ಭಾರತ ಪ್ರವಾಸದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ: ಉಭಯ ದೇಶಗಳ ನಡುವೆ ಏಳು ಒಪ್ಪಂದಗಳಿಗೆ ಸಹಿ

ನವದೆಹಲಿ: ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ, ಭಾರತ ಪ್ರಧಾನಿ ಮೋದಿ ಅವರೊಂದಿಗೆ ಎರಡೂ ದೇಶಗಳಲ್ಲಿನ ಜನರ ಸ್ಥಿತಿಯನ್ನು ಸುಧಾರಿಸುವುದು, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ ಎಂದಿದ್ದಾರೆ. ಅಲ್ಲದೆ, ಉಭಯ  ದೇಶಗಳ ನಡುವೆ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ಇಂದು(ಸೆಪ್ಟಂಬರ್‌ 06)   ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉಭಯ ರಾಷ್ಟ್ರಗಳ ಉನ್ನತ ಮಟ್ಟದ ನಿಯೋಗ ಮಾತುಕತೆಯಲ್ಲಿ ಎರಡು ದೇಶದ ಪ್ರಧಾನಿಗಳ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ.

ನಿನ್ನೆ ಮಧ್ಯಾಹ್ನ ಭಾರತಕ್ಕೆ ಆಗಮಿಸಿದ್ದ ಅವರು ಇಂದು ಬೆಳಗ್ಗೆ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಇಂದು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಪ್ರಾದೇಶಿಕ ಸಂಪರ್ಕ ಉಪಕ್ರಮ ವಿಸ್ತರಣೆ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಸ್ಥಾಪಿಸುವುದು, ರಕ್ಷಣಾ ಸಹಕಾರವನ್ನು ನವೀಕರಿಸುವುದು ಸೇರಿದಂತ 7 ಪ್ರಮುಖ ಒಪ್ಪಂದಗಳಿಗೆ ಭಾರತ ಹಾಗೂ ಬಾಂಗ್ಲಾದೇಶ ಸಹಿ ಹಾಕಿದೆ. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಶೇಕ್ ಹಸೀನಾ ಜಂಟಿಯಾಗಿ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಯುನಿಟ್ 1 ಅನಾವರಣಗೊಳಿಸಿದ್ದಾರೆ. ಉಭಯ ನಾಯಕರು, 5.13 ಕಿ.ಮೀ ರುಪ್ಶಾ ರೈಲು ಸೇತುವೆ ಉದ್ಘಾಟಿಸಿದ್ದಾರೆ. ಈ ರೈಲು 64.7 ಕಿಮೀ ಖುಲ್ನಾ-ಮೊಂಗ್ಲಾ ಪೋರ್ಟ್ ಬ್ರಾಡ್ ಗೇಜ್ ರೈಲು ಯೋಜನೆಯ ಪ್ರಮುಖ ಭಾಗವಾಗಿದೆ.

ಭಾರತದ ದಕ್ಷಿಣ ಅಸ್ಸಾಂ ಮತ್ತು ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶಕ್ಕೆ ಪ್ರಯೋಜನಕಾರಿಯಾಗುವ ಕುಶಿಯಾರ ನದಿ ನೀರಿನ ಮಧ್ಯಂತರ ಹಂಚಿಕೆ ಕುರಿತು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ 54 ಪ್ರಮುಖ ನದಿಗಳು ಹರಿಯುತ್ತಿದೆ. ಉಭಯ ದೇಶಗಳ ಬಾಂಧವ್ಯದಿಂದ ಎರಡೂ ದೇಶದ ಜನರ ಜೀವನೋಪಾಯಕ್ಕೆ ನದಿಗಳು ಪ್ರಮುಖವಾಗಿದೆ ಎಂದು ಜಂಟಿ ಹೇಳಿಕೆ ನೀಡಿತು. ಮೈತ್ರಿ ಪವರ್ ಪ್ಲಾಂಟ್  ಯೋಜನೆಯಿಂದ ಬಾಂಗ್ಲಾದೇಶ ಜನರು ಕಡಿಮೆ ಬೆಲೆಯಲ್ಲಿ ವಿದ್ಯುತ್ ಉಪಯೋಗಿಸಲು ಸಾಧ್ಯವಾಗಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

