ಬೆಳಗಾವಿ: ಈ ಬಾರಿ ಪೌರಕಾರ್ಮಿಕರಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಳಗಾವಿಯಲ್ಲಿ ಶುಕ್ರವಾರ ನಡೆಯುವ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದೆ. ಪಥಸಂಚಲನದ ಮೂಲಕ ವಿಶಿಷ್ಟವಾದ ಸಮವಸ್ತ್ರ ಧರಿಸಿ, ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವರು.
ಶುಕ್ರವಾರ ಬೆಳಿಗ್ಗೆ 7.30ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ಮತ್ತು ಬೆಳಿಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಎರಡೂ ಕಡೆಯ ಪಥಸಂಚಲನದಲ್ಲಿ ಪಾಲ್ಗೊಳ್ಳಲು 12 ಮಹಿಳೆಯರು ಸೇರಿ 33 ಮಂದಿ ಪೌರಕಾರ್ಮಿಕರು ಆಯ್ಕೆ ಆಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,677 ಪೌರಕಾರ್ಮಿಕರು ಇದ್ದಾರೆ. ಅವರಲ್ಲಿ 339 ಜನರ ಸೇವೆ ಕಾಯಂ ಆಗಿದ್ದರೆ, 280 ಮಂದಿ ನೇರ ವೇತನ ಯೋಜನೆಯಡಿ ಒಳಪಟ್ಟಿದ್ದಾರೆ. 1,058 ಮಂದಿ ಹೊರಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಾರೆ.
‘ಸಂಭ್ರಮದಲ್ಲಿರುವ ಪೌರಕಾರ್ಮಿಕರು ದೈನಂದಿನ ಕೆಲಸದ ಜೊತೆಯಲ್ಲೇ ಎಂಟು ದಿನಗಳಿಂದ ಪಥಸಂಚಲನಕ್ಕೆ ತಾಲೀಮು ನಡೆಸಿದ್ದಾರೆ. ಅವರಿಗೆ ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಿದ್ದಾರೆ’ ಎಂದು ಪಾಲಿಕೆ ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹನಮಂತ ಕಲಾದಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮಗೆ ಸ್ವಚ್ಛತೆ ಕೆಲಸ ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಪಥಸಂಚಲನಕ್ಕೆ ಆಯ್ಕೆ ಆಗಿರುವುದು ನಮ್ಮಲ್ಲಿ ಹುಮ್ಮಸ್ಸು ತಂದಿದೆ’ ಎಂದು ಪೌರ ಕಾರ್ಮಿಕ ಆನಂದ ಪಿಪ್ರೆ ತಿಳಿಸಿದರು.
ಇದನ್ನೂ ನೋಡಿ: ಕಾರ್ಲ್ ಮಾರ್ಕ್ಸ್ ಜನ್ಮದಿನದ ವಿಶೇಷ :ಮಾರ್ಕ್ಸರವರ ಜೀವನ ಮತ್ತು ಚಿಂತನೆವಿಶ್ಲೇಷಣೆ ಡಾ. ಬಿ.ಆರ್. ಮಂಜುನಾಥ
