ಮುಂಬೈ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಇದು ಭಾರತ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೇವಲ ನಾಲ್ಕೇ ದಿನಕ್ಕೆ ಮುಕ್ತಾಯವಾದ ಪಂದ್ಯದಲ್ಲಿ ಭಾರತ ನೀಡಿದ 450ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ ಕೇವಲ 167ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ 372 ರನ್ ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಲ್ಲಿಯೇ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ಭಾರೀ ಅಂತರದಿಂದ ವಿಜಯ ಸಾಧಿಸಿದೆ.
ಈ ಹಿಂದೆ 2015ರಲ್ಲಿ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 337ರನ್ ಗಳ ಜಯ ಸಾಧಿಸಿತ್ತು. ಇದು ಭಾರತ ಅತೀ ದೊಡ್ಡ ರನ್ ಗಳ ಅಂತರದ ಗೆಲುವಾಗಿತ್ತು. ಈ ದಾಖಲೆಯನ್ನು ಇಂದು ಭಾರತ ಹಿಂದಿಕ್ಕಿದೆ. ಅಂತೆಯೇ 2016ರಲ್ಲಿ ಇಂದೋರ್ ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ 321ರನ್ ಗಳ ಜಯ ಸಾಧಿಸಿತ್ತು. ಇದಕ್ಕೂ ಮೊದಲು 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ 320ರನ್ ಗಳ ಜಯಸಾಧಿಸಿತ್ತು.
ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ಅಂತರದಿಂದ ಗೆದ್ದಿರುವ ಪಂದ್ಯಗಳ ಮಾಹಿತಿ ಈ ಕೆಳಕಂಡಂತಿದೆ.
ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳ ಗೆಲುವು ( 2021 )
ದ. ಆಫ್ರಿಕಾ ವಿರುದ್ಧ 337 ರನ್‌ಗಳ ಗೆಲುವು ( 2015 )
ನ್ಯೂಜಿಲೆಂಡ್ ವಿರುದ್ಧ 321 ರನ್‌ಗಳ ಗೆಲುವು ( 2016 )
ಆಸ್ಟ್ರೇಲಿಯಾ ವಿರುದ್ಧ 320 ರನ್‌ಗಳ ಗೆಲುವು ( 2008 )
ವೆಸ್ಟ್ ಇಂಡೀಸ್ ವಿರುದ್ಧ 318 ರನ್‌ಗಳ ಗೆಲುವು ( 2019 )
ಅಜಾಜ್ ಪಟೇಲ್ ದಾಖಲೆ : ಅಜಾಜ್ ಪಟೇಲ್ ದಾಖಲೆ ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಪಿನ್ನರ್ ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಜೊತೆಗೆ ಒಟ್ಟಾರೆ ಮ್ಯಾಚ್‌ನಲ್ಲಿ 14 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಇದು ನ್ಯೂಜಿಲೆಂಡ್ ಪರ ಎರಡನೇ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಭಾರತದ ನೆಲದಲ್ಲಿ ವಿದೇಶಿ ಬೌಲರ್‌ನ ಬೆಸ್ಟ್ ಬೌಲಿಂಗ್ ಫಿಗರ್ ಕೂಡ ಇದಾಗಿದೆ. ಈ ಮೊದಲು 1980ರಲ್ಲಿ ಇಯಾನ್ ಬಾಥಮ್ 13 ವಿಕೆಟ್ ಕಬಳಿಸಿದ್ರು. ಆದ್ರೆ ಅಜಾಜ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಸೂಪರ್ ಬೌಲಿಂಗ್ ಮಾಡಿದ್ದಾರೆ. ಇದರ ಜೊತೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಯಾವುದೇ ಬೌಲರ್ ಗಳಿಸಿದ ಬೆಸ್ಟ್ ವಿಕೆಟ್ಸ್ ಇದಾಗಿದೆ. ಅಜಾಜ್ ಪಟೇಲ್ 225 ರನ್‌ಗಳನ್ನ ನೀಡಿ 14 ವಿಕೆಟ್ ಕಬಳಿಸಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ 10 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ರು. ಈ ಸಾಧನೆ ಮಾಡಿದ ಜಗತ್ತಿನ ಮೂರನೇ ಆಟಗಾರ ಎಂಬ ದಾಖಲೆಯನ್ನು ಬರೆದರು.
ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು ಮೊದಲಿಗೆ ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲಾಕೆರ್ 1956ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮಾಡಿದ್ರು. ಇದಾದ ಬಳಿಕ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗೊಂಚಲನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಈ ದಾಖಲೆ ಬರೆದಿದ್ದರು. ಈಗ ಬಾರತ ನ್ಯೂಜಿಲೆಂಡ್ ಪಂದ್ಯದಲ್ಲಿ ಅಜಾಜ್ ಪಟೇಲ್ ದಾಖಲೆ ಬರೆದಿದ್ದಾರೆ.
ಸ್ಕೋರು ವಿವರ:
ಭಾರತ ಮೊದಲ ಇನ್ನಿಂಗ್ಸ್ 109.5 ಓವರ್ 325/10
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 28.1 ಓವರ್ 62/10
ಭಾರತ ಎರಡನೇ ಇನ್ನಿಂಗ್ಸ್ 70 ಓವರ್ 276/7 (ಡಿಕ್ಲೇರ್)
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 56.3 ಓವರ್ 167/10