ಬೆಂಗಳೂರು : ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ 8 ವೈದ್ಯರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟಾರೆ 329 ವೈದ್ಯರು ಕೊರೋನಾ ಎರಡನೇ ಅಲೆಯಲ್ಲಿ ನಿಧನರಾಗಿದ್ದಾರೆ.
ಕೊರೋನಾ ಮೊದಲನೆ ಅಲೆಯಲ್ಲಿ ಕರ್ನಾಟಕದ 61 ವೈದ್ಯರು ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರಿಗೆ ಸೂಕ್ತ ಸಮಯದಲ್ಲಿ ಬೆಡ್ ಮತ್ತು ಚಿಕಿತ್ಸೆ ದೊರೆತಿರಲಿಲ್ಲ, ಅವರೆಲ್ಲಾ ಕೊರೋನಾ ವಾರಿಯರ್ಸ್ ಎಂದು ಸರಕಾರ ಪರಿಗಣಿಸಿದೆ.
ದಕ್ಷಿಣ ಕನ್ನಡದಲ್ಲಿ ಇಬ್ಬರು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಹುಬ್ಬಳ್ಳಿಯ ಇಬ್ಬರು ವೈದ್ಯರು ಕೊರೋನಾ ಎರಡನೇ ಅಲೆಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಚನ್ನಪಟ್ಟಣ, ಚಾಮರಾಜನಗರ, ವಿಜಯಪುರ, ಕಲಬುರಗಿ ಮತ್ತು ಮೈಸೂರು ತಲಾ ಒಬ್ಬ ವೈದ್ಯರೂ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು
ಭಾರತದಲ್ಲಿ 1000 ವೈದ್ಯರ ಸಾವು : ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಕೋವಿಡ್ ಗೆ ಬಲಿಯಾಗುತ್ತಿರುವ ಸಂಖ್ಯೆ ಕಳವಳಕಾರಿಯಾಗಿದ್ದು, ದೇಶದಲ್ಲಿ ಕೊರೊನಾ ಕಾಲಿಟ್ಟ ನಂತರ ಇಲ್ಲಿಯವರೆಗೆ ಕೊರೊನಾ ಬಲಿಯಾದ ವೈದ್ಯರ ಸಂಖ್ಯೆ 1000 ಗಡಿ ದಾಟಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ 2 ತಿಂಗಳಲ್ಲಿ 269 ಮಂದಿ ಬಲಿಯಾಗಿದ್ದರೆ, ಕಳೆದ ವರ್ಷ ಬಂದ ಮೊದಲ ಅಲೆಯಲ್ಲಿ 748 ಮಂದಿ
ವೈದ್ಯರು ಅಸುನೀಗಿದ್ದರು.
ಕೋವಿಡ್ ಗೆ ಅತೀ ಹೆಚ್ಚು ಬಲಿ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಅಗ್ರಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 78 ಮಂದಿ ವೈದ್ಯರು ಮೃತಪಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ 37 ಮಂದಿ ಅಸುನೀಗಿದ್ದಾರೆ. ದೆಹಲಿಯಲ್ಲಿ 28 ವೈದ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ.