ಮುಂಬೈ: ಕ್ರಿಕೆಟ್ ಕ್ರೀಡೆಯಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವೇತನ ತಾರತಮ್ಯವನ್ನು ನಿವಾರಣೆ ಮಾಡಲು ಕ್ರಮವಹಿಸಿದ್ದು, ಈ ನಿಟ್ಟಿನಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪಂದ್ಯಗಳಿಗೆ ಪುರುಷರಷ್ಟೇ ಸಮಾನ ಶುಲ್ಕ ನೀಡುವುದಾಗಿ ಘೋಷಣೆ ಮಾಡಿದೆ.
ತಾರತಮ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದ್ದು, ಈ ನಿರ್ಧಾರವನ್ನು ಘೋಷಿಸಲು ನನಗೆ ಸಂತೋಷವಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಪಂದ್ಯ ಶುಲ್ಕವನ್ನು ಘೋಷಿಸಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ನಾವು ಸಾಗುತ್ತಿದ್ದೇವೆ. ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕ ಒಂದೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯ ಪ್ರಕಾರ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರು, ಪುರುಷರಂತೆಯೇ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ-20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯಲಿದ್ದಾರೆ.
ಭಾರತದ ಮಹಿಳೆಯರ ಪಂದ್ಯದ ಶುಲ್ಕ ಜಾಸ್ತಿ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಕೇಳಿ ಬಂದಿತ್ತು. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳಾ ಕ್ರಿಕೆಟ್ ಪಂದ್ಯಗಳು ಕಡಿಮೆ ನಡೆಯುತ್ತಿರುವ ಕಾರಣ ಆದಾಯ ಕಡಿಮೆ ಎಂಬ ಕಾರಣ ನೀಡಿ ಇಲ್ಲಿಯವರೆಗೆ ಶುಲ್ಕ ಏರಿಕೆಯ ಪ್ರಸ್ತಾಪವನ್ನು ತಡೆ ಹಿಡಿಯಲಾಗಿತ್ತು.
2017ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ತಂಡವು ರನ್ನರ್ ಅಪ್ ಸ್ಥಾನ ಗಳಿಸಿದಾಗಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶ್ರಮವಹಿಸಿ ತನ್ನ ಸಾಧನೆಗಳನ್ನು ದಾಖಲಿಸುತ್ತಾ ಬರುತ್ತಿದೆ. ಮಹಿಳಾ ತಂಡವು 2020 ರಲ್ಲಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತು. ಈ ವರ್ಷದ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ. ಕೆಲ ದಿನಗಳ ಹಿಂದಷ್ಟೇ ಭಾರತೀಯ ಮಹಿಳಾ ಕ್ರಿಕೆಟ್ ತಂಡವು 7ನೇ ಬಾರಿ ಏಷ್ಯಾಕಪ್ ಟೂರ್ನಿಯನ್ನು ಗೆದ್ದು ದಾಖಲೆಯನ್ನು ನಿರ್ಮಿಸಿತು.
ಈ ವರ್ಷದ ಆರಂಭದಲ್ಲಿ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಸಹ ವೇತನ ಲಿಂಗ ತಾರತಮ್ಯವನ್ನು ನಿವಾರಣೆ ಮಾಡಲು ನಿರ್ಧಾರ ಮಾಡಿತು. ಮಹಿಳಾ ರಾಷ್ಟ್ರೀಯ ತಂಡ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಘೋಷಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೂ ಸಹ ಲಿಂಗ ಅಸಮಾನತೆಯನ್ನು ತೊಡೆದುಹಾಕುವ ಕೆಲಸ ಮಾಡುತ್ತಿದೆ.