ಟೋಕಿಯೋ ಒಲಿಂಪಿಕ್ಸ್ : ಮಹಿಳಾ ಹಾಕಿ ಪದಕದ ಕನಸು ಭಗ್ನ

ಟೋಕಿಯೋ : ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಇಂದು ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಭಾರತ, ಗ್ರೇಟ್ ಬ್ರಿಟನ್ ವಿರುದ್ಧ ವೀರೋಚಿತ ಸೋಲು ಅನುಭವಿಸಿತು.

ಆ ಮೂಲಕ ಭಾರತದ ವನಿತೆಯರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಖಾತೆ ತೆರೆಯುವ ಕನಸು ಭಗ್ನವಾಗಿದೆ.

ಭಾರತ ಮತ್ತು ಗ್ರೇಟ್‌ ಬ್ರಿಟನ್‌ ಒಂದೇ ಬಣದ ತಂಡಗಳು. ಲೀಗ್‌ ಹಂತದಲ್ಲಿ ಬ್ರಿಟನ್‌ ವಿರುದ್ಧ ಭಾರತ 1-4 ಅಂತರದ ಸೋಲನುಭವಿಸಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಗೆದ್ದ ಭಾರತ ನಾಕೌಟ್‌ ಹಂತಕ್ಕೆ ತಲುಪಿತ್ತು.

ಇಂದು ನಡೆದ ಪಂದ್ಯದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಅದ್ಭುತ ರಕ್ಷಣಾತ್ಮಕ ಕೌಶಲ ಪ್ರದರ್ಶಿಸಿದವು. ಆರಂಭದಲ್ಲೇ ಬ್ರಿಟನ್ ಪಡೆದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಸುಲಭವಾಗಿ ವಿಫಲಗೊಳಿಸಿತು.

ಆದರೆ ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಬ್ರಿಟನ್‌ನ ಎಲೆನಾ ರಯೇರ್ ಮಾಡಿದ ಅದ್ಭುತ ಪಾಸನ್ನು ಗ್ರೇಸ್ ಎಕ್ಕಾ, ಭಾರತದ ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬ್ರಿಟನ್ ಆರಂಭಿಕ ಮುನ್ನಡೆ ಪಡೆಯಿತು. ಅದ್ಭುತ ರಿವರ್ಸ್ ಶಾಟ್ ಮೂಲಕ ಸರಹ್ ರಾಬರ್ಟ್‌ಸನ್ ಗಳಿಸಿದ ಮತ್ತೊಂದು ಗೋಲು ಬ್ರಿಟನ್‌ನ ಮುನ್ನಡೆಯನ್ನು ಹಿಗ್ಗಿಸಿತು. ಆದರೆ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ ಗುರ್ಜೀತ್ ಕೌರ್, ಭಾರತ ತಂಡ ಸಮಬಲ ಸಾಧಿಸಲು ನೆರವಾದರು. ವಂದನಾ ಕಟಾರಿಯಾ ಮತ್ತೊಂದು ಗೋಲು ಗಳಿಸಿ ಮುನ್ನಡೆಗೆ ಕಾರಣರಾದರು.

ಮೂರನೇ ಕ್ವಾರ್ಟರ್‌ನಲ್ಲಿ ಬ್ರಿಟನ್ ನಾಯಕಿ ಹೊಲಿ ಪೆರ್ನ್ ವೆಬ್ ಗೋಲು ಗಳಿಸಿ ತಮ್ಮ ತಂಡ ಸಮಬಲ ಸಾಧಿಸಲು ನೆರವಾದರು. ಗ್ರೇಸ್ ಬಾಲ್ಸ್‌ಡನ್ ಅಂತಿಮವಾಗಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಸಾಧಿಸುವ ಮೂಲಕ ಗೆಲುವನ್ನು ತಮ್ಮ ತಂಡಕ್ಕೆ ಸೆಳೆದರು. ಈ ಮೂಲಕ ಬ್ರಿಟನ್ ಸತತ ಮೂರು ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿತು. 2012ರಲ್ಲಿ ಕೂಡಾ ಬ್ರಿಟನ್ ಕಂಚಿನ ಪದಕ ಗೆದ್ದಿತ್ತು.

 

Donate Janashakthi Media

Leave a Reply

Your email address will not be published. Required fields are marked *