ಕಂಚಿನ ಪದಕದ ಆಸೆ ಜೀವಂತ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸೆಮಿ ಫೈನಲ್ ನಲ್ಲಿ ಆಡಿದ ಭಾರತದ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಮಂಗಳವಾರ ಬೆಳಗ್ಗೆ ಮುಗಿದ ಪಂದ್ಯದಲ್ಲಿ 5-2 ಅಂತರದಲ್ಲಿ ಭಾರತ ಹಾಕಿ ತಂಡ ಸೋಲನುಭವಿಸಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದಶಕಗಳ ನಂತರ ಸೆಮಿಫೈನಲ್ ತಲುಪಿದ್ದ ಭಾರತದ ಪುರುಷರ ಹಾಕಿ ತಂಡ, ಬೆಲ್ಜಿಯಂ ತಂಡದ ವಿರುದ್ಧ 5-2 ಗೋಲುಗಳ ಅಂತರದಿಂದ ಸೋಲು ಕಂಡಿದ್ದು ಇನ್ನು ಕಂಚಿನ ಪದಕಕ್ಕೆ ಸೆಣಸಾಡಲಿದೆ. ಕಂಚಿನ ಪದಕದ ಕನಸು ಜೀವಂತವಾಗಿದೆ.
ಸಮಬಲದ ಪೈಪೋಟಿ : ಬೆಲ್ಜಿಯಂ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತೀವ್ರ ಪೈಪೋಟಿ ನೀಡಿತು. ಪಂದ್ಯ ಶುರುವಾಗಿ ಎರಡು ನಿಮಿಷ ಆಗುವುದರೊಳಗೆ ಬೆಲ್ಜಿಯಂನ ಲೋಯಿಕ್ ಲುಪೇರ್ಟ್ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದರು.
ಆದರೂ ಎದೆಗುಂದದ ಭಾರತ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿತು. ಹರ್ಮನ್ ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಭಾರತದ ಪರ ಗೋಲು ಗಳಿಸಿದರು. ಭಾರತಕ್ಕೆ ಮುನ್ನಡೆಯ ಖುಷಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೆಲ್ಜಿಯಂ ಮತ್ತೊಂದು ಗೋಲು ಗಳಿಸಿ ಸರಿಸಮ ಮಾಡಿಕೊಂಡಿತು. ಈ ಎಲ್ಲಾ ನಾಲ್ಕು ಗೋಲುಗಳು ಬಂದಿದ್ದು ಮೊದಲ ಕ್ವಾರ್ಟರ್ ಅವಧಿಯಲ್ಲಿ. ಇನ್ನೂ ಎರಡು ಕ್ವಾರ್ಟರ್ ಅವಧಿಯವರೆಗೆ ಯಾವ ಗೋಲು ಬರಲಿಲ್ಲ. ಆದರೆ, ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್ನಲ್ಲಿ ಬೆಲ್ಜಿಯಂ ಪುಟಿದೆದ್ದು ಆಡಿದಂತಿತ್ತು.
ಪಂದ್ಯದ ಮುಕ್ಕಾಲು ಅವಧಿ ಸಮಬಲದ ಪೈಪೋಟಿ ನೀಡಿದ್ದ ಭಾರತ ತಂಡ ಕೊನೆಯ ಅವಧಿಯಲ್ಲಿ ಎದುರಾಳಿಗಳಿಗೆ ದಿಢೀರ್ ಮೂರು ಗೋಲು ಬಿಟ್ಟುಕೊಟ್ಟು ಸೋಲಪ್ಪಿತು.