀಲಂಕಾ ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಅದನ್ನು ನೀಗಿಸಲು ಭಾರತ ಮುಂದಾಗಿದೆ. ಈ ಹಿಂದೆ ಭಾರತವು 40,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ರವಾನಿಸಿತ್ತು. ಭಾರತದ ನೆರವನ್ನು ಶ್ರೀಲಂಕಾದ ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೊಂಡಾಡಿದ್ದರು.
ಇದನ್ನು ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ವಿಮಾನ ಸಂಸ್ಥೆ ಮಾರಾಟ,ಸಂಬಳಕ್ಕಾಗಿ ಹಣ ಮುದ್ರಣದ ಪ್ರಸ್ತಾಪ
ಕೆಲವು ದಿನಗಳಿಂದ ಶ್ರೀಲಂಕಾದ ಪೆಟ್ರೋಲ್ ಪಂಪ್‌ಗಳ ಎದುರು ‘ ನೋ ಪೆಟ್ರೋಲ್’ ಫಲಕಗಳು ಕಾಣಿಸಿಕೊಂಡಿದ್ದವು. ದೇಶದಲ್ಲಿ ಇಂಧನ ದಾಸ್ತಾನು ಇಲ್ಲದಿರುವುದನ್ನು ಸ್ವತಃ ಪ್ರಧಾನಿ ವಿಕ್ರಮಸಿಂಘೆ ಅವರೇ ಒಪ್ಪಿಕೊಂಡಿದ್ದರು.
ಅಗತ್ಯ ವಸ್ತುಗಳ ಸಹ ಪೂರೈಕೆ
ಪೆಟ್ರೋಲ್ ನೆರವಿನೊಂದಿಗೆ, ಶ್ರೀಲಂಕಾಗೆ ಭಾರತ ಅಕ್ಕಿ, ಔಷಧ, ಹಾಲಿನ ಪುಡಿ ಹೀಗೆ ಅಗತ್ಯ ವಸ್ತುಗಳನ್ನು ಸಹ ಪೂರೈಸಿದೆ. ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋ ತಲುಪಿದ ಹಡಗು, ಅಗತ್ಯ ವಸ್ತುಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿವೆ.
9,000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 25 ಮೆಟ್ರಿಕ್ ಟನ್‌ಗಿಂತ ಹೆಚ್ಚು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಶ್ರೀಲಂಕಾ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಅವರಿಗೆ ಹಸ್ತಾಂತರಿಸಿದ್ದಾರೆ.
ಇದನ್ನು ಓದಿ: ‘ಕಲ್ಯಾಣ ಪ್ರಭುತ್ವ’ ಶ್ರೀಲಂಕಾ ‘ರೋಗಿ’ ಪ್ರಭುತ್ವವಾದದ್ದು ಹೇಗೆ?
ಶ್ರೀಲಂಕಾ ಭಾರತದಿಂದ ಹಾಲಿನ ಪುಡಿ, ಅಕ್ಕಿ ಹಾಗೂ ಔಷಧ ಸೇರಿದಂತೆ 200 ಕೋಟಿ ರೂ. ಮೌಲ್ಯದ ಮಾನವೀಯ ನೆರವು ಪಡೆದಿದೆ. ಈ ಸಹಾಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹಾಗೂ ಭಾರತಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದರು.