ಬಡ ದಲಿತರ ಕೃಷಿ ಭೂಮಿ ಕಿತ್ತುಕ್ಕೊಳ್ಳುವ ಸರ್ಕಾರದ ಕ್ರಮ ಖಂಡನೀಯ – ನವೀನ್ ಕುಮಾರ್

40 ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕುರುಗೋಡು : ಕೆರೆ ಪರಂಬೊಕು ಎಂಬ ಪದವನ್ನು ತೆಗೆದು ಸರ್ಕಾರ ಎಂದು ತಿದ್ದುಪಡಿ ಮಾಡಲು ಹಾಗೂ ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಕುರುಗೋಡು ತಹಶೀಲ್ದಾರರ ಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು 40 ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕುರುಗೋಡು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಮಾತನಾಡಿ’ `ಸರ್ಕಾರಗಳ ನೀತಿಗಳು ಬಡವರು, ದಲಿತರಿಗೆ ಭೂಮಿಯನ್ನು ಕೊಡಲು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಆಶೆಯಕ್ಕೆ ವಿರುದ್ಧವಾಗಿ ಭೂಮಿಯನ್ನು ಕಿತ್ತುಕೊಳ್ಳುವ ವ್ಯವಸ್ಥಿತಿ ಪಿತೂರಿಯಾಗಿದೆ ಎಂದು ಆರೋಪಿಸಿದರು. ಉಳ್ಳುವರಿಗೆ ಭೂಮಿ ನೀಡಲು ಸರ್ಕಾರದ ಕಾನೂನುಗಳನ್ನೇ ಬದಲಾಯಿಸುವ ಸರ್ಕಾರಗಳು ಬಡವರಿಗೆ ಭೂಮಿ‌ ನೀಡಲು ಕಾನೂನನ್ನು ಯಾಕೆ ಬದಲಾಯಿಸಲು ಸಾಧ್ಯವಿಲ್ಲʼ ಎಂದರು.

ಕುರುಗೋಡು ಗ್ರಾಮದ ಮೂರು ತಲೆಮಾರುಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಧಿಕಾರಿಗಳು ಪಹಣಿಯಲ್ಲಿ ಸರ್ಕಾರ ಎಂದು ನಮೂದಾಗಿದ್ದರೂ ಕೂಡ ಸರ್ಕಾರವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಮತ್ತು ರೈತರಿಗೆ ಇದು ಮಲ್ಲಪ್ಪನ ಕೆರೆ ಭೂಮಿ ಎಂದು ನಂಬಿಸಿ ತಾವು ಭೂಮಿಯಿಂದ ಹೊರಗೆ ಹೋಗಬೇಕು ಇಲ್ಲವಾದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನೀಡಿ ರೈತರನ್ನು ಬೆದರಿಸಿ ಭೂಮಿಯಿಂದ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ.  ಆದ ಕಾರಣ ಸರ್ಕಾರವನ್ನು ತಪ್ಪು ದಾರಿಗೆ ಎಳೆದಿರುವ ಮತ್ತು ರೈತರಿಗೆ ತಪ್ಪು ಸಂದೇಶದ ಮೂಲಕ ಬೆದರಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವಿಚಾರಣೆಗೊಳಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಇದನ್ನು ಓದಿ : ಮತ್ತೊಂದು ಹೊಸ ವರ್ಷ ಮತ್ತದೇ ಹಳೆಯ ಕನಸುಗಳು

ಪ್ರತಿಭಟನಾ ಸ್ಥಳಕ್ಕೆ ಭೇಟಿ‌ ನೀಡಿದ ಸಹಾಯಕ ಆಯುಕ್ತರು ಮತ್ತು ತಹಶಿಲ್ದಾರರು ಕೂಡಲೇ ಮೇಲಾಧಿಕಾರಿಗಳೊಂಗೆ ಚರ್ಚಿಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಾಗಿ ಭರವಸೆ‌ನೀಡಿದರು. ಸಮಸ್ಯೆ ಪರಿಹಾರವಾಗುವವರೆಗೂ ಧರಣಿಯನ್ನು ಮುಂದುವರೆಸುವುದಾಗಿ ಪ್ರತಿಭಟನಾಕಾರರು ನಿರ್ಧರಿಸಿದರು‌.

ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ವಿ.ಎಸ್.ಶಿವಶಂಕರ್, ಕಾರ್ಯದರ್ಶಿ ಗಾಳಿ ಬಸವರಾಜ, ಮುಖಂಎರಾದ ಎನ್.ಸೋಮಪ್ಪ, ಯು ಶಂಕ್ರಪ್ಪ, ಟಿ.ಅಮೀನ್ ಸಾಬ್, ಎನ್‌ಹುಲ್ಲೆಪ್ಪ, ಎ.ಮಂಜುನಾಥ್, ಕೆಂಚಪ್ಪ, ಯಂಕಮ್ಮ, ರುದ್ರಮ್ಮ,ಗೀತಮ್ಮ,ಪಿ ವಿಮಲ, ನಾಗರತ್ನಮ್ಮ,ಎಮ್ ರುದ್ರಪ್ಪ, ಗೂಳಪ್ಪ,ಮೇಲ್ಗಿರಿ ಭೀಮಯ್ಯ, ಅಂಬಣ್ಣ,ಕೊಮಾರೆಪ್ಪ, ರಾಮಪ್ಪ, ಮುಂತಾದವರಿದ್ದರು.

ಕುರುಗೋಡು ತಾಲೂಕಿನ ರೈತ, ಕಾರ್ಮಿಕ,ದಲಿತ, ಮಹಿಳಾ, ವಿದ್ಯಾರ್ಥಿ,  ಯುವಜನ, ಕನ್ನಡಪರ, ಪ್ರಗತಿಪರ, ಸಂಘಟನೆಗಳ ಹೋರಾಟಗಾರರು ಈ ಹೋರಾಟವನ್ನು ಬೆಂಬಲಿಸಿ ಬಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *