ಪಾಟ್ನಾ: ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ದೇಶಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ. ಉದ್ದೇಶಿತ ಕಾರ್ಯಕ್ರಮಗಳ ವಿವರಗಳನ್ನು ಅವರು ಬಹಿರಂಗಪಡಿಸದಿದ್ದರೂ, ಮುಂಬೈನಲ್ಲಿ ನಡೆದ ವಿರೋಧ ಪಕ್ಷದ ಮೈತ್ರಿಕೂಟದ ಸಮಾವೇಶದಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎಯು “ಪ್ರತಿಪಕ್ಷಗಳ ಒಗ್ಗಟ್ಟಿನಿಂದ” ನಲುಗಿ ಹೋಗಿದೆ ಮತ್ತು ಆದ್ದರಿಂದ, ಕೇಂದ್ರ ಸರ್ಕಾರವು ಈ ತಿಂಗಳ ಕೊನೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ, ಆದರೆ ಅಧಿವೇಶನದ ಕಾರ್ಯಸೂಚಿಯನ್ನು ಬಹಿರಂಗಪಡಿಸಲಾಗಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಇಂಡಿಯಾ 3ನೇ ಸಭೆ | ಒಟ್ಟಿಗೆ ಸ್ಪರ್ಧಿಸುವ ನಿರ್ಣಯ ಅಂಗೀಕರಿಸಿದ ಒಕ್ಕೂಟ
“ಇಂಡಿಯಾ ಒಕ್ಕೂಟವು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸುತ್ತದೆ ಎಂದು ನಾವು ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ನಮ್ಮ ಒಕ್ಕೂಟವು ಆಡಳಿತಾರೂಢ ಬಿಜೆಪಿಯನ್ನು ಕೆಣಕಿದ್ದು, ಅದಕ್ಕಾಗಿಯೆ ಕೇಂದ್ರ ಸರ್ಕಾರ ಏಕಕಾಲದಲ್ಲಿ ವಿಧಾನಸಭೆ ಮತ್ತು ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವ ಸಾಧ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಇಂಡಿಯಾ ಒಕ್ಕೂಟದ ಅಡಿಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ನೋಡಿದ ನಂತರ ಬಿಜೆಪಿಯಲ್ಲಿ ಭಯವನ್ನುಂಟುಮಾಡಿದೆ” ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಕಳೆದ ರಾತ್ರಿ ಇಂಡಿಯಾ ಸಮಾವೇಶದಲ್ಲಿ ಪಾಲ್ಗೊಂಡು ಮುಂಬೈನಿಂದ ಪಾಟ್ನಾಕ್ಕೆ ಹಿಂದಿರುಗಿದ್ದ ನಿತೀಶ್ ಕುಮಾರ್, ಹತ್ತು ವರ್ಷಗಳಿಗೊಮ್ಮೆ ನಡೆಸುವ ಜನಗಣತಿ ವಿಳಂಬದ ಬಗ್ಗೆ ಕೇಂದ್ರ ಸರ್ಕಾರ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದ್ದಾರೆ. ಮುಂಗಾರು ಅಧಿವೇಶನದ ನಂತರ ಕಳೆದ ತಿಂಗಳು ಮುಂದೂಡಲ್ಪಟ್ಟಿದ್ದ ಸಂಸತ್ತು ವಿಶೇಷ ಅಧಿವೇಶನಕ್ಕಾಗಿ ಸೆಪ್ಟೆಂಬರ್ 18 ರಿಂದ 22 ರವರೆಗೆ ಸಭೆ ಸೇರಲಿದೆ.
“ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಜನಗಣತಿಯನ್ನು ಪ್ರಾರಂಭಿಸಿಲ್ಲ. ಆದರೆ, ನಿಯಮಗಳ ಪ್ರಕಾರ ಇದು ಬಹಳ ಹಿಂದೆಯೇ ಪೂರ್ಣಗೊಂಡಿರಬೇಕಿತ್ತು. ಈ ಸರ್ಕಾರಕ್ಕೆ ಬೇರೆಲ್ಲ ಕೆಲಸಗಳಿಗೆ ಸಮಯವಿದೆ, ಆದರೆ ಜಾತಿ ಸಮೀಕ್ಷೆ ಮತ್ತು ಜನಗಣತಿಗೆ ಸಮಯವಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ದಿವಂಗತ ದರೋಗಾ ಪ್ರಸಾದ್ ರೈ ಅವರ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡುತ್ತಾ ನಿತೀಶ್ ಕುಮಾರ್ ಅವರು ಹೇಳಿದರು.
ಇದನ್ನೂ ಓದಿ: ಮುಂಬೈ ಲೋಕಲ್ ರೈಲಿನ ದಟ್ಟಣೆಯ ಅರಿವಿದೆಯೆ: ಶಕ್ತಿ ಯೋಜನೆ ವಿರೋಧಿಗಳಿಗೆ ಹೈಕೋರ್ಟ್ ಪ್ರಶ್ನೆ
ಎಸ್ಸಿ ಮತ್ತು ಎಸ್ಟಿಗಳನ್ನು ಹೊರತುಪಡಿಸಿ ಇತರ ಸಾಮಾಜಿಕ ಗುಂಪುಗಳಿಗೆ ಪ್ರತ್ಯೇಕ ಗಣತಿಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಇದರ ನಂತರ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿದೆ.
“ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರುವುದು ಅವರು ಅವಧಿ ಪೂರ್ವ ಚುನಾವಣೆಗಳನ್ನು ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಅದರ ಸಾಧ್ಯತೆಯಿದೆ ಎಂದು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೇನೆ” ಎಂದು ಅವರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಮುಂಬರುವ ಅಧಿವೇಶನದಲ್ಲಿ ನಾವು ಜಾತಿ ಸಮೀಕ್ಷೆ, ಜನಗಣತಿ ಮತ್ತು ಒಂದು ರಾಷ್ಟ್ರ ಒಂದು ಚುನಾವಣೆಯಂತಹ ನಿರ್ಣಾಯಕ ವಿಷಯಗಳನ್ನು ಪ್ರಸ್ತಾಪಿಸುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಸಾಧ್ಯವಾದಷ್ಟೂ’ ಒಟ್ಟಾಗಿ ಸ್ಪರ್ಧಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಸೀಟು ಹಂಚಿಕೆಯನ್ನು ಆದಷ್ಟು ಬೇಗ ಮುಗಿಸಲಾಗುವುದು” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಜೆಡಿಯು 16 ಸಂಸದರನ್ನು ಹೊಂದಿದೆ.
ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಕೊಡಿಸಿ ಎಂದರೆ ಧರ್ಮಸ್ಥಳಕ್ಕೆ ಹೇಗೆ ಅವಮಾನ ಆಗುತ್ತೆ? ಬಿ.ಎಂ ಭಟ್ ಪ್ರಶ್ನೆ Janashakthi Media