‘ಐಟಿ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಸಭೆಯ ನಂತರ ಪ್ರಧಾನಿ ಮೋದಿ ಹೇಳಿದ್ದು, ‘ಕಳೆದ ವರ್ಷ ನಾವು ಬಾಂಗ್ಲಾದೇಶದ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವ, ನಮ್ಮ ರಾಜತಾಂತ್ರಿಕ ಸಂಬಂಧಗಳ ಸುವರ್ಣ ಮಹೋತ್ಸವ, ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವವನ್ನು ಒಟ್ಟಿಗೆ ಆಚರಿಸಿದ್ದೇವೆ. ಮುಂದಿನ 25 ವರ್ಷಗಳಲ್ಲಿ ಭಾರತ-ಬಾಂಗ್ಲಾದೇಶ ಸ್ನೇಹವು ಹೊಸ ಎತ್ತರವನ್ನು ಮುಟ್ಟುತ್ತದೆ’ ಎಂದು ತಿಳಿಸಿದರು.

ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ, ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಎರಡೂ ದೇಶಗಳಲ್ಲಿನ ಜನರ ಸ್ಥಿತಿಯನ್ನು ಸುಧಾರಿಸುವುದು, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ. ಭಾರತವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಿಮಿತ್ತ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಭಾರತ ಸರ್ಕಾರ ಮತ್ತು ನನ್ನ ಭಾರತೀಯ ಸ್ನೇಹಿತರನ್ನು ಅಭಿನಂದಿಸುತ್ತೇನೆ ಎಂದರು.

ಬಾಂಗ್ಲಾದೇಶ ಈಗ ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ದ್ವಿಪಕ್ಷೀಯ ವ್ಯಾಪಾರವು ಕಳೆದ ಐದು ವರ್ಷಗಳಲ್ಲಿ 9 ಶತಕೋಟಿ ಡಾಲರ್ ನಿಂದ 18 ಶತಕೋಟಿ ಡಾಲರ್ ಗೆ ಬೆಳೆದಿದೆ. 2020-21 ರಲ್ಲಿ 9.69 ಶತಕೋಟಿ ಡಾಲರ್ ನಿಂದ 2021-22 ರಲ್ಲಿ 16.15 ಶತಕೋಟಿ ಡಾಲರ್ ಗೆ, ರಫ್ತುಗಳು ಶೇಕಡಾ 66ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ಇದು ಭಾರತಕ್ಕೆ ನಾಲ್ಕನೇ ಅತಿದೊಡ್ಡ ರಫ್ತು ದೇಶವಾಗಿದೆ.

ನಿನ್ನೆ ಸಂಜೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಾಂಗ್ಲಾ ಪ್ರಧಾನಿ ಅವರನ್ನು ಭೇಟಿ ಮಾಡಿದ್ದರು. ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾಕ್ಕೆ ಹಸೀನಾ ಭೇಟಿ ನೀಡಿದ್ದರು. ಭಾರತ ಭೇಟಿ ಸಮಯದಲ್ಲಿ, ಪ್ರಧಾನಿ ಹಸೀನಾ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು  ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ಅಜ್ಮರ್‌ ಷರೀಫ್‌ಗೆ ಪ್ರಯಾಣಿಸಲಿದ್ದಾರೆ.

ಬಾಂಗ್ಲಾ ಪ್ರಧಾನಿ ಭೇಟಿಯಾದ ಗೌತಮ್ ಅದಾನಿ

ಈ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿ ಭೇಟಿ ಏರ್ಪಟ್ಟಿದ್ದು, ಅದಾನಿ, ಗೊಡ್ಡಾ ಪವರ್ ಪ್ರಾಜೆಕ್ಟ್ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ಈ ವರ್ಷದ ಅಂತ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿ ವ್ಯವಹಾರಗಳಿವೆ. ಪವರ್ ಪ್ರಾಜೆಕ್ಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *