ನವದೆಹಲಿ: ಸೆರಮ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಕೊವಾವ್ಯಾಕ್ಸ್ ಮತ್ತು ಕಾರ್ಬೆವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರ ಔಷಧ ಪ್ರಾಧಿಕಾರ ಅನುಮೋದನೆ ನೀಡಿದೆ.
ಭಾರತದಲ್ಲಿ ಕೊವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಲಸಿಕೆ ಪ್ರಮುಖ ಅಸ್ತ್ರವಾಗಿದೆ. ಸದ್ಯ ಇನ್ನೆರಡು ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಯು ಅನುಮೋದನೆ ನೀಡಿದೆ.
ಹೊಸದಾಗಿ ಪರಿಚಯಿಸಲಾಗಿರುವ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್ ಲಸಿಕೆಯೊಂದಿಗೆ ಮೊಲ್ನುಪಿರವಿರ್ ಔಷಧಿಯ ತುರ್ತು ಬಳಕೆಗಾಗಿ ಅನುಮೋದನೆ ಸಿಕ್ಕಿದೆ ಎಂದು ಈ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದು 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಬಳಸಲಾಗುವ ಲಸಿಕೆ ಮತ್ತು ಔಷಧವಾಗಿದೆ. ಅಂದಹಾಗೆ, ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಒಂದೇ ದಿನ ಅನುಮೋದನೆ ನೀಡಿದ್ದು ವಿಶೇಷವಾಗಿದೆ.
ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ರೋಗದ ಅಪಾಯ ತೀವ್ರವಾಗಿದ್ದು, ಅಪಾಯದಲ್ಲಿರುವ ರೋಗಿಗಳ ಚಿಕಿತ್ಸೆಗೆ ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದಿದೆ.
ಇದರೊಂದಿಗೆ ಸದ್ಯ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳು ತುರ್ತು ಬಳಕೆಯಾಗುತ್ತಿದೆ. ಈ ಮೊದಲು ತುರ್ತು ಬಳಕೆಗೆ ಅನುಮೋದನೆ ಪಡೆದ ಕೊರೊನಾ ಲಸಿಕೆಗಳು, ಸೀರಮ್ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್, ಜೈಡಸ್ ಕ್ಯಾಡಿಲಾದ ZyCoV-D, ರಷ್ಯಾದ ಸ್ಪುಟ್ನಿಕ್ ವಿ, ಯುಎಸ್ನ ಮಾಡೆರ್ನಾ ಮತ್ತು ಜಾನ್ಸ್ನ್ ಆ್ಯಂಡ್ ಜಾನ್ಸನ್ ಕೊರೊನಾ ಲಸಿಕೆಗಳು.
ಈಗ ಕೊವಾವ್ಯಾಕ್ಸ್ ಮತ್ತು ಕಾರ್ಬೆವ್ಯಾಕ್ಸ್ ಕೂಡ ಸೇರ್ಪಡೆಗೊಂಡಿದೆ. ಈಗ ಅನುಮೋದನೆ ಪಡೆದಿರುವ ಕಾರ್ಬೆವ್ಯಾಕ್ಸ್ ಲಸಿಕೆ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆ ಅಭಿವೃದ್ಧಿ ಪಡಿಸಿದ ಆರ್ಬಿಡಿ ಪ್ರೊಟೀನ್ ಉಪ-ಘಟಕ ಲಸಿಕೆಯಾಗಿದೆ. ಇದೂ ಸಹ ಸ್ವದೇಶಿ ಲಸಿಕೆಯಾಗಿದೆ.
ಕೊವಾವ್ಯಾಕ್ಸ್ ಮರುಸಂಯೋಜಿತ ನ್ಯಾನೊಪರ್ಟಿಕಲ್ ಪ್ರೊಟೀನ್ ಆಧಾರಿತ ಕೊರೊನಾ ಲಸಿಕೆಯಾಗಿದ್ದು, ಯುಎಸ್ ಮೂಲದ ನೊವಾವ್ಯಾಕ್ಸ್ ಮತ್ತುಸೀರಮ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ತಯಾರಾಗುತ್ತಿದೆ.
ಮೊಲ್ನುಪಿರವಿರ್ ಎಂಬುದು ರೋಗ ತೀವ್ರತೆಯನ್ನು ಕಡಿಮೆ ಮಾಡುವ ಔಷಧವಾಗಿದ್ದು, ಕೊವಿಡ್ 19 ಸೋಂಕಿನ ಸೌಮ್ಯ ಮತ್ತು ಹೆಚ್ಚಿನ ಲಕ್ಷಣಗಳಿದ್ದಾಗ ಈ ಮಾತ್ರೆ ಕೊಡಬಹುದು ಎಂದು ಇತ್ತೀಚೆಗಷ್ಟೇ ಯುಎಸ್ನ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ ಹೇಳಿತ್ತು.