ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಭಾರತದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ ಶರಣಾಗತಿ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ನವದೆಹಲಿ: ಜನವರಿ 27ರಂದು ಸಹಿ ಹಾಕಿರುವ ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಯುರೋಪಿಯನ್ ಒಕ್ಕೂಟಕ್ಕೆ ಭಾರತದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ ಶರಣಾಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿರೋಧಿಸಿದೆ. ವ್ಯಾಪಾರ

ಈ ಒಪ್ಪಂದದ ನಿಯಮಗಳ ಅಡಿಯಲ್ಲಿ, ಭಾರತವು ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ 90% ಕ್ಕೂ ಹೆಚ್ಚು ಸರಕುಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ತೀವ್ರವಾಗಿ ಕಡಿಮೆ ಮಾಡುತ್ತದೆ. ಇವುಗಳಲ್ಲಿ ಆಟೋಮೊಬೈಲ್‌ಗಳು (110% ರಿಂದ 40% ಕ್ಕೆ ಇಳಿಸಲಾಗಿದೆ), ಕಬ್ಬಿಣ ಮತ್ತು ಉಕ್ಕು (22% ರಿಂದ 0%), ಔಷಧಗಳು (11% ರಿಂದ 0%), ವೈನ್‌ಗಳು ಮತ್ತು ಸ್ಪಿರಿಟ್‌ಗಳು (150% ರಿಂದ 40%), ಸಂಸ್ಕರಿಸಿದ ಆಹಾರಗಳು (50% ರಿಂದ 0%) ಮತ್ತು ಕುರಿ ಮಾಂಸ (33% ರಿಂದ 0%) ಸೇರಿವೆ.

ಇಂತಹ ಕಡಿದಾದ ಸುಂಕ ಕಡಿತದಿಂದಾಗಿ, ಭಾರತದ ಆಟೋಮೊಬೈಲ್, ಔಷಧೀಯ ಮತ್ತು ಯಂತ್ರೋಪಕರಣಗಳ ಉದ್ಯಮಗಳ ಮೇಲೆ ತೀವ್ರವಾಗಿ ಮತ್ತು ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಕೆಲವೇ ವರ್ಷಗಳಲ್ಲಿ ಭಾರತಕ್ಕೆ ತನ್ನ ರಫ್ತುಗಳು ಶೇಕಡಾ 107.6 ರಷ್ಟು ಬೆಳೆಯುತ್ತವೆ ಎಂದು ಯುರೋಪಿಯನ್ ಒಕ್ಕೂಟವೇ ಸ್ವತಃ ಹೇಳಿಕೊಂಡಿದೆ. ಆಟೋಮೊಬೈಲ್, ವಿದ್ಯುತ್ ಯಂತ್ರೋಪಕರಣಗಳು ಇತ್ಯಾದಿಗಳ ಆಮದುಗಳ ಮೇಲೆ ಇದು ಪರಿಣಾಮ ಬೀರುವುದರಿಂದಾಗಿ ಉದ್ಯೋಗವನ್ನು ಇದು ಪ್ರತಿಕೂಲವಾಗಿ ತಟ್ಟುತ್ತದೆ.

ಇದನ್ನೂ ಓದಿ: ‘ಬೆಂಗಳೂರು ಚಲೋ’ನಲ್ಲಿ ಭಾಗಿಯಾದರೆ ಸಾರಿಗೆ ನೌಕರರ ವಿರುದ್ಧ ಕ್ರಮ: ಸಂಸ್ಥೆಯ ಎಂಡಿ

ಕಾರುಗಳು ಮತ್ತು ವೈನ್‌ಗಳ ಬೆಲೆ ಇಳಿಕೆ ಶ್ರೀಮಂತರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ, ಆದರೆ ಸುಂಕ ಕಡಿತವು ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನರ ಜೀವನೋಪಾಯವನ್ನು ಹಾಳುಗೆಡವುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದಲ್ಲದೆ, ಎಫ್‍ಟಿಎ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ಇದು ಇಸ್ರೇಲ್‌ನ ಹೈಫಾ ಬಂದರನ್ನು ಪ್ರಮುಖ ಸಾರಿಗೆ ಕೇಂದ್ರವಾಗಿ ಮಾಡಿಸುತ್ತದೆ. ಇಸ್ರೇಲನ್ನು ಜನಾಂಗಭೇದ ನೀತಿಯ ರಾಷ್ಟ್ರವೆಂದು ಘೋಷಿಸಬೇಕೆಂದು ಮತ್ತು ಗಾಜಾದಲ್ಲಿ ಅದರ ಜನಾಂಗೀಯ ಆಕ್ರಮಣಕ್ಕಾಗಿ ನಿರ್ಬಂಧಗಳನ್ನು ಎದುರಿಸಬೇಕೆಂದು ಜಗತ್ತು ಒತ್ತಾಯಿಸುತ್ತಿರುವ ಸಮಯದಲ್ಲಿ, ಭಾರತ ಸರ್ಕಾರವು ಈ ಎಫ್‍ಟಿಎ ಮೂಲಕ ಇಸ್ರೇಲ್‌ನೊಂದಿಗೆ ಸಂಬಂಧವನ್ನು ಬಲಪಡಿಸುವ ಆಯ್ಕೆಯನ್ನು ಮಾಡಿಕೊಳ್ಳುತ್ತಿದೆ. ಇದು ಶೋಚನೀಯ ಮತ್ತು ಇದಕ್ಕೆ ಅನುಮತಿ ಕೊಡಬಾರದು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಸತತವಾಗಿ ತನ್ನ ಎಲ್ಲಾ ಎಫ್‍ಟಿಎ ಮಾತುಕತೆಗಳಲ್ಲಿ ಭಾರತೀಯ ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ತ್ಯಾಗ ಮಾಡಿದೆ. ಸರ್ಕಾರವು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲು ಭಾರತ-ಯುರೋಪಿಯನ್‍ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಪೂರ್ಣ ಪಾಟವನ್ನು ಮಂಡಿಸಬೇಕು ಮತ್ತು ಈ ವಿಷಯದಲ್ಲಿ ಆಮೂಲಾಗ್ರ ಚರ್ಚೆ ನಡೆಯುವಂತೆ ಖಚಿತಗೊಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ ಎಂದಿರುವ ಪೊಲಿಟ್‍ಬ್ಯುರೊ, ಈ ಸರ್ಕಾರವು ಸಹಿ ಮಾಡಿದ ಎಲ್ಲಾ ಜನವಿರೋಧಿ ಎಫ್‍ಟಿಎ ಗಳನ್ನು ರದ್ದುಗೊಳಿಸಬೇಕು ಮತ್ತು ರೈತರು, ಕಾರ್ಮಿಕರು ಮತ್ತು ಜನರ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ.

ಇದನ್ನೂ ನೋಡಿ: ಗಣರಾಜ್ಯೋತ್ಸವ 2026 | ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದೆ – ಡಾ. ಎಂ. ಚಂದ್ರ ಪೂಜಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *