ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಸುರಕ್ಷಿತ ಲೈಂಗಿಕ ಶಿಕ್ಷಣವನ್ನು ಸೇರಿಸುವ ಅಗತ್ಯವನ್ನು ಪರಿಶೀಲಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ತನ್ನ ಸ್ವಂತ ಸಹೋದರನಿಂದ ಗರ್ಭಿಣಿಯಾಗಿರುವ ತನ್ನ ಅಪ್ರಾಪ್ತ ಮಗಳ ಗರ್ಭವನ್ನು ವೈದ್ಯಕೀಯವಾಗಿ ತೆಗೆಯುವಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಇದಕ್ಕಾಗಿ ಯಾರೂ ಪೋಷಕರನ್ನು ದೂಷಿಸಲು ಸಾಧ್ಯವಿಲ್ಲ. ಆದರೆ ಸಮಾಜವಾಗಿ ಇದಕ್ಕೆ ನಾವೇ ಹೊಣೆಗಾರರು. ತನ್ನ ಸದಸ್ಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸದ ಕುಟುಂಬ ವ್ಯವಸ್ಥೆಯಲ್ಲಿ ಒಡಹುಟ್ಟಿದವರ ಸಂಭೋಗ ಸಂಭವಿಸಬಹುದು. ಆದರೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಇದು ಸಂಭವಿಸಬಹುದು. ಶಾಲಾ-ಕಾಲೇಜುಗಳಲ್ಲಿ ಸರಿಯಾದ ‘ಲೈಂಗಿಕ ಶಿಕ್ಷಣ’ದ ಅಗತ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಸ್ಕಾಲರ್ಶಿಪ್ ಹೆಚ್ಚಿಸಿ ಅಂದಿದಕ್ಕೆ ಅಮಾನತ್ತಿನ ಶಿಕ್ಷೆ !? ಶಿಕ್ಷಣ ಉಳ್ಳವರ ಸೊತ್ತೆ?
“ಸಮಾಜಕ್ಕೆ ಉತ್ತಮ ಕೌಟುಂಬಿಕ ವಾತಾವರಣ ಅಗತ್ಯ. ಇದನ್ನು ಸಾಧಿಸಲು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಇಂತಹ ನತದೃಷ್ಟರ ಮೇಲೆ ಕಲ್ಲು ತೂರಾಟ ನಡೆಸದೆ ಒಗ್ಗೂಡಬೇಕು” ಎಂದು ಹೇಳಿದ ನ್ಯಾಯಾಲಯವು ಶಾಲೆಗಳು ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ “ಸುರಕ್ಷಿತ ಲೈಂಗಿಕ ಶಿಕ್ಷಣ” ಸೇರಿಸುವ ವಿಷಯವನ್ನು ಅಧ್ಯಯನ ಮಾಡಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತು.